ಪತ್ರಿಕಾಗೋಷ್ಠಿ
ಬೆಳ್ತಂಗಡಿ: ಸರ್ವೋದಯ ಕರ್ನಾಟಕ ಪಕ್ಷದ ಅಭ್ಯರ್ಥಿ ಆದಿತ್ಯ ನಾರಾಯಣ ಕೊಲ್ಲಾಜೆ ಅವರು ಏಪ್ರಿಲ್ 14ರಂದು ಮಧ್ಯಾಹ್ನ 12.30ಕ್ಕೆ ಚುನಾವಣಾಧಿಕಾರಿಗಳಿಗೆ ನಾಮಪತ್ರ ಸಲ್ಲಿಸಲಿದ್ದಾರೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಕಾರ್ಯದರ್ಶಿ ರವಿಕಿರಣ್ ಪುಣಚ ಹೇಳಿದರು.
ಅವರು ಎ.13ರಂದು ಬೆಳ್ತಂಗಡಿ ಗುರುನಾರಾಯಣ ಸಭಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, ಅಂದು ಬೆಳಿಗ್ಗೆ ಬೆಳ್ತಂಗಡಿ ಅಯ್ಯಪ್ಪ ಗುಡಿ ಬಳಿಯಿಂದ ಮೆರವಣಿಗೆಯಲ್ಲಿ ಬಂದು ನಾಮಪತ್ರ ಸಲ್ಲಿಸಲಿದ್ದಾರೆ. ಬಳಿಕ ನಾರಾಯಣ ಗುರು ಮಂದಿರದಲ್ಲಿ ನಡೆಸುವ ಚುನಾವಣಾ ಪೂರ್ವ ತಯಾರಿ ಸಭೆಯಲ್ಲಿ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷರಾದ ಬಡಗಲಪುರ ನಾಗೇಂದ್ರ ಸರ್ವೋದಯ ಕರ್ನಾಟಕ ಪಕ್ಷದ ಪ್ರಧಾನ ಕಾರ್ಯದರ್ಶಿ ಪುಸನ್ನ ಎನ್ ಗೌಡ ಕಾರ್ಯಾಧ್ಯಕ್ಷರಾದ ಅಮ್ಮದ್ ಪಾಷ ಹಾಗೂ ಇತರ ರಾಜ್ಯ, ಜಿಲ್ಲಾ, ತಾಲೂಕು ಪದಾಧಿಕಾರಿಗಳು ಹಾಗೂ ಹಿತೈಷಿಗಳು ಮತ್ತು ಮತದಾರರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಯುವ ನಾಯಕ ಹಾಗೂ ಸರ್ವೋದಯ ಕರ್ನಾಟಕ ಪಕ್ಷದ ಅಭ್ಯರ್ಥಿ ಆದಿತ್ಯನಾರಾಯಣ ಕೊಲ್ಲಾಜೆ ಮಾತನಾಡಿ ಚುನಾವಣಾ ಫಲಿತಾಂಶ ಏನೇ ಆದರೂ, ಬಡವರು, ಮಧ್ಯಮ ವರ್ಗದವರು, ರೈತರು, ಹಿರಿಯ ನಾಗರೀಕರವರ ಧ್ವನಿ ಎತ್ತಿ ಹೋರಾಟ ನಡೆಸುವುದಾಗಿ ತಿಳಿಸಿದರು. ಬೆಳ್ತಂಗಡಿ ತಾಲೂಕಿನ 41 ಗ್ರಾಮಗಳಿಗೆ ಭೇಟಿ ನೀಡಿ ತಾಲೂಕಿನಲ್ಲಿ ಯೋಜನೆಗಳನ್ನು ಅನುಷ್ಠಾನಗೊಳಿಸುವ ಯೋಜನಾಬದ್ಧ ಕನಸುಗಳನ್ನು ಹೊಂದಿದ್ದೇನೆ. ತಾಲೂಕಿನ ಗ್ರಾಮಗಳ ಮೂಲಭೂತ ಸೌಕರ್ಯಗಳ ಅಭಿವೃದ್ಧಿ, ಮಹಿಳಾ ಸಬಲೀಕರಣ, ರೈತ ಕಲ್ಯಾಣ, ಯುವ ಉದ್ಯೋಗ ಸೃಷ್ಟಿ, ವಿಮೆ ಸೇರಿದಂತೆ ಎಲ್ಲಾ ವೃದ್ಧರಿಗೆ ವಿಶೇಷ ಪ್ಯಾಕೇಜ್‌ಗಳು, ಪ್ರತಿ ಗ್ರಾಮಗಳಲ್ಲಿ ಉತ್ತಮ ಆರೋಗ್ಯ ಮತ್ತು ಆಸ್ಪತ್ರೆ ಸೌಲಭ್ಯ, ಕಾರ್ಮಿಕರಿಗೆ ಪಿಂಚಣಿ ಯೋಜನೆಗಳು, ಸರ್ಕಾರಿ ಶಾಲೆಯಲ್ಲಿ ಮಕ್ಕಳಿಗೆ ಉತ್ತಮ ಶಿಕ್ಷಣ ಯೋಜನೆ, ವ್ಯಾಪಾರ ಸುಸ್ಥಿರತೆಗಾಗಿ ಸುಲಭವಾದ ಸಾಲಗಳ ಮೂಲಕ ಸಣ್ಣ ವ್ಯಾಪಾರಕ್ಕಾಗಿ ವಿಶೇಷ ಬೆಂಬಲ (ಹೋಟೆಲ್, ಕ್ಯಾಂಟೀನ್, ರಸ್ತೆ ಬದಿ, ಬೇಕರಿ ಮತ್ತು ಕಿರಾಣಿ ಅಂಗಡಿಗಳು, ರಿಕ್ಷಾ, ಬಸ್ ಮತ್ತು ಟ್ಯಾಕ್ಸಿ ಚಾಲಕರಿಗೆ), ಮನೆ ರಹಿತರಿಗೆ ಮನೆ ನಿವೇಶನ ಯೋಜನೆ, ಇತ್ತೀಚೆಗೆ ಸರ್ಕಾರದ ನಿರ್ಧಾರದಿಂದ ಉದ್ಯೋಗ ಕಳೆದುಕೊಂಡ ಅತಿಥಿ ಉಪನ್ಯಾಸಕರು ಯುವ ಸಮುದಾಯಕ್ಕೆ ಉದ್ಯೋಗಾವಕಾಶಗಳನ್ನು ಸೃಷ್ಟಿಸುವುದು ತನ್ನ ಕನಸಾಗಿದೆ ಎಂದು ವಿವರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸರ್ವೋದಯ ಕರ್ನಾಟಕ ಪಕ್ಷದ ಜಿಲ್ಲಾ ಕಾರ್ಯದರ್ಶಿ ಸುರೇಂದ್ರ ಕೋರ್ಯ ಜಿಲ್ಲಾ ಕಾರ್ಮಿಕ ಮುಖಂಡ ರಾಮಣ್ಣ ವಿಟ್ಲ, ಸರ್ವೋದಯ ಕರ್ನಾಟಕ ಪಕ್ಷದ ತಾಲೂಕು ಅಧ್ಯಕ್ಷರಾದ ಅವಿನಾಶ್ ಕುಮಾರ್ ರಾವ್ ಕಾರ್ಯದರ್ಶಿ ದೇವಪ್ಪ ನಾಯ್ಕ ಮತ್ತು ಉಪಾಧ್ಯಕ್ಷರಾದ ಉಮೇಶ ಪೂಜಾರಿ ಉಪಸ್ಥಿತರಿದ್ದರು.