ಬೆಳ್ತಂಗಡಿ: ರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಭಾರತೀಯ ಮಜ್ದೂರು ಸಂಘ ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯ ಸಹಯೋಗದಲ್ಲಿ ಆಶಾ ಕಾರ್ಯಕರ್ತೆಯರ ಮಜ್ದೂರು ಸಂಘ, ಬಂಟ್ವಾಳ ತಾಲೂಕು ಇವರ ನೇತೃತ್ವದಲ್ಲಿ “ಮಹಿಳಾ ಶ್ರಮಿಕರ ಸಂಗಮ – 2026” ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.
ಕಾರ್ಯಕ್ರಮವನ್ನು ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ತಿಮ್ಮಯ್ಯ ಹೆಚ್.ಆರ್ ಉದ್ಘಾಟಿಸಿ ಮಾತನಾಡಿ, ಮಹಿಳೆಯರ ಆರೋಗ್ಯ ಮತ್ತು ಸಮಾಜದ ಆರೋಗ್ಯ ವ್ಯವಸ್ಥೆಯಲ್ಲಿ ಆಶಾ ಕಾರ್ಯಕರ್ತೆಯರ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ಹೇಳಿದರು.

ಮುಖ್ಯ ವಕ್ತಾರರಾದ ಸಾಮಾಜಿಕ ಕಾರ್ಯಕರ್ತೆ ಮೀನಾಕ್ಷಿ ಅವರು ಮಾತನಾಡಿ, ಸಮಾಜದ ಅಭಿವೃದ್ಧಿಯಲ್ಲಿ ಮಹಿಳೆಯರ ಪಾತ್ರ ಅಪಾರವಾಗಿದೆ ಎಂದರು.
ಭಾರತೀಯ ಮಜ್ದೂರು ಸಂಘ ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷರಾದ ವಕೀಲ ಅನಿಲ್ ಕುಮಾರ್ ಬೆಳ್ತಂಗಡಿ ಮಾತನಾಡಿ ಆರೋಗ್ಯ ಕ್ಷೇತ್ರದಲ್ಲಿ ಆಶಾ ಕಾರ್ಯಕರ್ತೆಯರ ಸೇವೆ ಸಮಾಜಕ್ಕೆ ಅಮೂಲ್ಯವಾಗಿದೆ.ಭಾರತೀಯ ಮಜ್ದೂರು ಸಂಘ ದೇಶದ ಅತಿ ದೊಡ್ಡ ಕಾರ್ಮಿಕ ಸಂಘಟನೆಯಾಗಿದ್ದು,ಕಾರ್ಮಿಕರ ಹಿತ, ರಾಷ್ಟ್ರಹಿತ ಮತ್ತು ಸಮಾಜ ಹಿತ ಎಂಬ ತತ್ವದ ಮೇಲೆ ಸಂಘಟನೆ ಕಾರ್ಯನಿರ್ವಹಿಸುತ್ತಿದ್ದು ದೇಶದ ಕೋಟ್ಯಾಂತರ ಕಾರ್ಮಿಕರ ಹಕ್ಕುಗಳಿಗಾಗಿ ಹೋರಾಟ ನಡೆಸುತ್ತಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆಶಾ ಕಾರ್ಯಕರ್ತೆಯರ ಮಜ್ದೂರು ಸಂಘ ಕರ್ನಾಟಕ ರಾಜ್ಯ ಕಾರ್ಯದರ್ಶಿ ರೇವತಿ ವಹಿಸಿದ್ದರು.
ಈ ಸಂದರ್ಭದಲ್ಲಿ ಹಲವು ವರ್ಷಗಳಿಂದ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ಹಿರಿಯ ಆಶಾ ಕಾರ್ಯಕರ್ತೆಯರನ್ನು ಸನ್ಮಾನಿಸಲಾಯಿತು.
ಆಶಾ ಕಾರ್ಯಕರ್ತೆಯರ ಮಜ್ದೂರು ಸಂಘ ಅಧ್ಯಕ್ಷೆ ತುಳಸಿ ದೇವರಾಜ್ ಸ್ವಾಗತಿಸಿದರು.ಸುಜಾತ ವಂದಿಸಿದರು.ಡೀಲಾಕ್ಷಿ ನಿರೂಪಿಸಿದರು.













