ನಡ : ಇಲ್ಲಿಯ ದೇರ್ಲಕ್ಕಿ ಎಂಬಲ್ಲಿ ರಸ್ತೆಯ ವಿವಾದಕ್ಕೆ ಸಂಬಂಧಿಸಿದಂತೆ ಎರಡು ಕುಟುಂಬಗಳ ಸದಸ್ಯರು ಪರಸ್ಪರ ಹೊಡೆದಾಡಿಕೊಂಡು ಹಲವರು ಗಾಯಗೊಂಡ ಘಟನೆ ಜೂ 4 ರಂದು ಸಂಭವಿಸಿದೆ.
ಇಲ್ಲಿನ ನಿವಾಸಿಗಳಾಗಿರುವ ಓಬಯ್ಯ ಗೌಡ ಹಾಗೂ ವಿಜಯ ಗೌಡ ಎಂಬವರ ಕುಟುಂಬಗಳ ಮದ್ಯೆ ಕಳೆದ 35 ವರ್ಷಗಳಿಂದ ರಸ್ತೆಯ ವಿಚಾರಕ್ಕೆ ಸಂಬಂಧಿಸಿದಂತೆ ವಿವಾದವಿದ್ದು ಇದೇ ಕಾರಣಕ್ಕೆ ಎರಡೂ ಕುಟುಂಬಗಳ ಸದಸ್ಯರು ಭಾನುವಾರ ಕತ್ತಿ, ಹಾರೆ ಕೋಲುಗಳಿಂದ ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಎರಡೂ ಕುಟುಂಬದವರು ಇದೀಗ ಆಸ್ಪತ್ರೆಗೆ ದಾಖಲಾಗಿದ್ದು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಓಬಯ್ಯ ಗೌಡ ಅವರು ನೀಡಿರುವ ದೂರಿನಂತೆ ಮನೆಗೆ ಹೋಗುವ ರಸ್ತೆಯನ್ನು ಚರಳು ಹಾಕಿ ಸರಿಮಾಡುತ್ತಿದ್ದ ವೇಳೆ ಅವರ ನೆರೆಮನೆಯಲ್ಲಿರುವ ಚಿಕ್ಕಪ್ಪ ಪೂವಪ್ಪ ಗೌಡ ಲಲಿತ, ವಿಜಯ ಗೌಡ, ಶ್ರೀನಿವಾಸ ಗೌಡ, ಕೃಷ್ಣಪ್ಪ ಗೌಡ ಅವರು ಅಲ್ಲಿಗೆ ಬಂದು ಮರದ ದೊಣ್ಣೆ, ಸರಳು, ಚೂರಿ, ಕಲ್ಲುಗಳಿಂದ ತಮ್ಮ ಮೇಲೆ ಹಾಗೂ ತಮ್ಮೊಂದಿಗಿದ್ದ ಬೇಬಿ ಗೌಡ, ಭವಾನಿ, ರಜನಿ, ಕೇಶವ ಗೌಡ, ಸುಧಾಕರ ಗೌಡ, ರವಿ ಗೌಡ ಅವರ ಮೇಲೆ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿರುವುದಾಗಿ ದೂರು ನೀಡಿದ್ದು ಅದರಂತೆ ಪ್ರಕರಣ ದಾಖಲಿಸಲಾಗಿದೆ.
ಮತ್ತೊಂದು ಪ್ರಕರಣದಲ್ಲಿ ವಿಜಯ ಗೌಡ ಅವರು ಈ ಬಗ್ಗೆ ದೂರು ನೀಡಿದ್ದು ವ್ಯಾಜ್ಯ ಇರುವ ತಮ್ಮ ತೋಟದ ನಡುವೆ ಹಾದು ಹೋಗುವ ರಸ್ತೆಗೆ ಬಂದ ಓಬಯ್ಯ ಗೌಡ ಹಾಗೂ ಇತರರು ತೋಟದ ನಡುವೆ ರಸ್ತೆ ಸಮತಟ್ಟು ಮಾಡಲು ಮುಂದಾಗಿದ್ದು ಇದನ್ನು ಪ್ರಶ್ನಿಸಿದ ತನ್ನ ಮೇಲೆ ಹಾಗೂ ಬೊಬ್ಬೆ ಕೇಳಿ ಮನೆಯಿಂದ ಬಂದ ಪೂವಪ್ಪ ಗೌಡ, ಲಲಿತ, ವಿಜಯ ಗೌಡ, ಶ್ರೀನಿವಾಸ ಗೌಡ,ಹಾಗೂ ಕೃಷ್ಣಪ್ಪ ಗೌಡ ಅವರ ಮೇಲೆ ಕಲ್ಲು ದೊಣ್ಣೆಗಳಿಂದ ಹಲ್ಲೆ ನಡೆಸಿರುವುದಾಗಿ ಆರೋಪಿಸಲಾಗಿದೆ ಈ ಬಗ್ಗೆಯೂ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಇದೀಗ ಎರಡೂ ಕಡೆಯವರಿಗೆ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ.