31.9 C
ಪುತ್ತೂರು, ಬೆಳ್ತಂಗಡಿ
September 30, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಗ್ರಂಥಾಲಯ ಕ್ಷೇತ್ರದ ಸುದೀರ್ಘ ಸೇವೆಗೆ ಡಾ. ರಜತಾ ಪಿ. ಶೆಟ್ಟಿಗೆ ‘ಅಧ್ಯಾಪಕ ಭೂಷಣ’

ಉಜಿರೆ : ಜ್ಞಾನಾರ್ಜನೆ, ಸಂಶೋಧನೆ ಹಾಗೂ ಓದುವ ಸಂಸ್ಕೃತಿಯನ್ನು ಬೆಳೆಸುವಲ್ಲಿ ಸಲ್ಲಿಸಿದ ಸುದೀರ್ಘ ಸೇವೆಯನ್ನು ಗುರುತಿಸಿ, ಎಸ್‌.ಡಿ.ಎಂ. ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಉಜಿರೆಯ ಮುಖ್ಯ ಗ್ರಂಥಪಾಲಕಿ ಡಾ. ರಜತಾ ಪಿ. ಶೆಟ್ಟಿ ಅವರಿಗೆ ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕ ಸಂಘ (ರಿ.), ಮಂಗಳೂರು ವಿಭಾಗದ ವತಿಯಿಂದ 2026ನೇ ಸಾಲಿನ ‘ಅಧ್ಯಾಪಕ ಭೂಷಣ ಪ್ರಶಸ್ತಿ’ ನೀಡಿ ಗೌರವಿಸಲಾಯಿತು.

ಉಡುಪಿಯ ಕಿದಿಯೂರಿನ ಮಾಧವ ಕೃಷ್ಣ ಸಭಾ ಭವನದಲ್ಲಿ ನಡೆದ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಅತ್ಯುತ್ತಮ ಗ್ರಂಥಪಾಲಕಿಯಾಗಿ ಡಾ. ರಜತಾ ಪಿ. ಶೆಟ್ಟಿಯವರ ಶೈಕ್ಷಣಿಕ ಸೇವೆ, ಗ್ರಂಥಾಲಯ ನಿರ್ವಹಣೆ, ಡಿಜಿಟಲೀಕರಣ, ಇ-ಸಂಪನ್ಮೂಲಗಳ ಬಳಕೆ ಹಾಗೂ ಸಂಶೋಧನಾ ಚಟುವಟಿಕೆಗಳಿಗೆ ನೀಡಿರುವ ಕೊಡುಗೆಯನ್ನು ಪರಿಗಣಿಸಿ ಈ ಗೌರವವನ್ನು ನೀಡಲಾಯಿತು.

ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಡಾ. ರಜತಾ ಪಿ. ಶೆಟ್ಟಿ ಅವರು ಮಂಗಳೂರು ವಿಶ್ವವಿದ್ಯಾನಿಲಯದಿಂದ ಇ-ಸಂಪನ್ಮೂಲಗಳ ಕುರಿತು ಪಿಎಚ್‌.ಡಿ. ಪದವಿ ಪಡೆದಿದ್ದಾರೆ. ಎಸ್‌.ಡಿ.ಎಂ. ಕಾಲೇಜು, ಉಜಿರೆಯಲ್ಲಿ ಗ್ರಂಥಪಾಲಕರಾಗಿ ಹಾಗೂ ನಂತರ ಎಸ್‌.ಡಿ.ಎಂ. ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಮುಖ್ಯ ಗ್ರಂಥಪಾಲಕರಾಗಿ ಸುಮಾರು ಎರಡೂವರೆ ದಶಕಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ.

ಗ್ರಂಥಾಲಯದ ಅಭಿವೃದ್ಧಿ ಮತ್ತು ನಿರ್ವಹಣೆಯೊಂದಿಗೆ ಆಧುನಿಕ ತಂತ್ರಜ್ಞಾನ ಹಾಗೂ ಡಿಜಿಟಲ್ ಸಂಪನ್ಮೂಲಗಳನ್ನು ಪರಿಣಾಮಕಾರಿಯಾಗಿ ಅಳವಡಿಸಿಕೊಳ್ಳುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ. ಎಸ್‌.ಡಿ.ಎಂ. ಸಮೂಹ ಸಂಸ್ಥೆಗಳ ಗ್ರಂಥಾಲಯ ಸಲಹೆಗಾರರಾಗಿಯೂ ಕಾರ್ಯನಿರ್ವಹಿಸುತ್ತಿರುವ ಅವರು, ವಿದ್ಯಾರ್ಥಿಗಳು, ಅಧ್ಯಾಪಕರು ಹಾಗೂ ಸಂಶೋಧಕರಿಗೆ ಅಗತ್ಯವಾದ ಜ್ಞಾನ ಸಂಪನ್ಮೂಲಗಳನ್ನು ಸುಲಭವಾಗಿ ತಲುಪಿಸುವ ನಿಟ್ಟಿನಲ್ಲಿ ಹಲವು ಮಹತ್ವದ ಕಾರ್ಯಗಳನ್ನು ಕೈಗೊಂಡಿದ್ದಾರೆ.

ವಿವಿಧ ಕಾರ್ಯಾಗಾರಗಳು, ತರಬೇತಿ ಕಾರ್ಯಕ್ರಮಗಳು, ವಿಚಾರ ಸಂಕಿರಣಗಳು ಹಾಗೂ ಶೈಕ್ಷಣಿಕ ಚಟುವಟಿಕೆಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿರುವ ಅವರು, ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಸಮ್ಮೇಳನಗಳಲ್ಲಿ ಸಂಶೋಧನಾ ಪ್ರಬಂಧಗಳನ್ನು ಮಂಡಿಸುವ ಮೂಲಕ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ಕ್ಷೇತ್ರದ ಸಂಶೋಧನಾ ಚಟುವಟಿಕೆಗಳಿಗೂ ಕೊಡುಗೆ ನೀಡಿದ್ದಾರೆ.

‘ಜ್ಞಾನವನ್ನು ಅರಸುವ ಮನಸ್ಸುಗಳಿಗೆ ಗ್ರಂಥಾಲಯವೇ ದಾರಿದೀಪ’ ಎಂಬ ಆಶಯದಂತೆ, ಓದು, ಅಧ್ಯಯನ ಮತ್ತು ಸಂಶೋಧನೆಯ ವಾತಾವರಣವನ್ನು ಬೆಳೆಸುವಲ್ಲಿ ಡಾ. ರಜತಾ ಪಿ. ಶೆಟ್ಟಿಯವರ ಸೇವೆಯನ್ನು ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕ ಸಂಘವು ಪ್ರಶಂಸಿಸಿದೆ. ಅವರ ಕರ್ತವ್ಯನಿಷ್ಠೆ, ನಾಯಕತ್ವ ಗುಣ, ಸೇವಾ ಮನೋಭಾವ ಹಾಗೂ ಶೈಕ್ಷಣಿಕ ಕ್ಷೇತ್ರಕ್ಕೆ ನೀಡಿರುವ ಕೊಡುಗೆಯನ್ನು ಪರಿಗಣಿಸಿ ‘ಅಧ್ಯಾಪಕ ಭೂಷಣ’ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

Related posts

ಪಾರೆಂಕಿ ಮಾರಿಗುಡಿ ಶ್ರೀ ಮಾರಿಕಾಂಬ ದೇವಿಯ ಸನ್ನಿಧಿಯಲ್ಲಿ ದಶಮಾನೋತ್ತರ ಅಷ್ಟಮ ಪ್ರತಿಷ್ಠಾ ವರ್ಧಂತ್ಯುತ್ಸವ ಹಾಗೂ ದೊಂಪದ ಬಲಿ ನೇಮೋತ್ಸವ

Suddi Udaya

ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಬಿಜೆಪಿ ಅಭ್ಯರ್ಥಿ ಕ್ಯಾ. ಬ್ರಿಜೇಶ್ ಚೌಟ ಭೇಟಿ, ದೇವರ ದರ್ಶನ

Suddi Udaya

ಮೈಸೂರಿನ ಎಸ್.ಡಿ.ಎಂ.ಐ.ಎಂ.ಡಿ.ಯ ಪಿ.ಜಿ.ಡಿ.ಎಂ. ಕೋರ್ಸಿಗೆ ಎರಡನೆ ಬಾರಿ ಇ.ಎಫ್.ಎಂ.ಡಿ. ಮಾನ್ಯತೆ ನವೀಕರಣ: ಡಾ| ಡಿ. ಹೆಗ್ಗಡೆಯವರಿಂದ ಜಾಗತಿಕ ಮಾನ್ಯತೆ ನವೀಕರಣ ಪ್ರಮಾಣಪತ್ರ ಸ್ವೀಕಾರ

Suddi Udaya

ಜಿಲ್ಲಾಮಟ್ಟದ ಬಾಲಕ ಬಾಲಕಿಯರ ಕ್ರೀಡಾಕೂಟ: ಎಸ್ ಡಿ ಮ್ ಕಾಲೇಜಿನ 6 ವಿದ್ಯಾರ್ಥಿಗಳು ರಾಜ್ಯ ಮಟ್ಟಕ್ಕೆ ಆಯ್ಕೆ

Suddi Udaya

ತಣ್ಣೀರುಪಂತ: ರುದ್ರಗಿರಿ ಶ್ರೀ ಮೃತ್ಯುಂಜಯ ದೇವಸ್ಥಾನದ ಪ್ರತಿಷ್ಠಾ ದಿನ ಹಾಗೂ ವಾರ್ಷಿಕ ಜಾತ್ರೋತ್ಸವ

Suddi Udaya

ಪಂಚಾಯತ್ ಕಾಮಗಾರಿಗಳನ್ನು ನಡೆಸಲು ಇಂಜಿನಿಯರ್ ಗಳ ಕೊರತೆ: ಕೂಡಲೇ ಸರಕಾರ ಕ್ರಮ ಜರುಗಿಸುವಂತೆ ಕೊಕ್ಕಡ ಗ್ರಾ.ಪಂ. ಉಪಾಧ್ಯಕ್ಷ ಪ್ರಭಾಕರ ಗೌಡ ಒತ್ತಾಯ

Suddi Udaya
error: Content is protected !!