ಬೆಳ್ತಂಗಡಿ: ಉಜಿರೆ ಗ್ರಾಮ ಆಡಳಿತ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಪ್ರದೀಪ್ ಕುಮಾರ್ ಸಿ. ಅವರು ಕಂದಾಯ ನಿರೀಕ್ಷಕರಾಗಿ (Revenue Inspector) ಪದನ್ನೋತಿಗೊಂಡು, ಸುಳ್ಯ ತಾಲೂಕಿನ ಕಸಬಾ ಹೋಬಳಿಯ ಕಂದಾಯ ನಿರೀಕ್ಷಕರಾಗಿ ನೇಮಕಗೊಂಡಿದ್ದಾರೆ.
16 ವರ್ಷಗಳ ಸುದೀರ್ಘ ಸೇವೆ: 2009ರಲ್ಲಿ ಬೆಳ್ತಂಗಡಿ ತಾಲೂಕಿಗೆ ಗ್ರಾಮ ಲೆಕ್ಕಿಗರಾಗಿ (VA) ನೇಮಕಗೊಂಡಿದ್ದ ಪ್ರದೀಪ್ ಕುಮಾರ್ ಅವರು, ಕಳೆದ 16 ವರ್ಷಗಳಿಂದ ತಾಲೂಕಿನಾದ್ಯಂತ ದಕ್ಷತೆಯಿಂದ ಸೇವೆ ಸಲ್ಲಿಸಿದ್ದಾರೆ. ಆರಂಭದಲ್ಲಿ ತಾಲೂಕು ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸಿದ್ದ ಇವರು, ನಂತರ ವೇಣೂರು, ಆರಂಬೋಡಿ, ಕಡಿರುದ್ಯಾವರ, ಧರ್ಮಸ್ಥಳ ಮತ್ತು ಮುಂಡಾಜೆ ಗ್ರಾಮಗಳಲ್ಲಿ ಸೇವೆ ಸಲ್ಲಿಸಿದ್ದರು.
ಕಳೆದ 10 ವರ್ಷಗಳಿಂದ ಉಜಿರೆ ಗ್ರಾಮ ಆಡಳಿತ ಅಧಿಕಾರಿಯಾಗಿ ಜನಮನ್ನಣೆ ಗಳಿಸಿದ್ದರು.ಆಡಳಿತಾತ್ಮಕ ಸೇವೆಯ ಜೊತೆಗೆ ನೌಕರರ ಸಂಘಟನೆಯಲ್ಲೂ ಸಕ್ರಿಯರಾಗಿದ್ದ ಇವರು, ಈ ಹಿಂದೆ ಗ್ರಾಮ ಆಡಳಿತಾಧಿಕಾರಿಗಳ ಸಂಘದ ಬೆಳ್ತಂಗಡಿ ತಾಲೂಕು ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ಪ್ರಸ್ತುತ ದಕ್ಷಿಣ ಕನ್ನಡ ಜಿಲ್ಲಾ ಗ್ರಾಮ ಆಡಳಿತಾಧಿಕಾರಿಗಳ ಸಂಘದ ಜಿಲ್ಲಾಧ್ಯಕ್ಷರಾಗಿ ಹಾಗೂ ರಾಜ್ಯ ಸರಕಾರಿ ನೌಕರರ ಸಂಘದ ಪರಿಷತ್ ಸದಸ್ಯರಾಗಿ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ.













