ಬೆಳ್ತಂಗಡಿ: ನಾವೂರು ಗ್ರಾಮದ ಡಾ. ಪ್ರದೀಪ್ ಅವರ ಕ್ಲಿನಿಕ್ಗೆ ಬೆಂಕಿ ಹಚ್ಚಿದ ಪ್ರಕರಣದಲ್ಲಿ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣದಲ್ಲಿ, ವೈಷಮ್ಯದ ಕಾರಣದಿಂದ ಇತರ ವ್ಯಕ್ತಿಗಳ ಮೇಲೆ ಅನುಮಾನವಿದೆ ಎಂದು ಸುಳ್ಳು ಆರೋಪ ಮಾಡಿದ್ದಾರೆ, ಸೂತ್ರಧಾರರು ಎಂಬ ಸುಳ್ಳು ಪ್ರಚಾರ ಮಾಡುತ್ತಿದ್ದಾರೆ. ತಾನು ಗೌರವಾನ್ವಿತ ವ್ಯಕ್ತಿಯಾಗಿದ್ದು, ಆರೋಪಿತ ಅಪರಾಧಗಳನ್ನು ಮಾಡಿಲ್ಲ. ಆದ್ದರಿಂದ ತನಗೆ ಮಧ್ಯಾಂತರ ಜಾಮೀನು ನೀಡಬೇಕು ಎಂದು ಬಡಕ್ಕಾವುಗುತ್ತು ರಕ್ಷಿತ್ ಅವರು ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ತಮ್ಮ ವಕೀಲರ ಮೂಲಕ ಅರ್ಜಿ ಸಲ್ಲಿಸಿದ್ದಾರೆ.
ನ್ಯಾಯಾಲಯಕ್ಕೆ ಸಲ್ಲಿಸಿದ ಅರ್ಜಿಯಲ್ಲಿ ಏನಿದೆ:
ತಾನು ಶ್ರೀ ದೈವಸ್ಥಾನ ಬಡೆಕಾವು ಗುತ್ತುವಿನ ಧರ್ಮದರ್ಶಿಯಾಗಿದ್ದು, ಉಡುಪಿಯಲ್ಲಿ ಜಿಲ್ಲಾ ಸಾಮಾಜಿಕ ಲೆಕ್ಕ ಪರಿಶೋಧನಾ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದೇನೆ. ಶ್ರೀ ದೈವಸ್ಥಾನ ಬಡೆಕಾವು ಗುತ್ತುವಿನ ಸಂಪೂರ್ಣ ಆಡಳಿತ ನಿರ್ವಹಣೆಯನ್ನು ನೋಡಿಕೊಳ್ಳುತ್ತಿದ್ೇನೆ. ಬಡೆಕಾವು ಗುತ್ತು ಕುಟುಂಬಕ್ಕೆ ಸೇರಿದವರಾಗಿರುವುದರಿಂದ, ದೈವಗಳ ಪವಿತ್ರ ನೆಲವಾದ ಈ ಸ್ಥಳದಲ್ಲಿ ಸಾಮಾಜಿಕ ಮತ್ತು ಧಾರ್ಮಿಕ ಚಟುವಟಿಕೆಗಳನ್ನೂ ನಡೆಸುತ್ತಿದ್ದೇನೆ. ಧಾರ್ಮಿಕ ಚಟುವಟಿಕೆಗಳ ಹೊರತಾಗಿ, ಬಡೆಕಾವು ಗುತ್ತು ಕುಟುಂಬದ ಪರವಾಗಿ ದಾನಧರ್ಮದ ಕಾರ್ಯಗಳನ್ನೂ ಮಾಡುತ್ತಿದ್ದೇನೆ. ಧರ್ಮದರ್ಶಿಯಾಗಿ ತಮ್ಮ ಪೂರ್ವಜರ ಕಾಲದಿಂದ ನಡೆದುಕೊಂಡು ಬಂದಿರುವ ಧಾರ್ಮಿಕ ಕಾರ್ಯಗಳನ್ನು ನಿರ್ವಹಿಸುತ್ತಿದ್ದೇನೆ. ಇಂದಿನವರೆಗೂ ನನ್ನ ಮೇಲೆ ಅಥವಾ ಬಡೆಕಾವು ಗುತ್ತು ಕುಟುಂಬದ ಮೇಲೂ ಯಾವುದೇ ಕಳಂಕವಿಲ್ಲ. ಪ್ರಸ್ತುತ ಬಡೆಕಾವು ಗುತ್ತು ದೈವಗಳಿಗೆ ನೇಮ, ಕೋಲ ಮತ್ತು ಡೊಂಪದಬಲಿ ಕಾರ್ಯಕ್ರಮಗಳನ್ನು ನಡೆಸಿ, ಸಂಪ್ರದಾಯ ಮತ್ತು ಆಚರಣೆಗಳ ಪ್ರಕಾರ ದೈವಗಳ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸುತ್ತಿದೆ.
ಈ ಹಿನ್ನೆಲೆಯಲ್ಲಿ, ಅ.13 ರಂದು ವಾಟ್ಸಾಪ್ನಲ್ಲಿ ಪೋಸ್ಟರ್ ರೂಪದಲ್ಲಿ ಸಿದ್ಧಪಡಿಸಿದ ಒಂದು ಸಂದೇಶ ಕಂಡುಬಂದಿತು. ಆ ಪೋಸ್ಟರ್ನಲ್ಲಿ ಛಾಯಾಚಿತ್ರ, ಹೆಸರು ಮತ್ತು ಮನೆತನದ ಹೆಸರನ್ನು ಪ್ರಕಟಿಸಿ, ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣದೊಂದಿಗೆ ಸಂಬಂಧ ಕಲ್ಪಿಸಲಾಗಿತ್ತು. ನಾವೂರಿನಲ್ಲಿರುವ ವೈದ್ಯರ ಕ್ಲಿನಿಕ್ಗೆ ಕೆಲವು ಅಪರಿಚಿತ ವ್ಯಕ್ತಿಗಳು ಬೆಂಕಿ ಹಚ್ಚಿದ್ದಾರೆ ಎಂಬ ಆರೋಪದ ಮೇರೆಗೆ, ಅಪರಿಚಿತ ವ್ಯಕ್ತಿಗಳ ವಿರುದ್ಧ, ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ವೈಯಕ್ತಿಕವಾಗಿ ದೂರು ನೀಡಿದ್ದಾರೆ.
ನಾನು ನಿರಪರಾಧಿಯಾಗಿದ್ದು, ಯಾವುದೇ ಸಂಬಂಧವಿಲ್ಲದಿದ್ದರೂ ದುರುದ್ದೇಶದಿಂದ ದೂರುದಾರರು ನನ್ನ ವಿರುದ್ಧ ಸುಳ್ಳು ಆರೋಪಗಳನ್ನು ಮಾಡಿದ್ದಾರೆ. ನಾನು ಆರೋಪಿತ ಅಪರಾಧಗಳನ್ನು ಮಾಡಿಲ್ಲ. ಪೊಲೀಸರು ಯಾವುದೇ ಕ್ಷಣದಲ್ಲಾದರೂ ಬಂಧಿಸಬಹುದೆಂಬ ಆತಂಕ ಇದೆ. ಯಾವುದೇ ತಪ್ಪಿಲ್ಲದೆ ಬಂಧನವಾದರೆ ಸಂಪೂರ್ಣ ನನ್ನ ಪ್ರ ತಿಷ್ಠೆಗೆ ಧಕ್ಕೆಯಾಗುತ್ತದೆ. ಅದ್ದರಿಂದ ನ್ಯಾಯಾಲಯ ವಿಧಿಸುವ ಷರತ್ತುಗಳಿಗೆ ಒಳಪಟ್ಟು ನನಗೆ ಮಧ್ಯಂತರ ಜಾಮೀನು ಮಂಜೂರು ಮಾಡಬೇಕೆಂದು ರಕ್ಷಿತ್ ಅವರು ತಮ್ಮ ವಕೀಲರಾದ ಮಯೂರ್ ಕೀರ್ತಿ ಅವರ ಮೂಲಕ ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ.
ಡಾ. ಪ್ರದೀಪ್ ಪರ ವಕೀಲರಿಂದ ಆಕ್ಷೇಪಣೆ:
ರಕ್ಷಿತ್ ಬಡೆಕಾವುಗುತ್ತು ಅವರು ನಿರೀಕ್ಷಣಾ ಜಾಮೀನು ಕೋರಿ ಸಲ್ಲಿಸಿರುವ ಅರ್ಜಿಗೆ ಸಂತ್ರಸ್ತ ಡಾ. ಪ್ರದೀಪ್ ಎ. ಅವರ ಪರ ವಕೀಲರಾದ ಬಿ.ಕೆ.ಧನಂಜಯ ರಾವ್, ಸುಬ್ರಹ್ಮಣ್ಯ ಕುಮಾರ್ ಅಗರ್ತ ಮತ್ತು ಜಿನೇಂದ್ರ ಜೈನ್ ಅವರು ನ್ಯಾಯಾಲಯಕ್ಕೆ ಹಾಜರಾಗಿ ರಕ್ಷಿತ್ ಅವರ ನಿರೀಕ್ಷಣಾ ಜಾಮೀನು ಅರ್ಜಿಗೆ ಆಕ್ಷೇಪ ಸಲ್ಲಿಸಿದ್ದಾರೆ. ಆಕ್ಷೇಪಣಾ ಅರ್ಜಿ ಸ್ವೀಕರಿಸಿರುವ ನ್ಯಾಯಾಧೀಶರು ಮುಂದಿನ ವಿಚಾರಣೆಯನ್ನು ಅ.27ಕ್ಕೆ ಮುಂದೂಡಿದ್ದಾರೆ.
ಈ ಪ್ರಕರಣದಲ್ಲಿ ಪ್ರಾಸಿಕ್ಯೂಶನ್ ಪರ ನ್ಯಾಯಾಲಯಕ್ಕೆ ಹಾಜರಾಗಿದ್ದ ಸರಕಾರಿ ಅಭಿಯೋಜಕ ಮೋಹನ್ ಕುಮಾರ್ ಅವರು ಕೂಡ ರಕ್ಷಿತ್ ಅವರ ನಿರೀಕ್ಷಣಾ ಜಾಮೀನಿಗೆ ಆಕ್ಷೇಪಣೆ ಸಲ್ಲಿಸಿದ್ದಾರೆ ಎಂದು ತಿಳಿದು ಬಂದಿದೆ.













