ಬೆಳ್ತಂಗಡಿ ತಾಲೂಕಿನ ಹಾಲು ಉತ್ಪಾದಕರ ಸಹಕಾರ ಸಂಘಗಳ ಸಿಇಒಗಳಿಗೆ ತರಬೇತಿ ಶಿಬಿರದಲ್ಲಿ ಶಶಿಕುಮಾರ್ ರೈ ಬಾಲ್ಯೊಟ್ಟು ಸಲಹೆ
ಬೆಳ್ತಂಗಡಿ: ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸಹಾಯ ಮಾಡಬಲ್ಲ ವ್ಯವಸ್ಥೆ ಹಾಲು ಉತ್ಪಾದಕರ ಸಹಕಾರ ಸಂಘಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಸಿಗುತ್ತದೆ. ಇದಕ್ಕೆ ಪೂರಕವಾಗಿ ತರಬೇತಿ ಶಿಬಿರಗಳಿಂದ ಸಿಗುವ ಮಾಹಿತಿಗಳನ್ನು ಆಯಾಯ ಸಂಘಗಳ ಬಲವರ್ಧನೆಗೆ ಉಪಯೋಗಿಸಿಕೊಂಡು ಸಂಘಗಳನ್ನು ಪ್ರಬಲವಾಗಿ ನಿರ್ಮಿಸುವ ಅವಕಾಶ ಸಿಇಒಗಳಿಗೆ ಲಭಿಸುತ್ತದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷರೂ, ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಲದ ನಿರ್ದೇಶಕ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ನಿರ್ದೇಶಕರಾದ ಶಶಿಕುಮಾರ್ ರೈ ಬಾಲ್ಯೊಟ್ಟು ಅಭಿಪ್ರಾಯಪಟ್ಟರು.
ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿಯಮಿತ ಬೆಂಗಳೂರು, ದಕ್ಷಿಣ ಕನ್ನಡ ಜಿಲ್ಲಾ ಸಹಕಾರ ಯೂನಿಯನ್ ಲಿ. ಮಂಗಳೂರು, ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ಮಂಗಳೂರು ಹಾಗೂ ಸಹಕಾರ ಇಲಾಖೆ ಇವುಗಳ ಸಂಯುಕ್ತ ಆಶ್ರಯದಲ್ಲಿ ಸೆ.30 ರಂದು ಬೆಳ್ತಂಗಡಿ ತಾಲೂಕಿನ ಎಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಬೆಳ್ತಂಗಡಿಯ ಎಸ್ಸಿಡಿಸಿಸಿ ಬ್ಯಾಂಕ್ ಸಭಾಂಗಣದಲ್ಲಿ ಆಯೋಜಿಸಿದ ವಿಶೇಷ ತರಬೇತಿ ಕಾರ್ಯಾಗಾರದಲ್ಲಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಹಾಲು ಉತ್ಪಾದಕರ ಒಕ್ಕೂಟಗಳು ಹಳ್ಳಿಯ ವ್ಯವಸ್ಥೆಯಲ್ಲಿ ಪ್ರಬಲವಾದ ವ್ಯವಸ್ಥೆ. ಹಳ್ಳಿಯ ಶ್ರಮ ಜೀವನದ ಅನುಭವ ಇಲ್ಲಿ ಕೆಲಸ ಮಾಡುವವರಿಗೆ ಇರುತ್ತದೆ. ಸಹಕಾರಿ ವ್ಯವಸ್ಥೆಯಲ್ಲಿ ಕಾಲಕಾಲಕ್ಕೆ ಹೊಸ ಹೊಸ ಕಾನೂನುಗಳು, ಸುತ್ತೋಲೆಗಳು ಬರುತ್ತಿರುತ್ತವೆ. ಅವುಗಳ ಬಗ್ಗೆ ಪೂರ್ಣ ಜ್ಞಾನ ಮತ್ತು ಮಾಹಿತಿ ಸಂಘಗಳಲ್ಲಿ ಕೆಲಸ ಮಾಡುವವರಿಗೆ ಇರಬೇಕಾಗುತ್ತದೆ. ಇಂತಹ ತರಬೇತಿಗಳಿಂದ ಅವುಗಳ ಮಾಹಿತಿ ದೊರೆಯುತ್ತದೆ. ಇಲ್ಲಿ ಸಿಗುವ ಮಾಹಿತಿಗಳನ್ನು ಆಡಳಿತ ಮಂಡಳಿಯಲ್ಲಿ ಚರ್ಚಿಸಿ ಅವುಗಳ ಅನುಷ್ಠಾನ ಮಾಡಿ ಸಂಘಗಳನ್ನು ಪ್ರಬಲವಾಗಿ ಮುನ್ನಡೆಸುವ ಅವಕಾಶ ಇರುತ್ತದೆ ಎಂದು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿದ ದಕ್ಷಿಣ ಕನ್ನಡ ಹಾಲು ಉತ್ಪಾದಕರ ಒಕ್ಕೂಟದ ಉಪಾಧ್ಯಕ್ಷ ಉದಯ ಕೋಟ್ಯಾನ್ ಮಾತನಾಡಿ, ಗ್ರಾಮ ಮಟ್ಟದಿಂದ ರಾಷ್ಟ್ರ ಮಟ್ಟದವರೆಗೆ ಸಹಕಾರಿ ವ್ಯವಸ್ಥೆಯು ಇಂದು ಬೆಳೆದು ನಿಂತಿದೆ. ತಾವೂ ಬೆಳೆಯುವ ಜೊತೆಗೆ ತಮ್ಮ ಜೊತೆಗಿದ್ದವರನ್ನೂ ಬೆಳೆಸುವ ಡಾ. ಎಂ ಎನ್ ರಾಜೇಂದ್ರ ಕುಮಾರ್ ಅವರ ಸಮರ್ಥ ಮಾರ್ಗದರ್ಶನದಲ್ಲಿ ಜಿಲ್ಲೆಯ ಸಹಕಾರಿ ವ್ಯವಸ್ಥೆ ಬೆಳೆದು ಬಂದಿದೆ. ಸಹಕಾರ ವ್ಯವಸ್ಥೆ ಎಂದರೆ ತಾವೂ ಬೆಳೆದು ಇತರರನ್ನೂ ಬೆಳೆಸುವ ವ್ಯವಸ್ಥೆ. ಹಾಲು ಉತ್ಪಾದಕರ ಸಹಕಾರ ಸಂಘಗಳ ಸಿಇಒಗಳಿಗೆ ಈ ವ್ಯವಸ್ಥೆಯನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಅವಕಾಶಗಳಿವೆ. ಹಾಲು ಉತ್ಪಾದಕರ ಸಹಕಾರ ಸಂಘಗಳ ಸಿಇಒಗಳ ಬದ್ಧತೆ, ಸಹಕಾರಗಳಿಂದ ಆಯಾ ಸಂಘಗಳ ವ್ಯಾಪ್ತಿಯಲ್ಲಿ ಆ ಸಂಘಗಳನ್ನು ಪ್ರಬಲವಾಗಿ ಬೆಳೆಸಬಹುದು ಎಂದು ಹೇಳಿದರು.
ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕರಾದ ಕುಶಾಲಪ್ಪ ಗೌಡ ಮಾತನಾಡಿ, ಹರಿತವಾದ ಕತ್ತಿ ಸತತವಾದ ಉಪಯೋಗದ ಬಳಿಕ ಹರಿತ ಕಳೆದುಕೊಳ್ಳುವಾಗ ಅದಕ್ಕೆ ಅರ ಹಾಕಿ ಅದನ್ನು ಮತ್ತೆ ಹರಿತವಾಗುವಂತೆ ಮಾಡುವಂತೆ ಇಂತಹ ತರಬೇತಿ ಶಿಬಿರಗಳಿಂದ ತಮ್ಮಲ್ಲಿರುವ ಜ್ಞಾನವನ್ನು ಹೆಚ್ಚಿಸುವ ಕೆಲಸ ಮಾಡಲಾಗುತ್ತಿದೆ. ವ್ಯವಸಾಯ ಕ್ಷೇತ್ರದಲ್ಲಿ ರೈತರು ಭತ್ತ ಕೃಷಿಯಿಂದ ವಿಮುಖರಾದಾಗ ಮನೆಗಳಲ್ಲಿ ದನ ಸಾಕಿ ಅದರ ಹಾಲನ್ನು ಒಕ್ಕೂಟಗಳಿಗೆ ನೀಡುವ ಮೂಲಕ ರೈತರನ್ನು ಸಹಕಾರಿ ವ್ಯವಸ್ಥೆಯಲ್ಲಿ ಜೋಡಿಸುವ ಕೆಲಸ ನಡೆಯಿತು. ಈ ಮೂಲಕ ಹಳ್ಳಿಯ ಜನರ ಜೀವನ ಮಟ್ಟವನ್ನು ಸುಧಾರಿಸುವ ಕೆಲಸ ನಡೆದಿದೆ ಎಂದು ಬಣ್ಣಿಸಿದರು.
ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಲದ ನಿರ್ದೇಶಕರಾಗಿ ಆಯ್ಕೆಯಾದ ಶಶಿಕುಮಾರ್ ರೈ ಬಾಲ್ಯೊಟ್ಟು ಅವರನ್ನು ಅಭಿನಂದಿಸಿ ಗೌರವಿಸಲಾಯಿತು. ದಕ್ಷಿಣ ಕನ್ನಡ ಸಹಕಾರಿ ಹಾಲು ಒಕ್ಕೂಟದ ನಿರ್ದೇಶಕರಾದ ಪ್ರಭಾಕರ ಆರಂಬೋಡಿ, ಪುತ್ತೂರು ವಿಭಾಗದ ಉಪ ವ್ಯವಸ್ಥಾಪಕರಾದ ಡಾ. ಸತೀಶ್ ರಾವ್, ಸಂಪನ್ಮೂಲ ವ್ಯಕ್ತಿ ಕೆ. ಎಸ್ ಬಾಲಸುಬ್ರಮಣ್ಯ, ವೈದ್ಯಾಧಿಕಾರಿ ಡಾ. ಗಣಪತಿ, ವಿಸ್ತರಣಾಧಿಕಾರಿ ರಾಜೇಶ್ ಕಾಮತ್, ಸಂದೀಪ್ ಜೈನ್ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಬೆಳ್ತಂಗಡಿ ಶಾಖೆಯ ಶಾಖಾಧಿಕಾರಿ ಸುಧೀರ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ದಕ್ಷಿಣ ಕನ್ನಡ ಜಿಲ್ಲಾ ಸಹಕಾರ ಯೂನಿಯನ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್ ವಿ ಹಿರೇಮಠ್ ಕಾರ್ಯಕ್ರಮ ನಿರೂಪಿಸಿ, ಸ್ವಾಗತಿಸಿ ವಂದಿಸಿದರು.












