ಮಕ್ಕಳಿಗೆ ಧಾರ್ಮಿಕ ಸಂಸ್ಕಾರ ನೀಡಬೇಕು: ಲಲಿತಕೀರ್ತಿ ಭಟ್ಟಾರಕ ಸ್ವಾಮೀಜಿ

ವೇಣೂರು: ಮಕ್ಕಳಿಗೆ 15ನೇ ವರ್ಷ ಪ್ರಾಯದಲ್ಲೆ ವೃತೋಪದೇಶ ನೀಡಿ, ಜೈನಧರ್ಮದ ಮರ್ಮವನ್ನು ತಿಳಿಸಿ, ಅರಿತು, ಆಚರಿಸುವಂತೆ ಧಾರ್ಮಿಕ ಸಂಸ್ಕಾರ ನೀಡಬೇಕು ಎಂದು ಕಾರ್ಕಳ ಜೈನಮಠದ ಪೂಜ್ಯ ಲಲಿತಕೀರ್ತಿ ಭಟ್ಟಾರಕ ಸ್ವಾಮೀಜಿ ಹೇಳಿದರು.
ಇತ್ತೀಚೆಗೆ ನಿಧನರಾದ ಮಂಗಳೂರು ಎಸ್.ಡಿ.ಡಿ.ಎಂ. ಕಾನೂನು ಕಾಲೇಜಿನ ಸ್ಥಾಪಕ ಪ್ರಾಂಶುಪಾಲ ಎನ್. ಜಿನ್ನಪ್ಪ ಕಡಂಬರ ಸ್ಮರಣಾರ್ಥ ಶಾಸ್ತçದಾನಕ್ಕಾಗಿ ಪ್ರಕಟಿಸಿದ “ಜಿನಸ್ತುತಿ” ಕೃತಿಯನ್ನು ಅವರು ಬುಧವಾರ ವೇಣೂರು ಕಲ್ಲುಬಸದಿಯಲ್ಲಿ ಲೋಕಾರ್ಪಣೆಗೊಳಿಸಿ ಮಂಗಲ ಪ್ರವಚನ ನೀಡಿದರು.

ಶಿಖರ್ಜಿ ಕ್ಷೇತ್ರ ಜೈನರ ಪವಿತ್ರ ತೀರ್ಥಕ್ಷೇತ್ರವಾಗಿದ್ದು ಎಲ್ಲರೂ ಬದುಕಿನಲ್ಲಿ ಒಮ್ಮೆಯಾದರೂ ಈ ಸಿದ್ಧಕ್ಷೇತ್ರದ ದರ್ಶನ ಮಾಡಬೇಕು ಎಂದು ಅವರು ಸಲಹೆ ನೀಡಿದರು.
ಜೈನಧರ್ಮದ ಆಚಾರ-ವಿಚಾರಗಳು, ವೃತ-ನಿಯಮಗಳನ್ನು, ಜಪ-ತಪವನ್ನು ಎಲ್ಲರೂ ಕಟ್ಟುನಿಟ್ಟಾಗಿ ಪಾಲಿಸಿದರೆ ಮನೆಯೇ ಮಂದಿರವಾಗುತ್ತದೆ ಎಂದು ಸ್ವಾಮೀಜಿ ಹೇಳಿದರು.
ನುಡಿನಮನ ಸಲ್ಲಿಸಿದ ಮೂಡಬಿದ್ರೆ ಜೈನಪ್ರೌಢಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯ ಮುನಿರಾಜ ರೆಂಜಾಳ ಮಾತನಾಡಿ, ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎನ್ನುವಂತೆ ಪ್ರೊ. ಎನ್. ಜೆ. ಕಡಂಬರು ಎಲೆಮರೆಯ ಕಾಯಿಯಂತೆ ತನ್ನ ಬಳಿಗೆ ಬಂದವರಿಗೆಲ್ಲ ಕಾನೂನು ಮೂಲಕ ಅಭಯದಾನ ಮಾಡುತ್ತಿದ್ದರು. ಶಿಕ್ಷಣತಜ್ಞರಾಗಿ, ದಕ್ಷಆಡಳಿತದಾರರಾಗಿ ಅವರ ಸೇವೆ ಶ್ಲಾಘನೀಯವಾಗಿದೆ ಎಂದರು.
ಜೈನರ ಸಂಪ್ರದಾಯದAತೆ “ಜಿನಸ್ತುತಿ” ಕೃತಿಯನ್ನು ಎಲ್ಲರಿಗೂ ಶಾಸ್ತçದಾನ ರೂಪದಲ್ಲಿ ವಿತರಿಸಲಾಯಿತು.
ಭಗವಾನ್ ಶಾಂತಿನಾಥ ಸ್ವಾಮಿ ಸನ್ನಿಧಿಯಲ್ಲಿ ೫೦೪ ಕಲಶ ಅಭಿಷೇಕ, ಪಂಚಾಮೃತ ಅಭಿಷೇಕ, ಪದ್ಮಾವತಿ ಅಮ್ಮನವರಿಗೆ ಹೂವಿನ ಪೂಜೆ, ದೇವರ ಉತ್ಸವ ಮೊದಲಾದ ಕಾರ್ಯಕ್ರಮಗಳು ನಡೆದವು.
ಉಪನ್ಯಾಸಕ ಮಹಾವೀರ ಜೈನ್ ಮೂಡುಕೋಡಿಗುತ್ತು ಕಾರ್ಯಕ್ರಮ ನಿರ್ವಹಿಸಿದರು.
ಧರ್ಮಸ್ಥಳದ ಡಿ. ಹರ್ಷೆಂದ್ರ ಕುಮಾರ್, ಕೆ. ಜಯವರ್ಮರಾಜ ಬಳ್ಳಾಲ್ ಮತ್ತು ಕೆ. ರಾಜವರ್ಮ ಬಳ್ಳಾಲ್, ಮಂಗಳೂರು, ಎಸ್.ಡಿ.ಎಂ. ಕಾನೂನು ಕಾಲೇಜಿನ ನಿವೃತ್ತ ಪ್ರಾಂಶುಪಾಲ ಎ. ರಾಜೇಂದ್ರ ಶೆಟ್ಟಿ, ವಿಧಾನ ಪರಿಷತ್ ಮಾಜಿ ಸದಸ್ಯ ಕೆ. ಪ್ರತಾಪಸಿಂಹ ನಾಯಕ್, ಎಸ್.ಡಿ. ಸಂಪತ್ ಸಾಮ್ರಾಜ್ಯ ಶಿರ್ತಾಡಿ, ವಕೀಲ ಕೆ.ಬಿ. ಹರಿಶ್ಚಂದ್ರ ಬಳ್ಳಾಲ್, ನೋಟರಿ ಶಶಿಕಿರಣ್ ಜೈನ್ ಬೆಳ್ತಂಗಡಿ ಮೊದಲಾದವರು ಉಪಸ್ಥಿತರಿದ್ದರು.













