ಬೆಳ್ತಂಗಡಿ: ಜಿಲ್ಲೆಯ ಪ್ರತಿಷ್ಠಿತ ಹಾಗೂ ಬಹಳಷ್ಟು ಕುತೂಹಲ ಕೆರಳಿಸಿದ್ದ ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ನಡುವೆ ನಡೆದ ಜಿದ್ದಾ – ಜಿದ್ದಿನ ಪೈಪೋಟಿಯಲ್ಲಿ ಅಂತಿಮವಾಗಿ ಬಿಜೆಪಿ ಪಕ್ಷದ ಅಭ್ಯರ್ಥಿ ಶಾಸಕ ಹರೀಶ್ ಪೂಂಜ ಅವರು ಜಯಭೇರಿ ಭಾರಿಸಿ, ಎರಡನೇ ಬಾರಿಗೆ ಶಾಸಕರಾಗಿ ಚುನಾಯಿತರಾಗಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿ ಬೆಸ್ಟ್ ಪೌಂಡೇಶನ್‌ನ ಅಧ್ಯಕ್ಷ ರಕ್ಷಿತ್ ಶಿವರಾಂ ಅವರನ್ನು ಅಂಚೆಯ ಮತ ಸೇರಿ ಸುಮಾರು 18216 ಮತಗಳ ಅಂತರದಿಂದ ಹಿಂದಿಕ್ಕಿ ಪ್ರಚಂಡ ಗೆಲುವಿನೊಂದಿಗೆ ಎರಡನೇ ಬಾರಿಗೆ ಹರೀಶ್ ಪೂಂಜ ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದಲ್ಲಿ ವಿಜಯ ಪಾತಕೆ ಹಾರಿಸಿದರು.
ಬಿಜೆಪಿ ಪಕ್ಷದ ಅಭ್ಯರ್ಥಿ ಹರೀಶ್ ಪೂಂಜ ಅವರು 101004 ಮತಗಳನ್ನು ಪಡೆದುಕೊಂಡು ದ್ವೀತಿಯ ಬಾರಿಗೆ ಶಾಸಕರಾಗಿ ಆಯ್ಕೆಯಾಗುವುದರೊಂದಿಗೆ ಮತ್ತೆ ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರವನ್ನು ಬಿಜೆಪಿ ಪಕ್ಷಕ್ಕೆ ತಂದು ಕೊಡುವಲ್ಲಿ ಯಶಸ್ವಿಯಾಗಿದ್ದಾರೆ. ಇವರಿಗೆ ತೀವ್ರ ಪ್ರತಿಸ್ಪರ್ಧೆ ನೀಡಿದ್ದ ಕಾಂಗ್ರೆಸ್ ಅಭ್ಯರ್ಥಿ ಹಾಲಿ ರಕ್ಷಿತ್ ಶಿವರಾಂ 82788 ಮತಗಳನ್ನು ಪಡೆದುಕೊಂಡು ಸೋಲು ಅನುಭವಿಸಿದರು.
ಜಾತ್ಯಾತೀತ ಜನತಾದಳದಿಂದ ಸ್ಪರ್ಧಿಸಿದ್ದ ಆಶ್ರಫ್ ಆಲಿಕುಂಞಿ ಅವರು ಕೇವಲ 556 ಮತಗಳನ್ನು ಪಡೆದುಕೊಂಡು ಪರಾಜಯಗೊಂಡರೆ, ಪ್ರಥಮ ಬಾರಿ ಬೆಳ್ತಂಗಡಿ ಕ್ಷೇತ್ರದಲ್ಲಿ ಶಾಸಕ ಸ್ಥಾನಕ್ಕೆ ಸ್ಪರ್ಧಿಸಿದ್ದ ಎಸ್.ಡಿ.ಪಿ.ಐ ಅಭ್ಯರ್ಥಿ ಅಕ್ಬರ್ ಬೆಳ್ತಂಗಡಿ ಬಹಳಷ್ಟು ಹೋರಾಟ ನಡೆಸಿ 2513 ಮತಗಳನ್ನು ಪಡೆದುಕೊಂಡು ಬೆಳ್ತಂಗಡಿ ಕ್ಷೇತ್ರದಲ್ಲಿ ತನ್ನ ಶಕ್ತಿಯನ್ನು ಪ್ರದರ್ಶಿಸುವಲ್ಲಿ ಯಶಸ್ವಿಯಾಗಿದ್ದಾರೆ.
ತುಳುವರೆ ಪಕ್ಷದಿಂದ ಸ್ಪರ್ಧಿಸಿದ್ದ ಶೈಲೇಶ್ ಆರ್.ಜೆ 308 ಮತ, ಆಮ್‌ಆದ್ಮಿ ಪಾರ್ಟಿಯಿಂದ ಸ್ಪರ್ಧಿಸಿದ್ದ ಜನಾರ್ದನ ಬಂಗೇರ 278 ಮತ, ಸರ್ವೋದಯ ಕರ್ನಾಟಕ ಪಕ್ಷದಿಂದ ಸ್ಪರ್ಧಿಸಿದ್ದ ಆದಿತ್ಯ ನಾರಾಯಣ ಕೊಲ್ಲಾಜೆ 454 ಮತ, ಪಕ್ಷೇತರರಾಗಿ ಸ್ಪರ್ಧಿಸಿದ್ದ ಮಹೇಶ್ ಆಟೋ 272 ಮತಗಳನ್ನು ಪಡೆದು ಇಡಗಂಟು ಕಳೆದುಕೊಂಡಿದ್ದಾರೆ. ನೋಟಾಕ್ಕೆ 877 ಮತಗಳು ಬಿದ್ದಿದೆ.