ಶಿಶಿಲ-ಬೈರಾಪುರ ರಸ್ತೆ ಅಭಿವೃದ್ಧಿಗೆ ಆಗ್ರಹಿಸಿ ನ.2ರಂದು ಅರಸಿನಮಕ್ಕಿಯಲ್ಲಿ ನಡೆಯಲಿರುವ ಬೃಹತ್
ಹಕ್ಕೊತ್ತಾಯ ಸಮಾವೇಶಕ್ಕೆ ಸಂಪೂರ್ಣ ಸಹಕಾರ ಮತ್ತು ಬೆಂಬಲ ನೀಡುವುದಾಗಿ ಕಾಲಭೈರವೇಶ್ವರ ಒಕ್ಕಲಿಗರ
ಗೌಡರ ಕ್ರೆಡಿಟ್ ಸೌಹಾರ್ದ ಸಹಕಾರಿ (ನಿ.) ಅಧ್ಯಕ್ಷ ರಂಜನ್ ಜಿ. ಗೌಡ ತಿಳಿಸಿದ್ದಾರೆ.
ಈ ರಸ್ತೆ ಅಭಿವೃದ್ಧಿಯಾದರೆ ಎರಡೂ ಭಾಗಗಳ 50 ಸಾವಿರಕ್ಕೂ ಹೆಚ್ಚು ಜನರಿಗೆ ಪ್ರಯೋಜನವಾಗಲಿದೆ. ಗ್ರಾಮೀಣ ಜನರ ಸಂಚಾರ, ವಿದ್ಯಾರ್ಥಿಗಳ ಶಿಕ್ಷಣ, ರೈತರ ಕೃಷಿ ಉತ್ಪನ್ನಗಳ ಸಾಗಾಟ ಹಾಗೂ ವ್ಯಾಪಾರ ವಹಿವಾಟಿಗೆ ಅನುಕೂಲವಾಗಲಿದೆ. ಮಲೆನಾಡು ಮತ್ತು ಕರಾವಳಿ ನಡುವಿನ ಸಂಪರ್ಕ ಸುಗಮಗೊಂಡು, ಈ ಭಾಗದ ಆರ್ಥಿಕ ಹಾಗೂ ಸಾಮಾಜಿಕ ಅಭಿವೃದ್ಧಿಗೂ ನೆರವಾಗಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ
ಶಿಶಿಲದ ಶಿಶಿಲೇಶ್ವರ ದೇವಸ್ಥಾನ ಹಾಗೂ ಬೈರಾಪುರದ ನಾಣ್ಯ ಭೈರವೇಶ್ವರ ದೇವಸ್ಥಾನಗಳನ್ನು ಈ ರಸ್ತೆ ಬೆಸೆಯಲಿದೆ. ಉಭಯ ಕ್ಷೇತ್ರಗಳ ನಡುವೆ ಹಿಂದಿನಿಂದಲೂ ಇರುವ ಧಾರ್ಮಿಕ ಹಾಗೂ ಸಾಂಸ್ಕೃತಿಕ ನಂಟು ಮತ್ತಷ್ಟು ಬಲಗೊಳ್ಳಲಿದೆ. ಎರಡೂ ಭಾಗದ ಭಕ್ತರು ದೇವಸ್ಥಾನಗಳ ದರ್ಶನ ಹಾಗೂ ಜಾತ್ರೋತ್ಸವಗಳಲ್ಲಿ ಭಾಗವಹಿಸಲು ಅನುಕೂಲವಾಗುವುದರೊಂದಿಗೆ ಧಾರ್ಮಿಕ ಪ್ರವಾಸೋದ್ಯಮಕ್ಕೂ ಉತ್ತೇಜನ ದೊರೆಯಲಿದೆ ಎಂದು ತಿಳಿಸಿದ್ದಾರೆ.
ಶಿರಾಡಿ ಮತ್ತು ಚಾರ್ಮಾಡಿ ಘಾಟಿ ರಸ್ತೆಗಳಿಗೆ ಪರ್ಯಾಯ ಸಂಪರ್ಕವಾಗಿ ಈ ಮಾರ್ಗ ಮಹತ್ವ ಪಡೆಯಲಿದೆ. ಪ್ರಯಾಣದ ಸಮಯ ಹಾಗೂ ಇಂಧನ ಉಳಿತಾಯಕ್ಕೂ ನೆರವಾಗಲಿದ್ದು, ಸ್ಥಳೀಯರ ಬಹುಕಾಲದ ಬೇಡಿಕೆಯನ್ನು ಸರಕಾರ ಗಂಭೀರವಾಗಿ ಪರಿಗಣಿಸಿ ರಸ್ತೆ ಅಭಿವೃದ್ಧಿಗೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.ಜನಹಿತದ ಈ ಬೇಡಿಕೆಗಾಗಿ ಪಕ್ಷಭೇದ ಮರೆತು ಎಲ್ಲರೂ ಒಗ್ಗಟ್ಟಿನಿಂದ ಕೈಜೋಡಿಸಬೇಕು.
ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಹಕ್ಕೊತ್ತಾಯ ಸಮಾವೇಶದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ರಂಜನ್ ಜಿ. ಗೌಡ ಮನವಿ ಮಾಡಿದ್ದಾರೆ.











