ಬೆಳ್ತಂಗಡಿ: ರಾಜ್ಯದಲ್ಲಿ ಎಲ್ಲಾ ಕ್ಷೇತ್ರಗಳಲ್ಲಿ ಬಿಜೆಪಿ ಅಲೆಯಿದ್ದು, ರಾಜ್ಯದಲ್ಲಿ ಬಿಜೆಪಿ ,120 ಕ್ಕೂ ಮಿಕ್ಕಿ ವಿಧಾನ ಸಭಾ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದ್ದು, ದ.ಕ ಜಿಲ್ಲೆಯ 8 ಕ್ಷೇತ್ರಗಳಲ್ಲೂ ಜಯಭೇರಿ ಭಾರಿಸಲಿದೆ. ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದಲ್ಲಿ ಅಭ್ಯರ್ಥಿ ಹರೀಶ್ ಪೂಂಜ 5೦ ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಲಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಸಂಸದರಾದ ನಳಿನ್‌ಕುಮಾರ್ ಕಟೀಲ್ ಹೇಳಿದರು.
ಅವರು ಮೇ 8ರಂದು ಸಂಜೆ ಬೆಳ್ತಂಗಡಿ ಬಸ್‌ನಿಲ್ದಾಣದ ಬಳಿ ಬಿಜೆಪಿ ಅಭ್ಯರ್ಥಿಯ ಪರ ನಡೆದ ಬೃಹತ್ ಪ್ರಚಾರ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಕಾಂಗ್ರೆಸ್ ಸರಕಾರ 60 ವರ್ಷಗಳಲ್ಲಿ ಯಾವುದೇ ಸಾಧನೆ ಮಾಡಿಲ್ಲ, ಶಾಸಕ ಹರೀಶ್ ಪೂಂಜ ಐದು ವರ್ಷಗಳಲ್ಲಿ ರೂ. 3500 ಕೋಟಿ ಅನುದಾನ ತಂದು ಅಭಿವೃದ್ಧಿ ಕಾರ್ಯ ಮಾಡಿದ್ದಾರೆ. ಆದರೆ ಈ ಹಿಂದೆ ಶಾಸಕರಾಗಿದ್ದ ಬಂಗೇರರು ಏನು ಮಾಡಿದ್ದಾರೆ ಎಂದು ದಾಖಲೆ ಸಹಿತ ತೋರಿಸಲಿ ಎಂದು ಸವಾಲು ಹಾಕಿದರು. ದೇಶದಲ್ಲಿ ನರೇಂದ್ರ ಮೋದಿ ಪ್ರಧಾನಿಯಾದ ಬಳಿಕ ಹೊಸ ಪರಿವರ್ತನೆಯಾಗಿದೆ. ಜಗತ್ತು ಇವತ್ತು ಭಾರತದ ಕಡೆ ನೋಡುತ್ತಿದೆ. ಜನಧನ್ ಯೋಜನೆ, ಕೊರೋನಾ ಅವಧಿಯಲ್ಲಿ ದೇಶದ ಜನರ ರಕ್ಷಣೆ ಸೇರಿದಂತೆ ಹಲವಾರು ಜನೋಪಯೋಗಿ ಕಾರ್ಯಕ್ರಮಗಳನ್ನು ಕೇಂದ್ರ ಸರಕಾರ ಮಾಡಿದೆ. ಮುಂದೆ ಒಂದು ವಿಧಾನಸಭಾ ಕ್ಷೇತ್ರದಲ್ಲಿ 10 ಸಾವಿರ ಮಂದಿಗೆ ಹಕ್ಕುಪತ್ರ ನೀಡಿ, 10ಸಾವಿರ ಮನೆಗಳನ್ನು ನಿರ್ಮಿಸುವ ಕಾರ್ಯ ಕೇಂದ್ರ ಸರಕಾರ ಮಾಡಲಿದೆ ಎಂದು ತಿಳಿಸಿದರು.
ಬಿಜೆಪಿ ಅಭ್ಯರ್ಥಿ ಹಾಗೂ ಶಾಸಕ ಹರೀಶ್ ಪೂಂಜ ಅವರು ಮಾತನಾಡಿ, ಕಳೆದ ಐದು ವರ್ಷಗಳಲ್ಲಿ ಬೆಳ್ತಂಗಡಿ ತಾಲೂಕಿನ ಸಮಗ್ರ ಅಭಿವೃದ್ಧಿಗೆ ಹಗಲಿರುಳು ಶ್ರಮಿಸಿದ್ದೇನೆ. ನೆರೆ, ಕೊರೋನಾ ಸಂದರ್ಭದಲ್ಲಿ ಜನರ ಕಷ್ಟ-ನಷ್ಟಗಳಿಗೆ ಯಾವುದೇ ಜಾತಿ, ಮತ, ಧರ್ಮವನ್ನು ಪರಿಗಣಿಸದೆ ಸ್ಪಂದಿಸಿದ್ದೇನೆ. ನನ್ನ ಬದುಕು ಸಮಾಜಕ್ಕೆ ಅರ್ಪಿತ ಎಂಬ ರೀತಿಯಲ್ಲಿ ಹಲವಾರು ಕಷ್ಟ, ನೋವನ್ನು ಅನುಭವಿಸಿ, ಮತದಾರರು ನನ್ನನ್ನು ಶಾಸಕನಾಗಿ ಆಯ್ಕೆ ಮಾಡಿರುವುದಕ್ಕೆ ಕ್ಷೇತ್ರದ ಜನತೆಗಾಗಿ ಕೆಲಸ ಮಾಡಿದ್ದೇನೆ. ಮುಂದೆ ಶಾಸಕನಾಗಿ ಆಯ್ಕೆಯಾದರೆ ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದಲ್ಲಿ ಮಣ್ಣಿನ ರಸ್ತೆ ಇಲ್ಲ ಎಂಬ ರೀತಿಯಲ್ಲಿ ರಸ್ತೆಗಳ ಅಭಿವೃದ್ಧಿ, ನೀರಾವರಿಗಾಗಿ 50 ಕಿಂಡಿಅಣೆಕಟ್ಟು, 12 ಕೋಟಿ ವೆಚ್ಚದಲ್ಲಿ ಬೆಳ್ತಂಗಡಿಯಲ್ಲಿ ಬಸ್‌ನಿಲ್ದಾಣ ನಿರ್ಮಣ ಮಾಡಲಿದ್ದೇನೆ ಎಂದು ತಿಳಿಸಿದರು. ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಹರಿಕೃಷ್ಣ ಬಂಟ್ವಾಳ ಅವರು ಮಾತನಾಡಿ, ಚುನಾವಣೆ ಘೋಷಣೆಯಾದ ಬಳಿಕ ಕಾಂಗ್ರೆಸ್‌ನ ನಾಯಕರು ಕಟ್ಟಿದ ಸುಳ್ಳಿನ ಕೋಟೆಯನ್ನು ಮತದಾರರು ಬಿಜೆಪಿಗೆ ರಾಜ್ಯದಲ್ಲಿ ಬಹುಮತ ತರುವ ಮೂಲಕ ಪುಡಿಮಾಡಲಿದ್ದಾರೆ. ಬೆಳ್ತಂಗಡಿ ಕ್ಷೇತ್ರದಲ್ಲಿ ಹರೀಶ್ ಪೂಂಜ 75 ಸಾವಿರ ಅಂತರದಲ್ಲಿ ಗೆಲ್ಲಲು ಮತದಾರರು ಆಶೀರ್ವಾದ ಮಾಡಬೇಕು ಎಂದು ಕರೆ ನೀಡಿದರು.
ಎಂ.ಎಲ್.ಸಿ ಪ್ರತಾಪಸಿಂಹನಾಯಕ್ ಮಾತನಾಡಿ, ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಐದು ವರ್ಷಗಳಲ್ಲಿ ಮಾಡಿದ ಮತಗಳು ಮಾತನಾಡುತ್ತಿದ್ದು, ನಾವು ಕೆಲಸ ಮಾಡಿ, ಇದರ ಆಧಾರದಲ್ಲಿ ಮತಕೇಳಲು ಮತದಾರರ ಬಳಿಗೆ ಹೋಗುತ್ತಿದ್ದೇವೆ. ಬೆಳ್ತಂಗಡಿ ಕ್ಷೇತ್ರದಲ್ಲಿ ಬಿಜೆಪಿ ಗೆದ್ದೆಗೆಲ್ಲುತ್ತದೆ ರಾಜ್ಯದಲ್ಲಿ ೧೧೫ರಿಂದ ೧೩೦ ಸ್ಥಾನ ಪಡೆಯುತ್ತದೆ ಎಂದು ಹೇಳಿದರು. ಬಿಜೆಪಿ ಮಂಡಲ ಮಾಜಿ ಅಧ್ಯಕ್ಷ ಕುಶಾಲಪ್ಪ ಗೌಡ ಪೂವಾಜೆ ಅವರು ಮಾತನಾಡಿ, ರಾಜ್ಯದಲ್ಲಿ ಒಂದು ಕ್ಷೇತ್ರಕ್ಕೆ ರೂ.೩೫೦೦ಕೋಟಿ ಅನುದಾನ ತಂದ ಶಾಸಕರೊಬ್ಬರಿದ್ದರೆ ಅದು ಬೆಳ್ತಂಗಡಿ ಕ್ಷೇತ್ರದ ಶಾಸಕ ಹರೀಶ್ ಪೂಂಜ ಎಂದು ತಿಳಿಸಿದರು. ಅಧ್ಯಕ್ಷತೆಯನ್ನು ಬಿಜೆಪಿ ಮಂಡಲ ಅಧ್ಯಕ್ಷ ಜಯಂತ ಕೋಟ್ಯಾನ್ ವಹಿಸಿದ್ದರು. ವೇದಿಕೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್, ನ.ಪಂ ಅಧ್ಯಕ್ಷ ರಜನಿ ಕುಡ್ವ, ಉಪಾಧ್ಯಕ್ಷ ಜಯಾನಂದ ಗೌಡ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಕೊರಗಪ್ಪ ನಾಯ್ಕ, ಪ್ರಮುಖರಾದ ಸುಬ್ರಹ್ಮಣ್ಯ ಕುಮಾರ್ ಅಗರ್ತ, ಮುಗಳಿ ನಾರಾಯಣ ರಾವ್, ಗಣೇಶ್ ಗೌಡ, ರಾಜೇಶ್ ಪ್ರಭು, ಜಯಾನಂದ ಕಲ್ಲಾಪು, ಅಜಿತ್ ಆರಿಗ, ದಾಮೋದರ ಗೌಡ, ಅನಿಶ್, ಹಿತೇಶ್ ಕಾಪಿನಡ್ಕ, ಧರ್ಣಪ್ಪ ಗೌಡ ಉಪಸ್ಥಿತರಿದ್ದರು. ಮಂಡಲ ಅಧ್ಯಕ್ಷ ಜಯಂತ ಕೋಟ್ಯಾನ್ ಸ್ವಾಗತಿಸಿ, ಪ್ರಧಾನಕಾರ್ಯದರ್ಶಿ ಶ್ರೀನಿವಾಸ ರಾವ್ ಕಾರ್ಯಕ್ರಮ ನಿರೂಪಿಸಿದರು. ಮಾಧ್ಯಮ ವಿಭಾಗದ ಸಂಚಾಲಕ ರಾಜೇಶ್ ಪೆರ್ಮುಡ ಧನ್ಯವಾದವಿತ್ತರು.