ಬೆಳ್ತಂಗಡಿ: ಎಸ್.ಡಿ.ಎಂ. ಇಂಗ್ಲಿಷ್ ಮೀಡಿಯಂ ಶಾಲೆ, ಬೆಳ್ತಂಗಡಿಯಲ್ಲಿ ಸೆ. 5ರಂದು ಶಿಕ್ಷಕರ ದಿನಾಚರಣೆ ಹಾಗೂ “ಆಧುನಿಕ ವಿದ್ಯಾರ್ಥಿಗಳಲ್ಲಿ ನಾಯಕತ್ವ ಅಭಿವೃದ್ಧಿ” ಎಂಬ ವಿಷಯದ ಕುರಿತು ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಹೇಮಲತಾ ಎಂ. ಆರ್. ವಹಿಸಿದ್ದರು. ಮುಖ್ಯ ಅತಿಥಿಯಾಗಿ ಶ್ರೀ ಕರುಣಾಕರ್ ಜೈನ್, ಹಿರಿಯ ಉಪನ್ಯಾಸಕರು, ರುಡ್‌ಸೆಟ್, ಉಜಿರೆ ಭಾಗವಹಿಸಿದ್ದರು.
ಕಾರ್ಯಕ್ರಮದ ಅಂಗವಾಗಿ ಮುಖ್ಯ ಅತಿಥಿಗಳು ಹಾಗೂ ಶಾಲಾ ಮುಖ್ಯೋಪಾಧ್ಯಾಯಿನಿಯವರು ಭಾರತದ ಮಾಜಿ ರಾಷ್ಟ್ರಪತಿ ಹಾಗೂ ಶ್ರೇಷ್ಠ ಶಿಕ್ಷಣತಜ್ಞರಾದ ಡಾ. ಸರ್ವಪಳ್ಳಿ ರಾಧಾಕೃಷ್ಣನ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಶಿಕ್ಷಕರ ದಿನಾಚರಣೆಗೆ ಗೌರವ ನಮನ ಸಲ್ಲಿಸಿದರು.
ನಂತರ ಮಾತನಾಡಿದ ಕರುಣಾಕರ್ ಜೈನ್ ಅವರು, ಸಮಾಜ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಹಾಗೂ ಶಿಕ್ಷಕ ವೃತ್ತಿಯ ಮಹತ್ವವನ್ನು ವಿವರಿಸಿದರು. ಶಿಕ್ಷಕರು ಕೇವಲ ಪಾಠ ಬೋಧಿಸುವವರಲ್ಲ; ವಿದ್ಯಾರ್ಥಿಗಳ ವ್ಯಕ್ತಿತ್ವ, ಚಿಂತನಾ ಸಾಮರ್ಥ್ಯ ಹಾಗೂ ಭವಿಷ್ಯವನ್ನು ರೂಪಿಸುವ ಮಾರ್ಗದರ್ಶಕರು ಎಂದು ತಿಳಿಸಿದರು. ಇಂದಿನ ವಿದ್ಯಾರ್ಥಿಗಳು ಭವಿಷ್ಯದ ಉತ್ತಮ ನಾಯಕರಾಗಿ ರೂಪುಗೊಳ್ಳಲು ಆತ್ಮವಿಶ್ವಾಸ, ಶಿಸ್ತು, ಸಮಯಪ್ರಜ್ಞೆ, ಜವಾಬ್ದಾರಿಯುತ ನಡೆ, ನಿರ್ಧಾರ ಕೈಗೊಳ್ಳುವ ಸಾಮರ್ಥ್ಯ, ತಂಡದೊಂದಿಗೆ ಕೆಲಸ ಮಾಡುವ ಮನೋಭಾವ, ಸಂವಹನ ಕೌಶಲ್ಯ ಹಾಗೂ ಸಕಾರಾತ್ಮಕ ಚಿಂತನೆ ಮುಂತಾದ ಗುಣಗಳನ್ನು ಬೆಳೆಸಿಕೊಳ್ಳಬೇಕು ಎಂದು ಅವರು ತಿಳಿಸಿದರು.
ಶಿಕ್ಷಕರ ದಿನಾಚರಣೆಯ ಮಹತ್ವವನ್ನು ಸ್ಮರಿಸುತ್ತಾ, ವಿದ್ಯಾರ್ಥಿಗಳು ತಮ್ಮ ಶಿಕ್ಷಕರ ಮಾರ್ಗದರ್ಶನವನ್ನು ಸದುಪಯೋಗಪಡಿಸಿಕೊಂಡು ಜ್ಞಾನ, ಮೌಲ್ಯ ಮತ್ತು ನಾಯಕತ್ವ ಗುಣಗಳನ್ನು ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮವನ್ನು ವಿದ್ಯಾರ್ಥಿನಿ ಆರಾಧ್ಯ ಶೆಣೈ ಅಚ್ಚುಕಟ್ಟಾಗಿ ನಿರೂಪಿಸಿದರು. ವಿದ್ಯಾರ್ಥಿನಿ ದಿಶಾ ಡಿ. ಎ ಸ್ವಾಗತಿಸಿದರು. HRD ಹಾಗೂ ಇಂಟರ್ಯಾಕ್ಟ್ ಕ್ಲಬ್ ವತಿಯಿಂದ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.












