July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಬಿಎಂಎಸ್ ಜಿಲ್ಲಾ ಕಾರ್ಯಕಾರಿಣಿ ಸಭೆ: ಕಾರ್ಮಿಕ ಸಂಘಟನೆಗಳ ಬಲವರ್ಧನೆಗೆ ಸಮಗ್ರ ಕಾರ್ಯಯೋಜನೆ

ಬೆಳ್ತಂಗಡಿ : ಕಾರ್ಮಿಕರ ಸಮಸ್ಯೆಗಳ ಪರಿಣಾಮಕಾರಿ ಪರಿಹಾರ, ಸಂಘಟನೆಯ ವಿಸ್ತರಣೆ, ಯೂನಿಯನ್‌ಗಳ ಸಬಲೀಕರಣ ಹಾಗೂ ಹೊಸ ಕ್ಷೇತ್ರಗಳ ಕಾರ್ಮಿಕರನ್ನು ಸಂಘಟಿಸುವ ಸಮಗ್ರ ಕಾರ್ಯಯೋಜನೆಯೊಂದಿಗೆ ಭಾರತೀಯ ಮಜ್ದೂರ್ ಸಂಘದ (ಬಿಎಂಎಸ್) ದಕ್ಷಿಣ ಕನ್ನಡ ಜಿಲ್ಲಾ ಕಾರ್ಯಕಾರಿಣಿ ಸಭೆಯು ಜಿಲ್ಲಾ ಕಾರ್ಯಾಲಯದ “ಪ್ರಭಾಕರ ಘಾಟೆ” ಸಭಾಂಗಣದಲ್ಲಿ ಯಶಸ್ವಿಯಾಗಿ ನಡೆಯಿತು.

ಸಭೆಯಲ್ಲಿ ಭಾರತೀಯ ಮಜ್ದೂರ್ ಸಂಘದ ದಕ್ಷಿಣ ಮತ್ತು ದಕ್ಷಿಣ ಮಧ್ಯ ಕ್ಷೇತ್ರೀಯ ಸಂಘಟನಾ ಕಾರ್ಯದರ್ಶಿ ವಿ. ರಾಧಾಕೃಷ್ಣನ್ ವೇಲು ಮಾತನಾಡಿ, ಕಾರ್ಮಿಕ ಸಂಘಟನೆಗಳು ಬಲಿಷ್ಠವಾಗಬೇಕಾದರೆ ಆಡಳಿತಾತ್ಮಕ ಶಿಸ್ತು, ದಾಖಲಾತಿಗಳ ಸಮರ್ಪಕ ನಿರ್ವಹಣೆ ಹಾಗೂ ಸದಸ್ಯತ್ವ ವೃದ್ಧಿಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಹೇಳಿದರು. ಪ್ರತಿಯೊಂದು ಯೂನಿಯನ್ ಸದಸ್ಯತ್ವ ರಿಜಿಸ್ಟರ್, ಮಿನಿಟ್ ಬುಕ್, ಕ್ಯಾಶ್ ಬುಕ್, ರಶೀದಿ ಪುಸ್ತಕ ಸೇರಿದಂತೆ ಅಗತ್ಯ ದಾಖಲೆಗಳನ್ನು ನಿಯಮಾನುಸಾರ ನಿರ್ವಹಿಸಬೇಕು. ಕಾರ್ಮಿಕರ ಸಮಸ್ಯೆಗಳನ್ನು ಆಳವಾಗಿ ಅಧ್ಯಯನ ಮಾಡಿ, ಸಂಘಟಿತ ಹೋರಾಟದ ಮೂಲಕ ಪರಿಹಾರ ಕಂಡುಕೊಳ್ಳುವ ಸಾಮರ್ಥ್ಯವನ್ನು ಬೆಳೆಸಿಕೊಳ್ಳಬೇಕು ಎಂದು ಅವರು ಕರೆ ನೀಡಿದರು.

ರಾಜ್ಯ ಪ್ರಧಾನ ಕಾರ್ಯದರ್ಶಿ ವಿಶ್ವನಾಥ್ ಹೆಚ್. ಎಲ್. ಅವರು ಮಾತನಾಡಿ, ಜಿಲ್ಲೆಯಲ್ಲಿ ನಡೆಯಲಿರುವ ಜಿಲ್ಲಾ ಸಮ್ಮೇಳನವು ಸಂಘಟನೆಯ ಬೆಳವಣಿಗೆಯಲ್ಲಿ ಮಹತ್ವದ ಮೈಲಿಗಲ್ಲಾಗಬೇಕಿದ್ದು, ಎಲ್ಲಾ ಸಂಯೋಜಿತ ಯೂನಿಯನ್‌ಗಳು ಮತ್ತು ಕಾರ್ಯಕರ್ತರು ಸಕ್ರಿಯವಾಗಿ ಭಾಗವಹಿಸಿ ಅದನ್ನು ಯಶಸ್ವಿಗೊಳಿಸಬೇಕು ಎಂದು ತಿಳಿಸಿದರು. ಜಿಲ್ಲಾ ಸಮ್ಮೇಳನವು ಸಂಘಟನೆಯ ಶಕ್ತಿ, ಏಕತೆ ಮತ್ತು ಕಾರ್ಯಕ್ಷಮತೆಯನ್ನು ಸಮಾಜದ ಮುಂದೆ ಪ್ರದರ್ಶಿಸುವ ವೇದಿಕೆಯಾಗಲಿದೆ ಎಂದರು.

ಹಿರಿಯ ಮುಖಂಡ ವಿಶ್ವನಾಥ್ ಶೆಟ್ಟಿ ಅವರು ಭಾರತೀಯ ಮಜ್ದೂರ್ ಸಂಘದ ಸುದೀರ್ಘ ಪಯಣ, ಹಿರಿಯ ಕಾರ್ಯಕರ್ತರ ತ್ಯಾಗ ಮತ್ತು ಸಮರ್ಪಣೆಯನ್ನು ಸ್ಮರಿಸಿ ಮಾತನಾಡಿದರು.

ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ವಕೀಲರಾದ ಅನಿಲ್ ಕುಮಾರ್ ಯು . ಅವರು ಮಾತನಾಡಿ, ಭಾರತೀಯ ಮಜ್ದೂರ್ ಸಂಘವು ಕೇವಲ ಕಾರ್ಮಿಕರ ಬೇಡಿಕೆಗಳಿಗಾಗಿ ಹೋರಾಡುವ ಸಂಘಟನೆಯಲ್ಲ; ರಾಷ್ಟ್ರ ನಿರ್ಮಾಣದಲ್ಲಿ ಕಾರ್ಮಿಕರ ಪಾತ್ರವನ್ನು ಬಲಪಡಿಸುವ ರಾಷ್ಟ್ರೀಯ ಚಳವಳಿಯಾಗಿದೆ ಎಂದು ಹೇಳಿದರು. ಕೇಂದ್ರ ಮತ್ತು ರಾಜ್ಯ ಸಂಘಟನೆಯ ಮಾರ್ಗದರ್ಶನವನ್ನು ಜಿಲ್ಲೆಯಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಸಂಕಲ್ಪ ವ್ಯಕ್ತಪಡಿಸಿದ ಅವರು, ಸದಸ್ಯತ್ವ ವೃದ್ಧಿ, ಹೊಸ ಕ್ಷೇತ್ರಗಳ ಕಾರ್ಮಿಕರ ಸಂಘಟನೆ, ಯೂನಿಯನ್‌ಗಳ ಸಬಲೀಕರಣ ಹಾಗೂ ಕಾರ್ಮಿಕರ ಸಮಸ್ಯೆಗಳ ಪರಿಹಾರಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ತಿಳಿಸಿದರು.

ದಕ್ಷಿಣ ಕನ್ನಡ ಜಿಲ್ಲೆಯನ್ನು ರಾಜ್ಯದಲ್ಲಿಯೇ ಮಾದರಿ ಬಿಎಂಎಸ್ ಜಿಲ್ಲೆಯನ್ನಾಗಿ ರೂಪಿಸುವ ಗುರಿಯೊಂದಿಗೆ ಎಲ್ಲಾ ಪದಾಧಿಕಾರಿಗಳು, ಕಾರ್ಯಕರ್ತರು ಮತ್ತು ಸಂಯೋಜಿತ ಯೂನಿಯನ್‌ಗಳು ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಬೇಕು ಎಂದು ಕರೆ ನೀಡಿದ ಅವರು, ಮುಂಬರುವ ಜಿಲ್ಲಾ ಸಮ್ಮೇಳನವನ್ನು ಐತಿಹಾಸಿಕ ಹಾಗೂ ಯಶಸ್ವಿ ಕಾರ್ಯಕ್ರಮವನ್ನಾಗಿ ರೂಪಿಸಲು ಎಲ್ಲರೂ ಸಂಪೂರ್ಣ ಸಹಕಾರ ನೀಡುವಂತೆ ಮನವಿ ಮಾಡಿದರು.

ಸಭೆಯಲ್ಲಿ ರಾಜ್ಯ ಕಾರ್ಯದರ್ಶಿಗಳಲ್ಲಿ ಒರ್ವರಾದ ಜಯರಾಜ್ ಸಾಲ್ಯಾನ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗೋಪಾಲಕೃಷ್ಣ , ಜಿಲ್ಲಾ ಸಂಘಟನಾ ಕಾರ್ಯದರ್ಶಿ ವಸಂತ ಕುಮಾರ್ ಮನಿಹಳ್ಳ, ಪ್ರಮುಖರಾದ ಕುಮಾರನಾಥ್, ಸುದೀಂದ್ರ ಹಾಗೂ ಜಿಲ್ಲೆಯ ಪದಾಧಿಕಾರಿಗಳು ಮತ್ತು ಜಿಲ್ಲೆಯ ಎಲ್ಲಾ ಸಂಯೋಜಿತ ಯೂನಿಯನ್‌ಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.

Related posts

ಮದ್ದಡ್ಕ ದಿನಸಿ ಅಂಗಡಿ ವ್ಯಾಪಾರಿ ವಿಶ್ವನಾಥ್ ಶೆಣೈ ನಿಧನ

Suddi Udaya

ಧರ್ಮಸ್ಥಳ ಭಗವಾನ್ ಶ್ರೀ ಚಂದ್ರನಾಥಸ್ವಾಮಿ ಬಸದಿಯಲ್ಲಿ ವಾರ್ಷಿಕೋತ್ಸವ: ತೋರಣಮುಹೂರ್ತ, ಕ್ಷೇತ್ರಪಾಲ ಪ್ರತಿಷ್ಠೆ

Suddi Udaya

ನಿಡ್ಲೆ: ನಿವೃತ್ತ ಶಿಕ್ಷಕ ರಾಮಣ್ಣ ಪೂಜಾರಿ ನಿಧನ

Suddi Udaya

ಶಿರಾಡಿ ಘಾಟ್ ಚೆಕ್ ಪೋಸ್ಟ್ ಬಳಿ ಸರಣಿ ಅಪಘಾತ

Suddi Udaya

ಲಾಯಿಲ: ಕುಂಟಿನಿ ಅಲ್ ಬುಖಾರಿ ಜುಮ್ಮಾ ಮಸೀದಿಯಲ್ಲಿ ಈದುಲ್ ಫಿತರ್ ಆಚರಣೆ

Suddi Udaya

ಸಂತ ಫಿಲೋಮೀನಾ ಸ್ವಾಯತ್ತ ಕಾಲೇಜಿನಲ್ಲಿ ‘ ಭಯೋತ್ಪಾದನಾ ವಿರೋಧಿ ದಿನ’ ಆಚರಣೆ

Suddi Udaya
error: Content is protected !!