September 5, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಬೆಳ್ತಂಗಡಿ ತಾಲೂಕು ಮಟ್ಟದ ಪ್ರಜಾಸೇವಾ ಆಂದೋಲನ ಸಭೆ

ವೇಣೂರು: ಪ್ರಜಾಸೇವಾ ಇಲಾಖೆಯನ್ನು ಹೊಸದಾಗಿ ಪರಿಚಯಿಸುವ ಮೂಲಕ ಸರಕಾರವನ್ನೇ ರಾಜ್ಯದ ಜನಸಾಮಾನ್ಯರ ಮನೆ-ಬಾಗಿಲಿಗೆ ಕೊಂಡೊಯ್ದು ದೂರು, ಸಮಸ್ಯೆಗಳಿಗೆ ಕಾನೂನಿನ ಚೌಕಟ್ಟಿನಡಿ ಸ್ಥಳದಲ್ಲೇ ಸೂಕ್ತ ಪರಿಹಾರ ಕಲ್ಪಿಸುವ ಜನಸ್ನೇಹಿ ಆಡಳಿತಕ್ಕೆ ಹೊಸ ಆಂದೋಲನ ಆರಂಭಿಸಲಾಗಿದೆ.

ಬೆಳ್ತಂಗಡಿ ತಾಲೂಕು ಮಟ್ಟದ ವೇಣೂರು ಹೋಬಳಿಯ ಪ್ರಜಾಸೇವಾ ಆಂದೋಲನ ಸಭೆಯು ಬೆಳ್ತಂಗಡಿ ಶಾಸಕ ಹರೀಶ್ ಪೂಂಜರ ಅಧ್ಯಕ್ಷತೆಯಲ್ಲಿ ಸೆ.5ರಂದು ಬೆಳಗ್ಗೆ ವೇಣೂರು ಭರತೇಶ ಸಮುದಾಯ ಭವನದಲ್ಲಿ ನಡೆಯಿತು.

ಸಭೆಯನ್ನು ದೀಪ ಪ್ರಜ್ವಲಿಸುವ ಮೂಲಕ ಚಾಲನೆ ನೀಡಿದ ಶಾಸಕ ಹರೀಶ್ ಪೂಂಜ ಅವರು ಮಾತನಾಡಿ, ಬೆಳ್ತಂಗಡಿ ತಾಲೂಕಿನ ಜನತೆಗೆ ಈ ಕಾರ್ಯಕ್ರಮ ಹೊಸದೇನಲ್ಲ. ಜನಸ್ಪಂದನ ಕಾರ್ಯಕ್ರಮದ ಮೂಲಕ ಅಧಿಕಾರಿಗಳನ್ನು ಪ್ರತಿ ಗ್ರಾಮಕ್ಕೆ ಕರೆತಂದು ಜನರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸವನ್ನು ಈಗಾಗಲೇ ಮಾಡಿದ್ದೇವೆ. ಪ್ರಜಾಸೇವೆಯೂ ಅತ್ಯಂತ ಉತ್ತಮ ಕಲ್ಪನೆಯಾಗಿದ್ದು, ಜನರ ಸಮಸ್ಯೆಗಳಿಗೆ ಖಂಡಿತ ಪರಿಹಾರ ಸಿಗುತ್ತದೆ. ಜನರ ಸಮಸ್ಯೆ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ ಅಧಿಕಾರಿಗಳಿಂದ ಆಗಬೇಕು ಎಂದು ಸೂಚನೆ ನೀಡಿದರು.

ವೇದಿಕೆಯಲ್ಲಿ ಬೆಳ್ತಂಗಡಿ ತಹಶೀಲ್ದಾರ್ ಎಸ್.ಎನ್ ನರಗುಂದ, ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಭವಾನಿಶಂಕರ್, ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಪದ್ಮನಾಭ ಸಾಲ್ಯಾನ್, ವೇಣೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಮಲ್ಲಿಕಾ, ಬೆಳ್ತಂಗಡಿ ಪೊಲೀಸ್ ವೃತ್ತ ನಿರೀಕ್ಷಕ ರವಿ ಬಿಎಸ್ ಉಪಸ್ಥಿತರಿದ್ದರು.

ತಾಲೂಕು ಮಟ್ಟದ ಇಲಾಖೆಯ ಅಧಿಕಾರಿಗಳು ಇಲಾಖೆ ಮಾಹಿತಿ ನೀಡಿದರು. ವೇಣೂರು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪ್ರಕಾಶ್ ಸ್ವಾಗತಿಸಿದರು. ಗ್ರಾಮ ಆಡಳಿತಾಧಿಕಾರಿ ಹೇಮಾ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ಸಭೆಗಳ ಆಯೋಜನೆ:
ಜನರ ಮನೆ ಬಾಗಿಲಿಗೆ ಆಡಳಿತ ವ್ಯವಸ್ಥೆ ಯನ್ನು ಕಲ್ಪಿಸುವುದು ಹೊಸದಾಗಿ ರಚಿಸಿದ ಪ್ರಜಾಸೇವಾ ಇಲಾಖೆಯ ಉದ್ದೇಶವಾಗಿದೆ. ಪ್ರತಿ ಶನಿವಾರ ತಾಲೂಕು/ ಹೋಬಳಿ ಮಟ್ಟದ ಪ್ರಜಾಸೇವಾ ಅಭಿಯಾನ ಸಭೆಗಳನ್ನು ಪರ್ಯಾಯವಾಗಿ ರಾಜ್ಯಾದ್ಯಂತ ನಡೆಸಲು ಕ್ರಮ ಕೈಗೊಳ್ಳಲಾಗುತ್ತದೆ. ಪ್ರತಿ ತಿಂಗಳ ಮೊದಲ ಮತ್ತು ಮೂರನೇ ಶನಿವಾರದಂದು ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ತಾಲೂಕು ಕೇಂದ್ರದಲ್ಲಿ ಸಭೆ ನಡೆಯುತ್ತದೆ. ಎರಡನೇ ಮತ್ತು ನಾಲ್ಕನೇ ಶನಿವಾರದಂದು ಸ್ಥಳೀಯ ಶಾಸಕರ ಅಧ್ಯಕ್ಷತೆಯಲ್ಲಿ ತಾಲೂಕು/ಹೋಬಳಿ ಮಟ್ಟದಲ್ಲಿ ಸಭೆಯನ್ನು ಆಯೋಜಿಸಲಾಗುತ್ತದೆ. 3-4 ತಿಂಗಳಲ್ಲಿ ಎಲ್ಲ ತಾಲ್ಲೂಕು/ಹೋಬಳಿ ಮಟ್ಟದ ಸಭೆಗಳನ್ನು ಏರ್ಪಡಿಸಲು ಏಕೀಕೃತ ವೇಳಾ ಪಟ್ಟಿಯನ್ನು ತಯಾರು ಮಾಡಲಾಗಿರುತ್ತದೆ.

ಪ್ರಜಾಸೇವಾ ಅಭಿಯಾನದಡಿ ಸಭೆಗಳ ಕುರಿತು ಸಾರ್ವಜನಿಕರಿಗೆ ಕನಿಷ್ಠ 15 ದಿನಗಳ ಮುಂಚಿತವಾಗಿ ಮಾಹಿತಿ ನೀಡಲಾಗುತ್ತದೆ. ಪ್ರತಿ ಪ್ರಜಾಸೇವಾ ಅಭಿಯಾನ ಸಭೆಯ ಸ್ಥಳದಲ್ಲಿ ಗ್ರಾಮ ಒನ್ ಮಳಿಗೆಗಳನ್ನು ಸ್ಥಾಪಿಸಿ, ಕಂಪ್ಯೂಟರ್/ಲ್ಯಾಪ್ಟಾಪ್, ಪ್ರಿಂಟರ್ ಹಾಗೂ ಇಂಟರ್ನೆಟ್ ಸೌಲಭ್ಯಗಳ ಮೂಲಕ ಸಾರ್ವಜನಿಕರಿಗೆ ನೇರವಾಗಿ ಆನ್‌ಲೈನ್‌ನಲ್ಲಿ ಅರ್ಜಿ ಹಾಗೂ ಅಹವಾಲುಗಳನ್ನು ಸಲ್ಲಿಸಲು ವ್ಯವಸ್ಥೆ ಮಾಡಲಾಗುತ್ತದೆ.

Related posts

ಹೊಸಂಗಡಿ ಗ್ರಾಮ ಪಂಚಾಯತ್ ಗ್ರಾಮ ಸಭೆ

Suddi Udaya

ನಿಡ್ಲೆ ಸಹಕಾರಿ ಸಂಘಕ್ಕೆ ದ‌.ಕ ಜಿಲ್ಲಾ ಕೇಂದ್ರ ಬ್ಯಾಂಕ್ ನಿಂದ ಪ್ರೋತ್ಸಾಹಕ ಪ್ರಶಸ್ತಿ

Suddi Udaya

ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ: ಪಡಂಗಡಿಯಲ್ಲಿ ಎನ್.ಐ.ಎ ಅಧಿಕಾರಿಗಳ ದಾಳಿ

Suddi Udaya

ಕೊಲ್ಲಿ ಶ್ರೀ ದುರ್ಗಾದೇವಿ ದೇವಸ್ಥಾನದ ಬ್ರಹ್ಮ ಕಲಶೋತ್ಸವದ ಅಂಗವಾಗಿ ಮನೆ ಮನೆಯಿಂದ ಅಡಕೆ ಸಂಗ್ರಹ ಕಾರ್ಯಕ್ರಮದ ಕರಪತ್ರ ಬಿಡುಗಡೆ

Suddi Udaya

ಉಜಿರೆ ಎಸ್.ಡಿ.ಎಮ್ ಆಂಗ್ಲ ಮಾಧ್ಯಮ (ಸಿ.ಬಿ.ಎಸ್‌.ಇ) ಶಾಲೆಯಲ್ಲಿ ಕಿಂಡರ್ಗಾರ್ಟನ್ ವಿದ್ಯಾರ್ಥಿಗಳ ಪೋಷಕರ ಸಭೆ

Suddi Udaya

ಅಮೆರಿಕದಲ್ಲಿ ಕಾಲಭೈರವೇಶ್ವರ ದೇಗುಲ ನಿರ್ಮಾಣ: ಕಾಮಗಾರಿ ಪರಿಶೀಲಿಸಿದ ಮಠಾಧಿಪತಿ ನಿರ್ಮಲಾನಂದನಾಥ ಸ್ವಾಮೀಜಿ

Suddi Udaya
error: Content is protected !!