29.9 C
ಪುತ್ತೂರು, ಬೆಳ್ತಂಗಡಿ
October 30, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಖಾಸಗಿ ಸಾರಿಗೆ ಕಾರ್ಮಿಕರ 12 ಬೇಡಿಕೆಗಳ ಈಡೇರಿಕೆಗೆ ಮಜ್ದೂರ್ ಮಹಾಸಂಘದ ವತಿಯಿಂದ ಕೇಂದ್ರ ಸರ್ಕಾರಕ್ಕೆ ಮನವಿ

ಮಂಗಳೂರು: ಖಾಸಗಿ ಸಾರಿಗೆ ಕಾರ್ಮಿಕರು ಹಾಗೂ ಆಟೋರಿಕ್ಷಾ ಚಾಲಕರು ಎದುರಿಸುತ್ತಿರುವ ವಿವಿಧ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವಂತೆ ಆಗ್ರಹಿಸಿ ಭಾರತೀಯ ಮಜ್ದೂರ್ ಸಂಘದ ಅಂಗಸಂಸ್ಥೆಯಾದ ಭಾರತೀಯ ಖಾಸಗಿ ಸಾರಿಗೆ ಮಜ್ದೂರ್ ಮಹಾಸಂಘದ ವತಿಯಿಂದ ದಕ್ಷಿಣ ಕನ್ನಡ ಅಪರ ಜಿಲ್ಲಾಧಿಕಾರಿ ರಾಜು ಕೆ. ಅವರ ಮೂಲಕ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರಿಗೆ ಮನವಿ ಸಲ್ಲಿಸಲಾಯಿತು.

ದೇಶದಾದ್ಯಂತ ಖಾಸಗಿ ಸಾರಿಗೆ ಕ್ಷೇತ್ರದಲ್ಲಿ ದುಡಿಯುತ್ತಿರುವ ಆಟೋರಿಕ್ಷಾ ಚಾಲಕರು, ಟ್ಯಾಕ್ಸಿ ಚಾಲಕರು ಹಾಗೂ ಇತರ ಸಾರಿಗೆ ಕಾರ್ಮಿಕರ ಹಿತದೃಷ್ಟಿಯಿಂದ ಒಟ್ಟು 12 ಪ್ರಮುಖ ಬೇಡಿಕೆಗಳನ್ನು ಮನವಿಯಲ್ಲಿ ಮಂಡಿಸಲಾಯಿತು.

ಖಾಸಗಿ ಸಾರಿಗೆ ಕಾರ್ಮಿಕರಿಗಾಗಿ ಪ್ರತ್ಯೇಕ ರಾಷ್ಟ್ರೀಯ ಕಲ್ಯಾಣ ಮಂಡಳಿ ಸ್ಥಾಪನೆ, Ola, Uber, Rapido ಮುಂತಾದ ಆನ್‌ಲೈನ್ ವೇದಿಕೆಗಳಲ್ಲಿ ಬಿಳಿ ನಂಬರ್ ಪ್ಲೇಟ್ ಹೊಂದಿರುವ ಖಾಸಗಿ ವಾಹನಗಳ ವಾಣಿಜ್ಯ ಬಳಕೆಗೆ ನಿಯಂತ್ರಣ, ವಾಹನ ವಿಮಾ ಪ್ರೀಮಿಯಂನಲ್ಲಿ ಶೇ. 50ರಷ್ಟು ಸಹಾಯಧನ, ಅರ್ಹ ವಾಹನಗಳಿಗೆ ವಾರ್ಷಿಕ FASTag ಶುಲ್ಕ ₹3,500 ನಿಗದಿ ಹಾಗೂ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಚಾಲಕರಿಗೆ ವಿಶ್ರಾಂತಿ ಕೊಠಡಿ, ಕುಡಿಯುವ ನೀರು, ಶೌಚಾಲಯ ಮತ್ತು ವೈದ್ಯಕೀಯ ಸೌಲಭ್ಯ ಕಲ್ಪಿಸುವಂತೆ ಆಗ್ರಹಿಸಲಾಗಿದೆ.

ಅಲ್ಲದೆ, ಮೂರು ಚಕ್ರದ ಆಟೋರಿಕ್ಷಾ ಚಾಲಕರ ಚಾಲನಾ ಪರವಾನಗಿ ನವೀಕರಣ ಪ್ರಕ್ರಿಯೆ ಸರಳೀಕರಣ, ಸಾರಿಗೆ ಕಾರ್ಮಿಕರ ಮೇಲಿನ ಅಕ್ರಮ ವಸೂಲಿ ಮತ್ತು ಕಿರುಕುಳ ತಡೆ, ಖಾಸಗಿ ಸಾರಿಗೆ ಚಾಲಕರಿಗೆ ಕನಿಷ್ಠ ಮಾಸಿಕ ವೇತನ ₹30,000 ನಿಗದಿ, ಫೆಬ್ರವರಿ 6 ಅನ್ನು ರಾಷ್ಟ್ರೀಯ ಚಾಲಕರ ದಿನವನ್ನಾಗಿ ಘೋಷಿಸುವುದು, ಅರ್ಹ ಹೆದ್ದಾರಿ ಚಾಲಕರಿಗೆ ಅಂಚೆ ಮತದಾನದ ಸೌಲಭ್ಯ ಹಾಗೂ ಅಂತರರಾಜ್ಯ ವಾಹನಗಳಿಗೆ ಏಕರೂಪದ ರಸ್ತೆ ತೆರಿಗೆ ನೀತಿ ಜಾರಿಗೆ ತರಬೇಕೆಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

ಅಪಘಾತದಲ್ಲಿ ಮೃತಪಟ್ಟ ಚಾಲಕರ ಕುಟುಂಬಕ್ಕೆ ರೂ.20 ಲಕ್ಷ ಹಾಗೂ ಸಹಜ ಕಾರಣಗಳಿಂದ ಮೃತಪಟ್ಟ ಚಾಲಕರ ಕುಟುಂಬಕ್ಕೆ ರೂ.10 ಲಕ್ಷ ಆರ್ಥಿಕ ನೆರವು ನೀಡುವಂತೆ ಸಹ ಮನವಿ ಸಲ್ಲಿಸಲಾಗಿದೆ.

ಖಾಸಗಿ ಸಾರಿಗೆ ಕಾರ್ಮಿಕರು ದೇಶದ ಸಾರಿಗೆ ವ್ಯವಸ್ಥೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದು, ಅವರ ಜೀವನೋಪಾಯ, ಆರ್ಥಿಕ ಭದ್ರತೆ ಮತ್ತು ಕುಟುಂಬದ ಭವಿಷ್ಯವನ್ನು ರಕ್ಷಿಸುವುದು ಸರ್ಕಾರದ ಆದ್ಯತೆಯಾಗಬೇಕು. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಮನವಿಯಲ್ಲಿರುವ ಬೇಡಿಕೆಗಳನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಂಘದ ಮುಖಂಡರು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಭಾರತೀಯ ಮಜ್ದೂರ್ ಸಂಘದ ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷ ಅನಿಲ್ ಕುಮಾರ್ ಯು., ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗೋಪಾಲ ಕೃಷ್ಣ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ವಸಂತ ಕುಮಾರ್ ಮನಿಹಳ್ಳ, ಜಿಲ್ಲಾ ಉಪಾಧ್ಯಕ್ಷರಾದ ರೋಹಿತಾಶ್ವ ಮತ್ತು ನಾರಾಯಣ ಪೂಜಾರಿ, ಪ್ರಮುಖರಾದ ಹೇಮಂತ್ ಕುಮಾರ್ ಪುತ್ತೂರು, ಸತೀಶ್ ಬಂಡಾರಿ ಬೆಟ್ಟು ಬಂಟ್ವಾಳ, ಶ್ರೀಕಾಂತ್ ಬಂಟ್ವಾಳ, ದಿನೇಶ್ ಮೂಲ್ಯ ಬಂಟ್ವಾಳ, ಉಮಾಶಂಕರ್ ಬಂಟ್ವಾಳ, ಸತೀಶ್ ಕುಮಾರ್ ಬಂಟ್ವಾಳ, ರ್ಉಮೇಶ್ ದೇವಾಡಿಗ ಇಡ್ಯಾ ಸುರತ್ಕಲ್, ಮತ್ತು ಸುನೀಲ್ ಕುತ್ತಾರು, ಉಳ್ಳಾಲ ಸೇರಿದಂತೆ ಇತರರು ಉಪಸ್ಥಿತರಿದ್ದರು.

Related posts

ಗುರುವಾಯನಕೆರೆ: ಶಕ್ತಿನಗರದಲ್ಲಿ ಚರಂಡಿ ವ್ಯವಸ್ಥೆಯಿಲ್ಲದೆ ರಸ್ತೆಯಲ್ಲೇ ಹರಿದ ನೀರು

Suddi Udaya

ಕುಂಟಿನಿ ಅಲ್-ಬುಖಾರಿ ಜುಮಾ ಮಸ್ಜಿದ್‌ನಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆ

Suddi Udaya

ಜ.14-20: ಅಳದಂಗಡಿ ಶ್ರೀ ಸೋಮನಾಥೇಶ್ವರೀ ದೇವಸ್ಥಾನದ ವರ್ಷಾವಧಿ ಜಾತ್ರೋತ್ಸವ

Suddi Udaya

ಪದ್ಮಂಜ ಸಹಕಾರಿ ಸಂಘದ ರೈತ ಭವನ ಮತ್ತು ರೈತ ಗೋದಾಮು ಕಟ್ಟಡ ಉದ್ಘಾಟನೆ

Suddi Udaya

ಇಂದಬೆಟ್ಟು ವಲಯದ ಭಜನಾ ಮಂಡಳಿಗಳ ಪದಾಧಿಕಾರಿಗಳ ಸಭೆ

Suddi Udaya

ವೇಣೂರು ಸರಕಾರಿ ಜಾಗದಲ್ಲಿ ಚಿರತೆಯ ಮೃತದೇಹ ಪತ್ತೆ

Suddi Udaya
error: Content is protected !!