ಬೆಳ್ತಂಗಡಿ: ಶಿಕ್ಷಣ ಹಾಗೂ ಸಾಮಾಜಿಕ ಸೇವಾ ಕ್ಷೇತ್ರದಲ್ಲಿ ಸುಮಾರು 17 ವರ್ಷಗಳ ಅನುಭವ ಹೊಂದಿರುವ ಸವಣಾಲು ನಿವಾಸಿ ಎಂ.ಜಿ. ತಲ್ಹತ್ ಅವರು, ಬೆಳ್ತಂಗಡಿಯ ಪ್ರತಿಷ್ಠಿತ ಸಮಾಜ ಸೇವಾ ಸಂಘಟನೆಯಾದ ಜಂಯಿಯತುಲ್ ಫಲಾಹ್‌ನ ಬೆಳ್ತಂಗಡಿ ಘಟಕಕ್ಕೆ ಅಧಿಕೃತವಾಗಿ ಸೇರ್ಪಡೆಗೊಂಡಿದ್ದಾರೆ.
ಅ.24ರಂದು ಜಂಯಿಯತುಲ್ ಫಲಾಹ್ ಬೆಳ್ತಂಗಡಿ ಘಟಕದ ವತಿಯಿಂದ ಸಂಸ್ಥೆಯ ಕಟ್ಟಡದ ಸಭಾಂಗಣದಲ್ಲಿ ನಡೆದ ವಿದ್ಯಾರ್ಥಿವೇತನ ವಿತರಣಾ ಕಾರ್ಯಕ್ರಮದ ಸಂದರ್ಭದಲ್ಲಿ ಅವರು ಸಂಸ್ಥೆಗೆ ಸೇರ್ಪಡೆಗೊಂಡರು.
ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಹಾಗೂ ಕಲ್ಯಾಣ ಕ್ಷೇತ್ರಗಳಲ್ಲಿ ವಿವಿಧ ಸೇವಾ ಚಟುವಟಿಕೆಗಳ ಮೂಲಕ ಗುರುತಿಸಿಕೊಂಡಿರುವ ಜಂಯಿಯತುಲ್ ಫಲಾಹ್ ಸಂಸ್ಥೆಯ ಸೇವಾ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವ ಆಶಯವನ್ನು ಅವರು ವ್ಯಕ್ತಪಡಿಸಿದರು.
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಸವಣಾಲು ನಿವಾಸಿಯಾದ ಎಂ.ಜಿ. ತಲ್ಹತ್ ಅವರು ಅನುಗ್ರಹ ಎಜುಕೇಶನ್ ಸೋಶಿಯಲ್ ವೆಲ್ಫೇರ್ ಟ್ರಸ್ಟ್ (ರಿ.) ಸಂಸ್ಥೆಯ ಮೂಲಕ ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.ಟ್ರಸ್ಟ್‌ನ ಅಂಗಸಂಸ್ಥೆಯಾದ ಅನುಗ್ರಹ ಟ್ರೈನಿಂಗ್ ಕಾಲೇಜು (ATC) ಅನ್ನು ಬೆಳ್ತಂಗಡಿ ಹಾಗೂ ಮಂಗಳೂರಿನ ಮುಡಿಪುವಿನಲ್ಲಿ ಮುನ್ನಡೆಸುತ್ತಿದ್ದು, ವೃತ್ತಿಪರ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಉದ್ಯೋಗ ಮಾರ್ಗದರ್ಶನ ಹಾಗೂ ವಿದ್ಯಾರ್ಥಿಗಳ ವೃತ್ತಿ ಸಮಾಲೋಚನೆ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಅನುಗ್ರಹ ಜನ ಸೇವಾ ಕೇಂದ್ರದ ಮೂಲಕ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿವಿಧ ಇಲಾಖೆಗಳ ಸೇವೆಗಳು ಮತ್ತು ಜನಪರ ಕಲ್ಯಾಣ ಯೋಜನೆಗಳ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡುವುದು ಹಾಗೂ ನಾಗರಿಕ ಸೇವೆಗಳನ್ನು ಒದಗಿಸುವ ಕಾರ್ಯದಲ್ಲಿಯೂ ಅವರು ತೊಡಗಿಸಿಕೊಂಡಿದ್ದಾರೆ.
ಸಾಮಾಜಿಕ ಹಾಗೂ ಸಂಘಟನಾ ಕ್ಷೇತ್ರದಲ್ಲಿಯೂ ಅನುಭವ ಹೊಂದಿರುವ ಅವರು, ಬೆಳ್ತಂಗಡಿ ತಾಲೂಕು ವರ್ತಕರ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಹಾಗೂ ಜೆಸಿಐ ಉಜಿರೆ ಸಿಟಿ ಯ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ.
ಈ ಹಿಂದೆ ಅಳದಂಗಡಿ ಬ್ಲಾಕ್ ಕರ್ನಾಟಕ ಮುಸ್ಲಿಂ ಜಮಾಅತ್‌ನ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿರುವ ಅವರು, ಪ್ರಸ್ತುತ ಸವಣಾಲು ಮಸೀದಿ ಜಮಾಅತ್ ಕಮಿಟಿಯ ಪ್ರಧಾನ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.
ಬೆಳ್ತಂಗಡಿ ತಾಲೂಕಿನಲ್ಲಿ ಉನ್ನತ ಶಿಕ್ಷಣದ ಅವಕಾಶಗಳನ್ನು ವಿಸ್ತರಿಸುವುದು, ಗ್ರಾಮೀಣ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಒದಗಿಸುವುದು ಹಾಗೂ ಉದ್ಯೋಗಮುಖಿ ವೃತ್ತಿಪರ ತರಬೇತಿ ಮತ್ತು ಕೌಶಲ್ಯಾಭಿವೃದ್ಧಿಗೆ ಹೆಚ್ಚಿನ ಪ್ರೋತ್ಸಾಹ ನೀಡುವುದು ಅವರ ಪ್ರಮುಖ ಗುರಿಯಾಗಿದೆ.
ಜಂಯಿಯತುಲ್ ಫಲಾಹ್ ಸಂಸ್ಥೆಯ ಶೈಕ್ಷಣಿಕ, ಸಾಮಾಜಿಕ, ಆರೋಗ್ಯ, ಕಲ್ಯಾಣ ಹಾಗೂ ಸಮುದಾಯ ಅಭಿವೃದ್ಧಿ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವ ಮೂಲಕ ವಿದ್ಯಾರ್ಥಿಗಳು ಮತ್ತು ಯುವಜನರಿಗೆ ಮಾರ್ಗದರ್ಶನ, ವೃತ್ತಿ ಸಮಾಲೋಚನೆ, ಪ್ರೇರಣಾ ತರಬೇತಿ, ಕೌಶಲ್ಯಾಭಿವೃದ್ಧಿ ಹಾಗೂ ಸರ್ಕಾರಿ ಕಲ್ಯಾಣ ಯೋಜನೆಗಳ ಕುರಿತು ಜನಜಾಗೃತಿ ಮೂಡಿಸುವ ಕಾರ್ಯಗಳಿಗೆ ತಮ್ಮ ಅನುಭವವನ್ನು ಬಳಸಿಕೊಳ್ಳುವ ಆಶಯವನ್ನು ಎಂ.ಜಿ. ತಲ್ಹತ್ ಸವಣಾಲು ಇವರು ವ್ಯಕ್ತಪಡಿಸಿದ್ದಾರೆ.
ಈ ಸಂದರ್ಭದಲ್ಲಿ ಜಂಯಿಯತುಲ್ ಫಲಾಹ್ ಬೆಳ್ತಂಗಡಿ ಘಟಕದ ಅಧ್ಯಕ್ಷ ಖಾಲಿದ್ ಪುಲಾಬೆ, ಕಾರ್ಯದರ್ಶಿ, ಕೋಶಾಧಿಕಾರಿ, ಹಿರಿಯ ಸದಸ್ಯರು ಹಾಗೂ ಮಂಡಳಿಯ ಮುಖಂಡರ ಮಾರ್ಗದರ್ಶನ ಮತ್ತು ಸಹಕಾರದೊಂದಿಗೆ ಸಂಸ್ಥೆಯ ವಿವಿಧ ಸೇವಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಸಮಾಜದ ಶೈಕ್ಷಣಿಕ ಮತ್ತು ಸಾಮಾಜಿಕ ಅಭಿವೃದ್ಧಿಗೆ ಅರ್ಥಪೂರ್ಣ ಕೊಡುಗೆ ನೀಡುವ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು.
“ಶಿಕ್ಷಣದ ಮೂಲಕ ಸಬಲೀಕರಣ, ಸೇವೆಯ ಮೂಲಕ ಸಮಾಜದ ಅಭಿವೃದ್ಧಿ” ಎಂಬ ಆಶಯದೊಂದಿಗೆ ಸಮಾಜದ ಸರ್ವತೋಮುಖ ಪ್ರಗತಿಗೆ ಕೈಜೋಡಿಸುವುದು ತಮ್ಮ ಮುಖ್ಯ ಉದ್ದೇಶವಾಗಿದೆ ಎಂದು ಎಂ.ಜಿ. ತಲ್ಹತ್ ಸವಣಾಲು ತಿಳಿಸಿದ್ದಾರೆ.













