23.7 C
ಪುತ್ತೂರು, ಬೆಳ್ತಂಗಡಿ
October 12, 2026
ಗ್ರಾಮಾಂತರ ಸುದ್ದಿಬೆಳ್ತಂಗಡಿಸಮಸ್ಯೆ

ಕೋಳಿ ಸಾಕಾಣಿಕೆ ರೈತರಿಗೆ ಕಂಪನಿಗಳು ಸ್ಪಂದಿಸದಿದ್ದರೆ ಹೋರಾಟ ಅನಿವಾರ್ಯ: ಪ್ರಕಾಶ್ ಗೌಡ

ಬೆಳ್ತಂಗಡಿ: ಕೋಳಿ ಸಾಕಾಣಿಕೆದಾರ ರೈತರ ಸಮಸ್ಯೆಗಳಿಗೆ ಕಂಪನಿಗಳು ಸೂಕ್ತವಾಗಿ ಸ್ಪಂದಿಸದಿದ್ದರೆ ಹೋರಾಟ ನಡೆಸುವುದು ಅನಿವಾರ್ಯವಾಗಲಿದೆ ಎಂದು ತುಳುನಾಡು ಕೋಳಿ ಸಾಕಾಣಿಕೆ ರೈತರ ಒಕ್ಕೂಟದ ಉಪಾಧ್ಯಕ್ಷ ಪ್ರಕಾಶ್ ಗೌಡ ರಾಮಕುಂಜ ಎಚ್ಚರಿಸಿದರು.

ಅವರು ಆ. 24ರಂದು ಬೆಳ್ತಂಗಡಿ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ಕೋಳಿ ಫಾರ್ಮ್‌ಗಳ ಸುತ್ತಮುತ್ತ ಕಳೆದ ಮೂರು ವರ್ಷಗಳಿಂದ ನೊಣಗಳ ಹಾವಳಿ ಹೆಚ್ಚಾಗಿದ್ದು, ಇದರಿಂದ ಸಾರ್ವಜನಿಕರು ಹಾಗೂ ಕೋಳಿ ಸಾಕಾಣಿಕೆದಾರರು ತೊಂದರೆ ಅನುಭವಿಸುತ್ತಿದ್ದಾರೆ. ನೊಣಗಳ ನಿಯಂತ್ರಣಕ್ಕೆ ಕಂಪನಿಗಳು ನೀಡುತ್ತಿರುವ ಔಷಧಿಗಳ ಜೊತೆಗೆ ಕೋಳಿ ಆಹಾರದಲ್ಲಿ ‘ಲಾರ್ವಿಸೈಡ್’ (Larvicide) ಸೇರಿಸುವ ಮೂಲಕ ವೈಜ್ಞಾನಿಕವಾಗಿ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು ಎಂದು ಅವರು ಆಗ್ರಹಿಸಿದರು.

ಕೋಳಿ ಸಾಕಾಣಿಕೆದಾರರು ತಮ್ಮ ಶೆಡ್‌ಗಳಲ್ಲಿ ಕೋಳಿಗಳಿಗೆ ಸೂಕ್ತ ವಾತಾವರಣ, ಕುಡಿಯುವ ನೀರು ಹಾಗೂ ನಿರಂತರ ಆರೈಕೆಯನ್ನು ಮಾತ್ರ ಒದಗಿಸುತ್ತಾರೆ. ಕೋಳಿಗಳಿಗೆ ಅಗತ್ಯವಿರುವ ಆಹಾರ, ಲಸಿಕೆಗಳು ಹಾಗೂ ಜೀವ ರಕ್ಷಕ ಔಷಧಿಗಳನ್ನು ಕಂಪನಿಗಳೇ ಪೂರೈಸುತ್ತವೆ. ಅಂತಿಮವಾಗಿ ಮಾರುಕಟ್ಟೆಗೆ ಬರುವ ಕೋಳಿ ಮಾಂಸದ ಉತ್ಪಾದನಾ ವ್ಯವಸ್ಥೆಯ ಪ್ರಮುಖ ಜವಾಬ್ದಾರಿ ಕಂಪನಿಗಳ ಮೇಲಿರುವುದರಿಂದ ಗುಣಮಟ್ಟ ಹಾಗೂ ಸಂಬಂಧಿತ ಸಮಸ್ಯೆಗಳ ಜವಾಬ್ದಾರಿಯನ್ನೂ ಕಂಪನಿಗಳೇ ವಹಿಸಬೇಕು ಎಂದರು.

ನೊಣಗಳ ನಿಯಂತ್ರಣಕ್ಕಾಗಿ ಕಂಪನಿಗಳು ಎರಡು ರೀತಿಯ ಔಷಧಿಗಳನ್ನು ನೀಡುತ್ತಿದ್ದರೂ, ಅವುಗಳನ್ನು ಸಿಂಪಡಿಸಲು ಅಗತ್ಯವಿರುವ ಗ್ಲೌಸ್, ಸಲಕರಣೆಗಳು ಹಾಗೂ ಇತರ ಸುರಕ್ಷತಾ ಉಪಕರಣಗಳನ್ನು ನೀಡುತ್ತಿಲ್ಲ. ಇದರಿಂದ ರೈತರಿಗೆ ತೊಂದರೆಯಾಗುತ್ತಿದೆ ಎಂದು ಅವರು ಹೇಳಿದರು.

ಕರ್ನಾಟಕದಲ್ಲಿ ಸುಮಾರು 30 ಸಾವಿರ ಹಾಗೂ ಬೆಳ್ತಂಗಡಿ ತಾಲೂಕಿನಲ್ಲಿ 1,400ಕ್ಕೂ ಅಧಿಕ ಕೋಳಿ ಸಾಕಾಣಿಕೆ ಶೆಡ್‌ಗಳಿವೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಬ್ರಾಯ್ಲರ್ ಕೋಳಿ ಸಾಕಣೆ ನಡೆಸುತ್ತಿರುವ ರೈತರು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದು, ಇಂಟಿಗ್ರೇಷನ್ ಕಂಪನಿಗಳ ಏಕಪಕ್ಷೀಯ ನಿರ್ಧಾರಗಳಿಂದ ನಷ್ಟ ಅನುಭವಿಸುತ್ತಿದ್ದಾರೆ. ರೈತರ ಸಮಸ್ಯೆಗಳಿಗೆ ಕಂಪನಿಗಳು ಶಾಶ್ವತ ಪರಿಹಾರ ಒದಗಿಸಬೇಕು ಎಂದು ಆಗ್ರಹಿಸಿದರು.

ಜಿ.ಸಿ. ಮೊತ್ತ ಕನಿಷ್ಠ ರೂ.10ಕ್ಕೆ ಏರಿಕೆಗೆ ಆಗ್ರಹ:
ಪ್ರಸ್ತುತ ಕಂಪನಿಗಳು ನೀಡುತ್ತಿರುವ ಜಿ.ಸಿ. ಮೊತ್ತ ತೀರಾ ಕಡಿಮೆಯಾಗಿದ್ದು, ರೈತರ ನಿರ್ವಹಣಾ ವೆಚ್ಚವನ್ನೂ ಭರಿಸಲಾಗದ ಪರಿಸ್ಥಿತಿ ಇದೆ. ಆದ್ದರಿಂದ ಜಿ.ಸಿ. ಮೊತ್ತವನ್ನು ಕನಿಷ್ಠ ರೂ.10ಕ್ಕೆ ಏರಿಸಬೇಕು. ಕೋಳಿ ಸಾಕಾಣಿಕೆಯನ್ನು ಕೃಷಿ ಚಟುವಟಿಕೆಯಾಗಿ ಪರಿಗಣಿಸಿ ಕೃಷಿ ಸ್ಥಾನಮಾನ ಮತ್ತು ಸೌಲಭ್ಯಗಳನ್ನು ನೀಡಬೇಕು. ರೈತರಿಗೆ ಉಚಿತ ವಿದ್ಯುತ್, ಕೃಷಿ ಸಾಲ ಹಾಗೂ ಅಗತ್ಯ ಸಬ್ಸಿಡಿ ಒದಗಿಸಬೇಕು ಎಂದು ಅವರು ಒತ್ತಾಯಿಸಿದರು.

ಆಧುನಿಕ ತಂತ್ರಜ್ಞಾನ ಆಧಾರಿತ ಶೆಡ್‌ಗಳ ನಿರ್ಮಾಣ ಹಾಗೂ ಅಗತ್ಯ ಸಲಕರಣೆ ಮತ್ತು ಯಂತ್ರೋಪಕರಣಗಳನ್ನು ಅಳವಡಿಸಿಕೊಳ್ಳಲು ಸರ್ಕಾರದಿಂದ ಸಹಾಯಧನ ನೀಡಬೇಕು. ಪ್ರಕೃತಿ ವಿಕೋಪ, ಬಿರುಗಾಳಿ ಹಾಗೂ ಅನಿರೀಕ್ಷಿತ ಬೆಂಕಿ ಅವಘಡಗಳಿಂದ ಶೆಡ್‌ಗಳಿಗೆ ಹಾನಿಯಾದ ಸಂದರ್ಭದಲ್ಲಿ ಸರ್ಕಾರ ಮತ್ತು ಕಂಪನಿಗಳು ಸೇರಿ ಸೂಕ್ತ ಪರಿಹಾರ ಹಾಗೂ ವಿಮಾ ಭದ್ರತೆ ಒದಗಿಸಬೇಕು ಎಂದು ಅವರು ತಿಳಿಸಿದರು.

ಕೋಳಿ ಸಾಕಾಣಿಕೆದಾರರ ಮೇಲಿನ ಆರ್ಥಿಕ ಹಾಗೂ ಮಾನಸಿಕ ಒತ್ತಡವನ್ನು ತಡೆಯುವುದು, ರೈತರ ಹಿತಾಸಕ್ತಿಯನ್ನು ರಕ್ಷಿಸುವುದು ಮತ್ತು ಇಂಟಿಗ್ರೇಷನ್ ಕಂಪನಿಗಳೊಂದಿಗೆ ಆರೋಗ್ಯಕರ ಸಮನ್ವಯ ಸಾಧಿಸುವುದು ಒಕ್ಕೂಟದ ಉದ್ದೇಶವಾಗಿದೆ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ತುಳುನಾಡು ಕೋಳಿ ಸಾಕಾಣಿಕೆ ರೈತರ ಒಕ್ಕೂಟದ ಅಧ್ಯಕ್ಷ ಯು.ಎಂ. ಸಯ್ಯದ್ ಹಸನ್, ಉಪಾಧ್ಯಕ್ಷ ಕೂಸಪ್ಪ ಶೆಟ್ಟಿ ಕೆದ್ದಳಿಕೆ, ಕಾರ್ಯದರ್ಶಿ ಅಶ್ವಿನ್ ಕುಮಾರ್ ಬಳಂಜ, ಕೋಶಾಧಿಕಾರಿ ಕೇಶವ ಕೊಯ್ಯೂರು, ಜೊತೆ ಕಾರ್ಯದರ್ಶಿ ಅಶ್ವಿನಿ ಪೆರಿಯಡ್ಕ ಹಾಗೂ ಸದಸ್ಯ ಲಾರೆನ್ಸ್ ಚಿಬಿದ್ರೆ ಉಪಸ್ಥಿತರಿದ್ದರು.

Related posts

ಮಿತ್ತಬಾಗಿಲು ವಿಭಾಷ್ ಮತ್ತು ವಿಭಾ – ಕರಾಟೆ ಅಖಾಡದಲ್ಲಿ ಚಾಂಪಿಯನ್‌ಶಿಪ್‌ ದ್ವಿರತ್ನ ಸಾಧನೆ

Suddi Udaya

ಕೊಕ್ಕಡ ಜೇಸಿಐ ನೂತನ ಪದಾಧಿಕಾರಿಗಳ ಆಯ್ಕೆ: ಅಧ್ಯಕ್ಷರಾಗಿ ಸಂತೋಷ ಕುಮಾರ್ ಜೈನ್, ಕಾರ್ಯದರ್ಶಿ ಅಕ್ಷತ್ ರೈ

Suddi Udaya

ಬಂದಾರಿನಲ್ಲಿ ಮೊಬೈಲ್ ಟವರ್‌ನಿಂದ 60 ಲೀಟರ್ ಡೀಸೆಲ್ ಕಳವು :ಮೂವರ ವಿರುದ್ಧ ಪ್ರಕರಣ ದಾಖಲು

Suddi Udaya

ಮದ್ದಡ್ಕ: 15 ನೇ ವರ್ಷದ ಗಣೇಶೋತ್ಸವದ ಪೂರ್ವ ತಯಾರಿ ಸಭೆ

Suddi Udaya

ತಣ್ಣೀರುಪಂತ: ದೀಪಾವಳಿ ಪ್ರಯುಕ್ತ ದೀಪ ಸಂಜೀವಿನಿ, ಹಳ್ಳಿ ಸಂತೆ

Suddi Udaya

ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರ ಸಂಘದಿಂದ ಶ್ರೀ ಗುರು ಮಾಣಿಕ್ಯ ಪ್ರಶಸ್ತಿ ಸೆ. 5ರಂದು ಮಹಾಸಭೆಯಲ್ಲಿ ಪ್ರಶಸ್ತಿ ಪ್ರದಾನ

Suddi Udaya
error: Content is protected !!