ಬೆಳ್ತಂಗಡಿ : ಕನ್ನಡ ಕೇವಲ ಭಾಷೆ ಮಾತ್ರವಲ್ಲ ಅದು ಸಾಹಿತ್ಯ ಸಂಗೀತದೊಂದಿಗೆ ನಮ್ಮೆಲ್ಲರ ಭಾವನೆಗಳನ್ನು ಹೊರ ಹಾಕುವ ವಿಧಾನ ಎಂದು ಮಡಂತ್ಯಾರು ಸೆಕ್ರೇಡ್ ಹಾರ್ಟ್ ಪದವಿ ಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕ ಬಿ. ವಸಂತ ಶೆಟ್ಟಿ ಹೇಳಿದರು.
ಅವರು ವಾಣಿ ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ತು ಬೆಳ್ತಂಗಡಿ ತಾಲೂಕು ಘಟಕದ ಆಶ್ರಯದಲ್ಲಿ ಜರುಗಿದ ಕನ್ನಡ ಸಾಹಿತ್ಯ ಪರಿಷತ್ತು ಸಂಸ್ಥಾಪನಾ ದಿನಾಚರಣೆ ಹಾಗೂ ದಿ.ಮಾಚಾರು ಗೋಪಾಲ ನಾಯ್ಕರ ಸಂಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡುತ್ತಾ, ಕನ್ನಡ ಭಾಷೆ, ಸಾಹಿತ್ಯ, ಜನಪದ ಸಂಸ್ಕೃತಿಗಳ ಸಂವರ್ಧನೆ ಮತ್ತು ಸಂರಕ್ಷಣೆಗಾಗಿ ಸ್ಥಾಪಿತವಾದ ಕನ್ನಡ ಸಾಹಿತ್ಯ ಪರಿಷತ್ತು ಕನ್ನಡ ನಾಡು, ಭಾಷೆ, ಸಾಹಿತ್ಯಕ್ಕಾಗಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಇರುವುದು ಮಹತ್ವದ ವಿಚಾರವಾಗಿದೆ. ಅನೇಕ ವಿದ್ವಾಂಸರು, ಸಾಹಿತ್ಯ ಲೋಕದ ದಿಗ್ಗಜರುಗಳ ಚಿಂತನೆಗಳನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕಾಗಿದೆ ಎಂದರು.
ಕನ್ನಡ ಸಾಹಿತ್ಯ ಪರಿಷತ್ತು ಬೆಳ್ತಂಗಡಿ ತಾಲೂಕು ಘಟಕದ ಅಧ್ಯಕ್ಷರಾದ ಯದುಪತಿ ಗೌಡ ಅಧ್ಯಕ್ಷತೆ ವಹಿಸಿದ್ದರು. ವಾಣಿ ಕಾಲೇಜಿನ ಉಪನ್ಯಾಸಕ ಬೆಳಿಯಪ್ಪ ಕೆ ದಿ.ಮಾಚಾರು ಗೋಪಾಲ ನಾಯ್ಕರವನ್ನು ಸಂಸ್ಮರಣೆ ಮಾಡಿದರು.
ಬೆಳ್ತಂಗಡಿ ಕನ್ನಡ ಸಾಹಿತ್ಯ ಪರಿಷತ್ತು ಕಾರ್ಯದರ್ಶಿ ರಾಮಕೃಷ್ಣ ಭಟ್ ಚೊಕ್ಕಾಡಿ ಸ್ವಾಗತಿಸಿದರು. ವಾಣಿ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯರಾದ ಲಕ್ಷ್ಮೀನಾರಾಯಣ ಕೆ ವಂದಿಸಿದರು. ವಾಣಿ ಕಾಲೇಜಿನ ಉಪನ್ಯಾಸಕಿ ಶ್ರೀಮತಿ ಮೀನಾಕ್ಷಿ ಕಾರ್ಯಕ್ರಮ ನಿರೂಪಿಸಿದರು.