ಉಜಿರೆ,ದಿ.ಅ. 14 : ಶಿಕ್ಷಣವು ಜೀವನದ ಅವಿಭಾಜ್ಯ ಅಂಗವಾಗಿದ್ದು, ಜ್ಞಾನದ ಜೊತೆಗೆ ಮೌಲ್ಯಗಳನ್ನೂ ಬೆಳೆಸಿಕೊಳ್ಳುವುದು ಅಗತ್ಯ. ಹೊಸ ಚಿಂತನೆಗಳು ಮತ್ತು ಆತ್ಮವಿಶ್ವಾಸವು ವ್ಯಕ್ತಿಯನ್ನು ಸಕಾರಾತ್ಮಕ ದಿಕ್ಕಿನಲ್ಲಿ ಮುನ್ನಡೆಸುತ್ತವೆ. ವಿದ್ಯಾರ್ಥಿ ಜೀವನದಲ್ಲಿ ಸೋಮಾರಿತನಕ್ಕೆ ಅವಕಾಶ ನೀಡದೆ ಸದಾ ಕ್ರಿಯಾಶೀಲರಾಗಿರಬೇಕು. ತಮ್ಮ ಕೆಲಸವನ್ನು ಗೌರವಿಸಿ, ಪ್ರೀತಿಯಿಂದ ನಿರ್ವಹಿಸಬೇಕು. ಗುರಿಯೆಡೆಗಿನ ಬದ್ಧತೆಯನ್ನು ಬೆಳೆಸಿಕೊಂಡರೆ ಯಶಸ್ಸು ಖಚಿತ ಎಂದು
ಕೊಯ್ಯೂರು ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಹಾಗು ಎಸ್.ಡಿ.ಎಂ ಕಾಲೇಜಿನ ಹಿರಿಯ ವಿದ್ಯಾರ್ಥಿ ಮೋಹನ್ ಗೌಡ ಅಭಿಪ್ರಾಯ ಪಟ್ಟರು.
ಇವರು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ( ಸ್ವಾಯತ್ತ) ಕಾಲೇಜಿನ ಸಮ್ಯಕ್ ದರ್ಶನ ಸಭಾಭವನದಲ್ಲಿ ಎಸ್.ಡಿ.ಎಂ ಕಾಲೇಜಿನ ಹಿರಿಯ ವಿದ್ಯಾರ್ಥಿ ಸಂಘ (ರಿ.) ಉಜಿರೆ, ಎಸ್.ಡಿ.ಎಂ ಕಾಲೇಜಿನ ಸಹಕಾರದಲ್ಲಿ ಆಯೋಜಿಸಿದ್ದ 22ನೇ “ಎಸ್.ಡಿ.ಎಂ ನೆನಪಿನಂಗಳ” ಸರಣಿ ಕಾರ್ಯಕ್ರಮದ ಕಾಲೇಜಿನ ಹಿರಿಯ ವಿದ್ಯಾರ್ಥಿಯೊಂದಿಗೆ ಸಂವಾದ ಹಾಗು ವಿದ್ಯಾರ್ಥಿ ವೇತನ ವಿತರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ತಾವು ಶಿಕ್ಷಣ ಪಡೆದ ಸಂಸ್ಥೆಯಲ್ಲಿಯೇ ಸನ್ಮಾನ ಸ್ವೀಕರಿಸುವುದು ತಮ್ಮ ಪಾಲಿಗೆ ಅತ್ಯಂತ ಸಂತಸದ ಕ್ಷಣವಾಗಿದೆ. ಎಸ್ಡಿಎಂ ಸಂಸ್ಥೆಯಲ್ಲಿ ಎಂಟು ವರ್ಷಗಳ ಕಾಲ ಶಿಕ್ಷಣ ಪಡೆದಿದ್ದು, ಎರಡು ವರ್ಷಗಳ ಕಾಲ ಇದೇ ಸಂಸ್ಥೆಯಲ್ಲಿ ಬೋಧಕ ಸಿಬ್ಬಂದಿಯಾಗಿ ಸೇವೆ ಸಲ್ಲಿಸಿರುವುದನ್ನು ಸ್ಮರಿಸಿದರು. ತಮ್ಮ ವೃತ್ತಿಜೀವನದ ಪಯಣದಲ್ಲಿ ಎಸ್ಡಿಎಂ ಸಂಸ್ಥೆಯು ಪ್ರೇರಣೆ, ನೈತಿಕ ಬೆಂಬಲ ಹಾಗೂ ಸೂಕ್ತ ಮಾರ್ಗದರ್ಶನ ನೀಡಿದೆ ಎಂದು ತಿಳಿಸಿದರು.
ಇಂದಿನ ಎಸ್ಡಿಎಂ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಅಗತ್ಯವಾದ ಹಲವು ಸೌಲಭ್ಯಗಳು ಲಭ್ಯವಿವೆ. ಹಿಂದಿನ ದಿನಗಳಲ್ಲಿ ಬಡ ಕುಟುಂಬಗಳ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಪಡೆಯುವುದು ಕಷ್ಟಕರವಾಗಿತ್ತು. ಆದರೆ ಇಂದು ವಿವಿಧ ಕ್ಷೇತ್ರಗಳಲ್ಲಿ ಶಿಕ್ಷಣ ಪಡೆಯಲು ಉತ್ತಮ ಅವಕಾಶಗಳಿವೆ. ಕೈಗೆಟುಕುವ ಶುಲ್ಕದಲ್ಲಿ ಅಗತ್ಯ ಸೌಲಭ್ಯಗಳೊಂದಿಗೆ ಮೌಲ್ಯಾಧಾರಿತ ಶಿಕ್ಷಣ ನೀಡುತ್ತಿರುವ ಎಸ್ಡಿಎಂ ಸಂಸ್ಥೆಯ ಕಾರ್ಯ ಶ್ಲಾಘನೀಯವಾಗಿದೆ ಎಂದರು.
ವೇದಿಕೆಯಲ್ಲಿ ಉಪಸ್ಥಿತರಿದ್ದ ಕಾಲೇಜಿನ ಉಪಪ್ರಾಂಶುಪಾಲೆ ನಂದಕುಮಾರಿ ಕೆ ಪಿ ಮಾತನಾಡಿ, ಎಸ್ಡಿಎಂ ಶಿಕ್ಷಣ ಸಂಸ್ಥೆಗಳ ಮೂಲಕ ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಶಿಕ್ಷಣ ಪಡೆದು ಉತ್ತಮವ ಜೀವನ್ನು ರೂಪಿಸಿಕೊಂಡಿದ್ದಾರೆ. ಸಂಸ್ಥೆಯೊಂದಿಗೆ ಹಿರಿಯ ವಿದ್ಯಾರ್ಥಿಗಳು ಇಂದಿಗೂ ಸಂಪರ್ಕ ಹೊಂದಿರುವುದು ಸಂತಸದ ಸಂಗತಿ ಎಂದರು. ಶ್ರೀ ಧರ್ಮಸ್ಥಳ ಸಂಸ್ಥೆಯು ಚತುರ್ವಿಧ ದಾನಗಳ ಮೂಲಕ ಸಮಾಜಮುಖಿ ಕಾರ್ಯಗಳನ್ನು ನಡೆಸುತ್ತಿದೆ. ಅದರ ಭಾಗವಾಗಿ ಎಸ್ಡಿಎಂ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಊಟದ ಮೂಲಕ ಅನ್ನದಾನ ಹಾಗೂ ಆರ್ಥಿಕ ನೆರವಿನ ಮೂಲಕ ವಿದ್ಯಾದಾನವನ್ನು ಒದಗಿಸಲಾಗುತ್ತಿದೆ. ಹಿರಿಯ ವಿದ್ಯಾರ್ಥಿಗಳ ಸಂಘವು ವಿದ್ಯಾರ್ಥಿಗಳ ಬೆಳವಣಿಗೆಗೆ ನೆರವಾಗುವುದರ ಜೊತೆಗೆ ಸಂಸ್ಥೆಯ ಪ್ರಗತಿಗೂ ಸಹಕಾರ ನೀಡುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.
ಶೈಕ್ಷಣಿಕ ಸೇವೆಗೆ ಮೋಹನ್ ಗೌಡರಿಗೆ ಸನ್ಮಾನ :
ಕಾರ್ಯಕ್ರಮದಲ್ಲಿ ಹಲವು ದಶಕಗಳಿಂದ ತನ್ನ ವೃತ್ತಿ ಬದುಕಿನುದ್ದಕ್ಕೂ ನಾನ ಹುದ್ದೆಗಳ ಮೂಲಕ ಸೇವೆ ಮಾಡಿಕೊಂಡು ಬಂದಿರುವ ಎಸ್.ಡಿ.ಎಂ ಸಂಸ್ಥೆಯ ಹಿರಿಯ ವಿದ್ಯಾರ್ಥಿ ಮೋಹನ್ ಗೌಡರ ಶೈಕ್ಷಣಿಕ ಹಾಗು ಸಾಮಾಜಿಕ ಸೇವೆಯನ್ನು ಗುರುತಿಸಿ ಉಪಪ್ರಾಂಶುಪಾಲೆ ನಂದಕುಮಾರಿ ಕೆ ಪಿ ಹಾಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಹಾಗು ಹಿರಿಯ ವಿದ್ಯಾರ್ಥಿ ಸಂಘ ಸಮಿತಿಯ ಸಂಯೋಜಕ ಡಾ. ಎಂ.ಪಿ ಶ್ರೀನಾಥ್ ಎಸ್.ಡಿ.ಎಂ ಶಿಕ್ಷಣ ಸಂಸ್ಥೆ, ಎಸ್.ಡಿ.ಎಂ ಕಾಲೇಜು ಹಾಗೂ ಹಿರಿಯ ವಿದ್ಯಾರ್ಥಿ ಸಂಘದ ವತಿಯಿಂದ ಗೌರವಿಸಿ ಸನ್ಮಾನಿಸಿದರು. ಈ ಸಂದರ್ಭದಲ್ಲಿ ಪರೀಕ್ಷಾಂಗ ಕುಲಸಚಿವ ಪ್ರೊ ಗಣೇಶ್ ನಾಯಕ್, ಹಿರಿಯ ವಿದ್ಯಾರ್ಥಿ ಸಂಘದ ಸದಸ್ಯರುಗಳಾದ ಸಹಾಯಕ ಪ್ರಾಧ್ಯಾಪಕ ಡಾ. ದಿವಾ ಕೊಕ್ಕಡ ಹಾಗು ಸಹಾಯಕ ಪ್ರಾಧ್ಯಾಪಕ ದೀಕ್ಷಿತ್ ರೈ ಉಪಸ್ಥಿತರಿದ್ದರು.
ಕಾರ್ಯಕ್ರಮದದಲ್ಲಿ ಬೋಧಕ ಮತ್ತು ಬೋಧಕೇತರರ ಸಿಬ್ಬಂದಿಗಳು ಸೇರಿದಂತೆ ವಿದ್ಯಾರ್ಥಿಗಳು ಭಾಗಿಯಾಗಿದ್ದರು. ಕಾರ್ಯಕ್ರಮವನ್ನು ಎಸ್.ಡಿ.ಎಂ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಡಾ. ದಿವಾ ಕೊಕ್ಕಡ ನಿರೂಪಿಸಿ, ವಂದಿಸಿದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಹಾಗು ಹಿರಿಯ ವಿದ್ಯಾರ್ಥಿ ಸಂಘ ಸಮಿತಿಯ ಸಂಯೋಜಕ ಡಾ. ಎಂ.ಪಿ ಶ್ರೀನಾಥ್ ಕಾರ್ಯಕ್ರಮವನ್ನು ಸಂಯೋಜಿಸಿದರು. ಸಹಾಯಕ ಪ್ರಾಧ್ಯಾಪಕ ದೀಕ್ಷಿತ್ ರೈ ಸಹಕರಿಸಿದರು.
ವಿದ್ಯಾರ್ಥಿ ವೇತನ ವಿತರಣೆ :
ನೆನಪಿನಂಗಳ ಕಾರ್ಯಕ್ರಮದ ಆಶಯದಂತೆ ಕಾಲೇಜಿನ ಅರ್ಹ ವಿದ್ಯಾರ್ಥಿಗೆ ಎಸ್.ಡಿ.ಎಂ ಹಿರಿಯ ವಿದ್ಯಾರ್ಥಿಗಳ ಸಂಘದ ವತಿಯಿಂದ ವಿದ್ಯಾರ್ಥಿ ವೇತನವನ್ನು ನೀಡಲಾಯಿತು. ಈ ಬಾರಿ ಕಾಲೇಜಿನ ಅಂತಿಮ ವರ್ಷದ ಬಿಸಿಎ ವಿದ್ಯಾರ್ಥಿ ವಿನಾಯಕ ಇವರಿಗೆ ಅತಿಥಿಗಳಾದ ಮೋಹನ್ ಗೌಡ ದಂಪತಿಗಳು ಚೆಕ್ ನೀಡಿ ಶುಭ ಹಾರೈಸಿದರು. ಉಪಪ್ರಾಂಶುಪಾಲೆ ನಂದ ಕುಮಾರಿ ಕೆ ಪಿ ಪರೀಕ್ಷಾಂಗ ಕುಲಸಚಿವ ಗಣೇಶ್ ನಾಯಕ್, ಸಂಘದ ಸಂಚಾಲಕ ಡಾ. ಎಂ. ಪಿ ಶ್ರೀನಾಥ್, ಸದಸ್ಯ ದಿವಾಕರ್ ಕೊಕ್ಕಡ, ದೀಕ್ಷಿತ್ ರೈ ಉಪಸ್ಥಿತರಿದ್ದರು.












