ಬೆಳ್ತಂಗಡಿ: ತಾಲೂಕಿನ ಉಜಿರೆ ಪರಿಸರದ ಕೆಲವು ಲಾಡ್ಜ್ ಗಳಲ್ಲಿ ಕಾನೂನು ಬಾಹಿರ ಚಟುವಟಿಕೆಗಳು ನಡೆಯುತ್ತಿವೆ ಎಂಬ ದೂರಿನ ಆಧಾರದಲ್ಲಿ ಬಂಟ್ವಾಳ ಉಪ ವಿಭಾಗದ ಅಧಿಕಾರಿಗಳು & ಸಿಬ್ಬಂದಿಗಳ 5 ವಿಶೇಷ ತಂಡ , ಬಂಟ್ವಾಳ ಪೊಲೀಸ್ ಉಪ ವಿಭಾಗದ ಡಿವೈಎಸ್ಪಿ, ಪ್ರತಾಪ್ ಸಿಂಗ್ ಥೋರಾಟ್ ರವರ ನೇತೃತ್ವದಲ್ಲಿ ಏಕಕಾಲದಲ್ಲಿ ಉಜಿರೆ ಪರಿಸರದ ಎಲ್ಲಾ ಲಾಡ್ಜ್ ಗಳ ಮೇಲೆ
ಫೆ. 6ರಂದು ದಾಳಿ ನಡೆಸಿ ಸಿಸಿಟಿವಿಗಳನ್ನು, ದಾಖಲಾತಿ ಪುಸ್ತಕ (ರಿಜಿಸ್ಟರ್) ಗಳನ್ನು ಪರಿಶೀಲನೆ ನಡೆಸಲಾಯಿತು.ಆದರೆ ಯಾವುದೇ ಪ್ರಕರಣ ಪತ್ತೆಯಾಗಿಲ್ಲ.
ಈ ವೇಳೆ ಲಾಡ್ಜ್ ಮಾಲೀಕರುಗಳಿಗೆ ಮುಂದಿನ ದಿನಗಳಲ್ಲಿ ಲಾಡ್ಜ್ ನಲ್ಲಿರುವ ಎಲ್ಲಾ ಸಿಸಿಟಿವಿಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುವಂತೆ ನೋಡಿಕೊಳ್ಳಲು ಹಾಗೂ ಲಾಡ್ಜ್ ನಲ್ಲಿ ತಂಗುವ ಪ್ರವಾಸಿಗರು ಮತ್ತು ಭಕ್ತಾದಿಗಳಿಂದ ಗುರುತಿನ ಚೀಟಿಗಳನ್ನು ಪಡೆದು ರಿಜಿಸ್ಟ್ರರ್ ಪುಸ್ತಕಗಳಲ್ಲಿ ಸರಿಯಾಗಿ ದಾಖಲಿಸಬೇಕು. ಯಾವುದೇ ಕಾನೂನು ಬಾಹಿರ ಚಟುವಟಿಕೆಗಳಿಗೆ ಅವಕಾಶ ನೀಡಬಾರದು , ಅಂತಹ ಕೃತ್ಯಗಳು ಲಾಡ್ಜ್ ಪರಿಸರಗಳಲ್ಲಿ ಕಂಡುಬಂದಲ್ಲಿ ತಕ್ಷಣ ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು, ಲಾಡ್ಜ್ ಗಳ ನಿರ್ವಹಣೆಗೆ ಸಂಬಂಧಿಸಿದ ಎಲ್ಲಾ ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಸೂಚಿಸಲಾಯಿತು. ಯಾವುದೇ ನಿಯಮಾವಳಿಗಳ ಉಲ್ಲಂಘನೆ ಕಂಡುಬಂದಲ್ಲಿ ಅಂತಹ ಲಾಡ್ಜ್ ಗಳ ಪರವಾನಿಗೆಯನ್ನು ರದ್ದುಪಡಿಸಲು ಸಂಬಂಧಪಟ್ಟ ಇಲಾಖೆಗಳಿಗೆ ವರದಿ ನೀಡಲಾಗುವುದು ಎಂದು ಎಚ್ಚರಿಕೆ ನೀಡಲಾಯಿತು. ಜಿಲ್ಲಾ ವ್ಯಾಪ್ತಿಯಲ್ಲಿ ಕಾನೂನುಬಾಹಿರ ಚಟುವಟಿಕೆಗಳ ಕುರಿತು ಮಾಹಿತಿ ಬಂದಲ್ಲಿ ಮುಂದಿನ ದಿನಗಳಲ್ಲಿಯೂ ಈ ರೀತಿಯ ಅನಿರೀಕ್ಷಿತ ದಾಳಿಗಳನ್ನು ನಡೆಸಲಾಗುವುದು ಎಂದು ಸೂಚಿಸಲಾಯಿತು.