ಲಾಯಿಲ: ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ತು ಲಾಯಿಲ ವಲಯಕ್ಕೆ ಸಂಬಂಧಿಸಿದ ಭಜನಾ ತಂಡಗಳ ಸಮಾಲೋಚನಾ ಸಭೆಯು ನಡೆಯಿತು.

ಭಜನಾ ಪರಿಷತ್ತಿನ ರಾಜ್ಯಾಧ್ಯಕ್ಷ ಚಂದ್ರಶೇಖರ ಸಾಲ್ಯಾನ್ ಕೊಯ್ಯೂರು ದೀಪ ಪ್ರಜ್ವಲನೆ ಗೊಳಿಸಿ ಮಾತನಾಡಿ ಭಜನೆಯೂ ಶ್ರದ್ಧಾ-ಭಕ್ತಿಯ ಭಜನೆಯಾಗಬೇಕೇ ಹೊರತು, ಆಡಂಬರದ ಭಜನೆಯಾಗಬಾರದು, ಭಜನಾ ಪರಿಷತ್ತಿನ ಪದಾಧಿಕಾರಿಗಳು ತಮ್ಮ ವಲಯದ ಎಲ್ಲಾ ಭಜನಾ ಮಂಡಳಿಗಳಿಗೆ ಭೇಟಿ ನೀಡಿ ಅವರೊಂದಿಗೆ ನಿರಂತರ ಸಂಪರ್ಕದಲ್ಲಿರಬೇಕು, ಕುಣಿತ ಭಜನೆಯಂತೆ ಕುಳಿತು ಭಜನೆ ಮಾಡುವ ತಂಡಗಳಿಗೆ ಕೂಡ ಆದ್ಯತೆಯನ್ನು ನೀಡಿ ಅವರನ್ನು ಕೂಡ ಗೌರವಿಸಬೇಕು. ಭಜನಾ ಮಂಡಳಿಗಳಲ್ಲಿ ನಡೆಯುವ ಕಾರ್ಯಕ್ರಮ ಅಥವಾ ಭಜನೋತ್ಸವ ಕಾರ್ಯಕ್ರಮಗಳಲ್ಲಿ ಪ್ಲಾಸ್ಟಿಕ್ ಅಥವಾ ನೀರಿಗಾಗಿ ಪ್ಲಾಸ್ಟಿಕ್ ಬಾಟಲಿ ಉಪಯೋಗಿಸುವುದನ್ನು ನಿಷೇಧಿಸಲು ಪ್ರಯತ್ನಿಸಬೇಕು ಎನ್ನುತ್ತಾ ಮುಂದಕ್ಕೆ ನಡೆಯಲಿರುವ ಭಜನಾ ಕಮ್ಮಟದ ಬಗ್ಗೆ ಚರ್ಚಿಸುತ್ತಾ ಭಜನಾ ಮಂಡಳಿಗಳಿಗೆ ನೀಡುತ್ತಿರುವ ಸಾಧಕ ಪ್ರಶಸ್ತಿಯ ಆಯ್ಕೆ ಪ್ರಕ್ರಿಯೆಯಲ್ಲಿ ಭಜನಾ ಪರಿಷತ್ತಿನ ಯಾವುದೇ ಪದಾಧಿಕಾರಿಗಳ ಅಥವಾ ಇನ್ನಿತರರ ಒತ್ತಡವಿಲ್ಲದೆ ಅರ್ಹ ಭಜನಾ ಮಂಡಳಿಯನ್ನು ಆಯ್ಕೆ ಮಾಡಲಾಗುವುದು ಎಂದರು.

ಭಜನಾ ಪರಿಷತ್ತಿನ ಜಿಲ್ಲಾ ಸಮನ್ವಯಾಧಿಕಾರಿ ಸಂತೋಷ್ ಪಿ ಅಳಿಯೂರು ರವರು ಭಜನಾ ಪರಿಷತ್ತಿನ ಉದ್ದೇಶ ಹಾಗೂ ಕಾರ್ಯ ಚಟುವಟಿಕೆಗಳ ಬಗ್ಗೆ ವಿವರಿಸುತ್ತಾ ಸಂಘಟನೆಗಳಲ್ಲಿ ಅಥವಾ ಉತ್ತಮ ಕೆಲಸ ಮಾಡುವವರ ಬಗ್ಗೆ ಟೀಕೆ ಟಿಪ್ಪಣಿಗಳು ಬರುವುದು ಸಹಜ ಅದರ ಬಗ್ಗೆ ತಲೆಕೆಡಿಸಿಕೊಳ್ಳದೆ ನಮ್ಮ ಕೆಲಸದಲ್ಲಿ ನಾವು ಎಲ್ಲರನ್ನು ಸೇರಿಸಿಕೊಂಡು ನಿಸ್ವಾರ್ಥದಿಂದ ಮುಂದುವರಿಸಿಕೊಂಡು ಹೋಗುವುದೇ ನಮ್ಮ ಧರ್ಮ ಎನ್ನುತ್ತಾ ಧರ್ಮಸ್ಥಳದಲ್ಲಿ ಸೆಪ್ಟೆಂಬರ್ ತಿಂಗಳ ಕೊನೆಯಲ್ಲಿ ಆರಂಭವಾಗುವ 28ನೇ ವರ್ಷದ ಭಜನಾ ಕಮ್ಮಟಕ್ಕೆ ಶಿಬಿರಾರ್ಥಿಗಳನ್ನು ಆಯ್ಕೆ ಮಾಡುವ ಬಗ್ಗೆ ವಿವರಿಸುತ್ತಾ ಎಲ್ಲಾ ಭಜನಾ ಮಂಡಳಿಯ ಪದಾಧಿಕಾರಿಗಳು ತಮ್ಮ ತಮ್ಮ ಮಂಡಳಿಗಳಿಂದ ಇಬ್ಬರು ಸದಸ್ಯರನ್ನು ಆಯ್ಕೆ ಮಾಡಿ ಕಮ್ಮಟಕ್ಕೆ ಕಳುಹಿಸಿ ಕೊಡಬೇಕಾಗಿ ವಿನಂತಿಸಿಕೊಂಡರು.
ಭಜನಾ ಪರಿಷತ್ತಿನ ತಾಲೂಕು ಸಂಚಾಲಕರು ಹಾಗೂ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಯಶೋಧರ ರವರು ಮಾತನಾಡುತ್ತಾ ಒಂದು ಧಾರ್ಮಿಕ ಸಂಘಟನೆಯ ನೇತೃತ್ವದಲ್ಲಿ ಎಲ್ಲಾ ಭಜನಾ ಮಂಡಳಿಗಳು ಒಟ್ಟು ಸೇರಿ ಇಂತಹ ಆರೋಗ್ಯಕರವಾದ ಸಭೆಗಳು ಆಗಾಗ ನಡೆದು ನಮ್ಮೊಳಗಿರುವ ಕುಂದು ಕೊರತೆಗಳ ಬಗ್ಗೆ ಚರ್ಚೆ ಮಾಡಿಕೊಂಡು ಅದಕ್ಕೆ ಒಮ್ಮತದಲ್ಲಿ ಸೂಕ್ತ ಪರಿಹಾರಗಳನ್ನು ಕಂಡುಕೊಂಡಾಗ ನಮ್ಮೊಳಗಿನ ಬಾಂಧವ್ಯತೆ ಮತ್ತಷ್ಟು ವೃದ್ಧಿಯಾಗುತ್ತದೆ. ಮಾತ್ರವಲ್ಲದೆ ಯುವ ಪೀಳಿಗೆಯನ್ನು ನಾವು ಭಜನೆಗೆ ಸೇರಿಸಿ ಮುಂದಕ್ಕೆ ಅವರು ಸಮಾಜದಲ್ಲಿ ಉತ್ತಮ ಸಂಸ್ಕಾರವಂತ ಮತ್ತು ಪ್ರಜ್ಞಾವಂತ ನಾಗರಿಕರಾಗಿ ಸಮಾಜದಲ್ಲಿ ಸಾಮರಸ್ಯದಿಂದ ಜೀವನ ಸಾಗಿಸುವಂತೆ ಪ್ರೇರಣೆ ನೀಡಬೇಕು.ಅದಕ್ಕಾಗಿ ಖಾವಂದರು ಮತ್ತು ಮಾತೃಶ್ರೀ ಅಮ್ಮನವರ ದೂರದೃಷ್ಟಿಯ ಯೋಚನೆಯೊಂದಿಗೆ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಭಜನಾ ಪರಿಷತ್ತು ಪ್ರಾರಂಭವಾಯಿತು ಎಂದರು.
ಸಭಾಧ್ಯಕ್ಷತೆಯನ್ನು ವಹಿಸಿದ್ದ ಭಜನಾ ಪರಿಷತ್ತಿನ ವಲಯ ಅಧ್ಯಕ್ಷ ಜನಾರ್ಧನ್ ರವರು ಹಲವಾರು ವರ್ಷಗಳಿಂದ ಭಜನಾ ಪರಿಷತ್ತಿನಲ್ಲಿ ವಿವಿಧ ಪದಾಧಿಕಾರಿ ಆಗಿ ಸೇವೆ ಮಾಡಿದ ನೆನಪನ್ನು ಮೆಲುಕು ಹಾಕುತ್ತಾ ಭಜನಾ ಪರಿಷತ್ತು ನನಗೆ ಒಂದು ಒಳ್ಳೆಯ ಅವಕಾಶವನ್ನು ಕಲ್ಪಿಸಿಕೊಟ್ಟು ವೇದಿಕೆಯ ಹಲವಾರು ನಿರ್ವಹಣೆಯನ್ನು ಕಲಿಸಿಕೊಟ್ಟಿದೆ ಎನ್ನುತ್ತಾ ವಲಯದಲ್ಲಿ ಭಜನಾ ಪರಿಷತ್ತು ಉತ್ತಮವಾಗಿ ಸಂಘಟಿತರಾಗಲು ಎಲ್ಲಾ ಭಜನಾ ಮಂಡಳಿಗಳು ಸಹಕಾರ ನೀಡಬೇಕಾಗಿ ಕೇಳಿಕೊಂಡರು.
ಲಾಯಿಲ ವಲಯ ಮೇಲ್ವಿಚಾರಕಿ ಶ್ರೀಮತಿ ಮಲ್ಲಿಕಾ, ಉಪಾಧ್ಯಕ್ಷ ಕುಶಾಲಪ್ಪ ಗೌಡ, ಕಾರ್ಯದರ್ಶಿ ಅಖಿಲೇಶ್, ಒಕ್ಕೂಟದ ಅಧ್ಯಕ್ಷ ರಮೇಶ್, ವಲಯದ ಸೇವಾಪ್ರತಿನಿಧಿಗಳು, ವಲಯದ ಭಜನಾ ಮಂಡಳಿಗಳ ಪದಾಧಿಕಾರಿಗಳು ಮತ್ತು ಸದಸ್ಯರುಗಳು ಉಪಸ್ಥಿತರಿದ್ದರು.
ಕುಮಾರಿ ಚಂದ್ರಾವತಿಯವರ ಪ್ರಾರ್ಥಿಸಿ, ವಲಯದ ಮೇಲ್ವಿಚಾರಕರು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಲಾಯಿಲ ಎ ವಿಭಾಗದ ಸೇವಾ ಪ್ರತಿನಿಧಿ ಶ್ರೀಮತಿ ಗೀತಾ ಧನ್ಯವಾದ ನೀಡಿದರು.
















