ಉಜಿರೆ: ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ವಾಯತ್ತ ಮಹಾವಿದ್ಯಾಲಯದ ಸಮ್ಯಗ್ದರ್ಶನ ಸಭಾಭವನದಲ್ಲಿ ಕೀರ್ತಿಶೇಷ ಪೂಜ್ಯ ಡಿ. ರತ್ನವರ್ಮ ಹೆಗ್ಗಡೆ ಸ್ಮಾರಕ ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ಅಂತರ್ ಕಾಲೇಜು ಕನ್ನಡ ಚರ್ಚಾ ಸ್ಪರ್ಧೆಗೆ ಚಾಲನೆ ನೀಡಲಾಯಿತು.
ವಿಶ್ವವಿದ್ಯಾನಿಲಯ ಮಟ್ಟದ ಚರ್ಚಾ ಸ್ಪರ್ಧೆಯನ್ನು ಅಳದಂಗಡಿ ಅರಮನೆಯ ಶ್ರೀ ತಿಮ್ಮಣ್ಣರಸರಾದ ಡಾ। ಪದ್ಮಪ್ರಸಾದ ಅಜಿಲರು ದೀಪ ಪ್ರಜ್ವಲಿಸುವ ಮೂಲಕ ಚಾಲನೆ ನೀಡಿದರು.
ಬಳಿಕ ಮಾತನಾಡಿ, ಪ್ರತಿಯೊಂದು ವಿಷಯದಲ್ಲೂ ವಿರೋಧದ ವಾದ ಇದ್ದರೆ ಮಾತ್ರ ವಾಸ್ತವದ ವಿಷಯವನ್ನು ಅರಿತು ಕೊಳ್ಳಲು ಸಾಧ್ಯ ಹಾಗೆಯೇ ಬದುಕಿನಲ್ಲಿ ಸರಿ ತಪ್ಪು ಮತ್ತು ವಿರೋಧದ ಅಂದಾಜು ಇದ್ದರೆ ಮಾತ್ರ ಸರಿ ದಾರಿಯಲ್ಲಿ ಸಾಗಲು ಅನುಕೂಲವಾಗುತ್ತದೆ. ಚರ್ಚಾ ಸ್ಪರ್ಧೆಗಳು ಸರ್ವತೋಮುಖ ಬೆಳವಣಿಗೆಯ ಜೊತೆಗೆ ವಿದ್ಯಾರ್ಥಿಗಳ ಬೌದ್ಧಿಕ ಅಭಿವೃದ್ಧಿಗೂ ಪೂರಕ. ಎಲ್ಲಾ ಪ್ರಯತ್ನಗಳು ನಮಗೆ ಯಶಸ್ಸು ತಂದು ಕೊಡದೆ ಇರಬವುದು ಆದರೆ ಪ್ರಯತ್ನವೇ ಇಲ್ಲದೇ ಯಶಸ್ಸು ಲಭಿಸಲು ಸಾಧ್ಯವಿಲ್ಲ ಎಂದರು.
ಪೂಜ್ಯ ಡಿ. ರತ್ನವರ್ಮ ಹೆಗ್ಗಡೆಯವರು ಈ ಸಮಾಜ ಮತ್ತು ಯುವ ಪೀಳಿಗೆಯ ಮೇಲೆ ಅತ್ಯಂತ ದೂರ ದೃಷ್ಟಿತ್ವ ಹೊಂದಿದ್ದ ವ್ಯಕ್ತಿ. ಹಳ್ಳಿಯಂತಹ ಪ್ರದೇಶದಲ್ಲಿ ವಿದ್ಯ ದೇಗುಲವನ್ನು ಆರಂಭಿಸಲು ಅಡಿಪಾಯವನ್ನು ರೂಪಿಸಿ, ಸಾವಿರಾರು ಜನರ ಬದುಕಿಗೆ ಬೆಳಕು ನೀಡುವಂತೆ ಮಾಡಿದ್ದಾರೆ. ಅವರ ಕನಸನ್ನು ಡಾ. ಡಿ ವೀರೇಂದ್ರ ಹೆಗ್ಗಡೆಯವರು ಸಕಾರಗೊಳಿಸಿ ದಕ್ಷತೆಯಿಂದ ಮುಂದುವರಿಸುತ್ತಿದ್ದಾರೆ. ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಮೂಲಕ ಮೌಲ್ಯಯುತ ಹಾಗೂ ಗುಣಮಟ್ಟದ ಶಿಕ್ಷಣ ನೀಡುವುದರ ಜೊತೆಗೆ ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗಾಗಿ ಪಠ್ಯೇತರ ಚಟುವಟಿಕೆಗಳಿಗೂ ವಿಶೇಷ ಪ್ರೋತ್ಸಾಹ ಮತ್ತು ಸಹಕಾರವನ್ನು ನೀಡುತ್ತಿದೆ ಎಂದು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಎಸ್ ಮಾತನಾಡಿ, ಮನುಷ್ಯ 60 ತ್ತರ ಹೊಸ್ತಿಲು ತಲುಪುತ್ತಿದ್ದಂತೆ ನಿವೃತ್ತಿಯೆಡೆಗೆ ಸಾಗುತ್ತಾನೆ ಆದರೆ ಒಂದು ವಿದ್ಯಾ ಸಂಸ್ಥೆ 60 ವರ್ಷ ಕಳೆಯುತ್ತಿದ್ದಂತೆ ಉನ್ನತ ಹಂತವನ್ನು ಏರುತ್ತದೆ. ಹಳ್ಳಿಯಂತಿದ್ದ ಉಜಿರೆ ಇಂದು ನಗರದಂತೆ ಬೆಳೆಯುವುದ ಜೊತೆಗೆ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳೂ ವಿಸ್ತಾರವಾಗಿದೆ. ಇಲ್ಲಿನ ವಿದ್ಯಾರ್ಥಿಗಳು ರಾಜ್ಯ ದೇಶ ಅಲ್ಲದೇ ಅಂತಾರಾಷ್ಟ್ರೀಯ ಮಟ್ಟದಲ್ಲೂ ಗುರುತಿಸಿಕೊಂಡಿದ್ದಾರೆ. ಚರ್ಚೆ ಎಂಬೂದು ಬಹು ಮುಖ್ಯ. ಇಂದು ವಿಧಾನ ಸೌಧ, ನ್ಯಾಯಾಲಯ ಸೇರಿದಂತೆ ಜಾಗತೀಕ ಮಟ್ಟದ ಎಲ್ಲಾ ಕ್ಷೇತ್ರಗಳಲ್ಲೂ ಚರ್ಚೆಗಳು ನಡೆಯುತ್ತವೆ. ಚರ್ಚೆಗಳು ಮತ್ತು ಚರ್ಚಾ ಸ್ಪರ್ಧೆಗಳಲ್ಲಿ ಭಾಗವಹಿಸುವಿಕೆ ಹೊಸ ಅನುಭವ ಮತ್ತು ಅವಕಾಶಗಳನ್ನು ಕಲ್ಪಸಿಕೊಡುತ್ತದೆ. ಇಲ್ಲಿಯ ಜ್ಞಾನ ವಿದ್ಯಾರ್ಥಿ ಬದುಕಿಗೆ ಬೆಳಕಾಗಲಿ ಎಂದು ಶುಭ ಹಾರೈಸಿದರು.
ಕಾರ್ಯಕ್ರಮದ ವೇದಿಕೆಯಲ್ಲಿ ಅತಿಥಿಗಳನ್ನು ಎಸ್.ಡಿ.ಎಂ ಶಿಕ್ಷಣ ಸಂಸ್ಥೆ ಮತ್ತು ಕಾಲೇಜಿನ ವತಿಯಿಂದ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದ ವೇದಿಕೆಯಲ್ಲಿ ಕಾಲೇಜಿನ ಪ್ರಾಂಶುಪಾಲ ಪ್ರೊ ವಿಶ್ವನಾಥ್ ಪಿ, ಕಾರ್ಯಕ್ರಮದ ಸಂಯೋಜಕರಾದ ಡಾ. ನಾಗಣ್ಣ ಮತ್ತು ಉಪನ್ಯಾಸಕ ಪ್ರವೀಣ್ ಉಪಸ್ಥಿತರಿದ್ದರು. ಕಾಲೇಜಿನ ಆಡಳಿತ ಕುಲಸಚಿವ ಪ್ರೊ. ಶ್ರೀಧರ್ ಎನ್ ಭಟ್ಟ, ಪರೀಕ್ಷಾಂಗ ಕುಲಸಚಿವ ಗಣೇಶ್ ನಾಯಕ್ ಸೇರಿದಂತೆ ಪ್ರಮುಖರು ಭಾಗಿಯಾಗಿದ್ದರು.
ಮಂಗಳೂರು ವಿಶ್ವವಿದ್ಯಾನಿಲಯದ ಮಟ್ಟದ ಅಂತರ್ ಕಾಲೇಜುಗಳ ಕನ್ನಡ ಚರ್ಚಾ ಸ್ಪರ್ಧೆಗೆ ಉಡುಪಿ, ಮಡಿಕೇರಿ , ಮಂಗಳೂರು ಸೇರಿದಂತೆ 20 ಕ್ಕೂ ಅಧಿಕ ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಪ್ರಶಸ್ತಿ ವಿಜೇತ ವಿದ್ಯಾರ್ಥಿಗಳಿಗೆ ಪ್ರಥಮ 10,000 ಹಾಗು ದ್ವಿತೀಯ 8,000 ಹಾಗು ತೃತೀಯ 5,000 ನಗದು ಬಹುಮಾನವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮವನ್ನು ಉಪನ್ಯಾಸಕ ಡಾ. ದಿವಾಕರ ಕೊಕ್ಕಡ ನಿರೂಪಿಸಿ, ಉಪನ್ಯಾಸಕಿ ಡಾ. ಧಾನೇಶ್ವರಿ ವಂದಿಸಿದರು.













