ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರ ಶೇ 80.33 ಮತದಾನ

Suddi Udaya


ಬೆಳ್ತಂಗಡಿ : ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದಲ್ಲಿ ಮೇ 10ರಂದು ಬೆಳಿಗ್ಗೆ 7ರಿಂದ ಸಂಜೆ 6ರವರೆಗೆ ನಡೆದ ಚುನಾವಣೆ ಕೆಲವೊಂದು ಸಣ್ಣ ಪುಟ್ಟ ಘಟನೆಗಳನ್ನು ಹೊರತುಪಡಿಸಿ, ಶಾಂತಿಯುತವಾಗಿ ನಡೆಯಿತು. ತಾಲೂಕಿನ 241 ಬೂತುಗಳಲ್ಲಿ ಶೇ 80.33 ಮತದಾನವಾಗಿದೆ. ಕಳೆದ 2018ರಲ್ಲಿ ನಡೆದ ಚುನಾವಣೆಯಲ್ಲಿ ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದಲ್ಲಿ ಶೇ 80.50
ಮತದಾನವಾಗಿತ್ತು.
ತಾಲೂಕಿನದ್ಯಾಂತ ಬೆಳಿಗ್ಗೆ 7 ಗಂಟೆಗೆ ಮತದಾರರು ಮತಗಟ್ಟೆಗೆ ಬಂದು ಸರತಿ ಸಾಲಿನಲ್ಲಿ ಮತ ಚಲಾಯಿಸಿದ್ದಾರೆ. ತಾಲೂಕಿನಲ್ಲಿ ಮತದಾರರಿಂದ ಉತ್ತಮ ಸ್ಪಂದನೆ ಸಿಕ್ಕಿದ್ದು ಸಂಜೆಯವರಗೆ ನಿರಂತರವಾಗಿ ಮತದಾನವಾಗಿದೆ. ಬೆಳ್ತಂಗಡಿ ತಾಲೂಕಿನ ಹೆಚ್ಚಿನ ಮತಗಟ್ಟೆಗಳಲ್ಲಿ ಜನರು ಉತ್ಸಾಹದಿಂದ ಮತದಾನದಲ್ಲಿ ಪಾಲ್ಗೊಂಡರು.
ಚುನಾವಣೆ ಕರ್ತವ್ಯಕ್ಕೆ ಆಗಮಿಸಿದ ಸಿಬ್ಬಂದಿಗೆ ಮಂಗಳವಾರ ಸಂಜೆಯಿಂದ ರಾತ್ರಿ 11ವರೆಗೂ ಸುರಿದ ಮಳೆ ಸಮಸ್ಯೆ ನೀಡಿತು. ಗುಡುಗು ಸಹಿತ ಸುರಿದ ಮಳೆಯ ಕಾರಣ ಆಗಾಗ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಕಂಡು ಬಂದು ಚುನಾವಣಾ ಸಿಬ್ಬಂದಿ ಪರದಾಡುವಂತಾಯಿತು. ಚುನಾವಣೆ ಕೇಂದ್ರದಲ್ಲಿ ಬೆಳಕಿನ ವ್ಯವಸ್ಥೆಗೆ ಕ್ಯಾಂಡಲ್, ಕೆಲವೆಡೆ ಜನರೇಟರ್, ಇನ್ವರ್ಟರ್ ಅವಲಂಬಿಸಿ ಪೂರ್ವ ತಯಾರಿ ನಡೆಸಲಾಯಿತು.
ಮೆಸ್ಕಾಂ ಸಿಬ್ಬಂದಿ ಹೆಚ್ಚಿನ ಶ್ರಮವಹಿಸಿ ವಿದ್ಯುತ್ ಪೂರೈಕೆಗೆ ವ್ಯವಸ್ಥೆ ಮಾಡಿದರು ಗುಡುಗು,ಸಿಡಿಲಿನ ಕಾರಣ ವಿದ್ಯುತ್ ಪೂರೈಕೆ ಆಗಾಗ ಕೈ ಕೊಡುತ್ತಿತ್ತು.
ಬುಧವಾರ ಸಂಜೆ ಮಲವಂತಿಗೆ ಮಿತ್ತಬಾಗಿಲು,ಕಲ್ಮಂಜ, ಬೆಳಾಲು,ಬೆಳ್ತಂಗಡಿ ಲಾಯಿಲ,ಧರ್ಮಸ್ಥಳ, ಕನ್ಯಾಡಿ,ಶಿರ್ಲಾಲು, ಸವಣಾಲು ಮೊದಲಾದ ಕಡೆಗಳಲ್ಲಿ ಗುಡುಗು,ಸಹಿತ ಮಳೆ ಸಂಜೆ 3.3೦ ರಿಂದ ಆರಂಭವಾಯಿತು. ಈ ವೇಳೆ ಮತ್ತೆ ವಿದ್ಯುತ್ ಮಾಯವಾಗಿ ಮೋಡ ಕವಿದ ಕತ್ತಲಿನ ವಾತಾವರಣದಲ್ಲಿ ಬೆಳಕಿನ ಅಭಾವ ಉಂಟಾಗಿ ಮತದಾರರು ಮತ ಚಲಾಯಿಸಲು ಪರದಾಟ ನಡೆಸುವುದು ಕಂಡುಬಂತು. ಚಾರ್ಮಾಡಿ, ಪಿಲ್ಯ ಮೊದಲಾದ ಕಡೆಗಳಲ್ಲಿ ಸಂಜೆಯವರೆಗೆ ಮತದಾರರು ಸಾಲು ಕಂಡು ಬಂದಿತ್ತು.
ಚಾರ್ಮಾಡಿ ಗ್ರಾಮದ 21ನೇ ಮತದಾನ ಕೇಂದ್ರದಲ್ಲಿ ಮತಯಂತ್ರ ಕೈಕೊಟ್ಟ ಕಾರಣ ಮತದಾನ ಆರಂಭಕ್ಕೆ ಸುಮಾರು ಮೂರು ತಾಸು ತೊಂದರೆಯಾಯಿತು. ಇದರಿಂದ ಕೆಲವು ಮತದಾರರು ಸರತಿ ಸಾಲಿನಲ್ಲಿ ನಿಂತು ಸುಸ್ತಾಗಿ ಮನೆಗಳಿಗೆ ವಾಪಾಸಾಗಿ ಮತಯಂತ್ರ ದುರಸ್ತಿಯಾದ ಬಳಿಕ ಮತ್ತೆ ಮತಗಟ್ಟೆಗಳಿಗೆ ಆಗಮಿಸಿದರು. ಈ ವೇಳೆ ಮತ್ತೆ ಉದ್ದದ ಸರತಿ ಸಾಲು ಕಂಡು ಬಂತು. ಇಲ್ಲಿನ ಇನ್ನೊಂದು ಬೂತ್ ನಲ್ಲೂ ಮತಯಂತ್ರ ಕೆಲವು ಸಮಯ ಕೈ ಕೊಟ್ಟಿತು. ಮತಯಂತ್ರಗಳು ದುರಸ್ತಿಯಾದ ಬಳಿಕವು ತ್ವರಿತವಾಗಿ ಕಾರ್ಯನಿರ್ವಹಿಸದೆ ಮತದಾನ ಪ್ರಕ್ರಿಯೆ ವಿಳಂಬವಾಗಿ ಜನರು ತಮ್ಮ ಹಕ್ಕನ್ನು ಚಲಾಯಿಸಲು ಹಲವು ಸಮಯ ಕಾಯಬೇಕಾಯಿತು.
ಚಾರ್ಮಾಡಿ ಮತಗಟ್ಟೆ ರಾಷ್ಟ್ರೀಯ ಹೆದ್ದಾರಿ ಬದಿ ಹಾಗೂ ಪೊಲೀಸ್ ಚೆಕ್ ಪೋಸ್ಟ್ ಸಮೀಪದಲ್ಲಿ ಇದೆ.ಪಕ್ಷಗಳ ಕಾರ್ಯಕರ್ತರು ಬೇರೆ ಜಾಗ ಇಲ್ಲದ ಕಾರಣ ತಮ್ಮ ಬೂತ್ ಗಳನ್ನು ರಸ್ತೆ ಬದಿಯೇ ನಿರ್ಮಿಸಿ ಮತದಾರರಿಗೆ ಅಗತ್ಯ ಮಾಹಿತಿ ನೀಡುತ್ತಿದ್ದ ಕಾರಣ, ಅಲ್ಲಲ್ಲಿ ವಾಹನ ಪಾರ್ಕಿಂಗ್ ಹಾಗೂ ಅಗಲ ಕಿರಿದಾಗ ಈ ರಸ್ತೆಯಲ್ಲಿ ವಿಪರೀತ ವಾಹನ ಓಡಾಟವಿದ್ದು ಹಲವು ಬಾರಿ ಟ್ರಾಫಿಕ್ ಜಾಮ್ ಸಮಸ್ಯೆ ಉಂಟಾಗಿ ವಾಹನ ಸವಾರರು ಹಾಗೂ ಮತದಾರರು ಸಮಸ್ಯೆ ಎದುರಿಸಿದರು.
ಬೆಳ್ತಂಗಡಿ ಅರಣ್ಯ ಇಲಾಖೆಯ ವತಿಯಿಂದ ಆನೆ ಬಾಧಿತ ಪ್ರದೇಶಗಳಾದ ಮಲವಂತಿಗೆ, ಕಡಿರುದ್ಯಾವರ, ಚಾರ್ಮಾಡಿ ಗ್ರಾಮಗಳ ಆರು ಮತದಾನ ಕೇಂದ್ರಗಳ ವ್ಯಾಪ್ತಿಯಲ್ಲಿ ವಿಶೇಷ ಗಸ್ತು ಕಾರ್ಯವನ್ನು ಕೈಗೊಳ್ಳಲಾಯಿತು. ಆರ್ ಎಫ್ ಒ ತ್ಯಾಗರಾಜ್ ನಿರ್ದೇಶನದಲ್ಲಿ ಡಿ ಆರ್ ಎಫ್ ಒಗಳಾದ ಹರಿಪ್ರಸಾದ್ ಹಾಗೂ ರಾಜೇಶ್ ಎಸ್, ಗಸ್ತು ಅರಣ್ಯ ಪಾಲಕರಾದ ಶರತ್ ಶೆಟ್ಟಿ, ಸಂತೋಷ್,ಚಾಲಕ ಕುಶಾಲಪ್ಪ ಅಹರ್ನಿಶಿ ಗಸ್ತು ಕಾರ್ಯಾಚರಣೆ ನಡೆಸಿದರು.

Leave a Comment

error: Content is protected !!