ಉಜಿರೆ: ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಪದ್ಮವಿಭೂಷಣ, ರಾಜರ್ಷಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ 79 ನೇ ಜನ್ಮದಿನದ ಪ್ರಯುಕ್ತ ನ. 25ರಂದು ಕಾಲೇಜಿನ ರೋವರ್ಸ್ ಮತ್ತು ರೇಂಜರ್ಸ್ ದಳದ ವತಿಯಿಂದ ‘ವ್ಯಸನಮುಕ್ತ – ಯುವಶಕ್ತಿ’ ಎಂಬ ಧ್ಯೇಯದೊಂದಿಗೆ ಸೈಕಲ್ ಜಾಥಾದ ಮೂಲಕ ಜನ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಕಾಲೇಜಿನ ಪ್ರಾಚಾರ್ಯರಾದ ಪ್ರಮೋದ್ ಕುಮಾರ್ ಬಿ. ಅವರು ಸೈಕಲ್ ಜಾಥಾಕ್ಕೆ ಹಸಿರು ನಿಶಾನೆ ತೋರಿಸಿ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, “ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಆಶಯದಂತೆ ಸ್ವಾಸ್ಥ್ಯ ಸಮಾಜದ ನಿರ್ಮಾಣಕ್ಕಾಗಿ ಜಾಗೃತಿ ಮೂಡಿಸುವುದು ಇಂದಿನ ಕಾಲಘಟ್ಟದಲ್ಲಿ ಅನಿವಾರ್ಯವಾಗಿದೆ. ಪ್ರೌಢಶಿಕ್ಷಣ ಹಾಗೂ ಕಾಲೇಜು ಹಂತದಲ್ಲಿಯೇ ವಿದ್ಯಾರ್ಥಿಗಳು ಉತ್ತಮ ಜೀವನ ಮೌಲ್ಯಗಳನ್ನು ಅಳವಡಿಸಿಕೊಳ್ಳುವುದು ಅವಶ್ಯಕ. ಯುವ ಸಮುದಾಯವು ದುಶ್ಚಟಗಳಿಗೆ ದಾಸರಾಗದೆ ಸಮಾಜವನ್ನು ಸುಸ್ಥಿರ ಹಾಗೂ ಸ್ವಾಸ್ಥ್ಯವಾಗಿಟ್ಟುಕೊಳ್ಳುವ ಮಹತ್ತರ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸಬೇಕು. ಯಾವಾಗ ನಮ್ಮ ಮನಸ್ಸು ವ್ಯಸನದಿಂದ ಹೊರಬಂದು ಪರಿವರ್ತನೆ ಆಗುತ್ತದೋ ಆವಾಗ ಸಮಾಜವೂ ಸಹ ತನ್ನಿಂದ ತಾನೇ ಪರಿವರ್ತನೆ ಆಗುತ್ತದೆ ಎಂದು ನುಡಿದು ಅಭಿಯಾನಕ್ಕೆ ಶುಭ ಹಾರೈಸಿದರು.ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಕನ್ನಡ ಉಪನ್ಯಾಸಕ ಡಾ. ಮಹಾವೀರ ಜೈನ್ ಜಾಥಾಕ್ಕೆ ಶುಭಕೋರಿದರು
ರೋವರ್ಸ್ ಮತ್ತು ರೇಂಜರ್ಸ್ ದಳದ ವಿದ್ಯಾರ್ಥಿಗಳು ಸೈಕಲ್ ಜಾಥಾದಲ್ಲಿ ವಿವಿಧ ಸಮಾಜ ಸುಧಾರಣಾ ಘೋಷಣೆಗಳನ್ನು ಕೂಗುತ್ತಾ ಉಜಿರೆ ಪೇಟೆಯ ಸುತ್ತಮುತ್ತ ಸಂಚರಿಸಿದರು. ವಿವಿಧ ವಸತಿ ನಿಲಯಗಳು ಹಾಗೂ ಅಂಗಡಿ-ಮುಂಗಟ್ಟುಗಳಿಗೆ ತೆರಳಿ ‘ವ್ಯಸನಮುಕ್ತ – ಯುವಶಕ್ತಿ’ ಜಾಗೃತಿ ಪೋಸ್ಟರ್‌ಗಳನ್ನು ವಿತರಿಸಿ, ದುಶ್ಚಟಗಳ ದುಷ್ಪರಿಣಾಮಗಳ ಬಗ್ಗೆ ಸಾರ್ವಜನಿಕರಿಗೆ ಮನವರಿಕೆ ಮಾಡಿಕೊಟ್ಟರು. ನಂತರ ಕಾಲೇಜಿನ ಎಲ್ಲಾ ತರಗತಿಗಳಿಗೂ ತೆರಳಿ ಸಹಪಾಠಿಗಳಲ್ಲಿಯೂ ಈ ಕುರಿತು ಅರಿವು ಮೂಡಿಸಿದರು.ಈ ಜಾಗೃತಿ ಅಭಿಯಾನವನ್ನು ಕಾಲೇಜಿನ ರೋವರ್ಸ್ ಮತ್ತು ರೇಂಜರ್ಸ್ ದಳದ ಅಧಿಕಾರಿಗಳಾದ ಲಕ್ಷ್ಮೀಶ ಭಟ್ ಮತ್ತು ಅಂಕಿತಾ ಎಂ.ಕೆ. ಅವರು ಮಾರ್ಗದರ್ಶಿಸಿದ್ದರು.













