32.1 C
ಪುತ್ತೂರು, ಬೆಳ್ತಂಗಡಿ
September 8, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಕಸ್ತೂರಿ ರಂಗನ್ ವರದಿ ವಿರೋಧಿಸಿ ನಾಲ್ಕೂರು ಗ್ರಾಮಸ್ಥರ ಪ್ರತಿಭಟನೆ; ಮೊದಲು ಬಳಂಜ ಗ್ರಾ.ಪಂ.ಗೆ ಮನವಿ, ಬಳಿಕ ತಹಶೀಲ್ದಾರ್ ಮೂಲಕ ಸರಕಾರಕ್ಕೆ ಮನವಿ

ಬೆಳ್ತಂಗಡಿ: ಪಶ್ಚಿಮ ಘಟ್ಟಗಳ ಪರಿಸರ ಸೂಕ್ಷ್ಮ ವಲಯಕ್ಕೆ ಸಂಬಂಧಿಸಿದಂತೆ 7ನೇ ಬಾರಿಗೆ ಕರಡು ಅಧಿಸೂಚನೆ ಹೊರಡಿಸಿರುವುದನ್ನು ಖಂಡಿಸಿ, ನಾಲ್ಕೂರು ಗ್ರಾಮವನ್ನು ಪರಿಸರ ಸೂಕ್ಷ್ಮ ವಲಯದ ವ್ಯಾಪ್ತಿಯಿಂದ ಕೂಡಲೇ ಕೈಬಿಡಬೇಕೆಂದು ಆಗ್ರಹಿಸಿ ನಾಲ್ಕೂರು ಗ್ರಾಮದ ನೂರಾರು ಗ್ರಾಮಸ್ಥರು ಸೆ.7ರಂದು ಪ್ರತಿಭಟನೆ ನಡೆಸಿದರು.

ಮೊದಲಿಗೆ 400ಕ್ಕೂ ಅಧಿಕ ಮಂದಿ ಬಳಂಜ ಗ್ರಾಮಸ್ಥರು ಬಳಂಜ ಗ್ರಾಮ ಪಂಚಾಯತ್‌ಗೆ ಮನವಿ ಸಲ್ಲಿಸಿದರು. ಬಳಿಕ ಬೆಳ್ತಂಗಡಿಯಲ್ಲಿ ತಾಲೂಕು ಕಚೇರಿ ಬಳಿ ಘೋಷಣೆ ಕೂಗಿ ಪ್ರತಿಭಟನೆ ನಡೆಸಿ, ತಹಶೀಲ್ದಾರ್ ಮೂಲಕ ಸಂಬಂಧಪಟ್ಟ ಇಲಾಖೆಗೆ ಹಾಗೂ ಸರಕಾರಕ್ಕೆ ಮನವಿ ಸಲ್ಲಿಸಿದರು.

2012-13ನೇ ಸಾಲಿನಲ್ಲಿ ಕಸ್ತೂರಿ ರಂಗನ್ ವರದಿ ಹಾಗೂ ಪರಿಸರ ಸೂಕ್ಷ್ಮ ವಲಯ ಘೋಷಣೆಯನ್ನು ವಿರೋಧಿಸಿ ನಾಗರಿಕರು ಪ್ರತಿಭಟನೆ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ರಾಜ್ಯ ಸರಕಾರವು ಭಾವಿತ ಗ್ರಾಮಗಳಲ್ಲಿ ವಿಶೇಷ ಗ್ರಾಮಸಭೆ ನಡೆಸಿ ಜನಾಭಿಪ್ರಾಯ ಪಡೆಯಲು ಆದೇಶಿಸಿತ್ತು. ಅದರಂತೆ ನಡೆದ ವಿಶೇಷ ಗ್ರಾಮಸಭೆಯಲ್ಲಿ ಜನಪ್ರತಿನಿಧಿಗಳು, ವಿವಿಧ ಇಲಾಖೆಗಳ ಅಧಿಕಾರಿಗಳು, ಗ್ರಾಮಸ್ಥರು ಹಾಗೂ ಸಂಘ-ಸಂಸ್ಥೆಗಳ ಪ್ರತಿನಿಧಿಗಳ ಸಮ್ಮುಖದಲ್ಲಿ ಪಕ್ಷಾತೀತವಾಗಿ ನಾಲ್ಕೂರು ಗ್ರಾಮವನ್ನು ಪರಿಸರ ಸೂಕ್ಷ್ಮ ವಲಯಕ್ಕೆ ಸೇರಿಸಬಾರದು ಎಂದು ಒಕ್ಕೊರಲಿನಿಂದ ನಿರ್ಣಯ ಕೈಗೊಳ್ಳಲಾಗಿತ್ತು. ಆದರೂ ಇದೀಗ 7ನೇ ಬಾರಿಗೆ ಕರಡು ಅಧಿಸೂಚನೆ ಹೊರಡಿಸಿರುವುದು ಖಂಡನೀಯ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.

ಈ ಕಾಯ್ದೆ ಜಾರಿಯಾದರೆ ರೈತರ ಕೃಷಿ ಚಟುವಟಿಕೆಗಳಿಗೆ ತೊಂದರೆಯಾಗುವುದರ ಜತೆಗೆ ಆರ್ಥಿಕ ವ್ಯವಸ್ಥೆಯ ಮೇಲೂ ಪರಿಣಾಮ ಬೀರುತ್ತದೆ. ಗ್ರಾಮದ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಹಿನ್ನಡೆಯಾಗುವ ಸಾಧ್ಯತೆಯಿದ್ದು, ಈಗಾಗಲೇ ಮಂಜೂರಾಗಿರುವ ಪ್ಲಾಟಿಂಗ್ ಹಾಗೂ ಹಕ್ಕುಪತ್ರಗಳಿಗೂ ಸಮಸ್ಯೆಯಾಗಬಹುದು. ಹಲವು ವರ್ಷಗಳಿಂದ ರೈತರ ಸ್ವಾಧೀನದಲ್ಲಿರುವ ಹಕ್ಕುಪತ್ರವಿಲ್ಲದ ಕೃಷಿ ಭೂಮಿ ಅರಣ್ಯ ಇಲಾಖೆಯ ವಶಕ್ಕೆ ಹೋಗುವ ಆತಂಕವಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ಸಾರ್ವಜನಿಕ ಆಸ್ತಿಗಳು, ಸಾರ್ವಜನಿಕ ಕಟ್ಟಡಗಳು, ಗೋಮಾಳ ಹಾಗೂ ಮೂಲಭೂತ ಸೌಕರ್ಯಗಳಿಗೆ ಮೀಸಲಿಟ್ಟಿರುವ ಭೂಮಿಗಳಿಗೂ ಸಮಸ್ಯೆಯಾಗಬಹುದು. ಈಗಾಗಲೇ ಅಸ್ತಿತ್ವದಲ್ಲಿರುವ ಮೂಲಭೂತ ಸೌಕರ್ಯಗಳ ನವೀಕರಣಕ್ಕೂ ಅರಣ್ಯ ಇಲಾಖೆಯ ಅನುಮತಿ ಅಗತ್ಯವಾಗುವ ಪರಿಸ್ಥಿತಿ ನಿರ್ಮಾಣವಾಗಬಹುದು ಎಂದು ಅವರು ಆತಂಕ ವ್ಯಕ್ತಪಡಿಸಿದರು.

ಜನರು ಈಗಾಗಲೇ ಆರು ಬಾರಿ ಕಸ್ತೂರಿ ರಂಗನ್ ವರದಿಯನ್ನು ವಿರೋಧಿಸಿದ್ದಾರೆ. ಆದರೂ 7ನೇ ಬಾರಿಗೆ ಜಾರಿಗೊಳಿಸಲು ಪ್ರಯತ್ನಿಸುತ್ತಿರುವುದು ಖಂಡನೀಯ. ಸರಕಾರ ಕೂಡಲೇ ನಾಲ್ಕೂರು ಗ್ರಾಮವನ್ನು ಪರಿಸರ ಸೂಕ್ಷ್ಮ ವಲಯದ ವ್ಯಾಪ್ತಿಯಿಂದ ಕೈಬಿಡಬೇಕು. ಇಲ್ಲವಾದಲ್ಲಿ ಮಲೆನಾಡು ಜನಹಿತ ರಕ್ಷಣಾ ವೇದಿಕೆ ಹಾಗೂ ಗ್ರಾಮಸ್ಥರಿಂದ ಪ್ರತಿಭಟನೆ ನಡೆಸಲಾಗುವುದು ಎಂದು ಪ್ರತಿಭಟನಾಕಾರರು ಎಚ್ಚರಿಸಿದರು.

ಈ ಸಂದರ್ಭದಲ್ಲಿ ಕಸ್ತೂರಿ ರಂಗನ್ ವಿರೋಧಿ ಸಂಘಟನೆಯ ನಾಲ್ಕೂರು ಸಂಚಾಲಕ ಕರುಣಾಕರ ಹೆಗ್ಡೆ, ಸಹಸಂಚಾಲಕ ದಿನೇಶ್ ಪಿ.ಕೆ., ಜನಹಿತ ರಕ್ಷಣಾ ವೇದಿಕೆ ಸಂಚಾಲಕ ಕಿಶೋರ್ ಶಿರಾಡಿ, ದಿನೇಶ್ ಮಲವಂತಿಗೆ, ದೀಪಕ್ ಹೆಚ್.ಡಿ., ವಿಶ್ವನಾಥ ಹೊಳ್ಳ, ಬಾಲಕೃಷ್ಣ ಪೂಜಾರಿ, ತಿಮ್ಮಪ್ಪ ಪೂಜಾರಿ, ಸುರೇಶ್ ಪೂಜಾರಿ ಜೈಮಾತಾ, ಸಂದೇಶ್ ಶೆಟ್ಟಿ, ಸುನೀಲ್ ಶೆಟ್ಟಿ, ಸುರೇಶ್ ಶೆಟ್ಟಿ, ಪ್ರವೀಣ್ ಕುಮಾರ್ ಹೆಚ್.ಎಸ್., ವಸಂತ ಶೆಟ್ಟಿ, ದಿನೇಶ್ ಕುದ್ರೊಟ್ಟು, ವಿಜಯ ಯೈಕುರಿ, ರಂಜಿತ್ ಪೂಜಾರಿ ಮಜಲಡ್ಡ, ಮೋಹನ್ ಹೆಗ್ಡೆ, ಸುಂದರ, ಮಧಾಯಸ್ ಕ್ರಾಸ್ತಾ, ವಿಕ್ಟರ್ ಕ್ರಾಸ್ತಾ, ವಲೇರಿಯನ್ ಮೊನಿಸ್, ಸಂಜೀವ ಪೂಜಾರಿ ಪುಣ್ಕೆದೊಟ್ಟು, ಯೋಗೀಶ್ ಯೈಕುರಿ, ಶೋಭಾ ಕುಲಾಲ್, ಲಿಲ್ಲಿ ವೇಗಸ್, ಸವಿತಾ, ದೇಜಪ್ಪ ಪೂಜಾರಿ, ದುಗ್ಗಯ್ಯ, ಜಯ ಶೆಟ್ಟಿ, ಗಿರೀಶ್ ಬಂಗೇರ, ಶೇಖರ್ ಶೆಟ್ಟಿ ಸೇರಿದಂತೆ ನೂರಾರು ಗ್ರಾಮಸ್ಥರು ಉಪಸ್ಥಿತರಿದ್ದರು.

Related posts

ಮೂಲ ಕೋಟೆ ತರವಾಡು ವತಿಯಿಂದ ಡಾ. ರವೀಶ್ ಪಡುಮಲೆಗೆ ಸನ್ಮಾನ

Suddi Udaya

ಬೆಳಾಲು: ಸ್ಕೂಟರ್‌ಗೆ ಕ್ರೇನ್ ಡಿಕ್ಕಿ ಹೊಡೆದು ಅಪಘಾತ-ಬಳಂಜ ಕಾಪಿನಡ್ಕ ನಿವಾಸಿ ಜಯ ಮೇಸ್ತ್ರೀ ಸ್ಥಳದಲ್ಲೇ ಸಾವು

Suddi Udaya

ಉರುವಾಲು: ಶ್ರೀ ಭಾರತೀ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯಲ್ಲಿ ವಲಯ ಮಟ್ಟದ ವಾಲಿಬಾಲ್ ಪಂದ್ಯಾಟ

Suddi Udaya

ಬೆಳ್ತಂಗಡಿ ಬ್ಲಾಕ್ ಮಹಿಳಾ ಕಾಂಗ್ರೆಸ್ ಘಟಕದ ವತಿಯಿಂದ ವಿಶ್ವ ಮಹಿಳಾ ದಿನದ ಅಂಗವಾಗಿ ಆರ್ಥಿಕ ನೆರವು

Suddi Udaya

ಬೆಳಾಲು ಮುಖ್ಯರಸ್ತೆಯಲ್ಲಿ ಕಾಡಾನೆ ಪ್ರತ್ಯಕ್ಷ: ಅರಣ್ಯ ಇಲಾಖೆಯಿಂದ ಕಾರ್ಯಾಚರಣೆ

Suddi Udaya

ಬೆಳ್ತಂಗಡಿ ವುಮೆನ್ ಇಂಡಿಯಾ ಮೂವ್ಮೆಂಟ್ ನೂತನ ಕ್ಷೇತ್ರ ಸಮಿತಿ ರಚನೆ

Suddi Udaya
error: Content is protected !!