November 5, 2026
ತಾಲೂಕು ಸುದ್ದಿಪ್ರತಿಭಟನೆಸಮಸ್ಯೆ

ಪಿಲಿಗೂಡು-ಉಪ್ಪಿನಂಗಡಿ ರಸ್ತೆ ದುರಸ್ತಿಗೆ ಆಗ್ರಹ-ಕಲ್ಲೇರಿಯಲ್ಲಿ ಎಸ್‌ಡಿಪಿಐ ವಿನೂತನ ಪ್ರತಿಭಟನೆ

ಬೆಳ್ತಂಗಡಿ: ಸಂಪೂರ್ಣ ಹೊಂಡಗುಂಡಿಗಳಿಂದ ಕೂಡಿರುವ ಪಿಲಿಗೂಡು-ಉಪ್ಪಿನಂಗಡಿ ರಸ್ತೆಯನ್ನು ಕೂಡಲೇ ಮರು ಡಾಂಬರೀಕರಣಗೊಳಿಸುವಂತೆ ಆಗ್ರಹಿಸಿ ಎಸ್‌ಡಿಪಿಐ ವತಿಯಿಂದ ನ.2ರಂದು ಕಲ್ಲೇರಿಯಲ್ಲಿ ವಿನೂತನ ಪ್ರತಿಭಟನೆ ನಡೆಯಿತು.
ಪ್ರತಿಭಟನಾಕಾರರು ಹಾಡಿನ ಮೂಲಕ ಶಾಸಕರು ಹಾಗೂ ಕಾಂಗ್ರೆಸ್ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. “ರಸ್ತೆಯ ದುಸ್ಥಿತಿ ಕಂಡರೂ ಸರ್ಕಾರ ಮೌನವಾಗಿದೆ. ಜನರ ಸಂಕಷ್ಟಕ್ಕೆ ಸ್ಪಂದಿಸದೆ ರಾಜಕೀಯ ಮಾಡುತ್ತಿದೆ” ಎಂಬ ಸಂದೇಶ ಸಾರುವ ಹಾಡನ್ನು ಹಾಡುವ ಮೂಲಕ ಜನಪ್ರತಿನಿಧಿಗಳು ಹಾಗೂ ಸರ್ಕಾರದ ನಿರ್ಲಕ್ಷ್ಯವನ್ನು ಟೀಕಿಸಿದರು.

ಎಸ್‌ಡಿಪಿಐ ರಾಷ್ಟ್ರೀಯ ಘಟಕದ ಕಾರ್ಯದರ್ಶಿ ಅಲ್ಫೋನ್ಸೋ ಫ್ರ್ಯಾಂಕ್ ಮಾತನಾಡಿ, ಇಲ್ಲಿನ ಶಾಸಕರ ಹಾಗೂ ಸರ್ಕಾರದ ರಾಜಕೀಯ ಕೆಸರಾಟದಿಂದಾಗಿ ಜನಸಾಮಾನ್ಯರು ನರಕಯಾತನೆ ಅನುಭವಿಸುವಂತಾಗಿದೆ. ರಸ್ತೆಯ ದುಸ್ಥಿತಿಯಿಂದ ಜನರು ನೊಂದು ಹೊಂಡಗಳಲ್ಲಿ ಗಿಡಗಳನ್ನು ನೆಟ್ಟಿದ್ದಾರೆ. ನಾವು ಶಾಂತಿಪ್ರಿಯರು, ಶೀಘ್ರವೇ ರಸ್ತೆ ಡಾಂಬರೀಕರಣ ನಡೆಸಬೇಕು, ರಸ್ತೆ ದುರಸ್ತಿಯಾಗದಿದ್ದಲ್ಲಿ ಇನ್ನಷ್ಟು ಹೋರಾಟ ಅನಿವಾರ್ಯವಾಗಲಿದೆ ಎಂದು ಆಗ್ರಹಿಸಿದರು.

ಎಸ್.ಡಿ.ಪಿ.ಐ. ಬೆಳ್ತಂಗಡಿ ಕ್ಷೇತ್ರ ಸಮಿತಿ ಅಧ್ಯಕ್ಷ ಅಕ್ಟರ್ ಬೆಳ್ತಂಗಡಿ ಮಾತನಾಡಿ ಇಲ್ಲಿನ ಜನಪ್ರತಿನಿಧಿಗಳು, ಆಡಳಿತ ವರ್ಗಗಳಿಗೆ ಕಣ್ಣು ಕಾಣಿಸುವುದಿಲ್ಲ. ಹೀಗಾಗಿ ರಸ್ತೆಯಲ್ಲಿನ ಗುಂಡಿಗಳು ಕಾಣಿಸಲಿ ಎಂದು ಗಿಡಗಳನ್ನು ನೆಟ್ಟಿದ್ದೇವೆ. ಇಷ್ಟರವರೆಗೆ ಸುಮ್ಮನಿದ್ದ ಶಾಸಕ ಪೂಂಜರು ಜಿಲ್ಲಾ ಪಂಚಾಯತ್ ಚುನಾವಣೆ ಘೋಷಣೆ ಮಾಡುತ್ತಾರೆ ಎಂದು ತಿಳಿದು ಮುಖ್ಯಮಂತ್ರಿ ಬಳಿ ಹೋಗಿ ರಸ್ತೆ ಅಭಿವೃದ್ಧಿಗೆ ಅನುದಾನ ಕೇಳುತ್ತಿದ್ದಾರೆ ಎಂದು ಹೇಳಿದರು. ಐದು ವರ್ಷ ಜಿಲ್ಲಾ ಪಂಚಾಯತ್ ಸದಸ್ಯರಾಗಿದ್ದ ಸಾಹುಲ್ ಹಮೀದ್ ಅವರು ಇತ್ತೀಚೆಗಷ್ಟೇ ಅರ್ಜಿ ಹಿಡಿದುಕೊಂಡು ಸಿಇಒ ಬಳಿ ಹೋಗಿದ್ದಾರೆ. ನಾಚಿಗೆಯಾಗಬೇಕು ಇವರಿಗೆ ಎಂದು ಹೇಳಿದ ಅಕ್ಟರ್ ಅವರು ಇನ್ನಾದರೂ ರಸ್ತೆಯನ್ನು ಸಂಪೂರ್ಣ ದುರಸ್ತಿಗೊಳಿಸಬೇಕು.ಇಲ್ಲವಾದರೆ ಲೋಕೋಪಯೋಗಿ ಇಲಾಖೆ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದರು.

ಎಸ್‌ಡಿಪಿಐ ಮುಖಂಡ ಇನಾಸ್ ರೋಡ್ರಿಗಸ್ ಮಾತನಾಡಿ, ಸಾರ್ವಜನಿಕರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಜನಪ್ರತಿನಿಧಿಗಳು ಮತ್ತು ಸರ್ಕಾರಕ್ಕೆ ಅರಿವಿದ್ದರೂ ಶಾಶ್ವತ ಪರಿಹಾರ ಕೈಗೊಳ್ಳದಿರುವುದು ಏಕೆ? ಎಂದು ಖಂಡಿಸಿದರು. ಎಸ್‌ಡಿಪಿಐ ಮಂಗಳೂರು ಗ್ರಾಮಾಂತರ ಜಿಲ್ಲಾ ಘಟಕದ ಅಧ್ಯಕ್ಷ ಅನ್ವರ್ ಸಾದಾತ್ ಬಜತ್ತೂರು, ಜಿಲ್ಲಾ ಘಟಕದ ಕಾರ್ಯದರ್ಶಿ ಅಶ್ರಫ್ ತಲಪಾಡಿ, ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದ ಅಧ್ಯಕ್ಷ ನವಾಝ್ ಕಟ್ಟೆ, ಗ್ರಾ.ಪಂ ಮಾಜಿ ಸದಸ್ಯ ಕೆ.ಎಸ್.ಅಬ್ದುಲ್ಲಾ, ಬೆಳ್ತಂಗಡಿ ಬ್ಲಾಕ್ ಉಪಾಧ್ಯಕ್ಷ ನಝೀರ್, ಉಪ್ಪಿನಂಗಡಿ ಬ್ಲಾಕ್ ಕಾರ್ಯದರ್ಶಿ ತುಫೈಲ್, ಬಾರ್ಯ ಗ್ರಾ.ಪಂ ಮಾಜಿ ಸದಸ್ಯ ಫೈಝಲ್ ಮಾತನಾಡಿ ,ಗುರುವಾಯನಕೆರೆ-ಉಪ್ಪಿನಂಗಡಿ ರಸ್ತೆಯಲ್ಲಿ ಪ್ರತಿನಿತ್ಯ ಸಂಚರಿಸುವ ವಾಹನ ಸವಾರರು ಹಾಗೂ ಸಾರ್ವಜನಿಕರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಜನಪ್ರತಿನಿಧಿಗಳು ಮತ್ತು ಸರ್ಕಾರಕ್ಕೆ ಅರಿವಿದ್ದರೂ ಯಾವುದೇ ಶಾಶ್ವತ ಪರಿಹಾರ ಕೈಗೊಳ್ಳದಿರುವುದು ಏಕೆ ಎಂದು ಪ್ರಶ್ನಿಸಿದರು. ರಸ್ತೆಯ ದುಸ್ಥಿತಿಯಿಂದ ಸಾರ್ವಜನಿಕರು ಹಾಗೂ ವಾಹನ ಸವಾರರು ಪ್ರತಿನಿತ್ಯ ಅನುಭವಿಸುತ್ತಿರುವ ಸಂಕಷ್ಟಕ್ಕೆ ಶಾಶ್ವತ ಪರಿಹಾರ ಕಲ್ಪಿಸಿ, ಕೂಡಲೇ ಗುರುವಾಯನಕೆರೆ-ಉಪ್ಪಿನಂಗಡಿ ರಸ್ತೆಯ ಸಂಪೂರ್ಣ ಡಾಂಬರೀಕರಣ ಕಾಮಗಾರಿ ಆರಂಭಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ನಿಸಾರ್ ಕುದ್ರಡ್ಕ ಸ್ವಾಗತಿಸಿ, ಅಸ್ಭಾಕ್ ಪುಂಜಾಲಕಟ್ಟೆ ವಂದಿಸಿದರು. ಫೈಝಲ್ ಮೂರುಗೋಳಿ ನಿರೂಪಿಸಿದರು.

ಎಸ್‌ಡಿಪಿಐ ಕರ್ನಾಟಕ ರಾಜ್ಯ ಕಾರ್ಯದರ್ಶಿ ಸಲೀಂ ಜಿ.ಕೆ., ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿದ್ದೀಕ್ ಪುತ್ತೂರು, ಜಿಲ್ಲಾ ಕಾರ್ಯದರ್ಶಿ ಅಶ್ರಫ್ ತಲಪಾಡಿ, ಶಾಕಿರ್ ಅಳಕೆಮಜಲು ಮತ್ತು ಗ್ರಾಮ ಪಂಚಾಯತ್ ಮಾಜಿ ಸದಸ್ಯ ಶುಕುರ್ ಕುಪ್ಪೆಟ್ಟಿ ಮಾತನಾಡಿದರು. ಹನೀಫ್ ಟಿ.ಎಸ್. ಹಾಗೂ ಅಶ್ರಫ್ ಚಾರ್ಮಾಡಿ ಅವರ ನೇತೃತ್ವದಲ್ಲಿ ವಿವಿಧ ಹಾಡುಗಳನ್ನು ಹಾಡಿ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಲಾಯಿತು. ಪ್ರತಿಭಟನೆಯಲ್ಲಿ ಎಸ್‌ಡಿಪಿಐ ಮಂಗಳೂರು ಗ್ರಾಮಾಂತರ ಜಿಲ್ಲಾ ಸಮಿತಿ ಸದಸ್ಯ ರಹ್ಮಾನ್ ನಾವೂರು, ಬೆಳ್ತಂಗಡಿ ಕ್ಷೇತ್ರ ಕೋಶಾಧಿಕಾರಿ ಸಾಲಿಹ್ ಮದ್ದಡ್ಕ, ಸದಸ್ಯರಾದ ಮುಸ್ತಫಾ ಜಿ.ಕೆ, ಆಶ್ರಫ್ ಕಟ್ಟೆ, ಯಂಗ್ ಡೆಮಾಕ್ರಟ್ಸ್ ಮಂಗಳೂರು ಗ್ರಾಮಾಂತರ ಜಿಲ್ಲಾ ಜಾಯಿಂಟ್ ಕನ್ವಿನರ್ ತೌಸಿಫ್ ಕಕ್ಕಿಂಜೆ, ಕಣಿಯೂರು ಬ್ಲಾಕ್ ಅಧ್ಯಕ್ಷ ಆಸೀಫ್ ಬಂಗೇರಕಟ್ಟೆ, ಕಾರ್ಯದರ್ಶಿ ಲತೀಫ್ ಪುಂಜಾಲಕಟ್ಟೆ, ಸಮಿತಿ ಸದಸ್ಯ ರಶೀದ್‌ಮಠ ಸೇರಿದಂತೆ ಗ್ರಾಮ ಪಂಚಾಯತ್ ಮಾಜಿ ಸದಸ್ಯರು, ಕ್ಷೇತ್ರ ಹಾಗೂ ಬ್ಲಾಕ್ ಮಟ್ಟದ ನಾಯಕರು, ಕಾರ್ಯಕರ್ತರು ಮತ್ತು ಸ್ಥಳೀಯರು ಉಪಸ್ಥಿತರಿದ್ದರು. ಎಸ್‌ಡಿಪಿಐ ಬೆಳ್ತಂಗಡಿ ಕ್ಷೇತ್ರ ಕಾರ್ಯದರ್ಶಿ ಅಶ್ವಾಕ್ ಪುಂಜಾಲಕಟ್ಟೆ ಸ್ವಾಗತಿಸಿ, ಸಮಿತಿ ಸದಸ್ಯ ಖಾದರ್ ನಾವೂರ ಕಾರ್ಯಕ್ರಮ ನಿರೂಪಿಸಿದರು. ಉಪಾಧ್ಯಕ್ಷೆ ನಿಸಾರ್ ಕುದ್ರಡ್ಕ ವಂದಿಸಿದರು. ಬೆಳ್ತಂಗಡಿ ತಾಲ್ಲೂಕು ಲೋಕೋಪಯೋಗಿ ಇಲಾಖೆ ಸಹಾಯಕ ಎಂಜಿನಿಯರ್ ಗೋಪಾಲ್ ಪ್ರತಿಭಟನಾ ಸ್ಥಳಕ್ಕೆ ಬಂದು ಪ್ರತಿಭಟನಕಾರರಿಂದ ಮನವಿ ಸ್ವೀಕರಿಸಿ, ಶೀಘ್ರವೇ ರಸ್ತೆ ಅಭಿವೃದ್ಧಿಯ ಭರವಸೆ ನೀಡಿದ ಬಳಿಕ ಪ್ರತಿಭಟನೆಯನ್ನು ಹಿಂಪಡೆಯಲಾಯಿತು.

Related posts

ಅಳದಂಗಡಿ ಶ್ರೀ ಸತ್ಯದೇವತಾ ದೈವಸ್ಥಾನಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಭೇಟಿ

Suddi Udaya

ವೇಣೂರಿನ ವಿದ್ಯೋದಯ ಇಂಗ್ಲೀಷ್ ಮೀಡಿಯಂ ಶಾಲೆಯಲ್ಲಿ ಯಕ್ಷಗಾನ ತಾಳಮದ್ದಳೆ

Suddi Udaya

ಬೆಳ್ತಂಗಡಿ: ವಲಯ ಮಟ್ಟದ ಅಂತರಾಷ್ಟ್ರೀಯ ಮಹಿಳಾ ಸಮಾವೇಶ

Suddi Udaya

ಬರೆಂಗಾಯ ಸ.ಉ.ಹಿ.ಪ್ರಾ. ಶಾಲಾ ಅಮೃತ ಮಹೋತ್ಸವ ಕಾರ್ಯಕ್ರಮ

Suddi Udaya

ವಿದ್ಯಾರತ್ನ ಪ್ರಶಸ್ತಿ ಪುರಸ್ಕೃತೆ ಉಮಾ ಡಿ ಗೌಡರಿಗೆ ಕೋಡೈಲು ಮಾಲಾಡಿ ನ್ಯೂ ಫ್ರೆಂಡ್ಸ್ ವತಿಯಿಂದ ಸನ್ಮಾನ

Suddi Udaya

ಮಲವಂತಿಗೆ ಶಿವಾನಿ ಸಂಜೀವಿನಿ ಮಹಿಳಾ ಒಕ್ಕೂಟದ ಮಹಾಸಭೆ

Suddi Udaya
error: Content is protected !!