
ಧರ್ಮಸ್ಥಳ: ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಹುಟ್ಟುಹಬ್ಬದ ಪ್ರಯುಕ್ತ ಸುದ್ದಿ ಉದಯ ವಾರಪತ್ರಿಕೆ ಹೊರತಂದ ವಿಶೇಷ ಪುರವಣಿಯನ್ನು ಡಾ. ಹೆಗ್ಗಡೆಯವರು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.

ಸುದ್ದಿ ಉದಯ ವಾರಪತ್ರಿಕೆಯ ಮುಖ್ಯಸ್ಥರಾದ ಸಂತೋಷ್ ಪಿ. ಕೋಟ್ಯಾನ್ ಅವರು ವಿಶೇಷ ಪುರವಣಿಯನ್ನು ಡಾ. ಹೆಗ್ಗಡೆಯವರಿಗೆ ಗೌರವಪೂರ್ವಕವಾಗಿ ಹಸ್ತಾಂತರಿಸಿ, ಅದರಲ್ಲಿರುವ ವಿಶೇಷ ಲೇಖನಗಳು ಹಾಗೂ ಹುಟ್ಟುಹಬ್ಬದ ಸಂಭ್ರಮದ ಕುರಿತಾದ ಪ್ರಕಟಣೆಗಳ ಬಗ್ಗೆ ವಿವರಿಸಿದರು. ಪುರವಣಿಯನ್ನು ವೀಕ್ಷಿಸಿದ ಡಾ. ಹೆಗ್ಗಡೆಯವರು ಸಂತಸ ವ್ಯಕ್ತಪಡಿಸಿ, ತುಂಬಾ ಸಂತೋಷವಾಯಿತು. ಶ್ರೀ ಮಂಜುನಾಥ ಸ್ವಾಮಿಯ ಅನುಗ್ರಹದಿಂದ ಪತ್ರಿಕೆ ಇನ್ನಷ್ಟು ಅಭಿವೃದ್ಧಿ ಹೊಂದಿ, ಉತ್ತಮವಾಗಿ ಬೆಳೆಯಲಿ. ವಿಶೇಷ ಪುರವಣಿ ತುಂಬಾ ಅಚ್ಚುಕಟ್ಟಾಗಿ ಹಾಗೂ ಸುಂದರವಾಗಿ ಮೂಡಿಬಂದಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಡಾ. ಹೆಗ್ಗಡೆಯವರ ಆಪ್ತ ಕಾರ್ಯದರ್ಶಿ ಎ. ವೀರು ಶೆಟ್ಟಿ, ರಾಜೇಂದ್ರ ದಾಸ್, ಮಹಾವೀರ ಜೈನ್, ಪಾರ್ಶ್ವನಾಥ ಜೈನ್, ಪ್ರಿಯಾಂಕ್ ಜೈನ್, ಸುನಿಲ್ ಬೇಕಲ್ ಮೊದಲಾದವರು ಉಪಸ್ಥಿತರಿದ್ದರು.













