ಬೆಳ್ತಂಗಡಿ: ಕಾರ್ಮಿಕರು ಸೇರಿದಂತೆ ಬಡವರಿಗೆ ಅತ್ಯಂತ ಕಡಿಮೆ ರೀತಿಯಲ್ಲಿ ಆಹಾರ ದೊರಕುವ ಉದ್ದೇಶದಿಂದ ಆರಂಭವಾಗಿದ್ದ ಇಂದಿರಾ ಕ್ಯಾಂಟೀನ್ ಸಧ್ಯದಲ್ಲಿಯೇ ಆರಂಭಿಸಲು ಸೂಕ್ತ ಕ್ರಮಗಳನ್ನು ಕೈಗೊಳ್ಳುತ್ತೇನೆ. ಈ ಬಗ್ಗೆ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡುತ್ತೇನೆ ಎಂದು ಮಾಜಿ ಶಾಸಕ ವಸಂತ ಬಂಗೇರ ಹೇಳಿದರು.
ಅವರು ಬೆಳ್ತಂಗಡಿ ಮಿನಿ ವಿಧಾನಸೌಧದ ಬಳಿ ವಿಘ್ನೇಶ್ ಸಿಟಿಯಲ್ಲಿ ಸಂಗಾತಿ ಎಕೆಜಿ ಬೀಡಿ ಕಾರ್ಮಿಕರ ಗೃಹ ನಿರ್ಮಾಣ ಸಹಕಾರಿ ಸಂಘ (ನಿ) ಇದರ ಸ್ಥಳಾಂತರಗೊಂಡ ಕಛೇರಿಯನ್ನು ಉದ್ಘಾಟಿಸಿ ಮಾತನಾಡಿದರು.
ನಮ್ಮನಾಳುವ ಕೇಂದ್ರ ಸರ್ಕಾರ ಹಾಗೂ ಹಿಂದಿನ ರಾಜ್ಯ ಸರ್ಕಾರ ರಾಜ್ಯದ ಬಡವರು , ಕಾರ್ಮಿಕರು , ರೈತರು , ಮಹಿಳಾ ವಿರೋಧಿಯಾಗಿದ್ದು , ಇದೀಗ ಅಸ್ತಿತ್ವಕ್ಕೆ ಬಂದಿರುವ ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಮೂಲಕ ತಾಲೂಕಿನ ಬಡವರ ಹಿತ ಕಾಯುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುತ್ತೇನೆ ಎಂದ ಅವರು ನಾನು ಶಾಸಕನಾಗಿದ್ದಾಗ ಸಂಗಾತಿ ಎಕೆಜಿ ಬೀಡಿ ಕಾರ್ಮಿಕರ ಗೃಹ ನಿರ್ಮಾಣ ಸಹಕಾರಿ ಸಂಘಕ್ಕೆ 60 ಲಕ್ಷ ರೂಪಾಯಿ ಒದಗಿಸುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ. ಮುಂದಿನ ದಿನಗಳಲ್ಲಿ ತಮ್ಮ ಸಂಘದ ಅಭಿವೃದ್ಧಿ ಕೆಲಸಗಳಿಗೆ ಮತ್ತಷ್ಟು ಅನುದಾನ ಒದಗಿಸುತ್ತೇನೆ ಎಂದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ , ಬೆಸ್ಟ್ ಫೌಂಡೇಶನ್ ಅಧ್ಯಕ್ಷ ರಕ್ಷಿತ್ ಶಿವರಾಂ ರವರು ಮಾತನಾಡುತ್ತಾ ಸಹಕಾರಿ ಸಂಘವೊಂದು ಹಣಕಾಸು ವ್ಯವಹಾರ ಹೊರತುಪಡಿಸಿ ಮಹಿಳಾ ಕಾರ್ಮಿಕರು ಸೇರಿದಂತೆ ಬಡವರನ್ನು ಸ್ವಾವಲಂಬಿ ಜೀವನ ನಡೆಸುವ ಉದ್ದೇಶದಿಂದ ಸ್ವ ಉದ್ಯೋಗಕ್ಕೆ ಸಂಬಂಧಿಸಿದ ತರಬೇತಿ ನೀಡಿ , ಉದ್ಯೋಗ ನೀಡಿರುವ ಕ್ರಮ ಶ್ಲಾಘನೀಯ. ರಾಜ್ಯ ಸರ್ಕಾರ , ಬೆಸ್ಟ್ ಫೌಂಡೇಷನ್ ಮೂಲಕ ಸ್ವ ಉದ್ಯೋಗಕ್ಕೆ ಸಂಬಂಧಿಸಿದ ಸಹಾಯ, ಸಹಕಾರ ನೀಡಲಾಗುವುದು ಎಂದರು.
ಉಜಿರೆ ರುಡ್ ಸೆಟ್ ನ ನಿರ್ದೇಶಕ ಜೇಮ್ಸ್ ಮಾತನಾಡಿ ರುಡ್ ಸೆಟ್ ಸಂಸ್ಥೆಯ ತರಬೇತಿ ಮೂಲಕ ಸ್ವಾವಲಂಬಿ ಜೀವನ ನಡೆಸಲು ಸಾಧ್ಯ. ಈ ನಿಟ್ಟಿನಲ್ಲಿ ತರಬೇತಿ ಕಾರ್ಯಕ್ರಮದ ಸದುಪಯೋಗ ಪಡಿಸಿಕೊಳ್ಳಲು ವಿನಂತಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಗಾತಿ ಎಕೆಜಿ ಬೀಡಿ ಕಾರ್ಮಿಕರ ಗೃಹ ನಿರ್ಮಾಣ ಸಹಕಾರಿ ಸಂಘದ ಅಧ್ಯಕ್ಷ ಹರಿದಾಸ್ ಎಸ್ , ಎಂ ಮಾತನಾಡುತ್ತಾ ಸಹಕಾರಿ ಸಂಘದ ಉದ್ದೇಶ , ಬೆಳೆದು ಬಂದ ರೀತಿ , ತರಬೇತಿ ಕಾರ್ಯಕ್ರಮ , ಉದ್ಯೋಗ ಸೃಷ್ಟಿಯಾದ ಬಗೆಯನ್ನು ವಿವರಿಸಿ , ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿಯೇ ಮಾದರಿ ಸಹಕಾರಿ ಸಂಘವಾಗಿ ಬೆಳೆಸುವ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ ಎಂದರು.
ವೇದಿಕೆಯಲ್ಲಿ ಹಿರಿಯ ಕಾರ್ಮಿಕ ಮುಖಂಡ ರಾಮಣ್ಣ ವಿಟ್ಲ , ಹಿರಿಯ ನ್ಯಾಯವಾದಿ ಸಂತೋಷ್ ಕುಮಾರ್ , ರೈತ ನಾಯಕ ಸುರೇಶ್ ಭಟ್ ಕೊಜಂಬೆ , ಪ್ರಗತಿಪರ ಕೃಷಿಕ ಅಶೋಕ್ ಶೆಟ್ಟಿ , ಉದ್ಯಮಿ ವಿಶ್ವನಾಥ್ ನಾಯಕ್ , ನಿರ್ದೇಶಕರಾದ ನ್ಯಾಯವಾದಿ ಶಿವಕುಮಾರ್ ಎಸ್. ಎಂ , ಸುಕನ್ಯಾ ಹರಿದಾಸ್ , ರವೀಂದ್ರ ಬಿ ಚಂಡ್ತಿಮಾರ್ , ವೆಂಕಟೇಶ್ ಮಯ್ಯ , ಮನೋಹರ ನಿಡ್ಲೆ ಉಪಸ್ಥಿತರಿದ್ದರು.
ನಿರ್ದೇಶಕ ಶೇಖರ್ ಎಲ್ ಸ್ವಾಗತಿಸಿದರು , ಶ್ರಮಶಕ್ತಿ ಸ್ವಸಹಾಯ ಗುಂಪು ಒಕ್ಕೂಟದ ಸಂಯೋಜಕ ಸಂಜೀವ ಆರ್ ಧನ್ಯವಾದವಿತ್ತರು.