
ಬೆಳ್ತಂಗಡಿ: ಶ್ರೀ ಕ್ಷೇತ್ರ ಗೆಜ್ಜೆಗಿರಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ದೇಯಿ ಬೈದೇತಿ ಆಯುರ್ವೇದ ಕೇಂದ್ರದ ಕಟ್ಟಡ ಕಾಮಗಾರಿಗೆ ಕರ್ನಾಟಕ ಸರ್ಕಾರದಿಂದ ಅಗತ್ಯ ಅನುದಾನ ನೀಡುವಂತೆ ರಾಜ್ಯದ ಸಮಾಜ ಕಲ್ಯಾಣ ಸಚಿವರಾದ ಡಾ. ಯತೀಂದ್ರ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಲಾಯಿತು.
ಸೆ.17ರಂದು ಮಂಗಳೂರಿನ ತುಳು ಭವನದಲ್ಲಿ ಕ್ಷೇತ್ರದ ಕಾನೂನು ಸಲಹೆಗಾರ ರಕ್ಷಿತ್ ಶಿವರಾಂ ಅವರ ನೇತೃತ್ವದಲ್ಲಿ ಸಚಿವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರದ ಗೌರವಾಧ್ಯಕ್ಷ ಪೀತಾಂಬರ ಹೆರಾಜೆ, ಅಧ್ಯಕ್ಷ ರವಿ ಪೂಜಾರಿ ಚಿಲಿಂಬಿ, ಅಭಿವೃದ್ಧಿ ಸಮಿತಿ ಅಧ್ಯಕ್ಷ ಕೆ. ಸಂಜೀವ ಪೂಜಾರಿ, ಕಾರ್ಯದರ್ಶಿ ಡಾ. ರಾಜಾರಾಮ್, ಜೊತೆ ಕಾರ್ಯದರ್ಶಿ ಜೈವಿಕ್ರಮ ಕಲ್ಲಾಪು, ಕ್ಷೇತ್ರದ ವಕ್ತಾರ ರಾಜೇಂದ್ರ ಚಿಲಿಂಬಿ, ಹರೀಶ್ ಬೈಲಬರಿ, ವಕೀಲರಾದ ಎ. ಮನೋಹರ್, ಬೇಬಿ ಕುಂದರ್, ಪದ್ಮನಾಭ ಪೂಜಾರಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ದೇಯಿ ಬೈದೇತಿ ಕೋಟಿ-ಚೆನ್ನಯ ಮೂಲಸ್ಥಾನ ಗೆಜ್ಜೆಗಿರಿ ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷ ರವಿ ಪೂಜಾರಿ ಚಿಲಿಂಬಿ ಮಾತನಾಡಿ, “ಶ್ರೀ ಕ್ಷೇತ್ರ ಗೆಜ್ಜೆಗಿರಿಯಲ್ಲಿ ದೇಯಿ ಬೈದೇತಿ ಆಯುರ್ವೇದ ಕೇಂದ್ರವನ್ನು ಸಮಗ್ರವಾಗಿ ಅಭಿವೃದ್ಧಿಪಡಿಸುವ ಉದ್ದೇಶದಿಂದ ಕಟ್ಟಡ ಕಾಮಗಾರಿ ನಡೆಯುತ್ತಿದೆ. ಸರ್ಕಾರದ ಸಹಕಾರ ಮತ್ತು ಅಗತ್ಯ ಅನುದಾನ ದೊರೆತಲ್ಲಿ, ಕರಾವಳಿಯ ಸಾಂಪ್ರದಾಯಿಕ ವೈದ್ಯ ಪರಂಪರೆಯ ಸಂರಕ್ಷಣೆ, ಅಧ್ಯಯನ ಮತ್ತು ಸಂಶೋಧನೆಗೆ ಹೆಚ್ಚಿನ ಉತ್ತೇಜನ ದೊರೆಯಲಿದೆ. ಈ ಮೂಲಕ ಪಾರಂಪರಿಕ ವೈದ್ಯ ಜ್ಞಾನವನ್ನು ಮುಂದಿನ ಪೀಳಿಗೆಗೆ ಪರಿಚಯಿಸುವುದರ ಜೊತೆಗೆ, ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಈ ಕೇಂದ್ರವು ಮಹತ್ವದ ಕೊಡುಗೆ ನೀಡಲಿದೆ” ಎಂದು ಹೇಳಿದರು.











