ಹುಣ್ಸೆಕಟ್ಟೆ: ಭಾರತೀಯ ಸಂಸ್ಕೃತಿ, ಕಲೆ ಮತ್ತು ಪರಂಪರೆಯನ್ನು ಪ್ರತಿಬಿಂಬಿಸುವ ಶಾಸ್ತ್ರೀಯ ನೃತ್ಯಕಲೆಯ ಬೆಳವಣಿಗೆಯ ಉದ್ದೇಶದಿಂದ ಬೆಳ್ತಂಗಡಿಯ ಹುಣ್ಸೆಕಟ್ಟೆ ಸಮುದಾಯ ಭವನದಲ್ಲಿ ಆರಂಭಗೊಂಡಿರುವ ‘ನಾಟ್ಯಲಹರಿ’ ನೂತನ ಭರತನಾಟ್ಯ ನೃತ್ಯ ತರಬೇತಿ ತರಗತಿಯ ಉದ್ಘಾಟನಾ ಕಾರ್ಯಕ್ರಮವು ನ.8ರಂದು ಭಾನುವಾರ ಸಮುದಾಯ ಭವನ ಹುಣ್ಸೆಕಟ್ಟೆಯಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಉಜಿರೆಯ ಎಸ್.ಡಿ.ಎಂ. ಆಂಗ್ಲ ಮಾಧ್ಯಮ ಶಾಲೆಯ ಶಿಕ್ಷಕಿ, ಭರತನಾಟ್ಯದಲ್ಲಿ ಸೀನಿಯರ್ ಗ್ರೇಡ್ ಪರೀಕ್ಷೆ ಯಲ್ಲಿ ಉತ್ತೀರ್ಣರಾದ ನಿಶಾ ನವೀನ್ ಉಜಿರೆ ಅವರು ಉದ್ಘಾಟಿಸಿ, ನೃತ್ಯಕಲೆಯ ಮಹತ್ವ, ಭಾರತೀಯ ಶಾಸ್ತ್ರೀಯ ನೃತ್ಯ ಪರಂಪರೆ ಹಾಗೂ ಮಕ್ಕಳಲ್ಲಿ ಕಲಾಸಕ್ತಿಯನ್ನು ಬೆಳೆಸುವ ಅಗತ್ಯದ ಕುರಿತು ಮಾತನಾಡಿದರು.
ಈ ಸಂದರ್ಭದಲ್ಲಿ ಇನ್ನೊರ್ವರು ಮುಖ್ಯ ಅತಿಥಿಗಳಾದ ಕೃಷ್ಣ ಕುಮಾರ್ ಐತಾಳ್ ಪಂಜಿರ್ಪು ಅವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಮಕ್ಕಳಲ್ಲಿ ಶಿಸ್ತು, ಏಕಾಗ್ರತೆ, ಆತ್ಮವಿಶ್ವಾಸ ಹಾಗೂ ಕಲಾಭಿರುಚಿಯನ್ನು ಬೆಳೆಸುವ ನಿಟ್ಟಿನಲ್ಲಿ ನಾಟ್ಯಲಹರಿ ನೃತ್ಯ ತರಗತಿ ಮಹತ್ವದ ಹೆಜ್ಜೆಯಾಗಿದೆ. ಭರತನಾಟ್ಯ ಕಲೆಯ ಜೊತೆಗೆ ಭಾರತೀಯ ಸಾಂಸ್ಕೃತಿಕ ಪರಂಪರೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಆಶಯದೊಂದಿಗೆ ಈ ತರಬೇತಿ ಕೇಂದ್ರವನ್ನು ಆರಂಭಿಸಲಾಗಿದೆ.
ಕಾರ್ಯಕ್ರಮದಲ್ಲಿ ಶ್ರೀ ರಾಮ ಭಜನಾ ಮಂಡಳಿ ಹುಣ್ಸೆಕಟ್ಟೆ ಮಹಿಳಾ ಸಮಿತಿ ಅಧ್ಯಕ್ಷೆ ಕಲ್ಯಾಣಿ, ಶ್ರೀ ನಿಟಿಲಾಕ್ಷ ಎಂಟರ್ ಪ್ರೈಸಸ್ ಮಾಲಕರಾದ ಸಂದೀಪ್ , ನೂತನ ನೃತ್ಯ ತರಗತಿಯ ಶಿಕ್ಷಕಿ ಹಿತಶ್ರೀ, ಪೋಷಕರು ಹಾಗೂ ನೂತನ ನೃತ್ಯ ತರಗತಿಯ ವಿದ್ಯಾರ್ಥಿಗಳು ಉಪಸ್ಥಿತರಿದ್ದು, ನೂತನ ಪ್ರಯತ್ನಕ್ಕೆ ಶುಭ ಹಾರೈಸಿದರು.
ಕಾರ್ಯಕ್ರಮವನ್ನು ಸೀತಾರಾಮ್ ಆರ್ ನಿರೂಪಿಸಿದರು.















