ಬೆಳ್ತಂಗಡಿ : ಅಕ್ರಮ ಸಕ್ರಮದ ಅರ್ಜಿ ವಿಲೇವಾರಿ ಮಾಡಲು 45 ಸಾವಿರ ರೂ. ಲಂಚ ಪಡೆದಿದ್ದ ಗ್ರಾಮ ಕರಣಿಕನಿಗೆ ಮಂಗಳೂರಿನ 3ನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯ 4 ವರ್ಷ ಸಾದಾ ಜೈಲು ಶಿಕ್ಷೆ ಮತ್ತು 70ಸಾವಿರ ರೂ. ದಂಡ ವಿಧಿಸಿದೆ.
ಈ ಹಿಂದೆ ಬೆಳ್ತಂಗಡಿ ತಾಲೂಕಿನಲ್ಲಿ ಸೇವೆ ಸಲ್ಲಿಸಿದ್ದ, ನಂತರ ಸುಳ್ಯ ತಾಲೂಕು ಮಂಡೆಕೋಲು ಗ್ರಾಮದ ಕರಣಿಕರಾಗಿ ವಗಾ೯ವಣೆಗೊಂಡಿದ್ದ ಮಹೇಶ್ ಶಿಕ್ಷೆಗೆ ಒಳಗಾದ ಆರೋಪಿಸಿಯಾಗಿದ್ದಾರೆ.
ಎಸ್.ಮಹೇಶ್ ಅಕ್ರಮ ಸಕ್ರಮದ ಅರ್ಜಿಯ ವಿಲೇವಾರಿಗೆ, ಮಂಡೆಕೋಲು ನಿವಾಸಿ ಗೋಪಾಲಕೃಷ್ಣ ಅವರಿಂದ 60 ಸಾವಿರ ರೂ. ಲಂಚದ ಹಣಕ್ಕೆ ಬೇಡಿಕೆಯಿಟ್ಟಿದ್ದರು. 2016ರ ಜೂ.7 ರಂದು 45,000 ರೂ. ಲಂಚದ ಹಣವನ್ನು ಸ್ವೀಕರಿಸುತ್ತಿದ್ದ ವೇಳೆ ಮಹೇಶ್ ಲೋಕಾಯುಕ್ತ ಪೊಲೀಸ್ ಬಲೆಗೆ ಬಿದ್ದಿದ್ದರು. ಈ ಸಂಬಂಧ ಮಂಗಳೂರು ಭ್ರಷ್ಟಾಚಾರ ನಿಗ್ರಹ ದಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಜಿಲ್ಲಾ ಸತ್ರ ನ್ಯಾಯಾಲಯ ನ್ಯಾಯಾಧೀಶ ಬಿ.ಬಿ. ಜಕಾತಿ ಅವರು ವಿಚಾರಣೆ ನಡೆಸಿ ಆರೋಪ ಸಾಬೀತಾಗಿದೆ ಎಂದು ತೀರ್ಮಾನಿಸಿ ಜೈಲು ಶಿಕ್ಷೆ ವಿಧಿಸಿ ಮಾ.2 ರಂದು ತೀರ್ಪು ನೀಡಿದ್ದಾರೆ. ಅಪರಾಧಿ ದಂಡ ಕಟ್ಟಲು ವಿಫಲನಾದರೆ ಮತ್ತೆ 8 ತಿಂಗಳ ಕಾಲ ಸಾದಾ ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದು ತೀರ್ಪುನಲ್ಲಿ ತಿಳಿಸಲಾಗಿದೆ.
ಪೊಲೀಸ್ ನಿರೀಕ್ಷ ದಿನಕರ ಶೆಟ್ಟಿ ತನಿಖೆ ನಡೆಸಿದ್ದರು. ಪೊಲೀಸ್ ನಿರೀಕ್ಷಕ ಯೋಗೀಶ್ ಕುಮಾರ್ ತನಿಖೆಯನ್ನು ಮುಂದುವರಿಸಿ ಆರೋಪಿಯ ವಿರುದ್ಧ ದೋಷಾರೋಪಣ ಪಟ್ಟಿ ನ್ಯಾಯಾಲಯಕ್ಕೆ ಸಲ್ಲಿಸಿದ್ದರು.