ಬೆಳ್ತಂಗಡಿ: 2026-27ನೇ ಶೈಕ್ಷಣಿಕ ವರ್ಷದ ಎಸ್ಸೆಸ್ಸೆಲ್ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆ-1 ಮತ್ತು ಪರೀಕ್ಷೆ-2ರ ಅಂತಿಮ ವೇಳಾಪಟ್ಟಿಯನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಪ್ರಕಟಿಸಿದೆ.
ಪರಿಷ್ಕೃತ ವೇಳಾಪಟ್ಟಿಯ ಪ್ರಕಾರ, ದ್ವಿತೀಯ ಪಿಯುಸಿ ಪರೀಕ್ಷೆ-1 ಫೆಬ್ರವರಿ 27ರಿಂದ ಮಾರ್ಚ್ 18ರವರೆಗೆ ನಡೆಯಲಿದ್ದು, ಎಸ್ಸೆಸ್ಸೆಲ್ಸಿ ಪರೀಕ್ಷೆ-1 ಮಾರ್ಚ್ 22ರಿಂದ ಏಪ್ರಿಲ್ 5ರವರೆಗೆ ನಡೆಯಲಿದೆ. ಈ ಹಿಂದೆ ಪ್ರಕಟಿಸಿದ್ದ ತಾತ್ಕಾಲಿಕ ವೇಳಾಪಟ್ಟಿಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಿದ್ದ ಮಂಡಳಿ, ಇದೀಗ ಅಂತಿಮ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ.
ದ್ವಿತೀಯ ಪಿಯುಸಿ ಪರೀಕ್ಷೆ-2 ಮೇ 3ರಿಂದ ಮೇ 15ರವರೆಗೆ ನಡೆಯಲಿದ್ದು, ಎಸ್ಸೆಸ್ಸೆಲ್ಸಿ ಪರೀಕ್ಷೆ-2 ಮೇ 24ರಿಂದ ಮೇ 31ರವರೆಗೆ ನಡೆಯಲಿದೆ. ಎಸ್ಸೆಸ್ಸೆಲ್ಸಿ ಮುಖ್ಯ ವಿಷಯಗಳ ಪರೀಕ್ಷೆಗಳು ಏಪ್ರಿಲ್ 3ಕ್ಕೆ ಮುಕ್ತಾಯಗೊಳ್ಳಲಿವೆ.
ದ್ವಿತೀಯ ಪಿಯುಸಿ ಪರೀಕ್ಷೆ-1ರ ಪ್ರಮುಖ ವೇಳಾಪಟ್ಟಿ
ಫೆಬ್ರವರಿ 27ರಂದು ಕನ್ನಡ, ಮಾರ್ಚ್ 1ರಂದು ಇಂಗ್ಲಿಷ್, ಮಾರ್ಚ್ 4ರಂದು ಭೌತಶಾಸ್ತ್ರ ಮತ್ತು ಸಮಾಜಶಾಸ್ತ್ರ, ಮಾರ್ಚ್ 5ರಂದು ಲೆಕ್ಕಶಾಸ್ತ್ರ, ಮಾರ್ಚ್ 8ರಂದು ರಸಾಯನಶಾಸ್ತ್ರ, ಮಾರ್ಚ್ 9ರಂದು ಅರ್ಥಶಾಸ್ತ್ರ, ಮಾರ್ಚ್ 12ರಂದು ಗಣಿತ ಮತ್ತು ವ್ಯವಹಾರ ಅಧ್ಯಯನ, ಮಾರ್ಚ್ 15ರಂದು ಜೀವಶಾಸ್ತ್ರ, ರಾಜ್ಯಶಾಸ್ತ್ರ ಹಾಗೂ ಗಣಕ ವಿಜ್ಞಾನ, ಮಾರ್ಚ್ 17ರಂದು ಹಿಂದಿ ಮತ್ತು ಮಾರ್ಚ್ 18ರಂದು ಇತಿಹಾಸ ಪರೀಕ್ಷೆಗಳು ನಡೆಯಲಿವೆ.
ದ್ವಿತೀಯ ಪಿಯುಸಿ ಪರೀಕ್ಷೆ-2ರ ವೇಳಾಪಟ್ಟಿ
ದ್ವಿತೀಯ ಪಿಯುಸಿ ಪರೀಕ್ಷೆ-2 ಮೇ 3ರಂದು ಕನ್ನಡ ಮತ್ತು ಅರೇಬಿಕ್ ಪರೀಕ್ಷೆಗಳೊಂದಿಗೆ ಆರಂಭವಾಗಲಿದೆ. ಮೇ 4ರಂದು ಇಂಗ್ಲಿಷ್, ಮೇ 5ರಂದು ಭೂಗೋಳಶಾಸ್ತ್ರ ಮತ್ತು ಮನೋವಿಜ್ಞಾನ, ಮೇ 6ರಂದು ಸಮಾಜಶಾಸ್ತ್ರ ಮತ್ತು ಭೌತಶಾಸ್ತ್ರ, ಮೇ 7ರಂದು ಲೆಕ್ಕಶಾಸ್ತ್ರ, ಮೇ 8ರಂದು ರಸಾಯನಶಾಸ್ತ್ರ, ಶಿಕ್ಷಣಶಾಸ್ತ್ರ ಮತ್ತು ಮೂಲ ಗಣಿತ, ಮೇ 10ರಂದು ಅರ್ಥಶಾಸ್ತ್ರ ಮತ್ತು ಭೂವಿಜ್ಞಾನ ಹಾಗೂ ಮೇ 11ರಂದು ಹಿಂದಿ ಪರೀಕ್ಷೆಗಳು ನಡೆಯಲಿವೆ.
ಉಳಿದ ಭಾಷಾ ವಿಷಯಗಳು, ಗಣಿತ, ವ್ಯವಹಾರ ಅಧ್ಯಯನ, ಐಚ್ಛಿಕ ಕನ್ನಡ, ತರ್ಕಶಾಸ್ತ್ರ, ಗೃಹವಿಜ್ಞಾನ ಮತ್ತು ವೃತ್ತಿಪರ ವಿಷಯಗಳ ಪರೀಕ್ಷೆಗಳು ಮೇ 15ರೊಳಗೆ ಪೂರ್ಣಗೊಳ್ಳಲಿವೆ.
ಎಸ್‌ಎಸ್‌ಎಲ್‌ಸಿ ಪರೀಕ್ಷಾ ವೇಳಾಪಟ್ಟಿ: ಮಾರ್ಚ್ 22-ಪ್ರಥಮ ಭಾಷೆಗಳಾದ ಕನ್ನಡ, ತೆಲುಗು, ಹಿಂದಿ, ಮರಾಠಿ, ತಮಿಳು, ಉರ್ದು, ಇಂಗ್ಲಿಷ್ (ಎನ್‌ಸಿಇಆರ್‌ಟಿ), ಸಂಸ್ಕೃತ, ಮಾರ್ಚ್ 25-ವಿಜ್ಞಾನ, ರಾಜ್ಯಶಾಸ್ತ್ರ, ಹಿಂದೂಸ್ತಾನಿ, ಕರ್ನಾಟಕ ಸಂಗೀತ, ಮಾರ್ಚ್ 27-ದ್ವಿತೀಯ ಭಾಷೆಗಳಾದ ಇಂಗ್ಲಿಷ್, ಕನ್ನಡ, ಮಾರ್ಚ್ 30-ಗಣಿತ, ಸಮಾಜಶಾಸ್ತ್ರ, ಏಪ್ರಿಲ್ 2-ತೃತೀಯ ಭಾಷೆಗಳಾದ ಹಿಂದಿ, ಕನ್ನಡ, ಇಂಗ್ಲಿಷ್, ಅರೇಬಿಕ್, ಪರ್ಷಿಯನ್, ಉರ್ದು, ಸಂಸ್ಕೃತ, ಕೊಂಕಣಿ, ತುಳು, ಎನ್‌ಎಸ್‌ಕ್ಯೂಎಫ್ ವಿಷಯಗಳು, ಏಪ್ರಿಲ್ 3-ಅರ್ಥಶಾಸ್ತ್ರ, ಎಂಜಿನಿಯರಿಂಗ್ ವಿಷಯಗಳು, ಏಪ್ರಿಲ್ 5-ಸಮಾಜ ವಿಜ್ಞಾನ
ಅಂತಿಮ ವೇಳಾಪಟ್ಟಿಯನ್ನು ಎಲ್ಲ ಪ್ರೌಢಶಾಲೆಗಳು ಮತ್ತು ಪದವಿಪೂರ್ವ ಕಾಲೇಜುಗಳ ಸೂಚನಾ ಫಲಕಗಳಲ್ಲಿ ಪ್ರಕಟಿಸಿ, ವಿದ್ಯಾರ್ಥಿಗಳಿಗೆ ಮಾಹಿತಿ ನೀಡುವಂತೆ ಮಂಡಳಿ ಸೂಚಿಸಿದೆ.
ವಿದ್ಯಾರ್ಥಿಗಳು ವಿಷಯವಾರು ಪರೀಕ್ಷಾ ದಿನಾಂಕ, ಸಮಯ ಹಾಗೂ ಇತರ ಮಾರ್ಗಸೂಚಿಗಳಿಗಾಗಿ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಿರುವ ವೇಳಾಪಟ್ಟಿಯನ್ನು ಪರಿಶೀಲಿಸಬೇಕು.











