ಧರ್ಮಸ್ಥಳ: ದೇವರಗುಡ್ಡೆ ಹಾಲು ಉತ್ಪಾದಕರ ಸಂಘದ ಸದಸ್ಯರ ಪರವಾಗಿ ದರ್ಶನ್ ಕೆ.ಪಿ ಅವರು ಧರ್ಮಸ್ಥಳ ಆರಕ್ಷಕ ಠಾಣಾಧಿಕಾರಿಗೆ ದೂರು ಸಲ್ಲಿಸಿದ್ದಾರೆ.
ದಿನಾಂಕ 25-09-2026 ರಂದು ಶ್ರೀ ಕ್ಷೇತ್ರ ಪಜೀರಡ್ಕ ದೇವಸ್ಥಾನದ ಸಭಾಂಗಣದಲ್ಲಿ ನಡೆದ ಹಾಲು ಉತ್ಪಾದಕರ ಸಂಘದ ಸಭೆಯಲ್ಲಿ, ಹಾಲು ಪೂರೈಸುತ್ತಿರುವ ಸದಸ್ಯರು ಒಕ್ಕೊರಳಿನಿಂದ ಸಂಘದಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರ್ಯದರ್ಶಿ ಸಚಿನ್ ಗೌಡರವರ ಸರ್ವಾಧಿಕಾರಿ ಧೋರಣೆಯನ್ನು ಪ್ರಶ್ನಿಸಿ, ಸ್ವಇಚ್ಛೆಯಿಂದ ಸಹಿ ಮಾಡಿ ತಾಲೂಕು ವಿಸ್ತರಣಾಧಿಕಾರಿ ಹಾಗೂ ವಿಶೇಷಾಧಿಕಾರಿಗೆ ಅವರನ್ನು ವಜಾಗೊಳಿಸುವಂತೆ ಮನವಿ ಪತ್ರ ನೀಡಿದ್ದರು. ಇದರಿಂದ ಕುಪಿತಗೊಂಡ ಕಾರ್ಯದರ್ಶಿ ಮರುದಿನ ಹಾಲು ಪೂರೈಸಲು ಬಂದ ಸದಸ್ಯರಿಗೆ ಬೆದರಿಕೆ ಹಾಕಿದ್ದು, ನಿಮ್ಮ ಠಾಣೆಯಲ್ಲಿ ಸುಳ್ಳು ದೂರು ದಾಖಲಿಸಿ ಪ್ರಶ್ನಿಸುವವರನ್ನು ಕುಗ್ಗಿಸುವ ಕೆಲಸ ಮತ್ತು ಸೋಶಿಯಲ್ ಮೀಡಿಯಾ ಮೂಲಕ ತೇಜೋವಧೆ ಮಾಡುತ್ತಿದ್ದಾರೆ ಎಂದು ಆರೋಪಿಸಲಾಗಿದೆ.
ಈ ಹಿಂದೆ ಇದೇ ಕಾರ್ಯದರ್ಶಿ ವಿರುದ್ಧ ಆಡಳಿತ ಮಂಡಳಿ ಹಾಲು ಒಕ್ಕೂಟ ಮತ್ತು ಸಹಕಾರ ಇಲಾಖೆಗೆ ದೂರು ನೀಡಿದ್ದಾಗ ಪೊಲೀಸ್ ಭದ್ರತೆಯೊಂದಿಗೆ ಅವರನ್ನು ವಜಾಗೊಳಿಸುವಂತೆ ಆದೇಶವೂ ಆಗಿತ್ತು. ಆದರೆ ತನ್ನ ಸ್ಥಾನ ಬಿಟ್ಟುಕೊಡದೆ ಉದ್ಧಟತನ ಪ್ರದರ್ಶಿಸಿದ್ದರಿಂದ ಅಂದಿನ ಆಡಳಿತ ಮಂಡಳಿ ಸಾಮೂಹಿಕ ರಾಜೀನಾಮೆ ಸಲ್ಲಿಸಿತ್ತು ಎಂದು ದೂರಿನಲ್ಲಿ ತಿಳಿಸಲಾಗಿದೆ,.
ಈಗಲೂ ಹಾಲು ಉತ್ಪಾದಕರಿಗೆ ಸರಿಯಾಗಿ ಸ್ಪಂದಿಸದೆ ನಿರಂತರ ತೊಂದರೆ ನೀಡುತ್ತಿದ್ದು, ಈ ಎಲ್ಲಾ ವಿಚಾರಗಳನ್ನು ಗಂಭೀರವಾಗಿ ಪರಿಗಣಿಸಿ ನ್ಯಾಯ ಒದಗಿಸಬೇಕಾಗಿ ಮನವಿ ಮಾಡಲಾಗಿದೆ.












