November 21, 2026
ಗ್ರಾಮಾಂತರ ಸುದ್ದಿಜಿಲ್ಲಾ ಸುದ್ದಿಪ್ರತಿಭಟನೆಪ್ರಮುಖ ಸುದ್ದಿಬೆಳ್ತಂಗಡಿವರದಿ

ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ ರೂ.15,000 ಗೌರವಧನದ ಭರವಸೆ ಈಡೇರಿಸಿ: ಆಶಾ ಕಾರ್ಯಕರ್ತೆಯರ ಹೋರಾಟಕ್ಕೆ ನ್ಯಾಯ ಒದಗಿಸಿ – ಹರೀಶ್ ಪೂಂಜ ಆಗ್ರಹ

ಬೆಳ್ತಂಗಡಿ: ಬೆಂಗಳೂರು ಫ್ರೀಡಂ ಪಾರ್ಕ್‌ನಲ್ಲಿ ಕಳೆದ ನಾಲ್ಕು ದಿನಗಳಿಂದ ರಾಜ್ಯದ ಸಾವಿರಾರು ಆಶಾ ಕಾರ್ಯಕರ್ತೆಯರು ತಮ್ಮ ನ್ಯಾಯಯುತ ಬೇಡಿಕೆಗಳ ಈಡೇರಿಕೆಗಾಗಿ ಹಗಲು-ರಾತ್ರಿ ನಡೆಸುತ್ತಿರುವ ಅಹೋರಾತ್ರಿ ಪ್ರತಿಭಟನೆ ಅತ್ಯಂತ ಕಳವಳಕಾರಿ ಸಂಗತಿಯಾಗಿದೆ. ರಾಜ್ಯದ ಆರೋಗ್ಯ ವ್ಯವಸ್ಥೆಯ ತಳಮಟ್ಟದಲ್ಲಿ ಅತ್ಯಂತ ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸುತ್ತಿರುವ ಆಶಾ ಕಾರ್ಯಕರ್ತೆಯರು ತಮ್ಮ ಹಕ್ಕುಗಳಿಗಾಗಿ ಬೀದಿಗಿಳಿದು ಹೋರಾಡುವ ಪರಿಸ್ಥಿತಿ ನಿರ್ಮಾಣವಾಗಿರುವುದು ಸರ್ಕಾರದ ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಿದೆ.

ಮುಖ್ಯವಾಗಿ, ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವ ಮುನ್ನ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಆಶಾ ಕಾರ್ಯಕರ್ತೆಯರಿಗೆ ಮಾಸಿಕ ರೂ.15,000 ಗೌರವಧನ ನೀಡುವುದಾಗಿ ಸ್ಪಷ್ಟ ಭರವಸೆ ನೀಡಿತ್ತು. ಆದರೆ ಅಧಿಕಾರಕ್ಕೆ ಬಂದು 3 ವರ್ಷಗಳೇ ಕಳೆದರೂ ತನ್ನದೇ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿದ ಭರವಸೆಯನ್ನು ಈಡೇರಿಸಲು ಸರ್ಕಾರಕ್ಕೆ ಸಾಧ್ಯವಾಗಿಲ್ಲ. ಚುನಾವಣೆಯ ಸಂದರ್ಭದಲ್ಲಿ ನೀಡುವ ಭರವಸೆಗಳು ಕೇವಲ ಅಧಿಕಾರ ಪಡೆಯುವ ರಾಜಕೀಯ ತಂತ್ರಗಳಾಗಬಾರದು. ಜನರಿಗೆ ನೀಡಿದ ಮಾತನ್ನು ಉಳಿಸಿಕೊಳ್ಳುವುದು ಯಾವುದೇ ಸರ್ಕಾರದ ಕನಿಷ್ಠ ಜವಾಬ್ದಾರಿಯಾಗಿದೆ.

ಇಂದು ಅಗತ್ಯ ವಸ್ತುಗಳ ಬೆಲೆ ಏರಿಕೆ, ದಿನನಿತ್ಯದ ಜೀವನ ನಿರ್ವಹಣೆಯ ವೆಚ್ಚ ಹಾಗೂ ಕುಟುಂಬದ ಜವಾಬ್ದಾರಿಗಳ ನಡುವೆ ಅಲ್ಪ ಗೌರವಧನದಲ್ಲಿ ಜೀವನ ಸಾಗಿಸುವುದು ಆಶಾ ಕಾರ್ಯಕರ್ತೆಯರಿಗೆ ಅತ್ಯಂತ ಕಷ್ಟಕರವಾಗಿದೆ. ಗರ್ಭಿಣಿಯರ ಆರೈಕೆ, ತಾಯಿ ಮತ್ತು ಮಕ್ಕಳ ಆರೋಗ್ಯ ರಕ್ಷಣೆ, ಲಸಿಕಾ ಕಾರ್ಯಕ್ರಮಗಳು, ಸಾಂಕ್ರಾಮಿಕ ರೋಗಗಳ ನಿಯಂತ್ರಣ ಸೇರಿದಂತೆ ಸಾರ್ವಜನಿಕ ಆರೋಗ್ಯ ಸೇವೆಗಳ ಅನುಷ್ಠಾನದಲ್ಲಿ ಹಗಲಿರುಳು ಶ್ರಮಿಸುವ ಈ ಮಹಿಳೆಯರ ಸೇವೆಗೆ ತಕ್ಕ ಗೌರವ ಮತ್ತು ಪ್ರತಿಫಲ ದೊರೆಯಲೇಬೇಕು.

ಮಹಿಳೆಯರ ಸಬಲೀಕರಣದ ಬಗ್ಗೆ ದೊಡ್ಡದಾಗಿ ಮಾತನಾಡುವ ಸರ್ಕಾರ, ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಯನ್ನೇ ಈಡೇರಿಸದೆ ಸಾವಿರಾರು ಮಹಿಳೆಯರು ನಾಲ್ಕು ದಿನಗಳಿಂದ ಬೀದಿಯಲ್ಲಿ ಹೋರಾಟ ನಡೆಸುವಂತಾಗಿರುವುದಕ್ಕೆ ಉತ್ತರಿಸಬೇಕು. ಆಶಾ ಕಾರ್ಯಕರ್ತೆಯರ ಶ್ರಮ ಮತ್ತು ಸೇವೆಯನ್ನು ಗುರುತಿಸುವುದರ ಜೊತೆಗೆ ಅವರ ಬದುಕಿನ ಭದ್ರತೆಗೂ ಆದ್ಯತೆ ನೀಡಬೇಕು.

ಆದ್ದರಿಂದ ರಾಜ್ಯ ಸರ್ಕಾರ ಕೂಡಲೇ ಮಧ್ಯಪ್ರವೇಶಿಸಿ ಪ್ರತಿಭಟನಾ ನಿರತ ಆಶಾ ಕಾರ್ಯಕರ್ತೆಯರ ಪ್ರತಿನಿಧಿಗಳೊಂದಿಗೆ ಮಾತುಕತೆ ನಡೆಸಬೇಕು. ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿದಂತೆ ಮಾಸಿಕ ರೂ.15,000 ಗೌರವಧನ ನೀಡುವ ಭರವಸೆಯನ್ನು ತಕ್ಷಣ ಈಡೇರಿಸಬೇಕು. ಅವರ ಇತರ ನ್ಯಾಯಯುತ ಬೇಡಿಕೆಗಳ ಬಗ್ಗೆಯೂ ಸಕಾರಾತ್ಮಕ ನಿರ್ಧಾರ ಕೈಗೊಂಡು ಪ್ರತಿಭಟನೆಯನ್ನು ಗೌರವಯುತವಾಗಿ ಅಂತ್ಯಗೊಳಿಸಲು ಕ್ರಮ ಕೈಗೊಳ್ಳಬೇಕು.

ಆಶಾ ಕಾರ್ಯಕರ್ತೆಯರು ಸರ್ಕಾರದ ಮುಂದೆ ಇಟ್ಟಿರುವುದು ಹೊಸ ಬೇಡಿಕೆಯಲ್ಲ; ಕಾಂಗ್ರೆಸ್ ಪಕ್ಷವೇ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಯ ಈಡೇರಿಕೆಗೆ ಆಗ್ರಹಿಸುತ್ತಿದ್ದಾರೆ. ಜನರಿಗೆ ನೀಡಿದ ಮಾತು ಉಳಿಸಿಕೊಳ್ಳಲು ಸರ್ಕಾರಕ್ಕೆ ಇನ್ನೂ ಎಷ್ಟು ಹೋರಾಟಗಳು ನಡೆಯಬೇಕು? ಜನರ ಆರೋಗ್ಯಕ್ಕೆ ಆಶಾಕಿರಣವಾಗಿರುವ ಆಶಾ ಕಾರ್ಯಕರ್ತೆಯರ ಬದುಕಿಗೂ ಸರ್ಕಾರ ಆಶಾಕಿರಣವಾಗಲಿ. ಅವರ ನ್ಯಾಯಯುತ ಹೋರಾಟಕ್ಕೆ ತಕ್ಷಣ ನ್ಯಾಯ ದೊರೆಯಲಿ.

Related posts

ನಾರಾವಿ ಮಾಂಡೋವಿ ಮೋಟಾರ್ಸ್ ನಲ್ಲಿ ಎಸ್‌ಯುವಿ ವಿಭಾಗದ ವಿಕ್ಟೋರಿಸ್ ಕಾರು ಬಿಡುಗಡೆ

Suddi Udaya

ಧಮ೯ಸ್ಥಳ ಮೃತದೇಹ ಹೂತು ಹಾಕಿದ ಪ್ರಕರಣ ತನಿಖೆ: ಬೆಳ್ತಂಗಡಿ ಠಾಣಾ ಬಳಿ ಎಸ್.ಐ.ಟಿ ಕಚೇರಿ

Suddi Udaya

ಗುರಿಪಳ್ಳ ಸಮೀಪದ ಬಂಡ್ರತ್ತಿಲ್ ಬಳಿ ಟವರ್ ಮೇಲೆ ಬಿದ್ದ ಮರ ಸ್ಕೂಟರ್ ನಲ್ಲಿ ಹೋಗುತ್ತಿದ್ದ ವ್ಯಕ್ತಿಗೆ ಗಾಯ

Suddi Udaya

ಅ. 25: ಎಕ್ಸೆಲ್ ಟ್ರೋಫಿ ಮಕ್ಕಳ ಅಂತರ ಶಾಲಾ ಚದುರಂಗ ಸ್ಪರ್ಧೆ

Suddi Udaya

ಸೆ.14-18: ಬೆಳ್ತಂಗಡಿಯಲ್ಲಿ 65ನೇ ವರ್ಷದ ಸಾರ್ವಜನಿಕ ಗಣೇಶೋತ್ಸವ

Suddi Udaya

ಬಿ.ಸಿ ರೋಡ್‌ನಲ್ಲಿ ಯುವತಿಯ ಬರ್ಬರ ಹತ್ಯೆ ಪ್ರಕರಣ; ಆರೋಪಿಗೆ ಕಠಿಣ ಕಾನೂನು ಕ್ರಮ ಜರುಗಿಸಲು ಸಂಸದ ಕ್ಯಾ. ಚೌಟರಿಂದ ಪೊಲೀಸ್ ಇಲಾಖೆಗೆ ಆಗ್ರಹ

Suddi Udaya
error: Content is protected !!