26.9 C
ಪುತ್ತೂರು, ಬೆಳ್ತಂಗಡಿ
October 16, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ತುಳುವ ಮಹಾಸಭೆ ಇಂಟರ್‌ನ್ಯಾಷನಲ್ ಬೆಳ್ತಂಗಡಿ ಘಟಕದ ಅಧ್ಯಕ್ಷರಾಗಿ ಎಂ. ಗಂಗಾಧರ ಮಿತ್ತಮಾರ್, ಪ್ರಧಾನ ಸಂಚಾಲಕರಾಗಿ ಪಿ. ಎಚ್. ನಿತ್ಯಾನಂದ ಶೆಟ್ಟಿ ನೇಮಕ

ಬೆಳ್ತಂಗಡಿ: 2028ರಲ್ಲಿ ಶತಮಾನೋತ್ಸವವನ್ನು ಆಚರಿಸಲಿರುವ ಐತಿಹಾಸಿಕ ತುಳುವ ಮಹಾಸಭೆಯ ಜಾಗತಿಕ ಸಂಘಟನೆಯಾದ ತುಳುವ ಮಹಾಸಭೆ ಇಂಟರ್‌ನ್ಯಾಷನಲ್ ಬೆಳ್ತಂಗಡಿ ಘಟಕವನ್ನು ರಚಿಸಿ, ಎಂ. ಗಂಗಾಧರ ಮಿತ್ತಮಾರ್ ಅವರನ್ನು ಅಧ್ಯಕ್ಷರಾಗಿ ಹಾಗೂ ಪಿ. ಎಚ್. ನಿತ್ಯಾನಂದ ಶೆಟ್ಟಿ ಅವರನ್ನು ಪ್ರಧಾನ ಸಂಚಾಲಕರಾಗಿ ನೇಮಕ ಮಾಡಲಾಗಿದೆ.

ದಿ| ಬಿರ್ಮಣ್ಣ ಪೂಜಾರಿಯವರ ಹಿರಿಯ ಪುತ್ರರಾದ ಎಂ. ಗಂಗಾಧರ ಮಿತ್ತಮಾರ್ ಅವರು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶ್ರೇಷ್ಠ ಕೃಷಿಕರಾಗಿ ಗುರುತಿಸಿಕೊಂಡಿದ್ದರು. ತಾವು ಬೆಳೆಸಿದ ತೆಂಗಿನ ತೋಟದ ಮೂಲಕ “ಕೋಕನಟ್ ಕಿಂಗ್” ಎಂದೇ ಪ್ರಸಿದ್ಧಿ ಪಡೆದಿದ್ದರು.

ವಿಶ್ವ ಹಿಂದೂ ಪರಿಷತ್ತಿನ ಜಿಲ್ಲಾಧ್ಯಕ್ಷರಾಗಿ ಸೇವೆ ಸಲ್ಲಿಸಿರುವ ಅವರು, ಸಾಮಾಜಿಕ, ಧಾರ್ಮಿಕ ಹಾಗೂ ಶೈಕ್ಷಣಿಕ ಕ್ಷೇತ್ರಗಳಲ್ಲಿ ಗಮನಾರ್ಹ ಸೇವೆ ಸಲ್ಲಿಸಿದ್ದಾರೆ. ಊರಿನ ವಿವಿಧ ಶಿಕ್ಷಣ ಸಂಸ್ಥೆಗಳಿಗೆ ಸಹಾಯಹಸ್ತ ಚಾಚಿರುವ ಅವರು, ತಮ್ಮ ತಂದೆಯವರ ಸ್ಮರಣಾರ್ಥ ಆಳದಂಗಡಿ ಪ್ರೌಢಶಾಲೆಯಲ್ಲಿ ಬಿರ್ಮಣ್ಣ ಪೂಜಾರಿ ಸ್ಮಾರಕ ಸಭಾಂಗಣ ನಿರ್ಮಾಣ ಮಾಡುವಲ್ಲಿಯೂ ಪ್ರಮುಖ ಪಾತ್ರ ವಹಿಸಿದ್ದಾರೆ.

ಸರಳತೆ ಹಾಗೂ ಸಜ್ಜನಿಕೆಯ ಗುಣಗಳಿಂದ ತಾಲೂಕಿನಲ್ಲಿ ಜನಪ್ರಿಯರಾಗಿರುವ ಗಂಗಾಧರ ಮಿತ್ತಮಾರ್ ಅವರು ಅನೇಕ ಧಾರ್ಮಿಕ ಹಾಗೂ ಶೈಕ್ಷಣಿಕ ಕೇಂದ್ರಗಳ ಅಭಿವೃದ್ಧಿಗೆ ಕಾರಣೀಭೂತರಾಗಿದ್ದಾರೆ.

ಪ್ರಧಾನ ಸಂಚಾಲಕರಾಗಿ ನೇಮಕಗೊಂಡಿರುವ ಪಿ. ಎಚ್. ನಿತ್ಯಾನಂದ ಶೆಟ್ಟಿ ಅವರು ಆಳದಂಗಡಿ ನುಚ್ಚ ಮನೆಯ ಹಿರಿಯ ಸದಸ್ಯರಾಗಿದ್ದು, ಶಿರ್ಲಾಲು ಬ್ಯಾಂಕಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಸುಮಾರು 40 ವರ್ಷಗಳ ಕಾಲ ಸೇವೆ ಸಲ್ಲಿಸಿ ಜನಾನುರಾಗಿಯಾಗಿದ್ದಾರೆ.

ಸಹಕಾರಿ ಕ್ಷೇತ್ರದಲ್ಲಿಯೂ ಸುದೀರ್ಘ ಸೇವೆ ಸಲ್ಲಿಸಿರುವ ಅವರು, ಸಹಕಾರಿ ನೌಕರರ ಯೂನಿಯನ್‌ನ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿಯಾಗಿ ಹಾಗೂ ಬೆಳ್ತಂಗಡಿ ತಾಲೂಕು ಸಹಕಾರಿ ನೌಕರರ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಶಿರ್ಲಾಲು ಸೊಸೈಟಿಯಲ್ಲಿ ರಚಿಸಿರುವ ನವೋದಯ ಸ್ವಸಹಾಯ ಗುಂಪುಗಳಿಗೆ ಜಿಲ್ಲಾಮಟ್ಟದ ಪ್ರಶಸ್ತಿ ದೊರಕುವಲ್ಲಿ ಅವರ ಕೊಡುಗೆ ಗಮನಾರ್ಹವಾಗಿದೆ.

ಉಜಿರೆಯಲ್ಲಿ ನಡೆದ ವಿಶ್ವ ತುಳು ಸಮ್ಮೇಳನದ ಆರ್ಥಿಕ ಸಮಿತಿಯ ಸಂಚಾಲಕರಾಗಿ ಕಾರ್ಯನಿರ್ವಹಿಸಿದ ಅನುಭವವೂ ಪಿ. ಎಚ್. ನಿತ್ಯಾನಂದ ಶೆಟ್ಟಿಯವರಿಗಿದೆ.

ಬೆಳ್ತಂಗಡಿ ತಾಲೂಕಿನಲ್ಲಿ ತುಳುವರನ್ನು ಸಂಘಟಿಸಿ, ತುಳು ಭಾಷೆ, ಸಾಹಿತ್ಯ, ಕಲೆ, ಸಂಸ್ಕೃತಿ ಹಾಗೂ ಪರಂಪರೆಯ ಸಂರಕ್ಷಣೆ ಮತ್ತು ಬೆಳವಣಿಗೆಗೆ ಶ್ರಮಿಸುವುದರ ಜೊತೆಗೆ, 2028ರ ತುಳುವ ಮಹಾಸಭೆಯ ಶತಮಾನೋತ್ಸವದ ಹಿನ್ನೆಲೆಯಲ್ಲಿ ಸಂಘಟನೆಯನ್ನು ಮತ್ತಷ್ಟು ಬಲಪಡಿಸುವ ಕಾರ್ಯಕ್ಕೆ ಆದ್ಯತೆ ನೀಡಲಾಗುವುದು.

ತುಳುವ ಮಹಾಸಭೆ ಇಂಟರ್‌ನ್ಯಾಷನಲ್ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಅಧ್ಯಕ್ಷ ಶಿವಪ್ರಸಾದ್ ಅಜಿಲ ಹಾಗೂ ಜಿಲ್ಲಾ ಸಂಚಾಲಕರಾದ ಡಾ. ನಿರಂಜನ್ ರೈ ಅವರ ನೇತೃತ್ವದಲ್ಲಿ ಎಂ. ಗಂಗಾಧರ ಮಿತ್ತಮಾರ್ ಅವರನ್ನು ಬೆಳ್ತಂಗಡಿ ಘಟಕದ ಅಧ್ಯಕ್ಷರಾಗಿ ಹಾಗೂ ಪಿ. ಎಚ್. ನಿತ್ಯಾನಂದ ಶೆಟ್ಟಿ ಅವರನ್ನು ಪ್ರಧಾನ ಸಂಚಾಲಕರಾಗಿ ನೇಮಕಗೊಳಿಸಲಾಗಿದೆ.

ನೂತನ ಅಧ್ಯಕ್ಷರಾದ ಎಂ. ಗಂಗಾಧರ ಮಿತ್ತಮಾರ್ ಹಾಗೂ ಪ್ರಧಾನ ಸಂಚಾಲಕರಾದ ಪಿ. ಎಚ್. ನಿತ್ಯಾನಂದ ಶೆಟ್ಟಿ ಅವರ ನೇಮಕವನ್ನು ತುಳುವ ಮಹಾಸಭೆ ಇಂಟರ್‌ನ್ಯಾಷನಲ್‌ನ ಪದಾಧಿಕಾರಿಗಳು ಹಾಗೂ ಪ್ರಮುಖರು ಹರ್ಷದಿಂದ ಸ್ವಾಗತಿಸಿ, ಇಬ್ಬರಿಗೂ ಹೃತ್ಪೂರ್ವಕ ಅಭಿನಂದನೆಗಳು ಹಾಗೂ ಶುಭಹಾರೈಕೆಗಳನ್ನು ಸಲ್ಲಿಸಿದ್ದಾರೆ.

– ತುಳುವ ಮಹಾಸಭೆ ಇಂಟರ್‌ನ್ಯಾಷನಲ್

Related posts

ಕಣಿಯೂರು, ಪದ್ಮುಂಜ ಪರಿಸರದಲ್ಲಿ ಆನೆ ದಾಳಿ : ತೋಟಕ್ಕೆ ನುಗ್ಗಿ ಬಾಳೆ ಕೃಷಿಗೆ ಹಾನಿ

Suddi Udaya

ಶ್ರೀ ರಾಮ ಕ್ಷೇತ್ರಕ್ಕೆ ಅಯೋಧ್ಯ ಶ್ರೀರಾಮ ಕ್ಷೇತ್ರದ ಟ್ರಸ್ಟಿಗಳು ಭೇಟಿ

Suddi Udaya

ಕೊಯ್ಯೂರು ಸ. ಹಿ. ಪ್ರಾ. ಶಾಲೆಯಲ್ಲಿ ಹಳೆ ವಿದ್ಯಾರ್ಥಿ ಸಂಘ ರಚನೆ: ಅಧ್ಯಕ್ಷರಾಗಿ ಕೇಶವ ಗೌಡ , ಪ್ರಧಾನ ಕಾರ್ಯದರ್ಶಿಯಾಗಿ ಚಂದ್ರಶೇಖರ ಸಾಲ್ಯಾನ್

Suddi Udaya

ಸೂಳಬೆಟ್ಟು ಹಾಲು ಉತ್ಪಾದಕ ಸಹಕಾರ ಸಂಘದ ವಾರ್ಷಿಕ ಸಾಮಾನ್ಯ ಸಭೆ

Suddi Udaya

ಅಳದಂಗಡಿ ಸರಕಾರಿ ಪ್ರೌಢ ಶಾಲೆಯಲ್ಲಿ ಖೋ ಖೋ ಪಂದ್ಯಾಟ ಉದ್ಘಾಟನೆ

Suddi Udaya

ಉಜಿರೆ: ಮಹೇಶ್ ಶೆಟ್ಟಿ ತಿಮರೋಡಿ ಪೊಲೀಸ್ ವಶಕ್ಕೆ

Suddi Udaya
error: Content is protected !!