September 5, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಪಡ್ಲಾಡಿ 35ನೇ ವರ್ಷದ ಮೊಸರು ಕುಡಿಕೆ ಉತ್ಸವ: ಉಳಿಕೆ ಹಣದಿಂದ ಅಶಕ್ತ ಕುಟುಂಬಗಳಿಗೆ ನೆರವು, ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪ್ರೋತ್ಸಾಹದ ಚಿಂತನೆ

ಬೆಳ್ತಂಗಡಿ: ಯುವಜನತೆ ಕೇವಲ ಮನೋರಂಜನಾ ಕಾರ್ಯಕ್ರಮಗಳಿಗೆ ಸೀಮಿತವಾಗದೆ ಸಮಾಜದ ನೋವು–ನಲಿವುಗಳಿಗೆ ಸ್ಪಂದಿಸುವಂತಹ ಸಮಾಜಮುಖಿ ಚಿಂತನೆಗಳನ್ನು ಬೆಳೆಸಿಕೊಳ್ಳಬೇಕು. ಯುವಕರಲ್ಲಿ ಸಾಮಾಜಿಕ ಕಳಕಳಿ ಬೆಳೆದಾಗ ಮಾತ್ರ ಇಂತಹ ಕಾರ್ಯಕ್ರಮಗಳು ನಿಜವಾದ ಅರ್ಥದಲ್ಲಿ ಸಮಾಜಕ್ಕೆ ಕೊಡುಗೆ ನೀಡಲು ಸಾಧ್ಯ ಎಂದು ವಿಶ್ರಾಂತ ಪ್ರಾಂಶುಪಾಲ ಪ್ರೊ. ಸುರೇಶ್ ವಿ ಹೇಳಿದರು.

ಲಾಯಿಲ ಗ್ರಾಮದ ಪಡ್ಲಾಡಿ ಉತ್ಸಾಹಿ ಯುವಕ ಮಂಡಲದ ವಠಾರದಲ್ಲಿ ಸೆ 04 ರಂದು ನಡೆದ 35ನೇ ವರ್ಷದ ಮೊಸರು ಕುಡಿಕೆ ಉತ್ಸವದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಮೊಸರು ಕುಡಿಕೆ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಹಲವು ಕಡೆಗಳಲ್ಲಿ ದೇಣಿಗೆ ಸಂಗ್ರಹಿಸಿ ಅದ್ದೂರಿಯಾಗಿ ಆಚರಿಸಲಾಗುತ್ತದೆ. ಆದರೆ ಪಡ್ಲಾಡಿ ಮೊಸರು ಕುಡಿಕೆ ಉತ್ಸವದ ವಿಶೇಷತೆ ಎಂದರೆ ಗ್ರಾಮಸ್ಥರು ಹಾಗೂ ದಾನಿಗಳು ನೀಡುವ ಸಹಕಾರದಿಂದ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಡೆಸುವುದರ ಜತೆಗೆ, ಉಳಿಕೆಯಾಗುವ ಹಣವನ್ನು ಸಮಾಜದ ಅಶಕ್ತರು ಹಾಗೂ ಅಗತ್ಯವಿರುವ ಕುಟುಂಬಗಳಿಗೆ ನೆರವಾಗಲು ಬಳಸುತ್ತಿರುವುದು. ಈ ಮೂಲಕ ಉತ್ಸವವೊಂದು ಕೇವಲ ಸಂಭ್ರಮದ ಕಾರ್ಯಕ್ರಮವಾಗದೆ ಸಮಾಜಮುಖಿ ಸೇವೆಯ ವೇದಿಕೆಯಾಗಿ ರೂಪುಗೊಂಡಿರುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

34 ವರ್ಷಗಳ ಪರಂಪರೆ, ಸಮಾಜಮುಖಿ ಹೆಜ್ಜೆ

ಗೌರವಾಧ್ಯಕ್ಷ ಪ್ರಸಾದ್ ಶೆಟ್ಟಿ ಎಣಿಂಜೆ ಮಾತನಾಡಿ, ಪಡ್ಲಾಡಿಯಲ್ಲಿ ಕಳೆದ 34 ವರ್ಷಗಳಿಂದ ಜಾತಿ–ಧರ್ಮದ ಭೇದವಿಲ್ಲದೆ, ಹಿರಿಯರ ಮಾರ್ಗದರ್ಶನ ಹಾಗೂ ಊರವರ ಸಹಕಾರದೊಂದಿಗೆ ಮೊಸರು ಕುಡಿಕೆ ಹಾಗೂ ಅಷ್ಟಮಿ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸಿಕೊಂಡು ಬರಲಾಗುತ್ತಿದೆ,35 ನೇ ವರ್ಷದ ಈ ಬಾರಿಯೂ ಕಾರ್ಯಕ್ರಮ ಎಲ್ಲರ ಸಹಕಾರದಲ್ಲಿ ಅದ್ದೂರಿಯಾಗಿ ನಡೆದಿದೆ ಎಂದರು.

ಕಳೆದ 4 ವರ್ಷಗಳಿಂದ ಕಾರ್ಯಕ್ರಮವನ್ನು ಮತ್ತಷ್ಟು ಸಮಾಜಮುಖಿಯಾಗಿಸುವ ಉದ್ದೇಶದಿಂದ ಅಶಕ್ತ ಕುಟುಂಬಗಳಿಗೆ ನೆರವು ನೀಡುವ ಸೇವಾ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದೆ. ಊರವರು ಹಾಗೂ ದಾನಿಗಳ ಸಹಕಾರದಿಂದ ಈ ಕಾರ್ಯಗಳನ್ನು ನಡೆಸಲು ಸಾಧ್ಯವಾಗುತ್ತಿದೆ. ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳಿಗೆ ಶೈಕ್ಷಣಿಕವಾಗಿ ಪ್ರೋತ್ಸಾಹ ನೀಡುವ ಯೋಜನೆಯನ್ನೂ ಸಮಿತಿ ಹೊಂದಿದೆ. ಸಮಾಜದ ಎಲ್ಲ ವರ್ಗದ ಜನರು ಈ ಮಹತ್ಕಾರ್ಯಕ್ಕೆ ಕೈಜೋಡಿಸಬೇಕು ಎಂದು ಅವರು ಮನವಿ ಮಾಡಿದರು.

ಈ ಬಾರಿಯೂ ಕಾರ್ಯಕ್ರಮದ ಮೂಲಕ ಉಳಿಕೆಯಾಗುವ ಹಣದಲ್ಲಿ ಅಶಕ್ತ ಬಡ ಕುಟುಂಬವೊಂದಕ್ಕೆ ನೆರವು ನೀಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ಸೇವೆಯಿಂದ ವರ್ಗಾವಣೆಗೊಂಡ ಆರೋಗ್ಯ ಸಹಾಯಕಿಗೆ ಸನ್ಮಾನ

ಗ್ರಾಮದಲ್ಲಿ ಆರೋಗ್ಯ ಸಹಾಯಕಿಯಾಗಿ ಸೇವೆ ಸಲ್ಲಿಸಿ ವರ್ಗಾವಣೆಗೊಂಡ ಗುಣವತಿ ಅವರನ್ನು ಸಮಿತಿಯ ವತಿಯಿಂದ ಸನ್ಮಾನಿಸಲಾಯಿತು. ಗ್ರಾಮೀಣ ಭಾಗದಲ್ಲಿ ಆರೋಗ್ಯ ಸೇವೆ ಸಲ್ಲಿಸಿದ ಅವರ ಸೇವೆಯನ್ನು ಈ ಸಂದರ್ಭದಲ್ಲಿ ಸ್ಮರಿಸಲಾಯಿತು.

ವೇದಿಕೆಯಲ್ಲಿ ಸಮಿತಿ ಅಧ್ಯಕ್ಷ ಅನಿಲ್ ವಿಕ್ರಂ ಡಿಸೋಜ, ಸ.ಹಿ. ಪ್ರಾಥಮಿಕ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷೆ ಮಮತಾ, ಅಂಬೇಡ್ಕರ್ ಭವನ ಅಭಿವೃದ್ಧಿ ಸಮಿತಿ ಅಧ್ಯಕ್ಷ ಹರೀಶ್ ನೆನಪು ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.

ಮಕ್ಕಳು, ಸಾರ್ವಜನಿಕರಿಗಾಗಿ ದಿನವಿಡೀ ವಿವಿಧ ಸ್ಪರ್ಧೆಗಳು

ಮೊಸರು ಕುಡಿಕೆ ಉತ್ಸವದ ಅಂಗವಾಗಿ ಬೆಳಗ್ಗಿನಿಂದ ಸಂಜೆಯವರೆಗೆ ಮಕ್ಕಳು ಹಾಗೂ ಸಾರ್ವಜನಿಕರಿಗಾಗಿ ವಿವಿಧ ಆಟೋಟ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಗ್ರಾಮದ ಮಕ್ಕಳು, ಯುವಕರು, ಮಹಿಳೆಯರು ಹಾಗೂ ಸಾರ್ವಜನಿಕರು ಉತ್ಸಾಹದಿಂದ ಭಾಗವಹಿಸಿದರು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಸಮಾರೋಪ ಸಮಾರಂಭದಲ್ಲಿ ಬಹುಮಾನ ವಿತರಿಸಲಾಯಿತು.

ಅಚ್ಚುಕಟ್ಟಾಗಿ ನಡೆದ ಉದ್ಘಾಟನಾ ಕಾರ್ಯಕ್ರಮ

ಬೆಳಗ್ಗೆ ನಡೆದ ಕಾರ್ಯಕ್ರಮವನ್ನು ಸಮಿತಿಯ ಸಲಹೆಗಾರ ಕೃಷಿಕ ಸಿಪ್ರಿಯನ್ ಪಿಂಟೋ ಉದ್ಘಾಟಿಸಿದರು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಲಾಯಿಲ ಸೇವಾ ಪ್ರತಿನಿಧಿ ಗೀತಾ ಅಧ್ಯಕ್ಷತೆ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಪಡ್ಲಾಡಿ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ವಿಶ್ವೇಶ್ವರ ಭಟ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೇಲ್ವಿಚಾರಕಿ ಮಲ್ಲಿಕಾ ಹಾಗೂ ನವೋದಯ ಸ್ವಸಹಾಯ ಗುಂಪುಗಳ ಮೇಲ್ವಿಚಾರಕಿ ಜಯಂತಿ ಆರಾಧ್ಯ ಭಾಗವಹಿಸಿ ಶುಭ ಹಾರೈಸಿದರು.

ಕ್ರೀಡಾ ಕೂಟ, ಸೇರಿದಂತೆ ವಿವಿಧ ಚಟುವಟಿಕೆಗಳು ಇಡೀ ದಿನ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮಕ್ಕೆ ಊರವರು, ಯುವಕರು, ಮಹಿಳೆಯರು ಹಾಗೂ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ದೊರೆಯಿತು.

ಊಟ ಸೇರಿದಂತೆ ಎಲ್ಲ ವ್ಯವಸ್ಥೆಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಲಾಗಿದ್ದು, ಪಡ್ಲಾಡಿಯಲ್ಲಿ ನಡೆಯುವ ಮೊಸರು ಕುಡಿಕೆ ಉತ್ಸವವು ಗ್ರಾಮಸ್ಥರ ಒಗ್ಗಟ್ಟು, ಯುವಕರ ಸಂಘಟನಾ ಶಕ್ತಿ ಹಾಗೂ ಸಮಾಜಮುಖಿ ಸೇವಾ ಮನೋಭಾವಕ್ಕೆ ಮಾದರಿಯಾಗಿದೆ ಎಂದು ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದರು.ಕಾರ್ಯಕ್ರಮವನ್ನು ಜಯಾನಂದ ಅಂಕಾಜೆ ಹಾಗೂ ವಿನಯ್ ಪಡ್ಲಾಡಿ ನಿರ್ವಹಿಸಿದರು.

Related posts

ಭಾರತ್ ಕೋ ಆಪರೇಟಿವ್ ಬ್ಯಾಂಕ್ ಮುಂಬೈ ಲಿಮಿಟೆಡ್ ಇದರ ನೂತನ ನಿರ್ದೇಶಕರಾಗಿ ಮುಂಬಯಿ ಉದ್ಯಮಿ ನಾರಾಯಣ ಸುವರ್ಣ ಮರೋಡಿ ಆಯ್ಕೆ

Suddi Udaya

ವಿಪರೀತ ಮಳೆ ಕಾರಣ ಕಾಶಿಪಟ್ಣ ಸ.ಹಿ.ಪ್ರಾ. ಶಾಲೆಯ ಮೇಲ್ಚಾವಣಿ ಕುಸಿತ: ಶಾಸಕ ಹರೀಶ್ ಪೂಂಜರಿಂದ ತಕ್ಷಣ ಸ್ಪಂದನೆ

Suddi Udaya

ಬಂದಾರು: ಮೈರೋಳ್ತಡ್ಕ ಅಂಗನವಾಡಿ ಕೇಂದ್ರದಲ್ಲಿ ಪೋಲಿಯೋ ಲಸಿಕೆ ಅಭಿಯಾನ

Suddi Udaya

ಮಚ್ಚಿನ ಸ.ಪ್ರೌ. ಶಾಲೆಯಲ್ಲಿ ಪ್ರಜಾಪ್ರಭುತ್ವ ಮಾದರಿಯಲ್ಲಿ ಚುನಾವಣೆ

Suddi Udaya

ಎಸ್ ಡಿ ಎಂ ಕಾಲೇಜಿನಲ್ಲಿ ಎನ್‌ಐಪಿಎಮ್‌ನ ವಿದ್ಯಾರ್ಥಿ ಘಟಕಕ್ಕೆ ಚಾಲನೆ

Suddi Udaya

ಮೇ 17ರಂದು ಬೆಳ್ತಂಗಡಿ ರೋಟರಿ ಕ್ಲಬ್‌ನಿಂದ ಪ್ರಪ್ರಥಮ ಬಾರಿಗೆ ಕನ್ನಡ ಸಾಹಿತ್ಯ ಸಂಭ್ರಮ’ ಮತ್ತು ಬಹುಭಾಷಾ ಕವಿಗೋಷ್ಠಿ’ ಎಂಬ ವಿನೂತನ ಕಾರ್ಯಕ್ರಮ

Suddi Udaya
error: Content is protected !!