25.2 C
ಪುತ್ತೂರು, ಬೆಳ್ತಂಗಡಿ
October 26, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಎಸ್‌ಡಿಎಂ ಪಾಲಿಟೆಕ್ನಿಕ್‌ನಲ್ಲಿ ಸರ್ ಮಿರ್ಜಾ ಇಸ್ಮಾಯಿಲ್ ಜನ್ಮದಿನಾಚರಣೆ

ಉಜಿರೆ: ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪಾಲಿಟೆಕ್ನಿಕ್‌ನಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಮೈಸೂರು ಸಂಸ್ಥಾನದ ಮಾಜಿ ದಿವಾನ ಸರ್ ಮಿರ್ಜಾ ಇಸ್ಮಾಯಿಲ್ ಅವರ ಜನ್ಮದಿನಾಚರಣೆಯನ್ನು ಆಚರಿಸಲಾಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪಾಲಿಟೆಕ್ನಿಕ್‌ನ ಪ್ರಾಂಶುಪಾಲರಾದ ಸಂತೋಷ್ ಅವರು ಮಾತನಾಡಿ, ವಿದ್ಯಾರ್ಥಿಗಳು ಇತಿಹಾಸದ ಕುರಿತು ತಿಳಿದುಕೊಳ್ಳುವುದು ಅತ್ಯಗತ್ಯ ಎಂದರು. ಇಂದಿನ ಮೊಬೈಲ್ ಯುಗದಲ್ಲಿ ಇತಿಹಾಸದ ಮಹತ್ವದ ವ್ಯಕ್ತಿಗಳ ಜೀವನ, ಸಾಧನೆ ಹಾಗೂ ಸಮಾಜಕ್ಕೆ ಅವರು ನೀಡಿದ ಕೊಡುಗೆಗಳನ್ನು ಅರಿಯುವುದು ಮುಖ್ಯ. ಇಂತಹ ಕಾರ್ಯಕ್ರಮಗಳು ವಿದ್ಯಾರ್ಥಿಗಳಲ್ಲಿ ಜ್ಞಾನಾರ್ಜನೆಯ ಆಸಕ್ತಿಯನ್ನು ಬೆಳೆಸುವುದರ ಜೊತೆಗೆ, ಮಹನೀಯರ ಸಾಧನೆಗಳಿಂದ ಪ್ರೇರಣೆ ಪಡೆಯಲು ಸಹಕಾರಿಯಾಗುತ್ತವೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಕಲಾನಿಕಾಯದ ಡೀನ್ ಹಾಗೂ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ಬೋಜಮ್ಮ ಕೆ. ಎನ್. ಅವರು, ಸರ್ ಮಿರ್ಜಾ ಇಸ್ಮಾಯಿಲ್ ಅವರ ಆಡಳಿತಾತ್ಮಕ ದೂರದೃಷ್ಟಿ ಮತ್ತು ಮೈಸೂರು ಸಂಸ್ಥಾನದ ಅಭಿವೃದ್ಧಿಗೆ ಅವರು ನೀಡಿದ ಕೊಡುಗೆಗಳನ್ನು ಸ್ಮರಿಸಿದರು. ಮೈಸೂರಿನ ಸೌಂದರ್ಯೀಕರಣ, ಕೈಗಾರಿಕಾ ಬೆಳವಣಿಗೆ ಹಾಗೂ ಮೂಲಸೌಕರ್ಯಗಳ ಅಭಿವೃದ್ಧಿಯಲ್ಲಿ ಅವರ ಪಾತ್ರ ಮಹತ್ವದ್ದಾಗಿದೆ. ತಮ್ಮ ಆಡಳಿತದ ಮೂಲಕ ಮೈಸೂರು ಸಂಸ್ಥಾನದ ಪ್ರಗತಿಗೆ ಹೊಸ ಆಯಾಮ ನೀಡಿದ ಅವರ ಸಾಧನೆಗಳು ಇಂದಿಗೂ ಸ್ಮರಣೀಯವಾಗಿವೆ ಎಂದು ಹೇಳಿದರು.

ಬೆಳ್ತಂಗಡಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಿ. ಯದುಪತಿ ಗೌಡ ಅವರು ಮಾತನಾಡಿ, ಇತಿಹಾಸದ ಸ್ಮರಣೆ ಎಂದರೆ ಗತಕಾಲದ ಘಟನೆಗಳನ್ನು ನೆನಪಿಸಿಕೊಳ್ಳುವುದಷ್ಟೇ ಅಲ್ಲ, ಮಹನೀಯರ ಸಾಧನೆ ಹಾಗೂ ಆದರ್ಶಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವುದೂ ಆಗಿದೆ ಎಂದರು. ಈ ನಿಟ್ಟಿನಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅರ್ಥಪೂರ್ಣ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದು, ಇಂತಹ ಪ್ರಯತ್ನಗಳು ವಿದ್ಯಾರ್ಥಿಗಳಲ್ಲಿ ಐತಿಹಾಸಿಕ ಪ್ರಜ್ಞೆ ಹಾಗೂ ಸಾಹಿತ್ಯಿಕ ಅಭಿರುಚಿಯನ್ನು ಬೆಳೆಸಲು ಸಹಕಾರಿಯಾಗುತ್ತವೆ ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಎಂ. ಪಿ. ಶ್ರೀನಾಥ್ ಅವರು ಮಾತನಾಡಿ, ಮಹನೀಯರ ಜೀವನ ಮತ್ತು ಸಾಧನೆಗಳು ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಬೇಕು ಎಂದರು. ಕನ್ನಡ ಸಾಹಿತ್ಯ ಹಾಗೂ ಸಾಂಸ್ಕೃತಿಕ ಕ್ಷೇತ್ರಕ್ಕೆ ಅನೇಕ ಮಹನೀಯರು ನೀಡಿದ ಕೊಡುಗೆಗಳನ್ನು ಸ್ಮರಿಸಿದ ಅವರು, ವಿಶ್ವೇಶ್ವರಯ್ಯ ಮತ್ತು ಮೈಸೂರು ಒಡೆಯರುಗಳ ಸಾಧನೆಯ ಕಾರ್ಯಗಳು ನಾಡಿನ ಅಭಿವೃದ್ಧಿಯ ಇತಿಹಾಸದಲ್ಲಿ ಮಹತ್ವದ ಸ್ಥಾನ ಪಡೆದಿವೆ ಎಂದು ಹೇಳಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಮೂಲಕ ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ ಹಾಗೂ ನಾಡಿನ ಇತಿಹಾಸದ ಅರಿವನ್ನು ವಿದ್ಯಾರ್ಥಿಗಳಲ್ಲಿ ಮೂಡಿಸುವುದು ಅಗತ್ಯವೆಂದು ಅಭಿಪ್ರಾಯಪಟ್ಟರು.

ಮಹನೀಯರ ಜೀವನ ಸಾಧನೆಗಳನ್ನು ಸ್ಮರಿಸುವುದರ ಜೊತೆಗೆ ವಿದ್ಯಾರ್ಥಿಗಳಲ್ಲಿ ಇತಿಹಾಸದ ಅರಿವು ಹಾಗೂ ಕನ್ನಡ ಸಾಹಿತ್ಯದ ಅಭಿರುಚಿಯನ್ನು ಬೆಳೆಸುವ ಉದ್ದೇಶದಿಂದ ಕಾರ್ಯಕ್ರಮದ ಮಹತ್ವ ತಿಳಿಸಿದರು.ಕಚೇರಿಯ ವ್ಯವಸ್ಥಾಪಕರಾದ ಚಂದ್ರನಾಥ ಜೈನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಗಣ್ಯರು,ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದರು.

ನಮಿತಾ ಶೆಟ್ಟಿ ಸ್ವಾಗತಿಸಿದರು. ಉಪನ್ಯಾಸಕ ನಿಖಿತ್ ಉಪನ್ಯಾಸ ನೀಡಿದ ಡಾ. ಬೋಜಮ್ಮ ಕೆ.ಎನ್.ಅವರ ಪರಿಚಯ ಮಾಡಿಕೊಟ್ಟರು. ಸಂಪತ್ ಕುಮಾರ್ ಅವರು ಕಾರ್ಯಕ್ರಮವನ್ನು ನಿರೂಪಿಸಿ, ವಂದನಾರ್ಪಣೆ ಸಲ್ಲಿಸಿದರು.

Related posts

ಬಂಗಾಡಿ ಶಾಲೆಯ ಶಿಕ್ಷಕ ಅಮಿತಾನಂದ ಹೆಗ್ಡೆ ರವರಿಗೆ ರಾಷ್ಟ್ರಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ

Suddi Udaya

ಭೂ ಸೇನೆಯಿಂದ ನಿವೃತ್ತಿಗೊಂಡ ಪದ್ಮುಂಜ ಗಣೇಶ್ ಶೆಟ್ಟಿ ರವರಿಗೆ ಪದ್ಮುಂಜ ವಿಶ್ವ ಹಿಂದೂ ಪರಿಷತ್ ಬಜರಂಗದಳ ಘಟಕದ ವತಿಯಿಂದ ಸನ್ಮಾನ

Suddi Udaya

ಉಜಿರೆ ಎಸ್ ಡಿ ಎಂ ಪ.ಪೂ. ಕಾಲೇಜಿನ ವಿದ್ಯಾರ್ಥಿನಿ ಸಿಂಪನ ರಾಷ್ಟ್ರಮಟ್ಟದ ಅಥ್ಲೆಟಿಕ್ ಕ್ರೀಡಾಕೂಟಕ್ಕೆ ಆಯ್ಕೆ

Suddi Udaya

ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆ: ಸಾಮೂಹಿಕ ಶ್ರೀ ಗೌರಿ ಪೂಜೆ-ಶ್ರೀ ಗಣೇಶೋತ್ಸವ ಸಮಿತಿ ರಚನೆ

Suddi Udaya

ಬೆಳಾಲು ಪ್ರೌಢಶಾಲೆಯಲ್ಲಿ ತ್ರೋಬಾಲ್ ಪಂದ್ಯಾಟ

Suddi Udaya

ಗುರುವಾಯನಕೆರೆ ಬಂಟರ ಭವನದಲ್ಲಿ ನಡೆದ ಪ್ರಾಂತ್ಯಾಧ್ಯಕ್ಷರ ಅಧಿಕೃತ ಭೇಟಿ: ಕಾಪಿನಡ್ಕ ಸ ಕಿ ಪ್ರಾ ಶಾಲೆಗೆ ಕಂಪ್ಯೂಟರ್ ಉಪಕರಣಗಳ ಹಸ್ತಾಂತರ

Suddi Udaya
error: Content is protected !!