ಭಾಜಪ ಬೆಳ್ತಂಗಡಿ ಮಂಡಲ ವತಿಯಿಂದ ವಿಜಯಸಂಕಲ್ಪ ಅಭಿಯಾನ

Suddi Udaya

ಉಜಿರೆ:ಭಾರತೀಯ ಜನತಾ ಪಾರ್ಟಿ ಬೆಳ್ತಂಗಡಿ ಮಂಡಲದ ವತಿಯಿಂದ 21ರಿಂದ 29ರ ವರೆಗೆ ವಿಜಯ ಸಂಕಲ್ಪ ಅಭಿಯಾನವನ್ನು ಆಯೋಜಿಸಲಾಗಿದೆ. ಈ ಕಾರ್ಯಕ್ರಮಕ್ಕೆ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ. ಪಿ. ನಡ್ಡಾ ಅವರು ವಿಜಯಪುರದ ಸಿಂಧಗಿಯಲ್ಲಿ ಚಾಲನೆ ನೀಡಲಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ನಿಕಟಪೂರ್ವ ಸಿಎಂ ಮತ್ತು ಮಾರ್ಗದರ್ಶಕರಾದ ಬಿ.ಎಸ್.ಯಡಿಯೂರಪ್ಪ,ರಾಜ್ಯಾಧ್ಯಕ್ಷ ನಳಿನ್‌ ಕುಮಾರ್ ಕಟೀಲ್ ಅವರು ಜ. 21ರಂದು ನಡೆಯುವ ಕಾರ್ಯಕ್ರಮದಲ್ಲಿ ಭಾಗವಹಿಸುವರು.


ಬೆಳ್ತಂಗಡಿ ಮಂಡಲದಲ್ಲಿ ಈ ಮಹಾಶಕ್ತಿಕೇಂದ್ರ ಮಟ್ಟದಲ್ಲಿ 8 ಬೂತ್ ಗಳಲ್ಲಿ ಜ.21 ರಂದು ಶಾಸಕರು,ವಿಧಾನ ಪರಿಷತ್‌ ಸದಸ್ಯರು ಸೇರಿ ಉದ್ಘಾಟನೆ ಮಾಡಲಿದ್ದಾರೆ ಎಂದು ಬಿಜೆಪಿ ಮಂಡಲ ಅಧ್ಯಕ್ಷ ಜಯಂತ್ ಕೋಟ್ಯಾನ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಬೆಳ್ತಂಗಡಿ ಮಂಡಲದಲ್ಲಿ 8 ಮಹಾಶಕ್ತಿಕೇಂದ್ರ 85 ಶಕ್ತಿಕೇಂದ್ರದ 241 ಬೂತ್‌ಗಳಲ್ಲಿ ಈ ವಿಜಯ ಸಂಕಲ್ಪ ಅಭಿಯಾನದ ಮೂಲಕ ನಮ್ಮ ಕಾರ್ಯಕರ್ತರು ತಲುಪುತ್ತಾರೆ. ಕೇಂದ್ರ- ರಾಜ್ಯ ಸರಕಾರಗಳ ಮತ್ತು ಸ್ಥಳೀಯ ಶಾಸಕರ ಸಾಧನೆಗಳ ಕುರಿತು ಕರಪತ್ರಗಳನ್ನು ಹಂಚಿಕೆ ಮಾಡಲಾಗುವುದು. 2ಲಕ್ಷದ 22 ಸಾವಿರದ 144 ಮನೆಗಳಿಗೆ 50 ಸಾವಿರ ಕುಟುಂಬಗಳಿಗೆ 6 ಸಾವಿರ ಪೇಜ್ ಪ್ರಮುಖ್ ಮುಖಾಂತರ ಅವರ ಮನೆಮನೆಗೆ ತೆರಳಿ ಕರಪತ್ರ ಹಂಚಲಿದ್ದು ಫಲಾನುಭವಿಗಳನ್ನು ಮಾತನಾಡಿಸಿ ಬಿಜೆಪಿ ಸರಕಾರಗಳ ಯೋಜನೆಗಳಿಂದ ಈ ಕುಟುಂಬಗಳ ಸಬಲೀಕರಣ ವಾಹನಗಳ ಮೇಲೆ ಸ್ಟಿಕರ್ ಹಾಕಿಸುವ ಕೆಲಸವು ನಡೆಯಲಿದೆ ಎಂದರು.

ಜ. 21ರಿಂದ ಅಭಿಯಾನದ ಆರಂಭ ಆಗಲಿದ್ದು – ಅದಕ್ಕಾಗಿ ಈಗಾಗಲೇ ವ್ಯವಸ್ಥಿತವಾಗಿ ಪೂರ್ವಭಾವಿ ಸಿದ್ಧತೆ ನಡೆದಿವೆ, ಜಿಲ್ಲಾ ಮತ್ತು ಮಂಡಲಗಳಲ್ಲಿ ಸಭೆಗಳು ನಡೆಸಿ ಭಾರತೀಯ ಜನತಾ ಪಕ್ಷ ಮುಂಬರುವ ಚುನಾವಣೆಯಲ್ಲಿ 150 ಸ್ಥಾನಗಳನ್ನು ಪಡೆಯುವ ಗುರಿ ಹಾಕಿಕೊಂಡಿದೆ ಅದಕ್ಕಾಗಿ ಪಕ್ಷವು ತಳಹಂತದಿಂದ ಪಕ್ಷ ಸೇರಿ ವಿವಿಧ ಕಾರ್ಯತಂತ್ರಗಳನ್ನು ಮಾಡುತ್ತಿದೆ. ಸರಕಾರಗಳ ಯೋಜನೆಗಳ ಫಲಾನುಭವಿಗಳನ್ನು ಸಂಪರ್ಕಿಸುವ ಕಾರ್ಯವನ್ನು ಪಕ್ಷದ ಕಾರ್ಯಕರ್ತರು ತಳಮಟ್ಟದಿಂದ ಮಾಡಲಿದ್ದಾರೆ. ಇದಲ್ಲದೆ ಮನೆಮನೆಗೆ ಕರಪತ್ರ ಹಂಚುವುದು, ಬಿಜೆಪಿ ಪಕ್ಷದ ಸ್ಟಿಕರ್ ಹಚ್ಚಲು ಪ್ರೇರೇಪಿಸುವುದು, ಗೋಡೆಗಳ ಮೇಲೆ ಬಿಜೆಪಿ ಸಾಧನೆ ಬಿಂಬಿಸುವ ಪೇಂಟಿಂಗ್ ಹಾಗೂ ಸದಸ್ಯತ್ವ ಅಭಿಯಾನ ಈ ಅಭಿಯಾನದ ಭಾಗವಾಗಿದೆ ಕ್ಷೇತ್ರ ಕಾರ್ಯಾಚರಣೆಗೆ ಇಳಿಯಲಿರುವ ರಾಜ್ಯ ಜಿಲ್ಲಾ ಹಾಗೂ ಮಂಡಲಗಳಲ್ಲಿ ಸಂಸದರು, ಶಾಸಕರು, ವಿಧಾನಪರಿಷತ್‌ ಸದಸ್ಯರು ಹಾಗೂ ಎಲ್ಲಾ ಚುನಾಯಿತ ಪ್ರತಿನಿಧಿಗಳು ಸರಕಾರದ ಸಾಧನೆಗಳನ್ನು ಒಳಗೊಂಡ ಕರಪತ್ರಗಳನ್ನು ಸುಮಾರು ಒಂದು ಕೋಟಿ ಮನೆಗಳಿಗೆ ಹಂಚುವ ಗುರಿ ಹಾಕಿಕೊಂಡಿದ್ದಾರೆ. ಫಲಾನುಭವಿಗಳನ್ನು ಗುರುತಿಸುವುದರ ಜತೆಗೆ ಅವರಿಗೆ ಫಲಾನುಭವಿ ಪತ್ರವನ್ನೂ ವಿತರಿಸಲಾಗುತ್ತದೆ. ಸಾಮಾಜಿಕ ಜಾಲತಾಣಗಳ ಮೂಲಕವೂ ನಮ್ಮ ಯೋಜನೆಗಳ ಯಶಸ್ಸನ್ನು ಸಾರಲಾಗುವುದು. ಈ ಅಭಿಯಾನದ ಅವಧಿಯಲ್ಲಿ ಒಂದು ಕೋಟಿ ಹೊಸ ಸದಸ್ಯರು ಪಕ್ಷಕ್ಕೆ ಸೇರ್ಪಡೆಗೊಳ್ಳಲಿದ್ದಾರೆ
ಮನ್ ಕೀ ಬಾತ್
ಜ.29ರ ಮನ್ ಕೀ ಬಾತ್ ಕಾರ್ಯಕ್ರಮ ಕರ್ನಾಟಕದ ಪಾಲಿಗೆ ಮತ್ತಷ್ಟು ವಿಶೇಷವಾಗಿರಲಿದೆ. ಪಕ್ಷದ ಕಾರ್ಯಕರ್ತರು ಹಾಗೂ ಪುಮುಖರು ಒಟ್ಟಿಗೇ ಕೂತು ಪ್ರಧಾನಿ ನರೇಂದ್ರ ಮೋದಿಯವರ ಮನ್ ಕೀ ಬಾತ್ ಕಾರ್ಯಕ್ರಮ ಆಲಿಸಲಿದ್ದಾರೆ. ಬೂತ್ ಮಟ್ಟದಿಂದಲೇ ಇದು ನಡೆಯಲಿದ್ದು ಶೇ 90ರಷ್ಟು ಬೂತ್‌ಗಳು ಮನ್ ಕೀ ಬಾತ್ ಆಲಿಸಿ ದಾಖಲೆ ಮಾಡಲಿವೆ ಎಂದು ತಿಳಿಸಿದರು. ಮಂಡಲದ ಪ್ರಧಾನ ಕಾರ್ಯದರ್ಶಿಗಳಾದ ಶ್ರೀನಿವಾಸ್ ರಾವ್ ಮತ್ತು ಗಣೇಶ್ ಗೌಡ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಬಾಕ್ಸ್
ಉದ್ಘಾಟನೆ ವಿವರ
21ರಂದು ಬೆಳಿಗ್ಗೆ 8 ಗಂಟೆಗೆ ನಾರಾವಿಯ ಬಜಿರೆ, 9 ಗಂಟೆಗೆ ಅಳದಂಗಡಿಯ ಕುಕ್ಕೇಡಿ, 10 ಗಂಟೆಗೆ ಕುವೆಟ್ಟು ಗ್ರಾಮದ ಹೊಡಿಲು ಒಡಿಲ್ನಾಳ, 11:30ಕ್ಕೆ ಕಣಿಯೂರಿನ ಪಿಲಿಗೂಡು, ಮಧ್ಯಾಹ್ನ 1ಗಂಟೆಗೆ ನಗರ ಬೂತ್,2.30ಕ್ಕೆ ಲಾಯಿಲ ಬೂತ್, ಸಂಜೆ 4 ಗಂಟೆಗೆ ಉಜಿರೆ ಹಾಗೂ ಸಂಜೆ 5.30ಕ್ಕೆ ಧರ್ಮಸ್ಥಳ ಮಹಾ ಶಕ್ತಿ ಕೇಂದ್ರಗಳಲ್ಲಿ ಕಾರ್ಯಕ್ರಮಕ್ಕೆ ಚಾಲನೆ ದೊರೆಯಲಿದೆ. ಶಾಸಕರು ಎಂಎಲ್ ಸಿ ಸೇರಿದಂತೆ ಪ್ರಮುಖ ಮುಖಂಡರು ಭಾಗವಹಿಸಲಿದ್ದಾರೆ.

Leave a Comment

error: Content is protected !!