ಬೆಳ್ತಂಗಡಿ: ಯೋಧ, ಯೋಗಿ ಮತ್ತು ತಾಯಂದಿರು ಈ ದೇಶದ ನಿಜವಾದ ಶಕ್ತಿ. ಇವರಿಂದಲೇ ಇಡೀ ದೇಶವು ಸದಾ ಸಮೃದ್ಧಿಯಲ್ಲಿರುತ್ತದೆ. ಎಕ್ಸೆಲ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಮಂತ್ ಕುಮಾರ್ ಜೈನ್ ಅವರು ವಿದ್ಯಾರ್ಥಿಗಳಿಗೆ ಆದರ್ಶ ಗುರುವಾಗಿದ್ದಾರೆ. ಪ್ರತಿಯೊಬ್ಬ ವಿದ್ಯಾರ್ಥಿಯೂ ತಾನು ಕಲಿತ ವಿದ್ಯಾಸಂಸ್ಥೆಯನ್ನು, ಅಕ್ಷರ ಕಲಿಸಿದ ಗುರುಗಳನ್ನು ಹಾಗೂ ತಾಯಿಯಂತಿರುವ ಪ್ರಕೃತಿಯನ್ನು ಬದುಕಿನಲ್ಲಿ ಎಂದಿಗೂ ಮರೆಯಬಾರದು ಎಂದು ಶ್ರೀಧಾಮ ಮಾಣಿಲದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಅವರು ನುಡಿದರು.

ಅವರು ಅ 4 ರಂದು ಗುರುವಾಯನಕೆರೆಯ ಎಕ್ಸೆಲ್ ಪದವಿಪೂರ್ವ ಕಾಲೇಜಿನ ಆವರಣದಲ್ಲಿ ಜರುಗಿದ, ಎಕ್ಸೆಲ್ ವಿದ್ಯಾರ್ಥಿಗಳ ಪಾಲಕರಾಗಿರುವ ವಿವಿಧ ಶಾಲಾ-ಕಾಲೇಜುಗಳ ಶಿಕ್ಷಕರಿಗೆ ಗೌರವಾರ್ಪಣೆ ಸಲ್ಲಿಸುವ ಅಪೂರ್ವ ‘ಗುರುನಮನ’ ಕಾರ್ಯಕ್ರಮದಲ್ಲಿ ದಿವ್ಯ ಆಶೀರ್ವಚನ ನೀಡಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಎಕ್ಸೆಲ್ ಸಮೂಹ ವಿದ್ಯಾಸಂಸ್ಥೆಗಳ ಅಧ್ಯಕ್ಷ ಸುಮಂತ್ ಕುಮಾರ್ ಜೈನ್ ಬಿ. ಅವರು ಮಾತನಾಡಿ, ವಿದ್ಯಾರ್ಥಿಗಳಿಗೆ ಜ್ಞಾನದ ದೀಪ ಹಚ್ಚುವ ಗುರುಗಳಿಗೆ ನಮನ ಸಲ್ಲಿಸುವ ಮತ್ತು ಅವರನ್ನು ಎಕ್ಸೆಲ್ ವಿದ್ಯಾಸಂಸ್ಥೆಯ ಆವರಣದಲ್ಲಿ ಅತ್ಯಂತ ಗೌರವಪೂರ್ವಕವಾಗಿ ಸತ್ಕರಿಸುವ ಅಪರೂಪದ ಭಾಗ್ಯ ನಮಗೆ ಒದಗಿಬಂದಿರುವುದು ನಮ್ಮ ಆಡಳಿತ ಮಂಡಳಿಯ ಮಹಾನ್ ಪುಣ್ಯವಾಗಿದೆ ಎಂದರು.

1000ಕ್ಕೂ ಅಧಿಕ ಶಿಕ್ಷಕರಿಗೆ ಸನ್ಮಾನ:
ವಿದ್ಯಾರ್ಥಿಗಳ ಹೆತ್ತವರಾಗಿದ್ದು,ರಾಜ್ಯದ ವಿವಿಧೆಡೆ ಶಿಕ್ಷಣ ವೃತ್ತಿಯಲ್ಲಿ ತೊಡಗಿಸಿಕೊಂಡಿರುವ 500ಕ್ಕೂ ಹೆಚ್ಚು ಶಿಕ್ಷಕ-ಶಿಕ್ಷಕರಿಗೆ,ಕಾಲೇಜಿನ ಉಪನ್ಯಾಸಕ ವರ್ಗದವರಿಗೆ, ಬೋದಕೇತರ ಸಿಬ್ವಂದಿಗಳಿಗೆ ಒಟ್ಟು 1000 ಕ್ಕೂ ಅಧಿಕ ಮಂದಿಯನ್ನು ವೇದಿಕೆಯಲ್ಲಿ ಶಾಲು ಹೊದಿಸಿ, ಸ್ಮರಣಿಕೆ ನೀಡಿ ಸನ್ಮಾನಿಸಿ ಗೌರವಿಸಲಾಯಿತು.
ಮುಖ್ಯ ಅತಿಥಿಗಳಾಗಿ ಮೂಲ್ಕಿ ವಿಜಯ ಕಾಲೇಜಿನ ವಿಶ್ರಾಂತ ಪ್ರಾಂಶುಪಾಲರಾದ ಡಾ. ನಾರಾಯಣ ಪೂಜಾರಿ, ಪ್ರಗತಿಪರ ಕೃಷಿಕ ಹಾಗೂ ಸಾಮಾಜಿಕ ಮುಖಂಡ ಸಂತೋಷ್ ಕುಮಾರ್ ಕಾಪಿನಡ್ಕ, ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕಾಲೇಜಿನ ಪ್ರಾಂಶುಪಾಲರಾದ ಸೋಮಶೇಖರ ನಾಯಕ್,ಬೆಳ್ತಂಗಡಿ ಸುದ್ದಿ ಉದಯ ಪತ್ರಿಕೆಯ ಮುಖ್ಯಸ್ಥ ಸಂತೋಷ್ ಪಿ. ಕೋಟ್ಯಾನ್ ಬಳಂಜ ಹಾಗೂ ಬಳಂಜ ಶಿಕ್ಷಣ ಟ್ರಸ್ಟ್‌ನ ಕಾರ್ಯದರ್ಶಿ ರತ್ನರಾಜ್ ಜೈನ್ ಉಪಸ್ಥಿತರಿದ್ದರು.
ವೇದಿಕೆಯಲ್ಲಿ ಎಕ್ಸೆಲ್ ಅರಮಲೆಬೆಟ್ಟ ಕ್ಯಾಂಪಸ್ ಪ್ರಾಂಶುಪಾಲರಾದ ಡಾ. ಪ್ರಜ್ವಲ್ ಕಜೆ, ಎಕ್ಸೆಲ್ ಟೆಕ್ನೋ ಸ್ಕೂಲ್ ಪ್ರಾಂಶುಪಾಲರಾದ ಸುಮಿತ್ರಾ ಉಪಸ್ಥಿತರಿದ್ದರು.ಎಕ್ಸೆಲ್ ಕಾಲೇಜಿನ ನೂತನ ಶೈಕ್ಷಣಿಕ ಭಿತ್ತಿಪತ್ರವನ್ನು ಗಣ್ಯರ ಸಮ್ಮುಖದಲ್ಲಿ ಬಿಡುಗಡೆಗೊಳಿಸಲಾಯಿತು.
ಎಕ್ಸೆಲ್ ಕಾಲೇಜಿನ ಪ್ರಾಂಶುಪಾಲರಾದ ಡಾ. ನವೀನ್ ಕುಮಾರ್ ಮರಿಕೆ ಪ್ರಾಸ್ತಾವಿಕ ಮಾತುಗಳೊಂದಿಗೆ ಎಲ್ಲರನ್ನೂ ಸ್ವಾಗತಿಸಿದರು. ಕಾಲೇಜಿನ ಹಿರಿಯ ಉಪನ್ಯಾಸಕರು ಸಮಗ್ರ ಕಾರ್ಯಕ್ರಮವನ್ನು ಅತ್ಯಂತ ಯಶಸ್ವಿಯಾಗಿ ನಿರೂಪಿಸಿ, ನಿರ್ವಹಿಸಿದರು.ವೇಣೂರು ಎಕ್ಸೆಲ್ ಟೆಕ್ನೋ ಸ್ಕೂಲ್ ಪ್ರಾಂಶುಪಾಲರಾದ ಶಾಂತಿರಾಜ ಜೈನ್ ವಂದಿಸಿದರು.













