November 23, 2026
ಗ್ರಾಮಾಂತರ ಸುದ್ದಿಬೆಳ್ತಂಗಡಿ

ನ.25: ಧರ್ಮಸ್ಥಳಧ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆಯವರ ಹುಟ್ಟುಹಬ್ಬ-ಉದ್ಯೋಗ ಕಳೆದುಕೊಳ್ಳುವ ಭೀತಿಯ ನಡುವೆ ಬದುಕಿಗೆ ಭರವಸೆ ನೀಡಿದ ಧರ್ಮಾಧಿಕಾರಿಗಳು ಡಾ.ಡಿ.ವೀರೇಂದ್ರ ಹೆಗ್ಗಡೆ: ರವೀಶ್ ಪಡುಮಲೆ

ಅನಾದಿ ಕಾಲದಿಂದಲೂ ನಡೆದುಕೊಂಡು ಬಂದಿರುವ ಕಟ್ಟುಪಾಡುಗಳು, ಆಚಾರ-ವಿಚಾರಗಳು, ಸಂಪ್ರದಾಯಗಳು ಹಾಗೂ ಸತ್ಯ, ಧರ್ಮ ಮತ್ತು ನ್ಯಾಯದ ಉದಾತ್ತ ಪರಂಪರೆಯನ್ನು ಇಂದಿಗೂ ಕುಡುಮದ ಪವಿತ್ರ ಮಣ್ಣಿನಲ್ಲಿ ನಿರಂತರವಾಗಿ ಜೀವಂತವಾಗಿರಿಸಿ, ಮುಂದಿನ ಪೀಳಿಗೆಗಳಿಗೂ ಅದನ್ನು ಪರಂಪರೆಯಾಗಿ ಹಸ್ತಾಂತರಿಸುತ್ತಿರುವ ಶ್ರೇಷ್ಠ ಧರ್ಮಪೀಠವೇ ಶ್ರೀ ಕ್ಷೇತ್ರ ಧರ್ಮಸ್ಥಳ. ಇಂತಹ ಮಹೋನ್ನತ ಧರ್ಮಪೀಠದ ಧಾರ್ಮಿಕ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಮೌಲ್ಯಗಳನ್ನು ಎತ್ತಿಹಿಡಿದು, ಧರ್ಮ, ದಾನ, ದಯೆ, ನ್ಯಾಯ ಮತ್ತು ಮಾನವೀಯತೆಯ ಸಾಕಾರಮೂರ್ತಿಯಾಗಿ ಕ್ಷೇತ್ರದ ಪರಂಪರೆಯನ್ನು ಸಮರ್ಥವಾಗಿ ಮುನ್ನಡೆಸುತ್ತಿರುವವರು ಧರ್ಮಾಧಿಕಾರಿಗಳಾದ ಡಾ.ಡಿ. ವೀರೇಂದ್ರ ಹೆಗ್ಗಡೆಯವರು.

ತುಳುನಾಡಿನ ಮಣ್ಣಿನಲ್ಲಿ ಧರ್ಮ, ನ್ಯಾಯ, ಸತ್ಯ ಮತ್ತು ದೈವಿಕ ನಂಬಿಕೆಗಳು ಒಂದಕ್ಕೊAದು ಬೆಸೆದುಕೊಂಡಿವೆ. ನಾಗನಡೆ, ಸರ್ಪಜಿಡೆ, ಪಂಚವರ್ಣದ ಪುಂಚದ ಮಣ್ಣಿನಲ್ಲಿ ಶತಮಾನಗಳಿಂದ ಬೆಳೆದು ಬಂದಿರುವ ದೈವಾರಾಧನೆ, ನ್ಯಾಯಪೀಠಗಳ ಪರಂಪರೆ ಹಾಗೂ ಧಾರ್ಮಿಕ ಆಚರಣೆಗಳು ಈ ನೆಲದ ಸಾಂಸ್ಕೃತಿಕ ವೈಶಿಷ್ಟ್ಯವನ್ನು ಸಾರುತ್ತವೆ. ಅಂತಹ ಪವಿತ್ರ ಪರಂಪರೆಯ ಪ್ರಮುಖ ಕೇಂದ್ರವೇ ಮೂಡಾಯಿ ಕುಡುಮದ ಶ್ರೀ ಕ್ಷೇತ್ರ ಧರ್ಮಸ್ಥಳ. ಇಲ್ಲಿ ಧರ್ಮವೆಂಬುದು ಕೇವಲ ಆಚರಣೆಯಲ್ಲ, ಅದು ಬದುಕಿನ ಮೌಲ್ಯ, ಸೇವೆಯ ಮಾರ್ಗ ಮತ್ತು ಮಾನವೀಯತೆಯ ಪ್ರತಿಬಿಂಬ.

ಅಕ್ಟೋಬರ್ ೨೪, ೧೯೬೮ರಂದು ಶ್ರೀ ಕ್ಷೇತ್ರ ಧರ್ಮಸ್ಥಳದ ೨೧ನೇ ಧರ್ಮಾಧಿಕಾರಿಗಳಾಗಿ ಪಟ್ಟಾಭಿಷಿಕ್ತರಾದ ಡಾ.ಡಿ. ವೀರೇಂದ್ರ ಹೆಗ್ಗಡೆಯವರು, ಅಂದಿನಿAದ ಇಂದಿನವರೆಗೆ ಧರ್ಮದ ಬೆಳಕನ್ನು ಸಮಾಜದ ಪ್ರತಿಯೊಂದು ವರ್ಗಕ್ಕೂ ತಲುಪಿಸುವ ಮಹತ್ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಅತಿ ಕಿರಿಯ ವಯಸ್ಸಿನಲ್ಲಿ ಧರ್ಮಪೀಠದ ಜವಾಬ್ದಾರಿಯನ್ನು ವಹಿಸಿಕೊಂಡ ಅವರು, ತಮ್ಮ ದೂರದೃಷ್ಟಿ, ಕಾರ್ಯದಕ್ಷತೆ ಮತ್ತು ಸೇವಾ ಮನೋಭಾವದಿಂದ ಧರ್ಮಸ್ಥಳವನ್ನು ಜಗತ್ತೇ ಗೌರವಿಸುವ ಧಾರ್ಮಿಕ ಹಾಗೂ ಸಮಾಜಮುಖಿ ಶಕ್ತಿಕೇಂದ್ರವನ್ನಾಗಿ ರೂಪಿಸಿದ್ದಾರೆ.

ನೇತ್ರಾವತಿ ನದಿಯ ನೀರು ನಿರಂತರವಾಗಿ ಹರಿಯುವಂತೆ, ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಹರಿಯುತ್ತಿರುವ ಸೇವೆ, ದಾನ, ಧರ್ಮ ಮತ್ತು ಮಾನವೀಯತೆಯ ಪ್ರವಾಹವೂ ನಿತ್ಯ ನಿರಂತರವಾಗಿದೆ. ಭಕ್ತರ ಪಾಲಿಗೆ ಮಂಜುನಾಥ ಸ್ವಾಮಿ ಆರಾಧ್ಯ ದೈವವಾದರೆ, ಸಂಕಷ್ಟದಲ್ಲಿರುವ ಜನರಿಗೆ ಧರ್ಮಾಧಿಕಾರಿಗಳಾದ ಖಾವಂದರು ಭರವಸೆಯ ಬೆಳಕು. ದೇವರ ಸನ್ನಿಧಿಯಲ್ಲಿ ಪ್ರಾರ್ಥಿಸುವ ಭಕ್ತರಿಗೆ, ಧರ್ಮಪೀಠದ ಮೂಲಕ ಬದುಕಿನ ಸಮಸ್ಯೆಗಳಿಗೆ ಪರಿಹಾರ ಮತ್ತು ಹೊಸ ಭರವಸೆಯನ್ನು ನೀಡುವ ಅಪರೂಪದ ವ್ಯಕ್ತಿತ್ವ ಅವರದು.

ಪುರಾಣಗಳಲ್ಲಿ ಕಲ್ಪವೃಕ್ಷ ಮತ್ತು ಕಾಮಧೇನುಗಳು ಇಷ್ಟಾರ್ಥಗಳನ್ನು ಪೂರೈಸುವ ದೈವಿಕ ಶಕ್ತಿಗಳೆಂದು ವರ್ಣಿಸಲ್ಪಟ್ಟಿವೆ. ಆದರೆ ಇಂದಿನ ಕಾಲಘಟ್ಟದಲ್ಲಿ ಸಮಾಜದ ಅಸಂಖ್ಯಾತ ಜನರ ಬದುಕಿನಲ್ಲಿ ಆಶಾಕಿರಣವಾಗಿ ಮೂಡಿರುವುದು ಹೆಗ್ಗಡೆಯವರ ಸೇವಾ ಕಾರ್ಯಗಳು. ಧರ್ಮವನ್ನು ಕೇವಲ ಪೂಜೆ, ಪುನಸ್ಕಾರ ಮತ್ತು ಆಚರಣೆಗಳಿಗೆ ಸೀಮಿತಗೊಳಿಸದೆ, ಬಡವರ ಕಣ್ಣೀರು ಒರೆಸುವಲ್ಲಿ, ಅಸಹಾಯಕರಿಗೆ ಆಸರೆಯಾಗುವಲ್ಲಿ, ಮಹಿಳೆಯರಿಗೆ ಸ್ವಾವಲಂಬನೆಯ ದಾರಿ ತೋರಿಸುವಲ್ಲಿ ಮತ್ತು ಗ್ರಾಮೀಣ ಬದುಕನ್ನು ಅಭಿವೃದ್ಧಿಪಡಿಸುವಲ್ಲಿ ಅವರು ಧರ್ಮದ ನಿಜವಾದ ಅರ್ಥವನ್ನು ಸಾಕಾರಗೊಳಿಸಿದ್ದಾರೆ.
ವಿಶೇಷವಾಗಿ ಶ್ರೀ ಕ್ಷೇತ್ರದ ವತಿಯಿಂದ ಅನುಷ್ಠಾನಗೊಳ್ಳುತ್ತಿರುವ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಗ್ರಾಮೀಣ ಭಾರತದ ಆರ್ಥಿಕ ಮತ್ತು ಸಾಮಾಜಿಕ ಪರಿವರ್ತನೆಯಲ್ಲಿ ಮಹತ್ವದ ಪಾತ್ರ ವಹಿಸಿದೆ. ಸ್ವಸಹಾಯ ಸಂಘಗಳ ಮೂಲಕ ಮಹಿಳೆಯರನ್ನು ಸಂಘಟಿಸಿ, ಉಳಿತಾಯದ ಮಹತ್ವವನ್ನು ತಿಳಿಸಿ, ಬ್ಯಾಂಕಿAಗ್ ವ್ಯವಹಾರಗಳ ಅರಿವು ಮೂಡಿಸಿ, ಸ್ವಾವಲಂಬಿ ಬದುಕಿಗೆ ಪ್ರೇರಣೆ ನೀಡಿರುವುದು ಒಂದು ದೊಡ್ಡ ಸಾಮಾಜಿಕ ಕ್ರಾಂತಿಯೇ ಸರಿ. ಒಮ್ಮೆ ಆರ್ಥಿಕ ವ್ಯವಹಾರಗಳ ಅರಿವಿಲ್ಲದಿದ್ದ ಮಹಿಳೆಯರು ಇಂದು ಸಂಘಟನೆಯ ಶಕ್ತಿಯಿಂದ ಉದ್ಯಮಿಗಳಾಗಿ, ಕುಟುಂಬದ ಆರ್ಥಿಕ ನಿರ್ಧಾರಗಳಲ್ಲಿ ಪ್ರಮುಖ ಪಾತ್ರ ವಹಿಸುವ ಮಟ್ಟಕ್ಕೆ ಬೆಳೆದಿದ್ದಾರೆ. ಇದು ಕೇವಲ ಆರ್ಥಿಕ ಸಬಲೀಕರಣವಲ್ಲ, ಮಹಿಳೆಯರ ಆತ್ಮಗೌರವ ಮತ್ತು ಆತ್ಮವಿಶ್ವಾಸವನ್ನು ಬೆಳೆಸಿದ ಮಹತ್ತರ ಸಾಧನೆ.

ಶಿಕ್ಷಣ, ಆರೋಗ್ಯ, ಸ್ವಉದ್ಯೋಗ, ಗ್ರಾಮೀಣ ಅಭಿವೃದ್ಧಿ, ಕೃಷಿ, ನಿರುದ್ಯೋಗ ನಿವಾರಣೆ, ಸಾಮೂಹಿಕ ವಿವಾಹ, ವಿಕಲಚೇತನರ ಕಲ್ಯಾಣ ಸೇರಿದಂತೆ ಹತ್ತು ಹಲವು ಕ್ಷೇತ್ರಗಳಲ್ಲಿ ಶ್ರೀ ಕ್ಷೇತ್ರದ ಸೇವಾ ಚಟುವಟಿಕೆಗಳು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪಿವೆ. ಬಡವರ ಬದುಕಿನಲ್ಲಿ ಭರವಸೆಯ ಬೆಳಕನ್ನು ಮೂಡಿಸುವ ಈ ಯೋಜನೆಗಳು ಧರ್ಮದ ಸಾಮಾಜಿಕ ಆಯಾಮವನ್ನು ಜಗತ್ತಿಗೆ ಪರಿಚಯಿಸಿವೆ.
ಜಗತ್ತನ್ನೇ ತಲ್ಲಣಗೊಳಿಸಿದ ಕೊರೊನಾ ಸಂಕಷ್ಟದ ದಿನಗಳನ್ನು ಮರೆಯಲು ಸಾಧ್ಯವೇ? ಲಾಕ್‌ಡೌನ್‌ನಿಂದ ಜನಜೀವನ ಅಸ್ತವ್ಯಸ್ತಗೊಂಡು, ಉದ್ಯೋಗ ಮತ್ತು ಆದಾಯದ ಭದ್ರತೆಯೇ ಪ್ರಶ್ನಾರ್ಥಕವಾಗಿದ್ದ ಸಂದರ್ಭದಲ್ಲಿ ಶ್ರೀ ಕ್ಷೇತ್ರದ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಿಬ್ಬಂದಿಗೆ ಪೂರ್ಣ ವೇತನವನ್ನು ನೀಡಿ ಅವರ ಬದುಕಿಗೆ ಭದ್ರತೆ ಒದಗಿಸಿದ ನಡೆ, ಹೆಗ್ಗಡೆಯವರ ಮಾನವೀಯ ಕಾಳಜಿಗೆ ಸಾಕ್ಷಿಯಾಗಿದೆ. ಸಂಕಷ್ಟದ ಸಮಯದಲ್ಲಿ ಮನುಷ್ಯನಿಗೆ ನೆರವಾಗುವುದೇ ನಿಜವಾದ ಧರ್ಮ ಎಂಬ ಸಂದೇಶವನ್ನು ಅವರು ತಮ್ಮ ಕಾರ್ಯದ ಮೂಲಕ ಸಾರಿದ್ದಾರೆ.

ತುಳುನಾಡಿನ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿರುವ ದೈವಾರಾಧನೆ ಮತ್ತು ದೇವಸ್ಥಾನಗಳ ಪರಂಪರೆಯ ಸಂರಕ್ಷಣೆಯಲ್ಲಿಯೂ ಪೂಜ್ಯರ ಕೊಡುಗೆ ಮಹತ್ವದ್ದಾಗಿದೆ. ಶಿಥಿಲಾವಸ್ಥೆಯಲ್ಲಿದ್ದ ಅನೇಕ ದೈವಸ್ಥಾನಗಳು ಮತ್ತು ದೇವಸ್ಥಾನಗಳ ಜೀರ್ಣೋದ್ಧಾರಕ್ಕೆ ಪ್ರೋತ್ಸಾಹ ನೀಡುವ ಮೂಲಕ ಭಕ್ತರ ನಂಬಿಕೆ, ಶ್ರದ್ಧೆ ಮತ್ತು ಪರಂಪರೆಯನ್ನು ಉಳಿಸುವ ಕಾರ್ಯಕ್ಕೆ ಅವರು ಬೆನ್ನೆಲುಬಾಗಿದ್ದಾರೆ. ಧಾರ್ಮಿಕ ಶ್ರದ್ಧಾಕೇಂದ್ರಗಳು ಸಮಾಜದ ಏಕತೆ ಮತ್ತು ಸಾಮರಸ್ಯದ ಕೇಂದ್ರಗಳಾಗಬೇಕು ಎಂಬ ಆಶಯವನ್ನು ತಮ್ಮ ಕಾರ್ಯಗಳ ಮೂಲಕ ಸಾಕಾರಗೊಳಿಸಿದ್ದಾರೆ.
ತುಳುನಾಡಿನ ದೈವಾರಾಧನೆಯ ಮೂಲ ಆಶಯವೇ ಸಾಮರಸ್ಯ. ಜಾತಿ, ಮತ, ಪಂಥಗಳ ಎಲ್ಲೆಗಳನ್ನು ಮೀರಿದ ದೈವಿಕ ಆರಾಧನೆಯಲ್ಲಿ ಎಲ್ಲ ಸಮುದಾಯದ ಜನರು ಒಂದಾಗಿ ಪಾಲ್ಗೊಳ್ಳುವುದು ಇಲ್ಲಿನ ವಿಶೇಷತೆ. ದೈವದ ನುಡಿಯಲ್ಲಿ ವ್ಯಕ್ತವಾಗುವ ಮಾನವೀಯತೆಯ ಸಂದೇಶ, ಎಲ್ಲರೂ ಒಂದೇ ತಾಯಿಯ ಮಕ್ಕಳು ಎಂಬ ಭಾವನೆ ನಮ್ಮ ಸಮಾಜಕ್ಕೆ ನೀಡುವ ಅಮೂಲ್ಯ ಪಾಠವಾಗಿದೆ. ಇದೇ ಆಶಯವನ್ನು ತಮ್ಮ ಬದುಕಿನ ಧ್ಯೇಯವನ್ನಾಗಿಸಿಕೊಂಡಿರುವ ಪೂಜ್ಯ ಹೆಗ್ಗಡೆಯವರು ಜಾತಿ, ಧರ್ಮ, ಬಡವ-ಬಲ್ಲಿದ ಎಂಬ ಯಾವುದೇ ಭೇದಭಾವವಿಲ್ಲದೆ ಎಲ್ಲರನ್ನೂ ಸಮಾನ ಪ್ರೀತಿಯಿಂದ ಕಾಣುತ್ತಾರೆ. ಅವರ ಪಾಲಿಗೆ ಸೇವೆ ಮಾಡುವುದೇ ಧರ್ಮ, ಮಾನವೀಯತೆಯನ್ನು ಉಳಿಸುವುದೇ ನಿಜವಾದ ಆರಾಧನೆ.
ಧರ್ಮಸ್ಥಳದ ಧರ್ಮಪೀಠದಲ್ಲಿ ಕುಳಿತುಕೊಂಡು ಅವರು ನೀಡುವ ಮಾರ್ಗದರ್ಶನವು ಕೇವಲ ಧಾರ್ಮಿಕ ವಿಚಾರಗಳಿಗೆ ಸೀಮಿತವಾಗಿಲ್ಲ. ಶಿಕ್ಷಣ, ಸಂಸ್ಕೃತಿ, ಸಾಹಿತ್ಯ, ಕಲೆ, ಕೃಷಿ, ಪರಿಸರ ಮತ್ತು ಸಮಾಜದ ಅಭಿವೃದ್ಧಿಯವರೆಗೆ ಅವರ ಚಿಂತನೆ ವಿಸ್ತರಿಸಿದೆ. ಪರಂಪರೆಯನ್ನು ಗೌರವಿಸುತ್ತಲೇ ಆಧುನಿಕತೆಯನ್ನು ಸ್ವೀಕರಿಸುವ ಅವರ ದೃಷ್ಟಿಕೋನ ಇಂದಿನ ಸಮಾಜಕ್ಕೆ ಮಾದರಿಯಾಗಿದೆ. ಧರ್ಮ ಮತ್ತು ಅಭಿವೃದ್ಧಿ ಪರಸ್ಪರ ಪೂರಕವಾಗಿರಬಹುದು ಎಂಬುದನ್ನು ಅವರು ತಮ್ಮ ಕಾರ್ಯಶೈಲಿಯಿಂದ ಸಾಬೀತುಪಡಿಸಿದ್ದಾರೆ.

ಒಂದು ಧಾರ್ಮಿಕ ಶ್ರದ್ಧಾಕೇಂದ್ರವನ್ನು ಸಮಾಜದ ಸರ್ವತೋಮುಖ ಅಭಿವೃದ್ಧಿಯ ಕೇಂದ್ರವನ್ನಾಗಿ ರೂಪಿಸುವುದು ಸಾಮಾನ್ಯ ಸಾಧನೆಯಲ್ಲ. ಕೋಟ್ಯಂತರ ಭಕ್ತರ ನಂಬಿಕೆಯ ಪ್ರತೀಕವಾಗಿರುವ ಶ್ರೀ ಕ್ಷೇತ್ರ ಧರ್ಮಸ್ಥಳವು ಇಂದು ಧಾರ್ಮಿಕತೆ, ಶಿಕ್ಷಣ, ಸೇವೆ, ಸಂಸ್ಕೃತಿ ಮತ್ತು ಮಾನವೀಯತೆಯ ಸಂಗಮಕ್ಷೇತ್ರವಾಗಿ ಗುರುತಿಸಿಕೊಂಡಿದೆ. ಈ ಮಹತ್ತರ ಪರಿವರ್ತನೆಯ ಹಿಂದೆ ಪೂಜ್ಯ ಡಾ.ಡಿ. ವೀರೇಂದ್ರ ಹೆಗ್ಗಡೆಯವರ ದೂರದೃಷ್ಟಿ, ಪರಿಶ್ರಮ ಮತ್ತು ನಿಸ್ವಾರ್ಥ ಸೇವೆಯಿದೆ.
ಹುಟ್ಟುಹಬ್ಬವೆಂಬುದು ಕೇವಲ ವ್ಯಕ್ತಿಯ ಜನ್ಮದಿನದ ಸಂಭ್ರಮವಲ್ಲ, ಆ ವ್ಯಕ್ತಿಯ ಬದುಕಿನ ಸಾಧನೆಗಳನ್ನು ಸ್ಮರಿಸಿ, ಸಮಾಜಕ್ಕೆ ಅವರು ನೀಡಿದ ಕೊಡುಗೆಗಳನ್ನು ಗೌರವಿಸುವ ಸುಸಂದರ್ಭವೂ ಹೌದು. ಪೂಜ್ಯ ಹೆಗ್ಗಡೆಯವರ ಬದುಕು ಸೇವೆಯೇ ಸಾಧನೆ, ದಾನವೇ ಧರ್ಮ, ಮಾನವೀಯತೆಯೇ ಶ್ರೇಷ್ಠ ಮೌಲ್ಯ ಮತ್ತು ಸಾಮರಸ್ಯವೇ ಸುಂದರ ಸಮಾಜದ ಅಡಿಪಾಯ ಎಂಬುದನ್ನು ನಮಗೆಲ್ಲ ತಿಳಿಸಿಕೊಡುತ್ತದೆ.

ನೇತ್ರಾವತಿಯ ನದಿ ಹರಿವು ನಿಲ್ಲದಂತೆ, ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಹರಿಯುತ್ತಿರುವ ದಾನ-ಧರ್ಮ-ಸೇವೆಯ ಧಾರೆ ಎಂದೆAದಿಗೂ ನಿರಂತರವಾಗಿರಲಿ. ಕೋಟ್ಯಂತರ ಜನರ ಬದುಕಿಗೆ ಭರವಸೆಯ ಬೆಳಕಾಗಿರುವ ಡಾ.ಡಿ. ವೀರೇಂದ್ರ ಹೆಗ್ಗಡೆಯವರಿಗೆ ಉತ್ತಮ ಆರೋಗ್ಯ, ದೀರ್ಘಾಯುಷ್ಯ ಮತ್ತು ಇನ್ನಷ್ಟು ಸಮಾಜಮುಖಿ ಕಾರ್ಯಗಳನ್ನು ಕೈಗೊಳ್ಳುವ ಶಕ್ತಿ ದೊರೆಯಲಿ ಎಂದು ಶ್ರೀ ಮಂಜುನಾಥ ಸ್ವಾಮಿಯಲ್ಲಿ ಪ್ರಾರ್ಥಿಸುತ್ತೇನೆ.
ದಾನ, ಧರ್ಮ, ದಯೆ ಮತ್ತು ಸಾಮರಸ್ಯ ಒಂದಾಗಿ ಮನುಷ್ಯತ್ವದ ರೂಪ ತಾಳಿದಾಗ ಮೂಡುವ ಪವಿತ್ರ ವ್ಯಕ್ತಿತ್ವವೇ ಡಾ.ಡಿ. ವೀರೇಂದ್ರ ಹೆಗ್ಗಡೆಯವರು.

ನಮ್ಮ ಧರ್ಮಾಧಿಕಾರಿಗಳು – ನಮ್ಮ ಬದುಕಿನ ಪ್ರೇರಣಾಶಕ್ತಿ.
ಸಂಸ್ಕೃತಿ, ಸಂಪ್ರದಾಯ, ಸೇವೆ ಮತ್ತು ಮಾನವೀಯತೆಯ ಸಾಕಾರ ಮೂರ್ತಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು.

  • ರವೀಶ್ ಪಡುಮಲೆ

Related posts

ಬೆಳ್ತಂಗಡಿ ಪಟ್ಟಣ ಪಂಚಾಯತ್ ಮೀಸಲಾತಿ ಪ್ರಕಟ

Suddi Udaya

ಪ್ರಧಾನಿ ನರೇಂದ್ರ ಮೋದಿಯವರ ಹುಟ್ಟುಹಬ್ಬ: ಅಂಡಿಂಜೆ ಶ್ರೀ ಮಾರಿಕಾಂಬಾ ದೇವಸ್ಥಾನದಲ್ಲಿ ವಿಶೇಷ ಪೂಜೆ

Suddi Udaya

ಕಾಂಗ್ರೆಸ್ ಪಕ್ಷಕ್ಕಾಗಿ ಮಾಡಿದ ತ್ಯಾಗ ಹೋರಾಟಕ್ಕೆ ಹೈಕಮಾಂಡ್ ಸೂಕ್ತ ಸ್ಥಾನಮಾನ ನೀಡಿದೆ: ಮೋಹನ್ ಗೌಡ ಕಲ್ಮಂಜ

Suddi Udaya

ಕಳ್ಳತನ ಪ್ರಕರಣವನ್ನು ಭೇದಿಸಿದ ಬಂಟ್ವಾಳ ಪೊಲೀಸರು: ಆರೋಪಿ ತೆಕ್ಕಾರು ನಿವಾಸಿ ಮಹಮ್ಮದ್ ಫಾರೂಕ್ ಮತ್ತು ಕಳವುಗೈದ ನಗದು ವಶ

Suddi Udaya

ಸುಲ್ಕೇರಿಮೊಗ್ರು ಪುರುಷರ ಬಳಗ ವತಿಯಿಂದ ರಾಶಿ ಪೂಜೆ

Suddi Udaya

ಜೆಸಿಐ ಬೆಳ್ತಂಗಡಿ ಮಂಜುಶ್ರೀಯಲ್ಲಿ ” ಸಲ್ಯೂಟ್ ದಿ ಸೈಲೆಂಟ್ ಸ್ಟಾರ್ ” ಕಾರ್ಯಕ್ರಮದಲ್ಲಿ ಸಮಾಜ ಸೇವಕ ಯಶೋಧರ ಶೆಟ್ಟಿ ಬಳಂಜರವರಿಗೆ ಸನ್ಮಾನ

Suddi Udaya
error: Content is protected !!