ಉಜಿರೆ: ಶ್ರೀ ಕ್ಷೇತ್ರ ಧರ್ಮಸ್ಥಳದ ಶ್ರೀ ಮಂಜುನಾಥಸ್ವಾಮಿ ಸನ್ನಿಧಿಯಲ್ಲಿ ವೃಷಭ ಮಾಸದ 1೦ನೇ ದಿನ “ಪತ್ತನಾಜೆ “(ಹತ್ತನಾವಧಿ) ಪ್ರಯುಕ್ತ ಮೇ 25 ರಂದು ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆಯವರ ನೇತೃತ್ವದಲ್ಲಿ ಶ್ರೀ ಸ್ವಾಮಿಗೆ ರಂಗ ಪೂಜೆ, ಬಲಿ ಉತ್ಸವ, ವಸಂತ ಪೂಜೆ, ಅಷ್ಟಾವಧಾನ ಸೇವೆ ನಡೆದು ,ಧ್ವಜಮರ ಅವರೋಹಣದೊಂದಿಗೆ ಶ್ರೀ ದೇವರ ಉತ್ಸವ ಮೂರ್ತಿ ಗರ್ಭ ಗುಡಿ ಪ್ರವೇಶಿಸಿದರು.
ಮುಂದಿನ ಕಾರ್ತೀಕ ಮಾಸದ ದೀಪಾವಳಿಯ ವರೆಗೆ ಕ್ಷೇತ್ರದಲ್ಲಿ ಯಾವುದೇ ವಿಶೇಷ ಸೇವೆಗಳು, ಉತ್ಸವಗಳು ನಡೆಯುವುದಿಲ್ಲ. ಲಕ್ಷ ದೀಪೋತ್ಸವದೊಂದಿಗೆ ಮತ್ತೆ ವಿಶೇಷ ಉತ್ಸವ, ಸೇವೆಗಳು ಆರಂಭಗೊಳ್ಳುತ್ತವೆ, ಪತ್ತನಾಜೆ ಉತ್ಸವದಲ್ಲಿ ಹೆಗ್ಗಡೆ ಕುಟುಂಬ ವರ್ಗ, ಕ್ಷೇತ್ರದ ಅರ್ಚಕ ವೃಂದ,ಸಿಬ್ಬಂದಿವರ್ಗ ಭಾಗವಹಿಸಿದ್ದರು.
ಧರ್ಮಸ್ಥಳ ಮೇಳದ ತಿರುಗಾಟ ಸಮಾಪ್ತಿ : ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಯಕ್ಷಗಾನ ಮಂಡಳಿಯ ಪ್ರಸಕ್ತ ಸಾಲಿನ ತಿರುಗಾಟ ಪತ್ತನಾಜೆಯಂದು ಸಮಾಪನಗೊಂಡಿತು. ಮೇಳದ ಶ್ರೀ ಮಹಾಗಣಪತಿಯನ್ನು ಮೇ 25 ರಂದು ಸಂಜೆ ಬಿಡಾರದ ಮಣೆಗಾರರ ಮನೆಯಿಂದ ವೈಭವಪೂರ್ಣ ಮೆರವಣಿಗೆಯಲ್ಲಿ ಕ್ಷೇತ್ರಕ್ಕೆ ಬರಮಾಡಿಕೊಳ್ಳಲಾಯಿತು. ಅಲಂಕೃತ ಶ್ರೀ ಮಹಾಗಣಪತಿಯನ್ನು ಸಕಲ ಗೌರವಗಳೊಂದಿಗೆ ನರ್ತನಸೇವೆಯಲ್ಲಿ ಕರೆತರಲಾಯಿತು. ಕ್ಷೇತ್ರದ ಆನೆಗಳು, ಬಸವ, ಹೂವಿನಕೋಲು, ವಾದ್ಯ ಮೇಳ,ಚೆಂಡೆ ಮೇಳ, ಶಂಖ ಜಾಗಟೆ ವಾದನ ಗಳೊಂದಿಗೆ ರಥಬೀದಿಯಲ್ಲಿ ಸಾಗಿಬಂದು ಶ್ರೀ ಮಂಜುನಾಥಸ್ವಾಮಿ ಹಾಗೂ ಶ್ರೀ ಅಮ್ಮನವರ ಸನ್ನಿಧಿ ಮುಂಭಾಗದಲ್ಲಿ ದರ್ಶನ ಸೇವೆ ನಡೆಸಿ ಬಳಿಕ ಛತ್ರ ಮಹಾಗಣಪತಿ ಗುಡಿಗೆ ಪ್ರವೇಶಿಸಲಾಯಿತು. ಧರ್ಮಾಧಿಕಾರಿ ಡಾ!ಡಿ.ವೀರೇಂದ್ರ ಹೆಗ್ಗಡೆ,ಮೇಳದ ಯಜಮಾನ ಹರ್ಷೇಂದ್ರ ಕುಮಾರ್, ಹೆಗ್ಗಡೆ ಕುಟುಂಬಸ್ಥರು, ಕ್ಷೇತ್ರ ಹಾಗೂ ಮೇಳದ ಸಿಬ್ಬಂದಿ ವರ್ಗ ಹಾಗೂ ಭಕ್ತಾದಿಗಳು ಸಂಭ್ರಮದಲ್ಲಿ ಭಾಗವ ಹಿಸಿದ್ದರು.