November 29, 2026
ಗ್ರಾಮಾಂತರ ಸುದ್ದಿಚಿತ್ರ ವರದಿ

ಬಹುಮುಖ ಸಾಧಕ ಸಂಪತ್ ಬಿ. ಸುವರ್ಣ ಅವರಿಗೆ ಅಂತರಾಷ್ಟ್ರೀಯ ಗೌರವದ ಗರಿ :ಇಂಡೋನೇಷ್ಯಾದ ಬಾಲಿಯಲ್ಲಿ ಪ್ರತಿಷ್ಠಿತ ‘ವಿಜಯರತ್ನ’ ಪ್ರಶಸ್ತಿ ಪ್ರದಾನ

ಬೆಳ್ತಂಗಡಿ: ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ, ಸಾಂಸ್ಕೃತಿಕ ಹಾಗೂ ಉದ್ಯಮ ಕ್ಷೇತ್ರಗಳಲ್ಲಿ ವಿಶಿಷ್ಟ ಸಾಧನೆಗೈದು, ಸಮಾಜಮುಖಿ ಚಟುವಟಿಕೆಗಳ ಮೂಲಕ ಗುರುತಿಸಿಕೊಂಡಿರುವ ಯುವ ಉದ್ಯಮಿ, ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಹಾಗೂ ಸುವರ್ಣ ರೆಸಾರ್ಟ್‌ನ ಮಾಲಕ ಸಂಪತ್ ಬಿ. ಸುವರ್ಣ ಅವರಿಗೆ ಇಂಡೋನೇಷ್ಯಾದ ಬಾಲಿಯಲ್ಲಿ ನಡೆದ ಅಂತರಾಷ್ಟ್ರೀಯ ಸಮಾರಂಭದಲ್ಲಿ ಪ್ರತಿಷ್ಠಿತ ‘ವಿಜಯರತ್ನ’ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಈ ಸಂದರ್ಭದಲ್ಲಿ ಇಂಡೋನೇಷ್ಯಾದ ರಾಜವಂಶಸ್ಥರಾದ ಆರ್ಯವೇದ ಹಾಗೂ ವಿಜಯ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಡಾ. ಆನಂದ್ ಸಂಕೇಶ್ವರ ಉಪಸ್ಥಿತರಿದ್ದರು.

ಯುವ ಉದ್ಯಮಿಯಾಗಿ ಮಾತ್ರವಲ್ಲದೆ ರಾಜಕೀಯ, ಸಾಮಾಜಿಕ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಕ್ಷೇತ್ರಗಳಲ್ಲಿಯೂ ತಮ್ಮದೇ ಆದ ಛಾಪು ಮೂಡಿಸಿರುವ ಸಂಪತ್ ಬಿ. ಸುವರ್ಣ ಅವರು ಭಾರತೀಯ ಜನತಾ ಪಾರ್ಟಿಯ ನಾಯಕರಾಗಿ ಸಾರ್ವಜನಿಕ ಜೀವನದಲ್ಲಿ ಸಕ್ರಿಯರಾಗಿದ್ದಾರೆ. ಅಂತರಾಷ್ಟ್ರೀಯ ಜೆಸಿಐ ಸಂಸ್ಥೆಯಲ್ಲಿ ಪ್ರಮುಖ ಜವಾಬ್ದಾರಿಯುತ ಸ್ಥಾನವನ್ನು ಅಲಂಕರಿಸಿರುವ ಅವರು, ತಮ್ಮ ಸಂಘಟನಾ ಸಾಮರ್ಥ್ಯ, ನಾಯಕತ್ವ ಗುಣ ಹಾಗೂ ಕ್ರಿಯಾಶೀಲತೆಯಿಂದ ಗಮನ ಸೆಳೆದಿದ್ದಾರೆ. ಜೆಸಿ ಸಂಸ್ಥೆಯಲ್ಲಿ ಸಲ್ಲಿಸಿದ ಸೇವೆ ಮತ್ತು ಸಾಧನೆಯನ್ನು ಗುರುತಿಸಿ ಅವರಿಗೆ ಮೂರು ಬಾರಿ ರಾಷ್ಟ್ರೀಯ ಪ್ರಶಸ್ತಿಯೂ ಲಭಿಸಿದೆ.

ನಾಡಿನ ಕಲೆ, ಸಂಸ್ಕೃತಿ ಹಾಗೂ ಜನಪದ ಪರಂಪರೆಯ ಉಳಿವು ಮತ್ತು ಬೆಳವಣಿಗೆಗೆ ನಿರಂತರವಾಗಿ ಶ್ರಮಿಸುತ್ತಿರುವ ಸಂಪತ್ ಸುವರ್ಣ ಅವರು, ನಾಡಿನ ಸಾಧಕರನ್ನು ಗುರುತಿಸಿ ಗೌರವಿಸುವ ಉದ್ದೇಶದಿಂದ ‘ರಂಗ ಸಮ್ಮಾನ್’ ಪ್ರಶಸ್ತಿಯನ್ನು ಆರಂಭಿಸಿ ಅನೇಕ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡಿದ್ದಾರೆ. ಗ್ರಾಮೀಣ ಭಾಗದ ಸುಮಾರು ಸಾವಿರ ಸಾಧಕರನ್ನು ಪರಿಚಯಿಸಿ, ಅವರ ಸಾಧನೆಗಳನ್ನು ರಾಜ್ಯಮಟ್ಟದಲ್ಲಿ ಗುರುತಿಸುವ ಕಾರ್ಯದ ಮೂಲಕ ವಿಶೇಷ ಗಮನ ಸೆಳೆದಿದ್ದಾರೆ. ಅಲ್ಲದೆ, ಹಲವು ದೇವಸ್ಥಾನ ಹಾಗೂ ದೈವಸ್ಥಾನಗಳ ಅಭಿವೃದ್ಧಿ ಕಾರ್ಯಗಳಿಗೂ ಸಹಕಾರ ನೀಡುತ್ತಾ ಧಾರ್ಮಿಕ ಮತ್ತು ಸಾಂಸ್ಕೃತಿಕ ಕ್ಷೇತ್ರಗಳೊಂದಿಗೆ ನಿಕಟ ಸಂಪರ್ಕ ಹೊಂದಿದ್ದಾರೆ.

ಜನಪದೀಯ ಸಮ್ಮೇಳನ ‘ಜೀಟಿಗೆ’, ದೈವಾರಾಧಕರ ಸಮ್ಮೇಳನ ‘ಪರ್ವ’ ಹಾಗೂ ಯುವ ಸಮುದಾಯದ ಸಾಂಸ್ಕೃತಿಕ ವೈಭವವನ್ನು ಅನಾವರಣಗೊಳಿಸುವ ‘ಡೆನ್ನಾನ, ಡೆನ್ನಾನ’ ಕಾರ್ಯಕ್ರಮಗಳ ಮೂಲಕ ಹಲವು ವಿನೂತನ ಪ್ರಯತ್ನಗಳನ್ನು ನಡೆಸಿದ್ದಾರೆ. ಈ ಕಾರ್ಯಕ್ರಮಗಳು ತುಳುನಾಡಿನ ವಿಶಿಷ್ಟ ಕಲೆ, ಸಂಸ್ಕೃತಿ, ಆಚರಣೆ ಮತ್ತು ಪರಂಪರೆಯನ್ನು ಯುವ ಪೀಳಿಗೆಗೆ ಪರಿಚಯಿಸುವ ಮಹತ್ವದ ವೇದಿಕೆಗಳಾಗಿ ಮೂಡಿಬಂದಿವೆ.

ತುಳುನಾಡಿನ ಸಾಂಸ್ಕೃತಿಕ ವೈಭವ ಹಾಗೂ ಪ್ರಾಚೀನ ಪರಂಪರೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ದೂರದೃಷ್ಟಿಯೊಂದಿಗೆ ಹಲವು ಮಹತ್ವದ ಬೇಡಿಕೆಗಳನ್ನು ಸರಕಾರದ ಮುಂದಿಟ್ಟಿದ್ದಾರೆ. ಯಕ್ಷಗಾನ ಕಲೆಗೆ ರಾಜ್ಯಕಲೆಯ ಸ್ಥಾನಮಾನ ನೀಡಬೇಕು, ದೈವಾರಾಧನೆಯ ಸಂರಕ್ಷಣೆ ಮತ್ತು ಅಭಿವೃದ್ಧಿಗಾಗಿ ಪ್ರತ್ಯೇಕ ಅಭಿವೃದ್ಧಿ ನಿಗಮ ಸ್ಥಾಪಿಸಬೇಕು ಹಾಗೂ ತುಳುನಾಡಿನ ಅರಮನೆಗಳು ಮತ್ತು ಪ್ರಾಚೀನ ಪರಂಪರೆಗಳನ್ನು ಪರಿಚಯಿಸುವ ವಸ್ತುಸಂಗ್ರಹಾಲಯ ನಿರ್ಮಿಸಬೇಕು ಎಂಬುದು ಅವರ ಪ್ರಮುಖ ಆಶಯಗಳಾಗಿವೆ.

ಅಲ್ಲದೆ, ತುಳುನಾಡಿನ ಜನಪದ ಜ್ಞಾನ, ಸಂಧಿ, ಪಾಡ್ದನ ಹಾಗೂ ಬೀರಗಳಂತಹ ಪರಂಪರೆಯ ಸಾಂಸ್ಕೃತಿಕ ಸಂಪತ್ತನ್ನು ಶಾಲಾ ಪಠ್ಯಪುಸ್ತಕಗಳಲ್ಲಿ ಪರಿಚಯಿಸುವ ಮೂಲಕ ಮಕ್ಕಳಲ್ಲಿ ನಾಡಿನ ಇತಿಹಾಸ ಮತ್ತು ಸಂಸ್ಕೃತಿಯ ಅರಿವು ಮೂಡಿಸಬೇಕು ಎಂದು ಸರಕಾರಕ್ಕೆ ಮನವಿ ಸಲ್ಲಿಸಿದ್ದಾರೆ.

ಹೊಸತನದ ಚಿಂತನೆ, ವಿನೂತನ ಕಾರ್ಯಕ್ರಮಗಳ ಆಯೋಜನೆ, ಸಾಧಕರಿಗೆ ಪ್ರೋತ್ಸಾಹ, ಯುವ ಪ್ರತಿಭೆಗಳ ಅನಾವರಣ ಹಾಗೂ ಸಾಮಾಜಿಕ ಕಳಕಳಿಯ ಕಾರ್ಯಗಳ ಮೂಲಕ ಸಂಪತ್ ಬಿ. ಸುವರ್ಣ ಅವರು ಬಹುಮುಖ ವ್ಯಕ್ತಿತ್ವವಾಗಿ ಗುರುತಿಸಿಕೊಂಡಿದ್ದಾರೆ. ಉದ್ಯಮ, ಸಂಘಟನೆ, ಕಲೆ, ಸಂಸ್ಕೃತಿ ಮತ್ತು ಸಮಾಜಸೇವೆಯನ್ನು ಸಮನ್ವಯಗೊಳಿಸಿಕೊಂಡು ಸಾಗುತ್ತಿರುವ ಅವರ ಕಾರ್ಯಚಟುವಟಿಕೆಗಳು ಯುವ ಸಮುದಾಯಕ್ಕೆ ಪ್ರೇರಣೆಯಾಗಿವೆ.

ನಾಡಿನ ಕಲೆ, ಸಂಸ್ಕೃತಿ ಮತ್ತು ಪರಂಪರೆಯ ಸಂರಕ್ಷಣೆಯ ಜತೆಗೆ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸಲ್ಲಿಸುತ್ತಿರುವ ನಿರಂತರ ಸೇವೆ, ದೂರದೃಷ್ಟಿ ಹಾಗೂ ಸಾಧನೆಗೆ ಅಂತರಾಷ್ಟ್ರೀಯ ಮಟ್ಟದ ಮನ್ನಣೆ ದೊರೆತಿರುವುದು ಬೆಳ್ತಂಗಡಿ ತಾಲೂಕಿನ ಪಾಲಿಗೆ ಹೆಮ್ಮೆಯ ಸಂಗತಿಯಾಗಿದೆ. ಪ್ರತಿಷ್ಠಿತ ‘ವಿಜಯರತ್ನ’ ಪ್ರಶಸ್ತಿಗೆ ಭಾಜನರಾಗಿರುವ ಸಂಪತ್ ಬಿ. ಸುವರ್ಣ ಅವರಿಗೆ ವಿವಿಧ ಕ್ಷೇತ್ರಗಳ ಗಣ್ಯರು ಹಾಗೂ ಹಿತೈಷಿಗಳು ಅಭಿನಂದನೆ ಸಲ್ಲಿಸಿದ್ದಾರೆ.

Related posts

ಶ್ರೀ ಕ್ಷೇ.ಧ.ಗ್ರಾ. ಯೋಜನೆ ಹೊಸಂಗಡಿ ವಲಯದ ಕೇಳದಪೇಟೆ ಕಾರ್ಯಕ್ಷೇತ್ರದ ವತಿಯಿಂದ ವೀಲ್ ಚಯರ್ ವಿತರಣೆ

Suddi Udaya

ಬುರುಡೆ ಪ್ರಕರಣ: ಬೆಂಗಳೂರಿನ ಜಯಂತ್ ಟಿ ಬಾಡಿಗೆ ಮನೆ ಮೇಲೆ ಎಸ್.ಐ.ಟಿ ದಾಳಿ

Suddi Udaya

ಅರಣ್ಯ ಒತ್ತುವರಿ ಮತ್ತು ಪಟ್ಟಾ ಜಮೀನು ಸೇರಿ 3 ಎಕರೆಗಿಂತ ಕಡಿಮೆ ಇರುವ ಅರಣ್ಯ ಒತ್ತುವರಿದಾರರನ್ನು ತೆರವುಗೊಳಿಸುವಂತಿಲ್ಲ: ಪ್ರತಾಪ್ ಸಿಂಹ ನಾಯಕ್

Suddi Udaya

ಬೆಳ್ತಂಗಡಿ: ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ

Suddi Udaya

ಕಳಿಯ ಗ್ರಾ.ಪಂ.ಅಭಿವೃದ್ದಿ ಅಧಿಕಾರಿ ಸಂತೋಷ್ ಪಾಟೀಲ್ ಬೆಳಗಾವಿಗೆ ವರ್ಗಾವಣೆ: ಪ್ರಭಾರ ಅಭಿವೃದ್ಧಿ ಅಧಿಕಾರಿಯಾಗಿ ಕುಂಞ ಕೆ ಅಧಿಕಾರ ಸ್ವೀಕಾರ

Suddi Udaya

ಮೇ 17: ಜಯನಗರ-ಗುರಿಪಳ್ಳದಲ್ಲಿ 50ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದ ಅಂಗವಾಗಿ ಉಚಿತ ಆರೋಗ್ಯ ಮತ್ತು ರಕ್ತದಾನ ಶಿಬಿರ

Suddi Udaya
error: Content is protected !!