ಇಂದಬೆಟ್ಟಿನಲ್ಲಿ ನಡೆದ ರಾಜೇಶ್ ಪುದುಶೇರಿ ಸಾರಥ್ಯದ ಸಹನಾಶ್ರೀ ಕ್ರೆಡಿಟ್ ಸೌಹಾರ್ದ ಸಹಕಾರಿ ನಿಯಮಿತ ಇದರ ದ್ವಿತೀಯ ಶಾಖೆಯ ಉದ್ಘಾಟನಾ ಸಮಾರಂಭದಲ್ಲಿ, ತನ್ಸಿಫ್ ಬಿ.ಎಂ ಕಿಲ್ಲೂರು ಅವರನ್ನು ಸಾಮಾಜಿಕ, ಧಾರ್ಮಿಕ ಮತ್ತು ಶೈಕ್ಷಣಿಕ ಕ್ಷೇತ್ರದಲ್ಲಿನ ಗಮನಾರ್ಹ ಸಾಧನೆಗಾಗಿ ಸಹನಾಶ್ರೀ ಫೌಂಡೇಶನ್ ಪರವಾಗಿ ಕರ್ನಾಟಕ ಸರಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಯು.ಟಿ ಖಾದರ್ ಅವರು ಸನ್ಮಾನಿಸಿದರು.
ಬಹುಮುಖ ಪ್ರತಿಭೆಯ ಆಗರವಾಗಿರುವ ತನ್ಸಿಫ್, ವಿದ್ಯಾರ್ಥಿಯಾಗಿದ್ದಿನಿಂದಲೇ, ಭಾಷಣ, ರಸಪ್ರಶ್ನೆ, ಚರ್ಚೆಗಳು, ನಿರೂಪಣೆ ಮತ್ತು ತಮ್ಮ ಅಪ್ರತಿಮ ಸಂಘಟನಾ ಕೌಶಲ್ಯಗಳ ಮೂಲಕ ಗುರುತಿಸಿಕೊಂಡಿದ್ದು, ಮಾಜಿ ರಾಷ್ಟ್ರಪತಿ ಡಾ. ಎಪಿಜೆ ಅಬ್ದುಲ್ ಕಲಾಂ ಅವರಿಂದ “ವೇಸ್ಟ್ ವಾಟರ್ ಟ್ರೀಟ್ಮೆಂಟ್ – ಎ ರೇ ಆಫ್ ನ್ಯೂ ಹೋಪ್” ಎಂಬ ಸಂಶೋಧನಾ ಪ್ರಬಂಧಕ್ಕೆ ರಾಷ್ಟ್ರ ಪ್ರಶಸ್ತಿ, ಒರಿಸ್ಸಾದ ಕಳಿಂಗಾ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಬೆಸ್ಟ್ ಪ್ರಾಜೆಕ್ಟ್ ಪ್ರಶಸ್ತಿ, ಹೈದರಾಬಾದಿನ ಆಚಾರ್ಯ ಎನ್.ಜಿ ರಂಗ ಕೃಷಿ ವಿಶ್ವವಿದ್ಯಾಲಯದಿಂದ ಯುವ ವಿಜ್ಞಾನಿ ಪುರಸ್ಕಾರ, ಚಂದನ ವಾಹಿನಿಯ ಥಟ್ ಅಂತ ಹೇಳಿ ರಸಪ್ರಶ್ನೆ ಸ್ಪರ್ಧೆಯಲ್ಲಿ ಅತೀ ಹೆಚ್ಚು ಅಂಕ, ಮತ್ತು ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನಿಂದ ನೀಡಲಾದ ಉತ್ತಮ ಯುವ ರಾಜಕಾರಣಿ ಪ್ರಶಸ್ತಿಗಳಿಗೆ ಪಾತ್ರರಾಗಿದ್ದಾರೆ.
ಜೊತೆಗೆ 2017-19 ರ ಸಾಲಿನಲ್ಲಿ ಕರ್ನಾಟಕ ಸರಕಾರದ ಬ್ಯಾರಿ ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ.














