ಮಡಂತ್ಯಾರು: ಜೆಸಿಐ ಭಾರತ ವಲಯ 15ರ ಪ್ರತಿಷ್ಠಿತ ವ್ಯವಹಾರ ಹಾಗೂ ಅಭಿವೃದ್ಧಿ ಮತ್ತು ಬೆಳವಣಿಗೆ ವಿಭಾಗದ ಸಮ್ಮೇಳನ “ಮೃದಿನಿ–2026” ಜೆಸಿಐ ಮಡಂತ್ಯಾರು ಆತಿಥ್ಯದಲ್ಲಿ ಆ.23ರಂದು ಮಡಂತ್ಯಾರಿನ ಕಲಾ ಸಭಾಂಗಣದಲ್ಲಿ ಅದ್ದೂರಿಯಾಗಿ ನಡೆಯಿತು.

“ಮೃದಿನಿ – ಇದು ಸಾಧಕ ಜೇಸಿಗಳ ಆಯನದ ದನಿ” ಎಂಬ ಧ್ಯೇಯದೊಂದಿಗೆ ನಡೆದ ಸಮ್ಮೇಳನವನ್ನು ಜೆಸಿಐ ಭಾರತ ವಲಯ 15ರ ವಲಯಾಧ್ಯಕ್ಷರಾದ ಜೆಎಫ್‌ಎಸ್. ಸಂತೋಷ್ ಶೆಟ್ಟಿಯವರು ತಮ್ಮ ಪುತ್ರಿ ಮೃದಿನಿಯೊಂದಿಗೆ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಸಮ್ಮೇಳನಕ್ಕೆ ಶುಭ ಹಾರೈಸಿ, ಯುವಜನರಲ್ಲಿ ನಾಯಕತ್ವ, ಉದ್ಯಮಶೀಲತೆ ಹಾಗೂ ಸಮಾಜಮುಖಿ ಚಿಂತನೆ ಬೆಳೆಸುವಲ್ಲಿ ಜೆಸಿಐನ ಪಾತ್ರ ಮಹತ್ವದ್ದಾಗಿದೆ ಎಂದರು.
ಬೆಳಗ್ಗಿನ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೆಸಿಐ ಭಾರತ ವಲಯ 15ರ ವ್ಯವಹಾರ ವಿಭಾಗದ ನಿರ್ದೇಶಕರಾದ ಜೇಸಿ ವಿಕೇಶ್ ಮಾನ್ಯ ವಹಿಸಿದ್ದರು. ಜೆಸಿಐ ಮಡಂತ್ಯಾರು ಅಧ್ಯಕ್ಷರಾದ ಜೇಸಿ ಸಾಯಿಸುಮಾ ನಾವಡ ಸ್ವಾಗತಿಸಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಜೆಸಿಐ ಭಾರತ ವಲಯ 15ರ ಪೂರ್ವ ವಲಯಾಧ್ಯಕ್ಷರಾದ ಜೆಸಿ ಪಿಪಿಪಿ. ಪುರುಷೋತ್ತಮ ಶೆಟ್ಟಿಯವರು ಮಾತನಾಡಿ, ಜೆಸಿಐ ಯುವಜನರ ವ್ಯಕ್ತಿತ್ವ ವಿಕಸನ, ನಾಯಕತ್ವ ಗುಣಗಳ ಬೆಳೆವಣಿಗೆ ಹಾಗೂ ವ್ಯವಹಾರಿಕ ಪ್ರಗತಿಗೆ ಉತ್ತಮ ವೇದಿಕೆಯಾಗಿದೆ. ಇಂತಹ ಸಮ್ಮೇಳನಗಳು ಯುವಜನರಿಗೆ ಹೊಸ ಆಲೋಚನೆ ಮತ್ತು ಪ್ರೇರಣೆಯನ್ನು ನೀಡುತ್ತವೆ ಎಂದು ತಿಳಿಸಿದರು.

ಇನ್ನೋರ್ವ ಅತಿಥಿಯಾಗಿ ಭಾಗವಹಿಸಿದ್ದ ಜೆಸಿಐ ಮಡಂತ್ಯಾರಿನ ಪೂರ್ವಾಧ್ಯಕ್ಷರು ಹಾಗೂ ವರ್ತಕರ ಸಂಘ ಮಡಂತ್ಯಾರಿನ ಅಧ್ಯಕ್ಷರಾದ ಜೆಸಿ ಜಯಂತ್ ಶೆಟ್ಟಿಯವರು ಮಾತನಾಡಿ, ಯುವ ಜನಾಂಗವನ್ನು ಜೆಸಿಐ ಸಂಘಟನೆಯತ್ತ ಇನ್ನಷ್ಟು ಆಕರ್ಷಿಸುವ ಮೂಲಕ ಅವರಲ್ಲಿರುವ ಪ್ರತಿಭೆ ಮತ್ತು ನಾಯಕತ್ವವನ್ನು ಸಮಾಜದ ಅಭಿವೃದ್ಧಿಗೆ ಬಳಸಿಕೊಳ್ಳುವ ಅಗತ್ಯವಿದೆ ಎಂದರು.
ಸಮ್ಮೇಳನದಲ್ಲಿ ಪ್ರತಿಷ್ಠಿತ ಉದ್ಯಮಿ ಚಿತ್ತರಂಜನ್ ಕುರುಡಂಗೆ ಅವರಿಗೆ “ಉದ್ಯಮರತ್ನ ಪ್ರಶಸ್ತಿ” ಹಾಗೂ ವಿವಿಧ ಕ್ಷೇತ್ರಗಳಲ್ಲಿ ಗಮನಾರ್ಹ ಸಾಧನೆಗೈದ ಶ್ರೀ ಶೈಲೇಶ್ ಪಿ. ಪುಳಿಮಜಲು ಗುತ್ತುಮನೆ ಅವರಿಗೆ “ಪಂಚರತ್ನ ಪ್ರಶಸ್ತಿ” ನೀಡಿ ಗಣ್ಯರ ಸಮ್ಮುಖದಲ್ಲಿ ಗೌರವಿಸಲಾಯಿತು.
ಪ್ರಮುಖ ಭಾಷಣಕಾರರಾಗಿ ಭಾಗವಹಿಸಿದ್ದ ಲೆಕ್ಸಾ ಲೈಟಿಂಗ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್‌ನ ಸ್ಥಾಪಕ ಹಾಗೂ ನಿರ್ದೇಶಕರಾದ ಶ್ರೀ ರೊನಾಲ್ಡ್ ಸಿಲ್ವನ್ ಡಿಸೋಜ ಅವರು “ಶೂನ್ಯದಿಂದ ಶಿಖರದತ್ತ” ಎಂಬ ವಿಷಯದ ಕುರಿತು ಪರಿಣಾಮಕಾರಿಯಾಗಿ ಮಾತನಾಡಿ, ಕಠಿಣ ಪರಿಶ್ರಮ, ದೂರದೃಷ್ಟಿ, ನಿರಂತರ ಕಲಿಕೆ, ಸರಿಯಾದ ಯೋಜನೆ ಹಾಗೂ ಬದ್ಧತೆಯ ಮೂಲಕ ವ್ಯವಹಾರದಲ್ಲಿ ಯಶಸ್ಸು ಮತ್ತು ಅಭಿವೃದ್ಧಿಯನ್ನು ಸಾಧಿಸುವ ಕುರಿತು ತಮ್ಮ ಅನುಭವಗಳನ್ನು ಹಂಚಿಕೊಂಡರು.
ಬೆಳಗ್ಗಿನ ಕಾರ್ಯಕ್ರಮದ ಧನ್ಯವಾದ ಸಮರ್ಪಣೆಯನ್ನು ವಲಯ ಕಾರ್ಯದರ್ಶಿ ಜೇಸಿ ಪ್ರಶಾಂತ್ ನೆರವೇರಿಸಿದರು.
ನಂತರ ನಡೆದ ಅಭಿವೃದ್ಧಿ ಹಾಗೂ ಬೆಳವಣಿಗೆ ವಿಭಾಗದ ಕಾರ್ಯಕ್ರಮದಲ್ಲಿ ವಿವಿಧ ಪ್ರಶಸ್ತಿ ಹಾಗೂ ಮನ್ನಣೆಗಳನ್ನು ಪ್ರದಾನ ಮಾಡಲಾಯಿತು. ಜೆಸಿಐ ಭಾರತ ವಲಯ 15ರ ವಿವಿಧ ಘಟಕಗಳ ಸುಮಾರು 38 ಮಂದಿ ಸಾಧಕ ಜೇಸಿ ಬಂಧುಗಳಿಗೆ “ಸಾಧನಾಶ್ರೀ” ಪ್ರಶಸ್ತಿ ನೀಡಿ ಗೌರವಿಸಲಾಯಿತು. ಉತ್ತಮ ನೋಂದಣಿ ಮಾಡಿದ ಘಟಕಗಳಿಗೂ ಮನ್ನಣೆ ನೀಡಲಾಯಿತು.

ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಜೆಸಿಐ ಭಾರತ ವಲಯ 15ರ ಅಭಿವೃದ್ಧಿ ಮತ್ತು ಬೆಳವಣಿಗೆ ವಿಭಾಗದ ನಿರ್ದೇಶಕರಾದ ಜೇಸಿ ರಂಜಿತ್ ಹೆಚ್.ಡಿ. ವಹಿಸಿದ್ದರು. ಸಮ್ಮೇಳನದ ಯಶಸ್ಸಿಗೆ ಶ್ರಮಿಸಿದವರನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು. ಕಾರ್ಯಕ್ರಮ ಸಂಯೋಜಕರಾದ ಜೇಸಿ ಸಂಯುಕ್ತ್ ಪೂಜಾರಿ ಕಡ್ತಿಲ ಅವರು ಧನ್ಯವಾದ ಸಮರ್ಪಿಸಿದರು.
ಸಮ್ಮೇಳನದಲ್ಲಿ ಜೆಸಿಐ ವಲಯ ಉಪಾಧ್ಯಕ್ಷರು, ವಲಯಾಧಿಕಾರಿಗಳು, ಪೂರ್ವ ವಲಯಾಧ್ಯಕ್ಷರು, ಜೆಸಿಐ ಮಡಂತ್ಯಾರಿನ ಪೂರ್ವಾಧ್ಯಕ್ಷರು, ಜೆಸಿಐ ಭಾರತ ವಲಯ 15ರ ವಿವಿಧ ಘಟಕಗಳ ಅಧ್ಯಕ್ಷರು ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಜೇಸಿ ಬಂಧುಗಳು ಭಾಗವಹಿಸಿದ್ದರು.
ಸಾಧಕರನ್ನು ಗುರುತಿಸಿ, ಅವರ ಸಾಧನೆಗೆ ಗೌರವ ನೀಡಿ, ಯುವಜನತೆಗೆ ಹೊಸ ದಿಕ್ಕು ತೋರಿಸಿದ “ಮೃದಿನಿ–2026” ಸಮ್ಮೇಳನವು ಜೆಸಿಐ ವಲಯ 15ರ ಯಶಸ್ವಿ ಕಾರ್ಯಕ್ರಮವಾಗಿ ಮೂಡಿಬಂತು.











