November 26, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಲಾಯಿಲ ಪಡ್ಲಾಡಿ ಹಿ. ಪ್ರಾ. ಶಾಲೆಯಲ್ಲಿ ಎಸ್‌ಡಿಎಂ ಕಾಲೇಜಿನ ಎನ್‌ಎಸ್‌ಎಸ್ ವಾರ್ಷಿಕ ವಿಶೇಷ ಶಿಬಿರ

ಬೆಳ್ತಂಗಡಿ: ವಿದ್ಯಾರ್ಥಿಗಳು ಏಳು ದಿನಗಳ ಎನ್‌ಎಸ್‌ಎಸ್ ಶಿಬಿರದಲ್ಲಿ ಭಾಗವಹಿಸುವ ಮೂಲಕ ಶಿಸ್ತು, ಸಮಯಪ್ರಜ್ಞೆ ಹಾಗೂ ಜೀವನ ಮೌಲ್ಯಗಳನ್ನು ಅರಿತುಕೊಂಡು, ಸಮಾಜಸೇವೆಯ ಮೂಲಕ ಸರ್ವತೋಮುಖ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯಕ್ರಮ ಸಂಯೋಜನಾಧಿಕಾರಿ ಡಾ. ಶೇಷಪ್ಪ ಕೆ. ಹೇಳಿದರು.

ಲಾಯಿಲ (ಪಡ್ಲಾಡಿ) ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಉಜಿರೆ ಎಸ್‌ಡಿಎಂ ಕಾಲೇಜಿನ ಎನ್‌ಎಸ್‌ಎಸ್ ಘಟಕಗಳ ವತಿಯಿಂದ ‘ವ್ಯಸನ ಮತ್ತು ಕ್ಷಯಮುಕ್ತ ಯುವಜನತೆ’ ಎಂಬ ಧ್ಯೇಯವಾಕ್ಯದಡಿ ಆಯೋಜಿಸಲಾದ ಒಂದು ವಾರದ ವಾರ್ಷಿಕ ವಿಶೇಷ ಶಿಬಿರವನ್ನು ನ. 25ರಂದು ಉದ್ಘಾಟಿಸಿ ಅವರು ಮಾತನಾಡಿದರು. ಮಾನವ ಸಂಬಂಧಕ್ಕಿಂತ ಮಿಗಿಲಾದ ಸಂಬಂಧ ಮತ್ತೊಂದಿಲ್ಲ. ಮನಸ್ಸಿನ ಪರಿಶುದ್ಧತೆ ಮತ್ತು ನೆಮ್ಮದಿಯ ಜೀವನಕ್ಕೆ ಎನ್‌ಎಸ್‌ಎಸ್ ಒಂದು ಉತ್ತಮ ಉದಾಹರಣೆಯಾಗಿದೆ. ಸಮಾಜಮುಖಿ ಕಾರ್ಯಗಳ ಮೂಲಕ ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಬೇಕು. ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಯಲ್ಲಿ ಎನ್‌ಎಸ್‌ಎಸ್ ಮಹತ್ವದ ಪಾತ್ರ ವಹಿಸುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಉಜಿರೆಯ ಶ್ರೀ ಧರ್ಮಸ್ಥಳ ಶಿಕ್ಷಣ ಸಂಸ್ಥೆಯ ಶೈಕ್ಷಣಿಕ ಸಂಯೋಜಕ ಎಸ್. ಎನ್. ಕಾಕತ್ಕರ್ ಮಾತನಾಡಿ, ಮೀನಿನಂತೆ ಈಜಲು, ಹಕ್ಕಿಯಂತೆ ಹಾರಲು ಹಾಗೂ ಮಾನವೀಯತೆಯಿಂದ ಬದುಕಲು ಎನ್‌ಎಸ್‌ಎಸ್ ಜೀವನದಲ್ಲಿ ಬಹುದೊಡ್ಡ ಅಡಿಪಾಯವಾಗಿದೆ ಎಂದರು .ಶಿಸ್ತು, ಸಮಯಪಾಲನೆ, ಸಂಘಜೀವನ ಮತ್ತು ನಾಯಕತ್ವದ ಗುಣಗಳನ್ನು ಬೆಳೆಸುವಲ್ಲಿ ಎನ್‌ಎಸ್‌ಎಸ್ ಶಿಬಿರಗಳು ಮಹತ್ವದ ಪಾತ್ರ ವಹಿಸುತ್ತವೆ. ಗ್ರಾಮೀಣ ಜೀವನಶೈಲಿಯನ್ನು ಅರಿತುಕೊಂಡು ಅದರ ಉತ್ತಮ ಅಂಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಶಿಬಿರದ ಸ್ವಾಗತ ಸಮಿತಿಯ ಅಧ್ಯಕ್ಷ ನಿರಂಜನ್ ಜೈನ್ ಪುದೊಟ್ಟು ಮಾತನಾಡಿ, ತಮ್ಮ ಜೀವನಾನುಭವಗಳನ್ನು ಹಂಚಿಕೊಂಡು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು. ಜನರನ್ನು ಮೆಚ್ಚಿಸುವ ಬದಲಾಗಿ ಸಮಾಜಸೇವೆಯ ಮೂಲಕ ಜನಾರ್ದನನನ್ನು ಮೆಚ್ಚಿಸಬೇಕು ಎಂದು ಹೇಳಿದರು. ಎಸ್‌ಡಿಎಂ ಕಾಲೇಜಿನ ಎನ್‌ಎಸ್‌ಎಸ್ ಹಿರಿಯ ಯೋಜನಾಧಿಕಾರಿ ಡಾ. ಮಹೇಶ್ ಕುಮಾರ್ ಶೆಟ್ಟಿ ಮಾತನಾಡಿ, ಸ್ವಯಂಸೇವಕರು ತಮಗೆ ದೊರೆತ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ತಿಳಿಸಿದರು. ಚಂದ್ಕೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರ ಧನಂಜಯ ಅಜ್ರಿ, ಲಾಯಿಲ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಕರುಣಾಕರ ಎನ್. ಹಾಗೂ ಶಿಬಿರದ ಸ್ವಾಗತ ಸಮಿತಿಯ ಕಾರ್ಯದರ್ಶಿ, ಪತ್ರಕರ್ತರ ಸಂಘದ ನಿಕಟಪೂರ್ವ ಅಧ್ಯಕ್ಷ ಪ್ರಸಾದ್ ಶೆಟ್ಟಿ ಎಣಿಂಜೆ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಸ್‌ಡಿಎಂ ಕಾಲೇಜಿನ ಪ್ರಾಂಶುಪಾಲ ಡಾ. ವಿಶ್ವನಾಥ ಪಿ. ಮಾತನಾಡಿ, ವಿದ್ಯಾರ್ಥಿಗಳು ಶಿಬಿರಗಳಲ್ಲಿ ಭಾಗವಹಿಸುವ ಮೂಲಕ ಆತ್ಮವಿಶ್ವಾಸ ಬೆಳೆಸಿಕೊಳ್ಳುವುದರ ಜೊತೆಗೆ ಜೀವನ ಮೌಲ್ಯಗಳನ್ನು ಅರಿತುಕೊಳ್ಳಬಹುದು ಎಂದರು. ನಾಯಕತ್ವ, ಹೊಂದಾಣಿಕೆ, ತಾಳ್ಮೆ ಹಾಗೂ ಸಹನೆಯಂತಹ ಮಹತ್ವದ ಗುಣಗಳನ್ನು ವಿದ್ಯಾರ್ಥಿಗಳು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಗಾಂಧೀಜಿಯವರು ಕಂಡ ರಾಮರಾಜ್ಯದ ಪರಿಕಲ್ಪನೆಯಂತೆ ಶ್ರಮದೊಂದಿಗೆ ಸಮಾಜಸೇವೆಯಲ್ಲಿ ತೊಡಗಿರುವ ಶಿಬಿರಾರ್ಥಿಗಳಿಗೆ ಅವರು ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಶಿಬಿರಾರ್ಥಿಗಳು ಶಿಬಿರದ ಕುರಿತು ಸಿದ್ಧಪಡಿಸಿದ ಭಿತ್ತಿಪತ್ರವನ್ನು ಬಿಡುಗಡೆಗೊಳಿಸಲಾಯಿತು.

ಕಾರ್ಯಕ್ರಮದಲ್ಲಿ ಲಾಯಿಲ ಹಿರಿಯ ಪ್ರಾಥಮಿಕ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷೆ ಮಮತಾ ಬಜಕ್ರೆಸಾಲು, ಎಸ್‌ಡಿಎಂ ಕಾಲೇಜಿನ ಸಸ್ಯಶಾಸ್ತ್ರ ವಿಭಾಗದ ಸಹಪ್ರಾಧ್ಯಾಪಕ ಡಾ. ಸುದರ್ಶನ್ ಪಿ., ಗಣಕ ವಿಜ್ಞಾನ ವಿಭಾಗದ ಸಹಪ್ರಾಧ್ಯಾಪಕಿ ದಿವ್ಯ ಯಾದವ್, ಶಿಬಿರದ ಸ್ವಾಗತ ಸಮಿತಿಯ ಸದಸ್ಯರು, ಊರಿನ ಗ್ರಾಮಸ್ಥರು, ಹಿರಿಯ ಸ್ವಯಂಸೇವಕರು ಹಾಗೂ ಸ್ವಯಂಸೇವಕರು ಉಪಸ್ಥಿತರಿದ್ದರು .ಎನ್‌ಎಸ್‌ಎಸ್ ಯೋಜನಾಧಿಕಾರಿ ಡಾ. ಮಾಲಿನಿ ಅಂಚನ್ ಸ್ವಾಗತಿಸಿದರು. ಡಾ. ಸುದೀರ್ ಕೆ.ವಿ. ವಂದಿಸಿದರು. ಸ್ವಯಂಸೇವಕರಾದ ಕೆ.ಎನ್. ಧನುಷ್ ಹಾಗೂ ದೀಪಕ್ ಕಾರ್ಯಕ್ರಮ ನಿರೂಪಿಸಿದರು.

ಗ್ರಾಮಸ್ಥರಿಂದ ಭವ್ಯ ಸ್ವಾಗತ: ವಾರ್ಷಿಕ ಶಿಬಿರ ಕಾರ್ಯಕ್ರಮಕ್ಕೆ ಆಗಮಿಸಿದ ಎಸ್ ಡಿ.ಎಂ ಕಾಲೇಜಿನ ಯೋಜನಾಧಿಕಾರಿಗಳನ್ನು ಹಾಗೂ ವಿದ್ಯಾರ್ಥಿಗಳನ್ನು ಗ್ರಾಮಸ್ಥರು ವಿಶೇಷ ರೀತಿಯಲ್ಲಿ ಸ್ವಾಗತಿಸಿ ಬರಮಾಡಿಕೊಂಡರು. ತುಳು ನಾಡ ಸಂಪ್ರದಾಯದಂತೆ ಬೆಲ್ಲ ನೀರು ಹೂ ನೀಡಿ ನಂತರ ನಿನ್ನಿಕಲ್ಕು ಜಂಕ್ಷನ್ ನಿಂದ ಪಡ್ಲಾಡಿ ಶಾಲೆಯವರೆಗೆ ಶಾಲಾ ಮಕ್ಕಳ ಬ್ಯಾಂಡ್ ವಾದ್ಯಗಳೊಂದಿಗೆ ಮೆರವಣಿಗೆಯಲ್ಲಿ ಕರೆದುಕೊಂಡು ಬರಲಾಯಿತು. ಸ್ವಾಗತ ಸಮಿತಿಯ ಉಪಾಧ್ಯಕ್ಷ ಜಯಾನಂದ ಅಂಕಾಜೆ ಅತಿಥಿಗಳನ್ನು ಸ್ವಾಗತಿಸಿದರು. ಈ ವೇಳೆ ಸ್ವಾಗತ ಸಮಿತಿ ಅಧ್ಯಕ್ಷ ನಿರಂಜನ್ ಜೈನ್ ಪುದ್ದೊಟ್ಟು, ಕಾರ್ಯದರ್ಶಿ ಪ್ರಸಾದ್ ಶೆಟ್ಟಿ ಎಣಿಂಜೆ, ಜತೆ ಕಾರ್ಯದರ್ಶಿಗಳಾದ ಗೀತಾ ಸಪ್ತಗಿರಿ, ಜಯಂತಿ ಆರಾದ್ಯ,ಎಸ್.ಡಿ.ಎಂ.ಸಿ ಅಧ್ಯಕ್ಷೆ ಮಮತಾ ಬಜಕ್ರೆಸಾಲು,, ಸೇರಿದಂತೆ ಶಾಲಾ ಶಿಕ್ಷಕರು, ಮಕ್ಕಳು ಹಾಗೂ ಹೆಚ್ಚಿನ ಸಂಖ್ಯೆಯ ಗ್ರಾಮಸ್ಥರು ಭಾಗವಹಿಸಿದರು.

Related posts

ಇಳಂತಿಲದಲ್ಲಿ ವಿದ್ಯುತ್ ಶಾಕ್ ಹೊಡೆದು ವ್ಯಕ್ತಿ ಸಾವು

Suddi Udaya

ಯುವವಾಹಿನಿ ಬೆಳ್ತಂಗಡಿ ಘಟಕದ ನೂತನ ಪದಾಧಿಕಾರಿಗಳಿಗೆ “ಹೆಜ್ಜೆಗೊಂದು ಸ್ಫೂರ್ತಿ” ವ್ಯಕ್ತಿತ್ವ ವಿಕಸನ ತರಬೇತಿ ಕಾರ್ಯಕ್ರಮ

Suddi Udaya

ನಾರಾವಿ ಮಾಂಡೋವಿ ಮೋಟಾರ್ ಶಾಖೆಯ ವತಿಯಿಂದ ಶಿಕ್ಷಕರ ದಿನಾಚರಣೆಗೆ ವಿಶೇಷ ಕೊಡುಗೆ

Suddi Udaya

ಉಜಿರೆಯ ಬೆನಕ ಆಸ್ಪತ್ರೆ ಮತ್ತು ಬೆನಕ ಚಾರಿಟೇಬಲ್ ಟ್ರಸ್ಟ್ ನ ಪ್ರಾಯೋಜಕತ್ವದಲ್ಲಿ ಕಲ್ಮಂಜ ಶಾಲೆಯಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ

Suddi Udaya

ಯಕ್ಷಗಾನ ಕಲಾವಿದನ ತಾಯಿಗೆ ಅವಾಚ್ಯ ಶಬ್ದಗಳಿಂದ ನಿಂದನೆ ಪ್ರಕರಣ: ಮಹೇಶ್‌ ಶೆಟ್ಟಿ ತಿಮರೋಡಿಗೆ ಷರತ್ತು ಬದ್ಧ ನಿರೀಕ್ಷಣಾ ಜಾಮೀನು

Suddi Udaya

ಹಿಂದೂ ಧರ್ಮದ ವಿರುದ್ಧ ನೀಡಿರುವ ಹೇಳಿಕೆಗೆ ದ.ಕ. ಜಿಲ್ಲಾ ಶಿವಳ್ಳಿ ಬ್ರಾಹ್ಮಣ ಸಂಘ ಮತ್ತು ಸಮಗ್ರ ಹಿಂದೂ ಸಮಾಜ ಖಂಡನೆ: ಡಾ| ಎಂ.ಎಂ. ದಯಾಕರ್

Suddi Udaya
error: Content is protected !!