ಬಂಗಾಡಿ: ಸದಸ್ಯರ ಸಂಪೂರ್ಣ ಸಹಕಾರದಲ್ಲಿ ಸಂಘವು ಈ ವಾರ್ಷಿಕ ವರ್ಷದಲ್ಲಿ 1208.14 ಕೋಟಿ ರೂ. ವ್ಯವಹಾರ ನಡೆಸಿದ ಬ್ಯಾಂಕ್ ರೂ.5.01 ಕೋಟಿ ಲಾಭಗಳಿಸಿ ಸದಸ್ಯರಿಗೆ ಶೇ.18-ಡಿವಿಡೆಂಟ್ ನೀಡಲಾಗುವುದು ಎಂದು ಬಂಗಾಡಿ ಸಹಕಾರಿ ವ್ಯವಸಾಯಿಕ ಸಂಘದ ಅಧ್ಯಕ್ಷ ಹರೀಶ್ ಸಾಲಿಯಾನ್ ಮೋರ್ತಾಜೆ ತಿಳಿಸಿದರು.
ಶನಿವಾರ (ಆ. 29) ರಂದು ಕೊಲ್ಲಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವಠಾರದಲ್ಲಿ ಜರಗಿದ ವಾರ್ಷಿಕ ಮಹಾಸಭೆಯಲ್ಲಿ ಅವರು ಮಾತನಾಡಿದರು.

ನಬಾರ್ಡ್ ನಿಗದಿಪಡಿಸಿರುವ ಕನಿಷ್ಠ ಬಂಡವಾಳ ಸಾಮರ್ಥ್ಯ ಅನುಪಾತವು ಶೇ.9 ಆಗಿದ್ದು ನಮ್ಮ ಸಂಘವು ಶೇ. 13.65 ಅನುಪಾತದೊಂದಿಗೆ ಹೆಚ್ಚಿನ ಸಾಧನೆಯನ್ನು ಮಾಡಿದೆ. ಸಂಘದಲ್ಲಿ ಎ ತರಗತಿಯ 6,402, ಸಿ ತರಗತಿಯ 544, ಡಿ ತರಗತಿಯ 9,512 ಸದಸ್ಯರನ್ನು ಹೊಂದಿದ್ದು ಒಟ್ಟು 7.69 ಕೋಟಿ ರೂ.ಪಾಲು ಭಂಡವಾಳವನ್ನು ಹೊಂದಿದೆ ಸಂಘದಲ್ಲಿ 175 ಕೋಟಿ ರೂ. ಗಿಂತ ಅಧಿಕ ಠೇವಣಿ ಇದೆ ಎಂದು ಹೇಳಿದರು.
6 ಗ್ರಾಮಗಳಾದ ಇಂದಬೆಟ್ಟು, ಕನ್ಯಾಡಿ, ನಾವೂರು, ಮಿತ್ತಬಾಗಿಲು, ಕಡಿರುದ್ಯಾವರ ಹಾಗೂ ಮಲವಂತಿಗೆ ಗ್ರಾಮ ವ್ಯಾಪ್ತಿ ಹೊಂದಿರುವ ಸಂಘವು 8 ಕಡೆ ಶಾಖೆಗಳನ್ನು ಹೊಂದಿದ್ದು ಕೃಷಿ ಹಾಗೂ ಕೃಷಿಯಕರ ಚಟುವಟಿಕೆಗಳಿಗೆ ಸ್ಪಂದಿಸುತ್ತಿದೆ. 192 ಮಂದಿ ವಿದ್ಯಾರ್ಥಿಗಳಿಗೆ 5.30 ಲಕ್ಷ ರೂ. ವಿದ್ಯಾನಿಧಿ ನೀಡಲಾಗುತ್ತಿದೆ ಎಂದು ಹೇಳಿದರು.

ಅಗತ್ಯ ದಾಖಲೆಗಳನ್ನು ನೀಡಿದಲ್ಲಿ ಸೌಭಾಗ್ಯ ಕಿರು ಸಾಲ ಹಾಗೂ ಸೌಹಾರ್ದ ಕ್ರೇಡಿಟ್ ಕಾರ್ಡ್, ಸಂಘವು ರಬ್ಬರ್, ಅಡಿಕೆ ಖರೀದಿ, ರಸಗೊಬ್ಬರ ಮಾರಾಟ ನಡೆಸುತ್ತಿದೆ. ನಬಾರ್ಡ್ ಅಧಿಕಾರಿಗಳು ಸಂಘಕ್ಕೆ ಭೇಟಿ ನೀಡುವುದು ಹಲವಾರು ರಾಜ್ಯಗಳ ಹಾಗೂ ಜಿಲ್ಲೆಗಳ ಅಧ್ಯಯನ ತಂಡಗಳು ಭೇಟಿ ನೀಡಿ ಮಾಹಿತಿಯನ್ನು ಪಡೆಯುತ್ತಿವೆ ಎಂದು ಮಾಹಿತಿ ನೀಡಿದರು.
25 ಸದಸ್ಯರ ಬೆಳೆ ಸಾಲ ಮನ್ನಾ ಬಾಕಿ: ರಾಜ್ಯ ಸರಕಾರ 2018ರ ಯೋಜನೆಯಂತೆ ಒಂದು ಕುಟುಂಬಕ್ಕೆ 1 ಲಕ್ಷ ರೂ.ಸಾಲ ಮನ್ನಾ ಯೋಜನೆಯಲ್ಲಿ ಸಂಘದ 25 ಸದಸ್ಯರ ಆಧಾರ್, ಪಹಣಿ ಪತ್ರಿಕೆ, ರೇಷನ್ ಕಾರ್ಡ್ ಗಳಲ್ಲಿ ವ್ಯತ್ಯಾಸವಿದ್ದ ಕಾರಣ ಸಾಲ ಮನ್ನಾ ಮೊತ್ತ ಬಿಡುಗಡೆಗೊಂಡಿಲ್ಲ. ಈ ಎಲ್ಲಾ ವ್ಯತ್ಯಾಸಗಳನ್ನು ತಾಲೂಕಿನ ತಹಶೀಲ್ದಾರ್ ಕಮಿಟಿಯಲ್ಲಿ ಅಂತಿಮಗೊಳಿಸಿದ್ದರು ಸರಕಾರದ ಕಡೆಯಿಂದ ಬಿಡುಗಡೆಗೆ ವಿಳಂಬವಾಗುತ್ತಿದೆ ಎಂದು ಹೇಳಿದರು.
ಪುತ್ತೂರು ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದಿರುವ ನಮ್ಮ ಬ್ಯಾಂಕ್ ಗ್ರಾಹಕರಿಗೆ 26 ರೀತಿಯಲ್ಲಿ ಸಾಲ ವಿತರಣೆ ನೀಡಲಾಗುತ್ತದೆ. ಗ್ರಾಹಕರು ಸಾಲ ಪಡೆದು ಸಕಾಲಕ್ಕೆ ಮರು ಪಾವತಿ ನಡೆಸುತ್ತಿರುವ ಸಂಘದ ಬೆಳವಣಿಗೆ ಸಾಧ್ಯವಾಗಿದೆ. ಇಂದಬೆಟ್ಟು ಪರಿಸರದಲ್ಲಿ 70 ಸೆಂಟ್ಸ್ ಜಾಗದಲ್ಲಿ ಎಂಆರ್ ಪಿ ಎಲ್ ಕಂಪನಿಯ ಪೆಟ್ರೋಲ್ ಬಂಕ್ ನಿರ್ಮಾಣಕ್ಕೆ ಅನುಮತಿ ದೊರೆತಿದ್ದು ಶೀಘ್ರದಲ್ಲೇ ಶಿಲಾನ್ಯಾಸ ನಡೆದು ಕಾಮಗಾರಿ ಆಂಭಗೊಂಡು ಶೀಘ್ರದಲ್ಲೇ ಲೋಕಾರ್ಪಣೆ ಗೊಳ್ಳಲಿದೆ ಎಂದು ಸಂಘದ ಅಧ್ಯಕ್ಷ ಹರೀಶ್ ಸಾಲಿಯಾನ್ ಮೋರ್ತಾಜೆ ತಿಳಿಸಿದರು.
ಪಡ್ಪು ಶಾಖೆ ಶೀಘ್ರ ಲೋಕಾರ್ಪಣೆ: ಕನ್ಯಾಡಿಯ ಪಡ್ಪು ಎಂಬಲ್ಲಿ ಶಾಖೆಯ ಗೋದಾಮು ಹಾಗೂ ಬ್ಯಾಂಕಿಂಗ್ ವ್ಯವಹಾರದ ಕಟ್ಟಡದ ಕಾಮಗಾರಿ 1.56 ಕೋಟಿ ರೂ. ವೆಚ್ಚದಲ್ಲಿ ಪೂರ್ಣಗೊಂಡಿದ್ದು, ಎರಡನೇ ಮಹಡಿಯಲ್ಲಿ ಸದಸ್ಯರ ಬೇಡಿಕೆಯಂತೆ ಸುಮಾರು 60 ಲಕ್ಷ ರೂ.ವೆಚ್ಚದಲ್ಲಿ ಸಭಾಭವನವನ್ನು ನಿರ್ಮಿಸಲು ಆಡಳಿತ ಮಂಡಳಿ ತೀರ್ಮಾನಿಸಿದೆ. ಈ ಕಾಮಗಾರಿಯು ಪ್ರಗತಿಯಲ್ಲಿದ್ದು ಶೀಘ್ರವೇ ಪಡ್ಪು ಶಾಖೆಯನ್ನು ಲೋಕಾರ್ಪಣೆ ಗೊಳಿಸಲಾಗುವುದು.
ಎರಡು ಅವಧಿಗೆ ನಿರ್ದೇಶಕರಾಗಿ ಆಯ್ಕೆಯಾದ ವಿರೇಶ್ವರ ಮರಾಠೆ ಹಾಗೂ ನಿಧನ ಹೊಂದಿದ 27 ಮಂದಿ ಸದಸ್ಯರಿಗೆ ಮೌನ ಪ್ರಾರ್ಥನೆ ಸಲ್ಲಿಸಲಾಯಿತು.
ಉಪಾಧ್ಯಕ್ಷ ಆನಂದ ಗೌಡ ಬಿ., ನಿರ್ದೇಶಕರಾದ ಕೆ.ಪುಷ್ಪಲತಾ, ಕೆ.ವಸಂತ ಗೌಡ, ರಮೇಶ್ ಕೆಂಗಾಜೆ, ವಿನಯಚಂದ್ರ, ರಘುನಾಥ, ಸತೀಶ್ ನಾಯ್ಕ, ಶೀನಪ್ಪ ಗೌಡ, ಹರೀಶ್ ಪೂಜಾರಿ, ಪ್ರಮೋದ್ ಕುಮಾರ್, ವೇದಾವತಿ, ಸಿಇಒ ದಯಾನಂದ ಶೆಟ್ಟಿಗಾರ್ ಕೆ. ಹಾಗೂ ಬ್ಯಾಂಕ್ ಪ್ರತಿನಿಧಿ ಸುದರ್ಶನ್ ಉಪಸ್ಥಿತರಿದ್ದರು.
ಸಿಬ್ಬಂದಿ ರಮಾನಂದ ಕಾರ್ಯಕ್ರಮ ನಿರೂಪಿಸಿದರು. ನಿರ್ದೇಶಕ ವಿನಯಚಂದ್ರ ಗೌಡ ವಂದಿಸಿದರು.











