ಬೆಳ್ತಂಗಡಿ: ರಾಜ್ಯದ ವಿವಿಧೆಡೆ ವಕೀಲರ ಮೇಲೆ ನಡೆಯುತ್ತಿರುವ ಹಲ್ಲೆ, ಕೊಲೆ, ಕೊಲೆ ಯತ್ನ ಹಾಗೂ ಬೆದರಿಕೆ ಪ್ರಕರಣಗಳನ್ನು ತಡೆಗಟ್ಟಲು ವಕೀಲರಿಗೆ ಸಮರ್ಪಕ ಕಾನೂನು ರಕ್ಷಣೆ ಒದಗಿಸಬೇಕು. ಈಗಿರುವ ಅಡ್ವೊಕೇಟ್ಸ್ ಪ್ರೊಟೆಕ್ಷನ್ ಆಕ್ಟ್ ಅನ್ನು ಇನ್ನಷ್ಟು ಬಲಪಡಿಸಿ, ಮುಂಬರುವ ವಿಧಾನಮಂಡಲ ಅಧಿವೇಶನದಲ್ಲಿಯೇ ಅಗತ್ಯ ತಿದ್ದುಪಡಿ ಮಸೂದೆ ಮಂಡಿಸಿ ಅಂಗೀಕರಿಸಬೇಕು ಎಂದು ಆಗ್ರಹಿಸಿ ಬೆಳ್ತಂಗಡಿ ತಾಲೂಕು ಕಚೇರಿ ಮುಂಭಾಗ ವಕೀಲರ ಸಂಘದಿಂದ ನ.3ರಂದು ಪ್ರತಿಭಟನೆ ನಡೆಯಿತು.
ವಕೀಲರಿಗೆ ಸೂಕ್ತ ರಕ್ಷಣೆ ಒದಗಿಸುವ ನಿಟ್ಟಿನಲ್ಲಿ ಕಾನೂನನ್ನು ಬಲಪಡಿಸುವುದು ಸರಕಾರದ ಜವಾಬ್ದಾರಿಯಾಗಿದೆ. ವಕೀಲರ ಮೇಲಿನ ಹಲ್ಲೆ ಪ್ರಕರಣಗಳಿಗೆ ಕಠಿಣ ಕ್ರಮ ಕೈಗೊಳ್ಳುವ ಜತೆಗೆ, ವೃತ್ತಿ ನಿರ್ವಹಣೆಗೆ ಭದ್ರ ವಾತಾವರಣ ನಿರ್ಮಿಸಬೇಕು ಎಂದು ಪ್ರತಿಭಟನೆಯಲ್ಲಿ ವಕೀಲರು ಆಗ್ರಹಿಸಿದರು. ಪ್ರತಿಭಟನೆಯ ಬಳಿಕ ಉಪತಹಶೀಲ್ದಾರ್ ಮೂಲಕ ಮನವಿ ಸಲ್ಲಿಸಲಾಯಿತು.
ಪ್ರತಿಭಟನೆಯಲ್ಲಿ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಎಂ, ದ.ಕ. ಜಿಲ್ಲಾ ಸಂಘದ ಉಪಾಧ್ಯಕ್ಷ ವಸಂತ ಮರಕಡ, ದ.ಕ. ಜಿಲ್ಲಾ ಸಂಘದ ಜೊತೆ ಕಾರ್ಯದರ್ಶಿ ನವೀನ್ ಬಿ.ಕೆ., ಹಿರಿಯ ವಕೀಲರ ಸಮಿತಿ ಅಧ್ಯಕ್ಷ ಶಿವ ಕುಮಾರ್ ಎಸ್ ಎಂ, ಸಂಘದ ಸದಸ್ಯರಾದ ಬಿ.ಕೆ ಧನಂಜಯ್ ರಾವ್, ಶಶಿ ಕಿರಣ್ ಜೈನ್ , ಪದಾದಿಕಾರಿಗಳಾದ ಗಣೇಶ್ ಗೌಡ, ಅಪರ ಸರಕಾರಿ ವಕೀಲ ಮನೋಹರ ಕುಮಾರ್ ಎ. ಸೇರಿದಂತೆ ವಕೀಲರ ಸಂಘದ ಸದಸ್ಯರು ಪ್ರತಿಭಟನೆಯಲ್ಲಿ ಭಾಗವಹಿಸಿದರು.













