ಉಜಿರೆ : ಜ್ಞಾನಾರ್ಜನೆ, ಸಂಶೋಧನೆ ಹಾಗೂ ಓದುವ ಸಂಸ್ಕೃತಿಯನ್ನು ಬೆಳೆಸುವಲ್ಲಿ ಸಲ್ಲಿಸಿದ ಸುದೀರ್ಘ ಸೇವೆಯನ್ನು ಗುರುತಿಸಿ, ಎಸ್.ಡಿ.ಎಂ. ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಉಜಿರೆಯ ಮುಖ್ಯ ಗ್ರಂಥಪಾಲಕಿ ಡಾ. ರಜತಾ ಪಿ. ಶೆಟ್ಟಿ ಅವರಿಗೆ ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕ ಸಂಘ (ರಿ.), ಮಂಗಳೂರು ವಿಭಾಗದ ವತಿಯಿಂದ 2026ನೇ ಸಾಲಿನ ‘ಅಧ್ಯಾಪಕ ಭೂಷಣ ಪ್ರಶಸ್ತಿ’ ನೀಡಿ ಗೌರವಿಸಲಾಯಿತು.
ಉಡುಪಿಯ ಕಿದಿಯೂರಿನ ಮಾಧವ ಕೃಷ್ಣ ಸಭಾ ಭವನದಲ್ಲಿ ನಡೆದ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಅತ್ಯುತ್ತಮ ಗ್ರಂಥಪಾಲಕಿಯಾಗಿ ಡಾ. ರಜತಾ ಪಿ. ಶೆಟ್ಟಿಯವರ ಶೈಕ್ಷಣಿಕ ಸೇವೆ, ಗ್ರಂಥಾಲಯ ನಿರ್ವಹಣೆ, ಡಿಜಿಟಲೀಕರಣ, ಇ-ಸಂಪನ್ಮೂಲಗಳ ಬಳಕೆ ಹಾಗೂ ಸಂಶೋಧನಾ ಚಟುವಟಿಕೆಗಳಿಗೆ ನೀಡಿರುವ ಕೊಡುಗೆಯನ್ನು ಪರಿಗಣಿಸಿ ಈ ಗೌರವವನ್ನು ನೀಡಲಾಯಿತು.
ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಡಾ. ರಜತಾ ಪಿ. ಶೆಟ್ಟಿ ಅವರು ಮಂಗಳೂರು ವಿಶ್ವವಿದ್ಯಾನಿಲಯದಿಂದ ಇ-ಸಂಪನ್ಮೂಲಗಳ ಕುರಿತು ಪಿಎಚ್.ಡಿ. ಪದವಿ ಪಡೆದಿದ್ದಾರೆ. ಎಸ್.ಡಿ.ಎಂ. ಕಾಲೇಜು, ಉಜಿರೆಯಲ್ಲಿ ಗ್ರಂಥಪಾಲಕರಾಗಿ ಹಾಗೂ ನಂತರ ಎಸ್.ಡಿ.ಎಂ. ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಮುಖ್ಯ ಗ್ರಂಥಪಾಲಕರಾಗಿ ಸುಮಾರು ಎರಡೂವರೆ ದಶಕಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ.
ಗ್ರಂಥಾಲಯದ ಅಭಿವೃದ್ಧಿ ಮತ್ತು ನಿರ್ವಹಣೆಯೊಂದಿಗೆ ಆಧುನಿಕ ತಂತ್ರಜ್ಞಾನ ಹಾಗೂ ಡಿಜಿಟಲ್ ಸಂಪನ್ಮೂಲಗಳನ್ನು ಪರಿಣಾಮಕಾರಿಯಾಗಿ ಅಳವಡಿಸಿಕೊಳ್ಳುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ. ಎಸ್.ಡಿ.ಎಂ. ಸಮೂಹ ಸಂಸ್ಥೆಗಳ ಗ್ರಂಥಾಲಯ ಸಲಹೆಗಾರರಾಗಿಯೂ ಕಾರ್ಯನಿರ್ವಹಿಸುತ್ತಿರುವ ಅವರು, ವಿದ್ಯಾರ್ಥಿಗಳು, ಅಧ್ಯಾಪಕರು ಹಾಗೂ ಸಂಶೋಧಕರಿಗೆ ಅಗತ್ಯವಾದ ಜ್ಞಾನ ಸಂಪನ್ಮೂಲಗಳನ್ನು ಸುಲಭವಾಗಿ ತಲುಪಿಸುವ ನಿಟ್ಟಿನಲ್ಲಿ ಹಲವು ಮಹತ್ವದ ಕಾರ್ಯಗಳನ್ನು ಕೈಗೊಂಡಿದ್ದಾರೆ.
ವಿವಿಧ ಕಾರ್ಯಾಗಾರಗಳು, ತರಬೇತಿ ಕಾರ್ಯಕ್ರಮಗಳು, ವಿಚಾರ ಸಂಕಿರಣಗಳು ಹಾಗೂ ಶೈಕ್ಷಣಿಕ ಚಟುವಟಿಕೆಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿರುವ ಅವರು, ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಸಮ್ಮೇಳನಗಳಲ್ಲಿ ಸಂಶೋಧನಾ ಪ್ರಬಂಧಗಳನ್ನು ಮಂಡಿಸುವ ಮೂಲಕ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ಕ್ಷೇತ್ರದ ಸಂಶೋಧನಾ ಚಟುವಟಿಕೆಗಳಿಗೂ ಕೊಡುಗೆ ನೀಡಿದ್ದಾರೆ.
‘ಜ್ಞಾನವನ್ನು ಅರಸುವ ಮನಸ್ಸುಗಳಿಗೆ ಗ್ರಂಥಾಲಯವೇ ದಾರಿದೀಪ’ ಎಂಬ ಆಶಯದಂತೆ, ಓದು, ಅಧ್ಯಯನ ಮತ್ತು ಸಂಶೋಧನೆಯ ವಾತಾವರಣವನ್ನು ಬೆಳೆಸುವಲ್ಲಿ ಡಾ. ರಜತಾ ಪಿ. ಶೆಟ್ಟಿಯವರ ಸೇವೆಯನ್ನು ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕ ಸಂಘವು ಪ್ರಶಂಸಿಸಿದೆ. ಅವರ ಕರ್ತವ್ಯನಿಷ್ಠೆ, ನಾಯಕತ್ವ ಗುಣ, ಸೇವಾ ಮನೋಭಾವ ಹಾಗೂ ಶೈಕ್ಷಣಿಕ ಕ್ಷೇತ್ರಕ್ಕೆ ನೀಡಿರುವ ಕೊಡುಗೆಯನ್ನು ಪರಿಗಣಿಸಿ ‘ಅಧ್ಯಾಪಕ ಭೂಷಣ’ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.












