ಬೆಳ್ತಂಗಡಿ: ಸಾಮಾಜಿಕ ಜಾಲತಾಣದಲ್ಲಿ ಬಿಲ್ಲವ ಸಮಾಜದ ಮುಖಂಡ ಶ್ರೀ ನಾರಾಯಣಗುರು ವಿಚಾರ ವೇದಿಕೆ ರಾಜ್ಯಾಧ್ಯಕ್ಷ ಸತ್ಯಜಿತ್ ಸುರತ್ಕಲ್ ರವರನ್ನು ಶಾಸಕರು ಹಾಗೂ ಇವರ ಬೆಂಬಲಿಗರು ಫೇಸ್‌ಬುಕ್ ನಕಲಿ ಪೇಜ್ ಮತ್ತು ಖಾತೆಗಳಲ್ಲಿ ತೇಜೋವಧೆ ಮಾಡುತ್ತಿರುವುದನ್ನು ತಾಲೂಕಿನ ಎಲ್ಲಾ ಬಿಲ್ಲವ ಸಂಘಗಳು ಒಕ್ಕೊರಳಿನಿಂದ ಖಂಡಿಸುತ್ತೇವೆ ಎಂದು ಯುವ ವಾಹಿನಿ ಮಂಗಳೂರು ಇದರ ಅಧ್ಯಕ್ಷ ಎಂ.ಕೆ ಪ್ರಸಾದ್ ಹೇಳಿದರು.
ಅವರು ಮೇ.1 ರಂದು ಬೆಳ್ತಂಗಡಿ ಶ್ರೀ ಗುರುನಾರಾಯನ ಸಭಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪ್ರಕಾಶ್ ಕೋಟ್ಯಾನ್ ಎನ್ನುವ ನಕಲಿ ಹೆಸರಿನ ಫೇಸ್‌ಬುಕ್ ಖಾತೆಯಿಂದ ಸತ್ಯಜಿತ್ ಸುರತ್ಕಲ್ ಇವರನ್ನು ತೇಜೋವಧೆ ಮಾಡುತ್ತಿರುವುದು ಅಕ್ಷಮ್ಯ ಅಪರಾಧ. ಇದನ್ನು ಬಿಲ್ಲವ ಸಮಾಜ ಎಂದಿಗೂ ಸಹಿಸುವುದಿಲ್ಲ. ಈ ನಕಲಿ ಫೇಸ್‌ಬುಕ್ ಖಾತೆಯಿಂದ ಹಲವು ಬಾರಿ ನಮ್ಮ ಸಮಾಜದ ಮುಖಂಡರನ್ನು ಅವಹೇಳನ ಮಾಡುವ ಮೂಲಕ ಬಿಲ್ಲವ ಸಮಾಜ ಹಾಗೂ ಧಮನಿತ ಸಮಾಜದ ನಡುವೆ ಗೊಂದಲಗಳನ್ನು ಮೂಡಿಸುತ್ತಿರುವುದು ಕಂಡುಬಂದಿರುತ್ತದೆ. ಇಲ್ಲಿ ನಾವು ಯಾವುದೇ ಪಕ್ಷದ ಪರವಾಗಿ ಅಥವಾ ರಾಜಕೀಯ ವ್ಯಕ್ತಿಯ ಪರವಾಗಿ ಮಾತನಾಡುತ್ತಿಲ್ಲ ಸತ್ಯಜಿತ್ ಸುರತ್ಕಲ್ ಇವರಿಗೆ ಈಗ ಯಾವುದೇ ಪಕ್ಷದಲ್ಲಿಯಾಗಲಿ ಹಿಂದೂ ಸಂಘಟನೆಯಲ್ಲಾಗಲಿ ಜವಾಬ್ದಾರಿಯಿಲ್ಲ. ಕಳೆದ ಮೂರು ವರ್ಷಗಳಿಂದ ಶ್ರೀ ನಾರಾಯಣಗುರು ವಿಚಾರ ವೇದಿಕೆಯ ರಾಜಾಧ್ಯಕ್ಷರಾಗಿ ಜವಾಬ್ದಾರಿಯನ್ನು ತೆಗೆದುಕೊಂಡು ಬಿಲ್ಲವ ಸಮಾಜದ ಏಳಿಗೆಗಾಗಿ ಶ್ರಮಿಸುತ್ತಾ ಇದ್ದಾರೆ. ಈ ಚುನಾವಣೆಯಲ್ಲಿ ಯಾವುದೇ ರಾಜಕೀಯ ಪಕ್ಷದ ಪರವಾಗಿ ಹೋಗುತ್ತಾ ಇಲ್ಲವೆಂಬುದನ್ನು ನಾವೆಲ್ಲರೂ ಅರ್ಥ ಮಾಡಿಕೊಳ್ಳಬೇಕಾಗಿದೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಬೆಳ್ತಂಗಡಿ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಅಧ್ಯಕ್ಷ ಚಿದಾನಂದ ಪೂಜಾರಿ ಎಲ್ದಡ್ಕ, ಯುವ ಬಿಲ್ಲವ ವೇದಿಕೆ ಅಧ್ಯಕ್ಷ ನಿತೀಶ್ ಕೋಟ್ಯಾನ್, ಯುವ ವಾಹಿನಿ ತಾಲೂಕು ಅಧ್ಯಕ್ಷ ಅಶೋಕ್ ಕುಮಾರ್, ಪ್ರಮುಖರಾದ ಮಾಧವ ಪೂಜಾರಿ ಉಪಸ್ಥಿತರಿದ್ದರು.