ಉಜಿರೆ: ಎಸ್ ಡಿ ಎಂ ಆಂಗ್ಲ ಮಾಧ್ಯಮ ಶಾಲೆ (ರಾಜ್ಯ ಪಠ್ಯಕ್ರಮ), ಉಜಿರೆಯಲ್ಲಿ ಶಿಕ್ಷಕರ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಹಾಗೂ ಸಂಭ್ರಮದಿಂದ ಸೆ. 7 ರಂದು ಆಚರಿಸಲಾಯಿತು. ಭಾರತದ ಶ್ರೇಷ್ಠ ಶಿಕ್ಷಕ, ತತ್ವಜ್ಞಾನಿ ಹಾಗೂ ಮಾಜಿ ರಾಷ್ಟ್ರಪತಿ ಡಾ. ಸರ್ವಪಳ್ಳಿ ರಾಧಾಕೃಷ್ಣನ್ ಅವರ ಜನ್ಮದಿನದ ಅಂಗವಾಗಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮದ ಅಂಗವಾಗಿ ಶಾಲಾ ಮುಖ್ಯೋಪಾಧ್ಯಾಯಿನಿ ಹಾಗೂ ಎಲ್ಲಾ ಶಿಕ್ಷಕರು ಡಾ. ಸರ್ವಪಳ್ಳಿ ರಾಧಾಕೃಷ್ಣನ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಗೌರವ ನಮನ ಸಲ್ಲಿಸಿದರು.

ಶಿಕ್ಷಕರ ಮಹತ್ವ, ವಿದ್ಯಾರ್ಥಿಗಳ ಜೀವನ ರೂಪಿಸುವಲ್ಲಿ ಶಿಕ್ಷಕರ ಪಾತ್ರ ಹಾಗೂ ಗುರು-ಶಿಷ್ಯ ಸಂಬಂಧದ ಮೌಲ್ಯವನ್ನು ಕಾರ್ಯಕ್ರಮದಲ್ಲಿ ಸ್ಮರಿಸಲಾಯಿತು. ವಿದ್ಯಾರ್ಥಿಗಳು ಶಿಕ್ಷಕರಿಗೆ ಶುಭಾಶಯಗಳನ್ನು ಸಲ್ಲಿಸಿ ತಮ್ಮ ಗೌರವವನ್ನು ವ್ಯಕ್ತಪಡಿಸಿದರು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಸುಭಾಷ್ ಚಂದ್ರ, ಕಾಂಚನ ವೆಂಕಟಸುಬ್ರಹ್ಮಣ್ಯಂ ಸ್ಮಾರಕ ಪ್ರೌಢಶಾಲೆ ಕಾಂಚನ, ಉಪಸ್ಥಿತರಿದ್ದು, ಶಿಕ್ಷಕರ ದಿನಾಚರಣೆಯ ಪ್ರಯುಕ್ತ ಆಯೋಜಿಸಲಾಗಿದ್ದ ವಿವಿಧ ಆಟೋಟ ಸ್ಪರ್ಧೆಗಳಲ್ಲಿ ವಿಜೇತರಾದ ಶಿಕ್ಷಕ ಶಿಕ್ಷಕೇತರ ಸಿಬ್ಬಂದಿಗಳಿಗೆ ಬಹುಮಾನಗಳನ್ನು ವಿತರಿಸಿದರು. ವಿದ್ಯಾರ್ಥಿಗಳು ಆಕರ್ಷಕ ನೃತ್ಯ ಪ್ರದರ್ಶನ ನೀಡಿ ಮನರಂಜಿಸಿದರು. ಶಿಕ್ಷಕರ ದಿನಾಚರಣೆಯು ವಿದ್ಯಾರ್ಥಿಗಳು ಹಾಗೂ ಶಿಕ್ಷಕರ ನಡುವೆ ಆತ್ಮೀಯತೆ ಮತ್ತು ಗೌರವವನ್ನು ಮತ್ತಷ್ಟು ಗಟ್ಟಿಗೊಳಿಸಿದ ಸ್ಮರಣೀಯ ಕಾರ್ಯಕ್ರಮವಾಗಿ ಮೂಡಿಬಂತು.
ಕಾರ್ಯಕ್ರಮದ ನಿರೂಪಣೆಯನ್ನು ಅಧ್ಯಾತ್ ಜೈನ್ ಮತ್ತು ಹರೀಶ್ ಪಟೇಲ್ ನಿರ್ವಹಿಸಿದರು. ಶಕೀಲ್ ಸ್ವಾಗತಿಸಿದರು. ಧನುಷ್ ಮುಖ್ಯ ಅತಿಥಿಯವರ ಪರಿಚಯವನ್ನು ಮಾಡಿಕೊಟ್ಟರು. ತನ್ಮಯ ಕೃಷ್ಣ ವಂದನಾರ್ಪಣೆಗೈದರು.












